
ಬಳ್ಳಾರಿ: ಬರದಲ್ಲೂ ರೈತರ ಕೈಹಿಡಿದ ಚೆಂಡು ಹೂ
ತೆಕ್ಕಲಕೋಟೆ: ರಾಜ್ಯದಾದ್ಯಂತ ಭೀಕರ ಬರಗಾಲದ ಛಾಯೆ ನಡುವೆಯೂ, ರೈತರೊಬ್ಬರು ಸಮೃದ್ಧ ‘ಚೆಂಡು ಹೂ’ ಬೆಳೆದು ಲಾಭದ ಪಡೆದಿದ್ದಾರೆ.
ಉಪ್ಪಾರಹೊಸಳ್ಳಿ ಗ್ರಾಮದ ಪ್ರಗತಿಪರ ರೈತ ಎಸ್. ಶರಣಬಸವ ತಮ್ಮ 2 ಎಕರೆ ಜಮೀನಿನಲ್ಲಿ ಹಳದಿ ಬಣ್ಣದ ಚೆಂಡು ಹೂ ಬೆಳೆದು ಉತ್ತಮ ಆದಾಯ ಗಳಿಸುತ್ತಿದ್ದು, ಸುತ್ತಲಿನ ರೈತರ ಗಮನ ಸೆಳೆದಿದ್ದಾರೆ.
ವಿಶಿಷ್ಟ ತಳಿಯ ಬಳಕೆ: ಬೆಂಗಳೂರಿನಲ್ಲಿ ನಡೆದ ತೋಟಗಾರಿಕಾ ಮೇಳದಲ್ಲಿ ಭಾಗವಹಿಸಿದ್ದ ಅವರು, ರಾಷ್ಟ್ರೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯ ‘ಅರ್ಕಾ ಅಭಿ’ ಮತ್ತು ‘ಅರ್ಕಾ ಭಾನು’ ತಳಿಯ ಬೀಜ ತಂದು ನರ್ಸರಿಯಲ್ಲಿ ಸಸಿ ಮಾಡಿ ನಾಟಿ ಮಾಡಿದ್ದಾರೆ.
ನಾಟಿ ಮಾಡಿದ 45 ದಿನಗಳ ನಂತರ ಕಟಾವು ಆರಂಭವಾಗುತ್ತದೆ. ಅಲ್ಲಿಂದ ಮುಂದೆ ನಿರಂತರ 60 ದಿನಗಳವರೆಗೆ ಎರಡು ದಿನಕ್ಕೊಮ್ಮೆ ಹೂ ಬಿಡಿಸಬಹುದು. ಈ ತಳಿಯ ಹೂಗಳು 6 ರಿಂದ 8 ದಿನಗಳವರೆಗೆ ಬಾಡದೆ ತಾಜಾ ಇರುತ್ತವೆ ಎನ್ನುತ್ತಾರೆ ರೈತ ಶರಣಬಸವ.
ಮಾರುಕಟ್ಟೆಗೆ ಇಲ್ಲ ಕೊರತೆ: ಸ್ಥಳೀಯವಾಗಿ ಚೆಂಡು ಹೂವಿಗೆ ಭಾರೀ ಬೇಡಿಕೆಯಿದ್ದು, ಸುತ್ತಮುತ್ತಲಿನ ಗ್ರಾಮಗಳ ದೇವಸ್ಥಾನಗಳಿಗೆ ಹಾಗೂ ಹೂಗಾರರಿಗೆ ಪೂರೈಸಲಾಗುತ್ತಿದೆ. ಬಳ್ಳಾರಿಯ ಹೂವಿನ ಮಾರುಕಟ್ಟೆ ಮತ್ತು ಎಪಿಎಂಸಿ ಮಾರುಕಟ್ಟೆಗಳಲ್ಲಿ ಕೆಜಿಗೆ ₹70 ರಿಂದ ₹90 ರವರೆಗೆ ಬೆಲೆ ಸಿಗುತ್ತಿರುವುದು ರೈತನ ಮೊಗದಲ್ಲಿ ಮಂದಹಾಸ ಮೂಡಿಸಿದೆ.
ಉತ್ತಮ ಇಳುವರಿ ಹಾಗೂ ಲಾಭ: ಸುಮಾರು ₹20 ಸಾವಿರ ವೆಚ್ಚದಲ್ಲಿ ಬೆಳೆದಿರುವ ಈ ಬೆಳೆಯಲ್ಲಿ ಈವರೆಗೆ 4 ಬಾರಿ ಕಟಾವು ಮಾಡಲಾಗಿದೆ. ಒಟ್ಟು 11 ಕ್ವಿಂಟಾಲ್ ಫಸಲು ಬರುವ ನಿರೀಕ್ಷೆಯಿದ್ದು, ಸುಮಾರು ₹7 ಲಕ್ಷದವರೆಗೆ ಆದಾಯ ಸಿಗುವ ಭರವಸೆ ಇದೆ ಎಂದರು.