
ಮಧುಗಿರಿಯಲ್ಲಿ ಮೇವಿನ ಕೊರತೆ; ರೈತರ ಕಷ್ಟ
ಮಧುಗಿರಿ: ‘ಎಲ್ಲಿ ಹೋಗುವಿರಿ ನಿಲ್ಲಿ ಮೋಡಗಳೇ ನಾಲ್ಕು ಹನಿಯ ಚೆಲ್ಲಿ, ದಿನ ದಿನವು ಕಾದು ಬಾಯಾರಿ ಬೆಂದೆ ಬೆಂಗದಿರ ತಾಪದಲ್ಲಿ...’
ಜಿ.ಎಸ್. ಶಿವರುದ್ರಪ್ಪ ಅವರ ಈ ಸಾಲುಗಳೀಗ ತಾಲ್ಲೂಕಿನ ಹೈನುಗಾರರ ಮನದಲ್ಲಿ ಪ್ರತಿಧ್ವನಿಸುತ್ತಿದೆ. ಬಾನಿನತ್ತ ಮುಖ ಮಾಡಿ ಕುಳಿತಿರುವ ರೈತರು ‘ಕಾಳು’ ಆಗದಿದ್ದರೂ ಹೋಗಲಿ, ಜಾನುವಾರುಗಳ ಮೇವಿಗಾದರೂ ಕಪ್ಪು ಮೋಡಗಳು ಮಳೆಯಾಗಿ ಸುರಿಯುತ್ತವೆಯೇ ಎಂದು ಕಾತರದಿಂದ ಎದುರು ನೋಡುತ್ತಿದ್ದಾರೆ.
ತಾಲ್ಲೂಕು ಹಿಂದುಳಿದ ಪ್ರದೇಶವಾಗಿದ್ದು ಯಾವುದೇ ಶಾಶ್ವತ ನೀರಾವರಿ ಯೋಜನೆಗಳಿಲ್ಲ. ಮಳೆಯಾಶ್ರಿತ ಕೃಷಿ ಜೊತೆಗೆ ಹೈನುಗಾರಿಕೆಯಿಂದ 14,150 ಕುಟುಂಬಗಳು ಬದುಕು ಕಟ್ಟಿಕೊಂಡಿವೆ. ತಾಲ್ಲೂಕಿನಲ್ಲಿ 42,585 ರಾಸು, 2.1 ಲಕ್ಷ ಕುರಿ ಮತ್ತು ಮೇಕೆಗಳಿದ್ದು ಮೇವಿನ ಕೊರತೆಯಿಂದ ಬಹುತೇಕ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಪ್ರಸಕ್ತ ವರ್ಷದ ಮುಂಗಾರು ಮಳೆ ಮೇ ಅಂತ್ಯ ಹಾಗೂ ಜೂನ್ ಆರಂಭದಲ್ಲಿ ಸುರಿದಿದ್ದು ಬಿಟ್ಟರೆ ಆ ನಂತರ ಉತ್ತಮ ಮಳೆಯಾಗಿಲ್ಲ. ಹಾಗಾಗಿ ಈ ವರ್ಷ ತಾಲ್ಲೂಕಿನಲ್ಲಿ ಬಿತ್ತನೆ ಪ್ರಮಾಣ ಶೇ 20 ದಾಟಿಲ್ಲ. ಮಳೆ ಕೊರತೆಯಿಂದ ಕೆರೆಗಳು ಒಣಗಿ ಆಟದ ಮೈದಾನಗಳಾಗಿವೆ. ದುಡ್ಡು ಕೊಟ್ಟರೂ ಮೇವು ಸಿಗದೆ ಸ್ಥಿತಿ ಎದುರಾಗಿದೆ.
‘ಬೇಸಿಗೆಯಲ್ಲಿ ಮೇವಿಗೆ ಕೊರತೆ ಉಂಟಾಗುತ್ತಿತ್ತು. ಮಳೆಗಾಲದಲ್ಲಿ ಬೆಳೆದ ರಾಗಿ, ಮುಸುಕಿನ ಜೋಳದ ಕಡ್ಡಿಯನ್ನು ಸಂಗ್ರಹಿಸುತ್ತಿದ್ದ ರೈತರು ಬೇಸಿಗೆಯನ್ನು ಒಣ ಮೇವು ಹಾಗೂ ಪಶು ಆಹಾರ ನೀಡಿ ದನ ಕರುಗಳನ್ನು ಕಾಪಾಡಿಕೊಳ್ಳುತ್ತಿದ್ದರು. ಆದರೆ ಈ ಬಾರಿ ಮಳೆಗಾಲದಲ್ಲಿಯೇ ಮೇವಿಗೆ ವಿಪರೀತ ಬೇಡಿಕೆ ಉಂಟಾಗಿದ್ದು, ₹400 ಕೊಟ್ಟರೂ ಒಂದು ಪೆಂಡಿ ರಾಗಿ ಹುಲ್ಲು ಸಿಗುತ್ತಿಲ್ಲ. ಸೈಲೇಜ್ ಕೂಡ ಪ್ರತಿ ಕೆ.ಜಿ ₹11ಕ್ಕೆ ಏರಿದೆ. ಪಶು ಆಹಾರದ ಬೆಲೆ ಗಗನಕ್ಕೇರಿದೆ. ರಾಸುಗಳ ನಿರ್ವಹಣೆ ದುಬಾರಿಯಾಗಿದೆ. ಹಸುಗಳನ್ನು ಸಾಕಲಾಗದೆ ಕಡಿಮೆ ಬೆಲೆಗೆ ಮಾರಾಟ ಮಾಡಲಾಗುತ್ತಿದೆ’ ಎಂದು ಅಸಹಾಯಕತೆಯಿಂದ ಹೇಳುತ್ತಾರೆ ದೊಡ್ಡೇರಿ ಹೋಬಳಿಯ ಗುಟ್ಟೆ ಗ್ರಾಮದ ರಘುನಾಥ್.
ಅಂತರ್ಜಲ ಕುಸಿತ: ಕೊಳವೆಬಾವಿ ಹೊಂದಿರುವ ರೈತರಿಗೆ ತುಮುಲ್‌ನಿಂದ ಮೇವು ಬೀಜದ ಕಿಟ್ ನೀಡಲಾಗಿದೆ. ದಿನದಿಂದ ದಿನಕ್ಕೆ ಏರುತ್ತಿರುವ ಬಿಸಿಲಿಗೆ ಬೆಳೆಗಳಿಗೆ ನೀರು ಹಾಯಿಸಿದರೂ ಬಿಸಿಲಿನ ತಾಪಕ್ಕೆ ತೇವಾಂಶ ಆವಿಯಾಗುತ್ತಿದೆ. ಮಳೆ ಹೀಗೆ ಕಣ್ಮರೆಯಾದರೆ ಕೊಳವೆಬಾವಿಗಳಲ್ಲಿ ನೀರು ಎಷ್ಟು ದಿನಗಳವರೆಗೆ ಇರುತ್ತದೆಯೊ ಎನ್ನುವುದೇ ಚಿಂತೆಯಾಗಿದೆ ಎನ್ನುತ್ತಾರೆ ಮಿಡತರಹಳ್ಳಿಯ ರೈತ ನರಸಿಂಹಮೂರ್ತಿ.
ಬರಿಗೈಯಲ್ಲಿ ಕೃಷಿ ಕೂಲಿ ಕಾರ್ಮಿಕರು
ಮಳೆ ಕೊರತೆಯಿಂದ ಬೆಳೆಗಳು ಒಣಗಿರುವುದರಿಂದ ಕೃಷಿ ಕೂಲಿ ಕಾರ್ಮಿಕರು ಕೆಲಸ ಇಲ್ಲದೆ ತೊಂದರೆ ಅನುಭವಿಸುತ್ತಿದ್ದಾರೆ. ಕಳೆ ಕೀಳುವುದು, ಕುಂಟೆ ಹೊಡೆಯುವುದು, ಶೇಂಗಾ ಬಿಡಿಸುವುದು, ಮುಸುಕಿನ ಜೋಳದ ಕಟಾವು, ಹುಲ್ಲಿನ ಮೆದೆ ಕಟ್ಟುವುದು ಸೇರಿದಂತೆ ಅನೇಕ ಕೆಲಸಗಳು ಮಳೆ ಕೊರತೆಯಿಂದ ಮಾಯವಾಗಿವೆ. ಕೃಷಿ ಕಾರ್ಮಿಕರು ಕೆಲಸಕ್ಕೆ ಎದುರು ನೋಡುವಂತಾಗಿದೆ.
ರೈತರಿಂದ ಖರೀದಿಸುವ ಹಾಲಿನ ದರವನ್ನು ₹10 ಹೆಚ್ಚಳ ಮಾಡಬೇಕು. ಪ್ರೋತ್ಸಾಹ ಧನವನ್ನು ಪ್ರತಿ ತಿಂಗಳು ವಿತರಿಸಬೇಕು. ಹಾಲಿನ ದರ ಹೆಚ್ಚಳವಾದ ಕೂಡಲೇ ಪಶು ಆಹಾರ ಬೆಲೆಯನ್ನು ಹೆಚ್ಚಿಸುವ ಕಾರ್ಖಾನೆಗಳಿಗೆ ಕಡಿವಾಣ ಹಾಕಬೇಕು
18 ವಾರಕ್ಕಾಗುವಷ್ಟು ಮೇವು ಲಭ್ಯವಿದ್ದು, ಕೊಳವೆಬಾವಿ ಹೊಂದಿರುವ ರೈತರಿಗೆ ಹಸಿರು ಮೇವು ಬೆಳೆಯಲು ಈಗಾಗಲೇ ತುಮುಲ್ ಹಾಗೂ ಪಶುಪಾಲನಾ ಇಲಾಖೆಯಿಂದ 15 ಸಾವಿರ ಕಿಟ್ ವಿತರಿಸಲಾಗಿದೆ
–ಜಗದೀಶ್, ಪಶುಪಾಲನಾ ಇಲಾಖೆ ಉಪನಿರ್ದೇಶಕ
ಬಹುತೇಕ ರೈತರು ರಾತ್ರಿ ವೇಳೆ ಮೇವು ಹಾಕದೆ ಹಾಗೆ ಹಸುಗಳನ್ನು ಕೊಟ್ಟಿಗೆಯಲ್ಲಿ ಕಟ್ಟುವ ಸ್ಥಿತಿ ಉಂಟಾಗಿದೆ. ಮೇವು ಬ್ಯಾಂಕ್ ಆರಂಭಿಸಿ ವಾರಕ್ಕೆ ಒಂದು ಬಾರಿ ಮೇವು ವಿತರಿಸಿ ರೈತರನ್ನು ಉಳಿಸಿ
ತುಮುಲ್‌ನಿಂದ 12 ಸಾವಿರ ಮೇವಿನ ಬೀಜದ ಕಿಟ್ ನೀಡಲಾಗಿದೆ. ಪ್ರತಿ ಲೀಟರ್ ಹಾಲಿಗೆ ಒಂದು ರೂಪಾಯಿ ಹೆಚ್ಚಳ ಮಾಡಲಾಗಿದೆ. ಸರ್ಕಾರ ಹಾಲು ಉತ್ಪಾದಕರ ಪರ ನಿಲ್ಲಬೇಕು
–ಕೊಂಡವಾಡಿ ಚಂದ್ರಶೇಖರ್, ತುಮುಲ್ ನಿರ್ದೇಶಕ
ರೈತರಿಂದ ಖರೀದಿಸುವ ಹಾಲಿನ ದರವನ್ನು ₹10 ಹೆಚ್ಚಳ ಮಾಡಬೇಕು. ಹಾಲಿನ ದರ ಹೆಚ್ಚಳವಾದ ಕೂಡಲೇ ಪಶು ಆಹಾರ ಬೆಲೆಯನ್ನು ಹೆಚ್ಚಿಸುವ ಕಾರ್ಖಾನೆಗಳಿಗೆ ಕಡಿವಾಣ ಹಾಕಬೇಕು