
ಹುಬ್ಬಳ್ಳಿಗೆ ಗೃಹ ಸಚಿವ ಅಮಿತ್ ಶಾ; ಕೆಎಲ್‌ಇ ಆಸ್ಪತ್ರೆ ಉದ್ಘಾಟನೆ ಇಂದು
ಹುಬ್ಬಳ್ಳಿ: ಇಲ್ಲಿನ ಗಬ್ಬೂರು ಕ್ರಾಸ್ ಬಳಿ ನಿರ್ಮಾಣವಾಗಿರುವ ಕೆಎಲ್‌ಇ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿಯ (ಕಾಹೇರ್) ಜೆಜಿಎಂಎಂ ವೈದ್ಯಕೀಯ ಕಾಲೇಜು ಕಟ್ಟಡ, ಕೆಎಲ್‌ಇ ಆಸ್ಪತ್ರೆ ಮತ್ತು ವೈದ್ಯಕೀಯ ಸಂಶೋಧನಾ ಕೇಂದ್ರವನ್ನು ಶನಿವಾರ (ಸೆಪ್ಟೆಂಬರ್ 19) ಕೇಂದ್ರ ಗೃಹ ಸಚಿವ ಅಮಿತ್ ಶಾ ಉದ್ಘಾಟಿಸುವರು.
ಮೂರುಸಾವಿರ ಮಠದ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ರಾಜ್ಯ ಸರ್ಕಾರದ ಸಚಿವರಾದ ಡಾ. ಶರಣಪ್ರಕಾಶ ಪಾಟೀಲ, ಸಂತೋಷ ಲಾಡ್, ಸಂಸದರಾದ ಜಗದೀಶ ಶೆಟ್ಟರ್, ಬಸವರಾಜ ಬೊಮ್ಮಾಯಿ, ಪ್ರೊ. ಎಂ. ನಾಗರಾಜ, ಕೆಎಲ್‌ಇ ಕಾರ್ಯಾಧ್ಯಕ್ಷ ಅಮಿತ್ ಕೋರೆ, ಕಾಹೇರ್ ಕುಲಾಧಿಪತಿ ಪ್ರಭಾಕರ ಕೋರೆ, ಸ್ಥಳೀಯ ಶಾಸಕರು ಹಾಗೂ ಇತರರು ಅತಿಥಿಗಳಾಗಿ ಪಾಲ್ಗೊಳ್ಳುವರು.
ಆಸ್ಪತ್ರೆ ಮುಂಭಾಗ ಬೃಹತ್ ವೇದಿಕೆ ನಿರ್ಮಿಸಲಾಗಿದ್ದು, ಕಾರ್ಯಕ್ರಮದ ವೇದಿಕೆ ಸಿದ್ಧಪಡಿಸಲಾಗಿದೆ. ಕಾರ್ಯಕ್ರಮ ನಡೆಯುವ ಸ್ಥಳವನ್ನು ಹಾಗೂ ಸಚಿವ ಅಮಿತ್ ಶಾ ವಾಸ್ತವ್ಯ ಮಾಡುವ ಸ್ಥಳದ ಸುತ್ತಮುತ್ತ ರಾಷ್ಟ್ರೀಯ ಭದ್ರತಾ ಪಡೆ (ಎನ್‌ಎಸ್‌ಜಿ) ಕಾಮಾಂಡೋಗಳ ಭದ್ರತೆ ಇದೆ. ಶುಕ್ರವಾರ ರಾತ್ರಿ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಬಂದಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಅವರಿಗೆ ಝೆಡ್ ಪ್ಲಸ್ ಭದ್ರತೆ ಒದಗಿಸಲಾಗಿದೆ. ಸಚಿವ ಶಾ ಅವರು ಶನಿವಾರ ಬೆಳಿಗ್ಗೆ 11.15ಕ್ಕೆ ತಾರಿಹಾಳ ಬೈಪಾಸ್ ಮೂಲಕ ಗಬ್ಬೂರು ಕ್ರಾಸ್ ನಡೆಯುವ ಕೆಎಲ್‌ಇ ಆಸ್ಪತ್ರೆ ಉದ್ಘಾಟನೆಗೆ ತೆರಳುವರು. ಮಧ್ಯಾಹ್ನ 1.30ಕ್ಕೆ ಅಲ್ಲಿಂದ ವಿಮಾನ ನಿಲ್ದಾಣಕ್ಕೆ ಬಂದು, ವಾಯುಸೇನೆ ವಿಮಾನದಲ್ಲಿ ಬೆಳಗಾವಿಗೆ ಪ್ರಯಾಣಿಸುವರು.
ಕಾರ್ಯಕ್ರಮಕ್ಕೆ ಬಿಗಿ ಭದ್ರತೆ: ಕೆಎಲ್‌ಇ ಆಸ್ಪತ್ರೆ, ಕಾರ್ಯಕ್ರಮ ನಡೆಸುವ ಸ್ಥಳ ಹಾಗೂ ಅಲ್ಲಿಗೆ ತೆರಳುವ ಮಾರ್ಗದಲ್ಲಿ ಪೊಲೀಸ್ ಬಿಗಿ ಭದ್ರತೆ ಒದಗಿಸಲಾಗಿದೆ. ವೇದಿಕೆ ಬಳಿ ಎಸಿಪಿ ನೇತೃತ್ವದಲ್ಲಿ 125ಕ್ಕೂ ಹೆಚ್ಚು ಸಿಬ್ಬಂದಿ, ಆಸ್ಪತ್ರೆ ಕಟ್ಟಡದ ಸುತ್ತ 180 ಸಿಬ್ಬಂದಿ ಮತ್ತು ಬೈಪಾಸ್ ಮಾರ್ಗವಾಗಿ ಗಬ್ಬೂರ ಕ್ರಾಸ್‌ವರೆಗೆ 120ಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿ ನಿಯೋಜಿಸಲಾಗಿದೆ.