
ಕಲಬುರಗಿ: ಜ್ಞಾನ ವಿತರಣೆಯ ಸಂಪರ್ಕ ಸೇತುವೆ
ಕಲಬುರಗಿ: ಮಹಾನಗರವೆಲ್ಲವೂ ಕತ್ತಲೆ ಹೊದ್ದು ಮಲಗಿತ್ತು. ಅತ್ತ ಮೂಡಣದ ಬಾನಿನಲ್ಲಿ ‘ಬೆಳಕಿನ’ ಪಸೆಯಾಗಲಿ, ಇತ್ತ ಪಕ್ಷಿಗಳ ನಸುಕಿನ ಚಿಲಿಪಿಲಿಯಾಗಲಿ ಇನ್ನೂ ಆರಂಭವಾಗಿರಲಿಲ್ಲ. ಆ ಹೊತ್ತಿಗೆ ಆಲಾರ್ಮ್ ಕೂಗಿತು. ಅದರ ಸದ್ದಿಗೆ ಎದ್ದ ಮಧ್ಯವಯಸ್ಕ ಲಗುಬಗೆಯಿಂದಲೇ ನಿತ್ಯಕರ್ಮ ಮುಗಿಸಿದ. ನೀರಿನಲ್ಲಿ ಮಿಂದೆದ್ದು ದೇವರ ಪಟಕ್ಕೆ ಕೈಮುಗಿದು ಬೈಕ್ ಏರಿ ಹೊರಟ...
10 ನಿಮಿಷಗಳಲ್ಲಿ ಆತ ಸೂಪರ್ ಮಾರ್ಕೆಟ್ ತಲುಪಿದ. ಕಗ್ಗತ್ತಲು ಸೀಳಿ ಬೀದಿದೀಪಗಳು ಚೆಲ್ಲಿದ್ದ ಬೆಳಕಿನಡಿಗೆ ಕುಳಿತ. ಅಷ್ಟೊತ್ತಿಗೆಲ್ಲ ಬಂದು ಬಿದ್ದ ದಿನಪತ್ರಿಕೆಗಳ ಬಂಡಲ್‌ಗಳನ್ನು ಬಿಚ್ಚಿ ಜೋಡಿಸಲು ಶುರು ಮಾಡಿದ. 15 ನಿಮಿಷಗಳಲ್ಲಿ ಹತ್ತಾರು ಬಂಡಲ್ ಬಿಚ್ಚಿ ತನ್ನದೇ ಲೆಕ್ಕಾಚಾರದಲ್ಲಿ ಅವುಗಳನ್ನು ಎಣಿಸುತ್ತ, ಅಲ್ಲೊಂದಿಷ್ಟು, ಇಲ್ಲೊಂದಿಷ್ಟು ಪೇರಿಸುತ್ತ ಹೋದ... ಅವನಂತೆಯೇ ಹಲವರು ಬೈಕ್, ಸ್ಕೂಟರ್, ಸೈಕಲ್ ಏರಿ ಬಂದವರೆಲ್ಲ ಆತನ ಜೊತೆಗೂಡಿದರು.
ಆಗಸದಲ್ಲಿ ಬೆಳಕು ಮೂಡಿದಂತೆಲ್ಲ ಯುವಕರು, ವೃದ್ಧರು ಪಟಪಟನೆ ಲೆಕ್ಕಹಾಕಿ, ಒಪ್ಪವಾಗಿ ಜೋಡಿಸಿದ್ದ ಪತ್ರಿಕೆಗಳನ್ನು ಸೈಕಲ್–ಬೈಕ್‌ಗಳ ಹೆಗಲೇರಿಸಿ, ಹೊರಟೇ ಬಿಟ್ಟರು. ಸೂರ್ಯ ಮೂಡಿ, ಜನರು ಎದ್ದೇಳುವ ಹೊತ್ತಿಗೆ ಸೈಕಲ್, ಬೈಕ್–ಸ್ಕೂಟರ್‌ಗಳ ಮೇಲೆ ಹೇರಿದ್ದ ಪತ್ರಿಕೆಗಳ ಭಾರ ಇಳಿಸಿಕೊಳ್ಳುವ ಧಾವಂತ. ಇಲ್ಲದಿದ್ದರೆ ವಾಕಿಂಗ್ ಮುಗಿಸಿ ಬರುವವರಿಗೆ ಪತ್ರಿಕೆ ಹೇಗೆ ಸಿಕ್ಕೀತು? ದಿನಪತ್ರಿಕೆ ಇಲ್ಲದೇ ಹೀರಿದರೆ ಚಹಾ–ಕಾಫಿ ಹೇಗೆ ರುಚಿಸೀತು?
ಇದು ಪತ್ರಿಕಾ ವಿತರಕರ ಜಗತ್ತಿನ ನಿತ್ಯದ ನೋಟ. ಸೂರ್ಯ ಉದಯಿಸಲಿ, ಬಿಡಲಿ. ಈ ಕಾಯಕ ಜೀವಿಗಳ ಕೆಲಸಕ್ಕೆ ಮಾತ್ರ ಬಿಡುವಿಲ್ಲ. ಗಾಳಿಯೇ ಬೀಸುತ್ತಿರಲಿ, ಮಳೆಯೇ ಸುರಿಯುತ್ತಿರಲಿ, ಇಲ್ಲವೇ ಚಳಿ ಮುತ್ತುತ್ತಿರಲಿ. ಇವರ ಕಾಯಕದ ಗತಿ–ಲಯ ಬದಲಾಗಲ್ಲ.
ದಿನಪತ್ರಿಕೆಗಳನ್ನು ಹೊತ್ತ ಸೈಕಲ್, ಗಾಡಿ, ಸ್ಕೂಟರ್ ಹತ್ತಿ ಹೊರಟವರು ಅವುಗಳನ್ನು ನಿಲ್ಲಿಸದೇ ಪತ್ರಿಕೆಯನ್ನು ಗ್ರಾಹಕರ ಮನೆಗಳ ಅಂಗಳಕ್ಕೆ ನಿಖರವಾಗಿ ತಲುಪಿಸುತ್ತಾರೆ. ನೋಡುಗರಿಗೆ ಅದು ಬೆರಗು; ಅವರಿಗೆ ಆ ಕೌಶಲ ಕರಗತ. ತಮ್ಮಲ್ಲಿನ ಕೊನೆಯ ಪತ್ರಿಕೆ ಓದುಗರ ಮನೆಗೆ ‘ಧೊಪ್’ ಎಂದು ಹಾಕಿದಾಗಲೇ ಅವರ ಅಂದಿನ ಕಾಯಕಕ್ಕೆ ವಿರಾಮ.
ದಿನಪತ್ರಿಕೆಗಳ ವಿತರಣೆ ಕೆಲವೇ ತಾಸುಗಳ ಅರೆಕಾಲಿಕ ಕಾಯಕ. ಅದು ಶ್ರಮ ಬೇಡುತ್ತೆ. ಓಡಾಟ, ನಿದ್ದೆಯ ತ್ಯಾಗವನ್ನೂ ಬಯಸುತ್ತದೆ. ಇಷ್ಟಾದರೂ ಪತ್ರಿಕಾ ವಿತರಕರು ತಮ್ಮ ಕೆಲಸವನ್ನು ಇನ್ನಿಲ್ಲದಂತೆ ಪ್ರೀತಿಸುತ್ತಾರೆ. ಸುದ್ದಿಮನೆಗಳಲ್ಲಿ ಸಿದ್ಧವಾಗಿ ಮುದ್ರಣಾಲಯಗಳಲ್ಲಿ ಪ್ರಿಂಟ್ ಆದ ಪತ್ರಿಕೆಗಳನ್ನು ಓದುಗರ ಮನೆಯಂಗಳಕ್ಕೆ ತಲುಪಿಸುವ ‘ಕೊಂಡಿ’ಗಳಾಗಿ ವಿತರಕರು ಕೆಲಸ ಮಾಡುತ್ತಾರೆ. ಸರಣಿ ಸವಾಲುಗಳಿದ್ದರೂ ವರ್ತಮಾನ ಹೊತ್ತು ತರುವ ಪತ್ರಿಕೆಗಳನ್ನು ಮನೆ–ಮನೆಗೆ ತಲುಪಿಸುವ ಈ ಕಾಯಕ ಜೀವಿಗಳಿಗೆ ಪತ್ರಿಕಾ ವಿತರಕರ ದಿನಾಚರಣೆ ಸಂದರ್ಭದಲ್ಲಿ ವಂದನೆ, ಅಭಿವಂದನೆ.
ಪತ್ರಿಕಾ ವಿತರಕರು ಏನೆನ್ನುತ್ತಾರೆ?
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260904-34-482123897