
ಕೋಲಾರ: ಪ್ರಜಾಸೇವೆ; ಜನಪ್ರತಿನಿಧಿಗಳು ಪಾಲ್ಗೊಳ್ಳುವಂತಿಲ್ಲ
ಕೋಲಾರ: ಆಗ್ನೇಯ ಪದವೀಧರರ ಕ್ಷೇತ್ರದಿಂದ ವಿಧಾನ ಪರಿಷತ್‌ಗೆ ಅ.23ರಂದು ನಡೆಯಲಿರುವ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಸೆ.22ರಿಂದ ಅ.30 ರವರೆಗೆ ಮಾದರಿ ನೀತಿಸಂಹಿತೆ ಕಟ್ಟುನಿಟ್ಟಾಗಿ ಜಾರಿಗೆ ಬಂದಿದೆ.
ಚುನಾವಣಾ ನೀತಿ ಸಂಹಿತೆ ಜಾರಿ ಕಾರಣ ಪ್ರತಿ ಶನಿವಾರ ನಡೆಯುವ ‘ಪ್ರಜಾಸೇವೆ ಅಭಿಯಾನ’ಕ್ಕೂ ಅಡ್ಡಿಯಾಗುವ ಸಾಧ್ಯತೆ ಇದೆ. ಈ ಸಂಬಂಧ ಸ್ಪಷ್ಟಣೆ ಕೋರಿ ರಾಜ್ಯ ಮುಖ್ಯ ಚುನಾವಣಾಧಿಕಾರಿಗೆ ಜಿಲ್ಲಾಧಿಕಾರಿ ಪತ್ರ ಬರೆದಿದ್ದಾರೆ.
ಈ ಸಂಬಂಧ ಸ್ಪಷ್ಟೀಕರಣ ಸಿಗುವವರೆಗೆ ಚುನಾಯಿತ ಪ್ರತಿನಿಧಿಗಳನ್ನು ಹೊರತುಪಡಿಸಿ ಅಧಿಕಾರಿಗಳ ಮಟ್ಟದಲ್ಲಿ ನಿರ್ವಹಿಸಲು ಹಾಗೂ ನೀತಿ ಸಂಹಿತೆ ಉಲ್ಲಂಘನೆ ಆಗದಂತೆ ಆಯೋಜಿಸಲು ಅಗತ್ಯ ಕ್ರಮ ವಹಿಸುವಂತೆ ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತರು ನಿರ್ದೇಶಿಸಿದ್ದಾರೆ.
ಜಿಲ್ಲಾಡಳಿತ ಭವನದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಎಂ.ಆರ್.ರವಿಕುಮಾರ್, ‘ಮುಖ್ಯ ಚುನಾವಣಾಧಿಕಾರಿಗಳಿಂದ ನಿರ್ದೇಶನ ಬರುವವರೆಗೆ ‘ಪ್ರಜಾಸೇವೆ ಅಭಿಯಾನ’ದಲ್ಲಿ ಅಧಿಕಾರಿಗಳ ಮಟ್ಟದಲ್ಲಷ್ಟೇ ಸಾರ್ವಜನಿಕರಿಂದ ಕುಂದುಕೊರತೆಗಳ ಅರ್ಜಿ ಸ್ವೀಕರಿಸಲಾಗುವುದು. ಜನಪ್ರತಿನಿಧಿಗಳು ಭಾಗವಹಿಸುವಂತಿಲ್ಲ. ಫ್ಲೆಕ್ಸ್, ಬ್ಯಾನರ್, ಪ್ರಚಾರ ಫಲಕಗಳಲ್ಲಿ ಜನಪ್ರತಿನಿಧಿ ಅಥವಾ ರಾಜಕೀಯ ವ್ಯಕ್ತಿಗಳ ಭಾವಚಿತ್ರ ಬಳಸಲು ಅವಕಾಶ ಇಲ್ಲ’ ಎಂದರು.
‘ಚುನಾವಣೆ ದಿನಾಂಕ ಪ್ರಕಟವಾದ ಸೆ.22 ರಿಂದಲೇ ನೀತಿ ಸಂಹಿತೆ ಜಾರಿಯಲ್ಲಿದೆ. ಸೆ.29 ರಂದು ಅಧಿಕೃತವಾಗಿ ಅಧಿಸೂಚನೆ ಹೊರಬೀಳಲಿದ್ದು, ಅಂದಿನಿಂದಲೇ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ಅ.6 ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದೆ. 7ರಂದು ಪರಿಶೀಲನೆ ನಡೆಯಲಿದ್ದು, ಉಮೇವಾರಿಕೆ ವಾಪಸ್‌ಗೆ 9 ಕಡೆಯ ದಿನ. ಅ.23 ರಂದು ಮತದಾನ ಹಾಗೂ 27 ರಂದು ಮತ ಎಣಿಕೆ ಕಾರ್ಯ ನಡೆಯಲಿದೆ’ ಎಂದು ಮಾಹಿತಿ ನೀಡಿದರು.
ಜಿಲ್ಲೆಯಲ್ಲಿ 31,336 ನೋಂದಾಯಿತ ಮತದಾರರಿದ್ದು, ಅಧಿಸೂಚನೆ ಪ್ರಕಟವಾದ ಬಳಿಕ ಹೆಚ್ಚುವರಿಯಾಗಿ 161 ಜನರನ್ನು ಪಟ್ಟಿಗೆ (ಒಟ್ಟು 31,497ಮತದಾರರು) ಸೇರ್ಪಡೆಗೊಳಿಸಲಾಗಿದೆ. ಮತದಾನಕ್ಕಾಗಿ ಜಿಲ್ಲೆಯ ಆರು ತಾಲ್ಲೂಕುಗಳಲ್ಲಿ 27 ಮುಖ್ಯ ಹಾಗೂ 16 ಸಹಾಯಕ ಮತಗಟ್ಟೆಗಳು ಸೇರಿದಂತೆ ಒಟ್ಟು 43 ಮತಗಟ್ಟೆ ಸ್ಥಾಪಿಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದರು.
ಚುನಾವಣಾ ಅಕ್ರಮ ತಡೆಯಲು 18 ಫ್ಲೈಯಿಂಗ್ ಸ್ಕ್ವಾಡ್, 6 ವಿಡಿಯೋ ಸರ್ವೇಲೆನ್ಸ್ ತಂಡಗಳು ಹಾಗೂ ನಗದು ಜಪ್ತಿ ಕಾರ್ಯಾಚರಣೆಗಾಗಿ 2 ವಿಶೇಷ ತಂಡಗಳನ್ನು ನಿಯೋಜಿಸಲಾಗಿದೆ. ಜೊತೆಗೆ, ಚುನಾವಣಾ ಪ್ರಚಾರದ ಮೇಲೆ ನಿಗಾ ಇಡಲು ಮಾಧ್ಯಮ ಪ್ರಮಾಣೀಕರಣ ಮತ್ತು ಮೇಲ್ವಿಚಾರಣಾ ಸಮಿತಿ ರಚಿಸಲಾಗಿದೆ ಎಂದು ಮಾಹಿತಿ ನೀಡಿದರು.
ಎಸ್‌ಐಆರ್: ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಕುರಿತು ಮಾಹಿತಿ ನೀಡಿದ ಅವರು, ‘ಕರಡು ಪಟ್ಟಿಯಲ್ಲಿನ ಲೋಪದೋಷಗಳನ್ನು ಸರಿಪಡಿಸಲು 1,42,183 ಮಂದಿಗೆ ನೋಟಿಸ್ ಜಾರಿ ಮಾಡಲಾಗಿದ್ದು, 1,07,282 ಮಂದಿಯ ವಿಚಾರಣೆ ಮುಗಿದಿದೆ. ಈ ಪೈಕಿ 93 ಮಂದಿ ಬಿಟ್ಟು ಉಳಿದವರನ್ನು ಅಂತಿಮ ಪಟ್ಟಿಗೆ ಸೇರಿಸಲಾಗುತ್ತಿದೆ. ತಂತ್ರಾಂಶದ ಮೂಲಕ ವಯಸ್ಸಿನ ವ್ಯತ್ಯಾಸ ಸರಿಪಡಿಸಲಾಗುತ್ತಿದೆ. ನೋಟಿಸ್ ಪಡೆದಿರುವ ಇನ್ನಿತರ 34,900 ಮಂದಿ ದಾಖಲೆ ಪತ್ರಗಳೊಂದಿಗೆ ವಿಚಾರಣೆಗೆ ಹಾಜರಾಗುತ್ತಿದ್ದು, ನಮ್ಮ ಬಿಎಲ್‌ಒಗಳು ಲಭ್ಯರಿದ್ದಾರೆ. ಅ.23ರವರೆಗೆ ಈ ಪ್ರಕ್ರಿಯೆ ನಡೆಯಲಿದೆ’ ಎಂದರು.
ಜಿಲ್ಲಾ ಪಂಚಾಯಿತಿ ಸಿಇಒ ಡಾ.ಪ್ರವೀಣ್ ಪಿ.ಬಾಗೇವಾಡಿ, ಕೋಲಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕನ್ನಿಕಾ ಸಿಕ್ರಿವಾಲ್, ಕೆಜಿಎಫ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಾಂಶು ರಜಪೂತ್, ಚುನಾವಣೆ ಶಾಖೆ ಅಧಿಕಾರಿಗಳು ಇದ್ದರು.
ಆಗ್ನೇಯ ಪದವೀಧರರ ಕ್ಷೇತ್ರ: ಕೋಲಾರ ಜಿಲ್ಲೆ ಮತದಾರರು
ಸರ್ಕಾರಿ ವಾಹನ, ಅತಿಥಿ ಗೃಹ ಬಳಕೆಗೆ ನಿರ್ಬಂಧ
ನೀತಿಸಂಹಿತೆ ಜಾರಿಯಲ್ಲಿರುವ ಕಾರಣ, ಸರ್ಕಾರಿ ವಾಹನಗಳನ್ನು ಚುನಾವಣಾ ಪ್ರಚಾರ ಕಾರ್ಯಗಳಿಗೆ ಬಳಸುವಂತಿಲ್ಲ. ಸರ್ಕಾರಿ ಅತಿಥಿಗೃಹಗಳಲ್ಲಿ ಯಾವುದೇ ರಾಜಕೀಯ ಸಭೆಗಳನ್ನು ಆಯೋಜಿಸುವಂತಿಲ್ಲ. ಹೊಸ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆಗೆ ನಿರ್ಬಂಧ ವಿಧಿಸಲಾಗಿದ್ದು, ರಾಜಕೀಯ ಬ್ಯಾನರ್ ಹಾಗೂ ಫ್ಲೆಕ್ಸ್‌ಗಳನ್ನು ತೆರವುಗೊಳಿಸುವ ಕಾರ್ಯಾಚರಣೆ ನಡೆಯುತ್ತಿದೆ. ಪ್ರಚಾರ ಸಭೆ ನಡೆಸಲು ಹಾಗೂ ಧ್ವನಿವರ್ಧಕ ಬಳಸಲು ಪೂರ್ವಾನುಮತಿ ಪಡೆಯಬೇಕು ಎಂದು ಎಂ.ಆರ್.ರವಿಕುಮಾರ್ ಸ್ಪಷ್ಟಪಡಿಸಿದರು.
ಮತದಾರರನ್ನು ಓಲೈಸುವ ನಿಟ್ಟಿನಲ್ಲಿ ಹಣ, ಉಡುಗೊರೆ ಹಂಚುವುದು ಹಾಗೂ ಹಬ್ಬಗಳ ನೆಪದಲ್ಲಿ ಬಾಡೂಟ, ಸಾಮೂಹಿಕ ಅನ್ನಸಂತರ್ಪಣೆಯನ್ನು ನಿಷೇಧಿಸಲಾಗಿದೆ. ಧಾರ್ಮಿಕ ಕೇಂದ್ರಗಳು, ಶೈಕ್ಷಣಿಕ ಸಂಸ್ಥೆಗಳ ಆವರಣಗಳನ್ನು ಪ್ರಚಾರ ಚಟುವಟಿಕೆಗಳಿಗೆ ಬಳಸುವಂತಿಲ್ಲ ಎಂದಿದ್ದಾರೆ.
ಕುಡಿವ ನೀರು, ಮೇವಿಗೆ ತೊಂದರೆ ಇಲ್ಲ
ಜಿಲ್ಲೆಯಲ್ಲಿ ಪ್ರಸ್ತುತ 6 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯಿದ್ದು, 2 ಗ್ರಾಮಗಳಿಗೆ ಟ್ಯಾಂಕರ್ ಮೂಲಕ ಹಾಗೂ 4 ಗ್ರಾಮಗಳಿಗೆ ಖಾಸಗಿ ಕೊಳವೆಬಾವಿಗಳ ಮೂಲಕ ನೀರು ಪೂರೈಸಲಾಗುತ್ತಿದೆ. ನಗರ ಪ್ರದೇಶದಲ್ಲಿ ಕೆಲ ವಾರ್ಡ್‌ಗಳಿಗೆ 3 ದಿನಗಳಿಗೊಮ್ಮೆ, 4 ದಿನಗಳಿಗೊಮ್ಮೆ ನೀರು ಪೂರೈಸುತ್ತಿದ್ದೇವೆ. ಅಗತ್ಯವಿದ್ದವರಿಗೆ ಟ್ಯಾಂಕರ್‌ನಲ್ಲಿ ಪೂರೈಸಲಾಗುವುದು ಎಂದು ಜಿಲ್ಲಾಧಿಕಾರಿ ಎಂ.ಆರ್.ರವಿಕುಮಾರ್ ಹಾಗೂ ಜಿ.ಪಂ ಸಿಇಒ ಡಾ.ಪ್ರವೀಣ್ ಪಿ.ಬಾಗೇವಾಡಿ ಹೇಳಿದರು.
ಜಾನುವಾರುಗಳಿಗೆ 28 ವಾರಗಳಿಗೆ ಆಗುವಷ್ಟು ಮೇವಿನ ದಾಸ್ತಾನು ಲಭ್ಯವಿದ್ದು, ಹಾಲು ಒಕ್ಕೂಟದಿಂದಲೇ ರೈತರಿಗೆ 36 ಸಾವಿರ ಮೇವಿನ ಕಿಟ್‌ಗಳನ್ನು ವಿತರಿಸಲಾಗಿದೆ. ಮತ್ತಷ್ಟು ಮೇವಿನ ಕಿಟ್ ಕೋರಿ ಪಶು ಸಂಗೋಪನೆ ಇಲಾಖೆಯಿಂದ ಸರ್ಕಾರಕ್ಕೆ ಪತ್ರ ರವಾನೆಯಾಗಿದೆ. ಅಕ್ಟೋಬರ್ ಮತ್ತು ನವೆಂಬರ್ ತಿಂಗಳುಗಳಲ್ಲಿ ಉತ್ತಮ ಮಳೆಯಾಗುವ ಮುನ್ಸೂಚನೆ ಇದೆ ಎಂದರು.
ಎಪಿಎಂಸಿಗೆ ಶೀಘ್ರದಲ್ಲೇ ಜಾಗ
ಹೊಸದಾಗಿ ಎಪಿಎಂಸಿ ಮಾರುಕಟ್ಟೆ ನಿರ್ಮಾಣಕ್ಕೆ ಜಾಗ ಗುರುತಿಸಲಾಗಿದ್ದು, ಮುಂದಿನ 20 ದಿನಗಳಲ್ಲಿ ಸಚಿವ ಸಂಪುಟದ ಅನುಮೋದನೆ ದೊರೆಯುವ ವಿಶ್ವಾಸವಿದೆ. ಒಟ್ಟು 102 ಎಕರೆ ನಿಗದಿಪಡಿಸಿದ್ದು, 60 ಎಕರೆ ಕಂದಾಯ ಇಲಾಖೆಗೆ ಸೇರಿದೆ. ಜಾಗದ ಸಂಬಂಧ ಒಂದೆರಡು ಸ್ಪಷ್ಟೀಕರಣ ಕೋರಿದ್ದು, ಪ್ರಕ್ರಿಯೆ ನಡೆಯುತ್ತಿದೆ. ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆ ವಿಚಾರ ಇನ್ನು 10 ದಿನಗಳಲ್ಲಿ ಸಚಿವ ಸಂಪುಟದ ಮುಂದೆ ಬರಲಿದೆ. ಈ ಬಗ್ಗೆ ವೈದ್ಯಕೀಯ ಸಚಿವರೊಂದಿಗೆ ಚರ್ಚಿಸಲಾಗಿದೆ ಎಂದು ಎಂ.ಆರ್.ರವಿಕುಮಾರ್ ತಿಳಿಸಿದರು.
ಚೆನ್ನೈ-ಬೆಂಗಳೂರು ಎಕ್ಸ್‌ಪ್ರೆಸ್ ವೇನಲ್ಲಿ ಹೆಚ್ಚುತ್ತಿರುವ ಅಪಘಾತ ಸಂಬಂಧ ಕೆಲ ಬದಲಾವಣೆಗಳು ಅಗತ್ಯವಿದ್ದು, ಎನ್‌ಎಚ್‌ಎಐ ಅಧಿಕಾರಿಗಳೊಂದಿಗೆ ಒಂದೆರಡು ದಿನಗಳಲ್ಲಿ ಸಭೆ ನಡೆಯಲಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ನರಸಾಪುರ ಬಳಿ ಮೇಲ್ಸೇತುವೆ ಸೇರಿದಂತೆ ವಿವಿಧೆಡೆ ಉಂಟಾಗಿರುವ ಸರ್ವಿಸ್ ರಸ್ತೆ ಮತ್ತು ಅಂಡರ್‌ಪಾಸ್ ಸಮಸ್ಯೆಗಳನ್ನು ಬಗೆಹರಿಸಲು ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು. ಈಗಾಗಲೇ ಗುತ್ತಿಗೆದಾರರನ್ನು ಕರೆಸಿ ಮಾತನಾಡಿದ್ದೇನೆ ಎಂದು ಮಾಹಿತಿ ನೀಡಿದರು.
ಮುಕ್ತ ಹಾಗೂ ಪಾರದರ್ಶಕವಾಗಿ ಆಗ್ನೇಯ ಪದವೀಧರರ ಕ್ಷೇತ್ರದ ಚುನಾವಣೆ ನಡೆಸಲು ಜಿಲ್ಲಾಡಳಿತ ಸಿದ್ಧತೆ ನಡೆಸಿದ್ದು, ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು ಕಟ್ಟುನಿಟ್ಟಾಗಿ ನೀತಿ ಸಂಹಿತೆ ಪಾಲಿಸಬೇಕು
ಎಂ.ಆರ್.ರವಿಕುಮಾರ್, ಜಿಲ್ಲಾಧಿಕಾರಿ