
ಬೀದರ್ ಕೋಟೆ ಜಲ ಕೌಶಲದ ತಾಣ
ಶಶಿಕಾಂತ ಎಸ್. ಶೆಂಬೆಳ್ಳಿ
ಐದುನೂರು ವರ್ಷಗಳ ಹಿಂದೆ ನಿರ್ಮಿಸಿದ ಕೋಟೆಯೊಳಗೆ ನೀರು ಹೇಗೆ ಹರಿಯುತ್ತಿತ್ತು?
ಬಾವಿಯಿಂದ ನೀರನ್ನು ಮೇಲೆತ್ತಲಾಗುತ್ತಿತ್ತು. ಎತ್ತರದ ಪ್ರದೇಶಕ್ಕೆ ಸಾಗಿಸಲಾಗುತ್ತಿತ್ತು. ಅಲ್ಲಿಂದ ಪೈಪ್‌ಗಳ ಮೂಲಕ ಕೋಟೆಯ ವಿವಿಧ ಕಟ್ಟಡಗಳಿಗೆ ನೀರು ತಲುಪುತ್ತಿತ್ತು. ಕುಡಿಯಲು, ನಿತ್ಯಬಳಕೆಗೆ, ಉದ್ಯಾನಗಳ ನಿರ್ವಹಣೆಗೆ ಮಾತ್ರವಲ್ಲ; ಕಾರಂಜಿ ಮತ್ತು ಕೃತಕ ಜಲಪಾತಗಳಿಗೂ ಇದೇ ನೀರು ಬಳಕೆಯಾಗುತ್ತಿತ್ತು.
ಇವೆಲ್ಲವೂ ಆಧುನಿಕ ಪಂಪ್‌ಗಳಾಗಲಿ, ವಿದ್ಯುತ್ ಆಗಲಿ ಇಲ್ಲದ ಕಾಲದಲ್ಲಿ!
ಬಹಮನಿ ಸುಲ್ತಾನರು ಬೀದರ್ ನಗರದಲ್ಲಿ ನಿರ್ಮಿಸಿದ ಕೋಟೆಯ ವೈಶಿಷ್ಟ್ಯವೇ ಇದು. ಸುಮಾರು ಐದು ಶತಮಾನಗಳ ಹಿಂದೆಯೇ ಭೂಮಿಯ ಏರಿಳಿತವನ್ನು ಅರಿತು, ಸ್ಥಳೀಯ ತಂತ್ರಜ್ಞಾನ ಮತ್ತು ಎಂಜಿನಿಯರಿಂಗ್ ಕೌಶಲ ಬಳಸಿ ರೂಪಿಸಿದ್ದ ಸುಸ್ಥಿರ ನೀರು ಸರಬರಾಜು ವ್ಯವಸ್ಥೆ ಇಂದಿಗೂ ಅಚ್ಚರಿ ಮೂಡಿಸುತ್ತದೆ.
ಬೀದರ್ ಕೋಟೆ ಮಾನವ ನಿರ್ಮಿತ ಹಲವು ಅಚ್ಚರಿಗಳನ್ನು ತನ್ನೊಳಗೆ ಇಟ್ಟುಕೊಂಡಿದೆ. ಅವುಗಳಲ್ಲಿ ಈ ವ್ಯವಸ್ಥಿತ ನೀರು ಸರಬರಾಜು ವ್ಯವಸ್ಥೆಯೂ ಒಂದು.
ಪರ್ಶಿಯಾದ ಎಂಜಿನಿಯರ್‌ಗಳ ಜೊತೆ ಸ್ಥಳೀಯ ಪ್ರತಿಭಾವಂತರು ಸೇರಿ ಈ ವ್ಯವಸ್ಥೆಯ ಯೋಜನೆ ರೂಪಿಸಿದ್ದರು. ಭೂಮಿಯ ಏರಿಳಿತವನ್ನು ವೈಜ್ಞಾನಿಕವಾಗಿ ಬಳಸಿಕೊಂಡು ನೀರು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸರಾಗವಾಗಿ ಹರಿಯುವಂತೆ ವ್ಯವಸ್ಥೆ ಮಾಡಲಾಗಿತ್ತು. ಜನವಸತಿ ಇರುವ ಪ್ರದೇಶಗಳಿಗೂ ನೀರು ತಲುಪುವಂತೆ ಅದರ ವಿನ್ಯಾಸ ರೂಪಿಸಲಾಗಿತ್ತು.
ಕೋಟೆ ಎರಡು ಸುತ್ತಿನ ಗೋಡೆಗಳನ್ನು ಒಳಗೊಂಡಿದೆ. ಸುಮಾರು ಏಳು ಕಿ.ಮೀ. ಸುತ್ತಳತೆಯ ಒಳಭಾಗದಲ್ಲಿ ಸುಲ್ತಾನರು ಮತ್ತವರ ಮನೆತನದವರು ವಾಸಿಸುತ್ತಿದ್ದರು. ಮತ್ತೊಂದು ಗೋಡೆಯೊಳಗೆ ಸಾಮಾನ್ಯ ಜನರ ವಾಸಸ್ಥಳವಿತ್ತು. ರಾಜಮನೆತನದ ವಾಸಸ್ಥಳದಲ್ಲಿ ನೀರು ಸರಬರಾಜಿಗೆ ವಿಶೇಷ ವ್ಯವಸ್ಥೆ ಕಲ್ಪಿಸಲಾಗಿತ್ತು.
ಕೋಟೆಯ ಆವರಣದಲ್ಲೇ 32 ಬಾವಿಗಳನ್ನು ನಿರ್ಮಿಸಲಾಗಿತ್ತು. ಯಾವುದೇ ಆಧುನಿಕ ಯಂತ್ರೋಪಕರಣಗಳಿಲ್ಲದ ಕಾಲದಲ್ಲಿ ಈ ಬಾವಿಗಳಿಂದ ನೀರನ್ನು ಮೇಲೆತ್ತಲು ದೇಸಿ ತಂತ್ರಜ್ಞಾನ ಬಳಸಲಾಗುತ್ತಿತ್ತು. ಚರ್ಮದ ಚೀಲವನ್ನು ಹಗ್ಗಕ್ಕೆ ಕಟ್ಟಿ, ಗಿರಕಿಯ ಮೂಲಕ ಎತ್ತುಗಳ ನೆರವಿನಿಂದ ಮೇಲೆತ್ತಲಾಗುತ್ತಿತ್ತು. ಹೀಗೆ ಮೇಲೆತ್ತಿದ ನೀರನ್ನು ಅಗತ್ಯವಿರುವ ಪ್ರದೇಶಗಳಿಗೆ ಹರಿಸಲಾಗುತ್ತಿತ್ತು.
ಸೋಲಹ ಕಂಬ (ಹದಿನಾರು ಕಂಬಗಳ) ಮಸೀದಿ ಮುಂಭಾಗದಲ್ಲಿರುವ ಲಾಲ್‌ಬಾಗ್, ತರ್ಕಿಷ್ ಮಹಲ್, ಗಗನ್ ಮಹಲ್, ದಿವಾನ್ ಏ ಖಾಸ್, ದಿವಾನ್ ಏ ಆಮ್ ಸೇರಿದಂತೆ ಹಲವು ಕಟ್ಟಡಗಳಿಗೆ ಇದೇ ವ್ಯವಸ್ಥೆಯ ಮೂಲಕ ನೀರು ಪೂರೈಕೆಯಾಗುತ್ತಿತ್ತು.
ಆದರೆ ಇಲ್ಲಿನ ಅಚ್ಚರಿ ಬಾವಿಗಳಲ್ಲಷ್ಟೇ ಇರಲಿಲ್ಲ. ನೀರನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಹೇಗೆ ಕೊಂಡೊಯ್ಯಲಾಗುತ್ತಿತ್ತು ಎಂಬುದರಲ್ಲೂ ಅಂದಿನ ಎಂಜಿನಿಯರ್‌ಗಳ ಬುದ್ಧಿವಂತಿಕೆ ಕಾಣುತ್ತದೆ.
ಎತ್ತರದ ಪ್ರದೇಶಕ್ಕೆ ಎತ್ತಿದ ನೀರು ಕೊಳವೆಗಳ ಮೂಲಕ ಹರಿಯುತ್ತಿತ್ತು. ಮಣ್ಣಿನಿಂದ ತಯಾರಿಸಿ ಸುಟ್ಟ ಕೊಳವೆಗಳನ್ನು ಇದಕ್ಕಾಗಿ ಬಳಸಲಾಗುತ್ತಿತ್ತು. ಥೇಟ್ ಟೆರ್ರಾಕೋಟಾ ಪೈಪ್‌ಗಳಂತಿರುವ ಈ ಕೊಳವೆಗಳನ್ನು ಕಟ್ಟಡಗಳ ಗೋಡೆ ನಿರ್ಮಿಸುವಾಗಲೇ ಅಳವಡಿಸಲಾಗಿತ್ತು.
ಗೋಡೆಗಳೊಳಗೇ ಕೊಳವೆಗಳನ್ನು ಹುದುಗಿಸಿ ನೀರು ಹರಿಯುವಂತೆ ಮಾಡಲಾಗಿತ್ತು. ನೀರು ಸೋರಿಕೆಯಾಗದಂತೆ ವ್ಯವಸ್ಥೆ ರೂಪಿಸಲಾಗಿತ್ತು. ಕೋಟೆಯ ಪರಿಸರದಲ್ಲಿ ಈಗಲೂ ಈ ಪ್ರಾಚೀನ ಕೊಳವೆಗಳ ಅವಶೇಷಗಳನ್ನು ಕಾಣಬಹುದು.
ನೀರಿನ ಸಂಗ್ರಹಕ್ಕಾಗಿ ಟ್ಯಾಂಕ್‌ಗಳನ್ನೂ ನಿರ್ಮಿಸಲಾಗಿತ್ತು. ಕುಡಿಯಲು, ನಿತ್ಯಬಳಕೆಗೆ ಮತ್ತು ಉದ್ಯಾನಗಳ ನಿರ್ವಹಣೆಗೆ ಈ ನೀರನ್ನು ಬಳಸಲಾಗುತ್ತಿತ್ತು. ಕಾರಂಜಿ ಹಾಗೂ ಕೃತಕ ಜಲಪಾತಗಳಿಗೂ ಇದೇ ನೀರು ಪೂರೈಕೆಯಾಗುತ್ತಿತ್ತು.
ಆರಂಭದಲ್ಲಿ ಸುಲ್ತಾನರು ಮತ್ತವರ ಮನೆತನದವರ ಬಳಕೆಗೆ ಸೀಮಿತವಾಗಿದ್ದ ನೀರಿನ ವ್ಯವಸ್ಥೆ ನಂತರ ಕೋಟೆಯೊಳಗಿನ ಜನಸಾಮಾನ್ಯರು, ಜಾನುವಾರುಗಳು ಸೇರಿದಂತೆ ಎಲ್ಲರಿಗೂ ಅನುಕೂಲವಾಗುವಂತೆ ವಿಸ್ತರಿಸಿತು. ಇದು ಕೇವಲ ಕೋಟೆಯೊಳಗಿನ ನೀರಿನ ವ್ಯವಸ್ಥೆಯಾಗಿರಲಿಲ್ಲ. ಇಡೀ ಬೀದರ್ ನಗರದ ನೀರಿನ ಜಾಲದೊಂದಿಗೆ ಅದು ಬೆಸೆದುಕೊಂಡಿತ್ತು.
ದೀರ್ಘಕಾಲ ನೀರಿನ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ಕೋಟೆಯ ನೀರು ಸರಬರಾಜು ವ್ಯವಸ್ಥೆಯನ್ನು ಬೀದರ್ ನಗರದಾದ್ಯಂತ ಹರಡಿಕೊಂಡಿದ್ದ ‘ಕರೇಜ್’ ಅಥವಾ ‘ಖನತ್’ ಎಂಬ ಭೂಗತ ಜಲಮಾರ್ಗಗಳೊಂದಿಗೆ ಸಂಪರ್ಕಿಸಲಾಗಿತ್ತು. ಅಲ್ಲಿನ ಬಾವಿಗಳಿಗೂ ಈ ವ್ಯವಸ್ಥೆಯ ಸಂಪರ್ಕವಿತ್ತು. ಹೀಗಾಗಿ ವರ್ಷವಿಡೀ ನೀರಿನ ಲಭ್ಯತೆ ಸಾಧ್ಯವಾಗಿತ್ತು.
‘ಯಾವುದೇ ಆಧುನಿಕ ಯಂತ್ರೋಪಕರಣಗಳ ಸಹಾಯವಿಲ್ಲದೆ ಬೀದರ್ ಕೋಟೆಯಲ್ಲಿ 32 ಬಾವಿಗಳನ್ನು ನಿರ್ಮಿಸಲಾಗಿತ್ತು. ಕೋಟೆಯಲ್ಲಿ ಓಡಾಡಿದರೆ ಈಗಲೂ ಅವು ಗೋಚರಿಸುತ್ತವೆ. ಅಂದಿನ ಎಂಜಿನಿಯರ್‌ಗಳ ಕೌಶಲ ಮತ್ತು ಸೂಕ್ಷ್ಮತೆಗೆ ಇವು ಕೈಗನ್ನಡಿ’ ಎನ್ನುತ್ತಾರೆ ಲೇಖಕ ಬಸವರಾಜ ಬಲ್ಲೂರ.
ಅವರ ಮಾತಿಗೆ ಪೂರಕವಾಗಿ ಕೋಟೆಯ ನೀರಿನ ವ್ಯವಸ್ಥೆಯನ್ನು ನೋಡಿದರೆ, ಅದು ಕೇವಲ ಹಳೆಯ ಕಾಲದ ನಿರ್ಮಾಣ ತಂತ್ರವಲ್ಲ; ನೀರಿನ ಲಭ್ಯತೆ, ಭೂಮಿಯ ಸ್ವರೂಪ ಮತ್ತು ಬಳಕೆಯ ಅಗತ್ಯವನ್ನು ಅರ್ಥ ಮಾಡಿಕೊಂಡು ರೂಪಿಸಿದ ಸುಸ್ಥಿರ ವ್ಯವಸ್ಥೆ ಎಂಬುದು ಗೋಚರಿಸುತ್ತದೆ.
‘ಸುಸ್ಥಿರ ನೀರಿನ ವ್ಯವಸ್ಥೆಗೆ ಬೀದರ್ ಕೋಟೆ ನಮ್ಮೆದುರಿಗಿರುವ ಅತಿದೊಡ್ಡ ಜ್ವಲಂತ ಸಾಕ್ಷಿ. ಇದು ಎಂಜಿನಿಯರಿಂಗ್ ಕ್ಷೇತ್ರದ ಅದ್ಭುತವೆಂದರೆ ತಪ್ಪಾಗಲಾರದು. ಇದರ ಸಂರಕ್ಷಣೆಯ ಜೊತೆಗೆ ಇನ್ನಷ್ಟು ಅಕಾಡೆಮಿಕ್ ಸಂಶೋಧನೆಗಳು ನಡೆಯಬೇಕಿದೆ. ನೀರಿನ ಮೂಲಗಳನ್ನು ಜೀರ್ಣೋದ್ಧಾರಗೊಳಿಸಿ, ಅವುಗಳ ಸದ್ಬಳಕೆಯ ಬಗ್ಗೆಯೂ ಗಂಭೀರವಾಗಿ ಚಿಂತಿಸಬೇಕಿದೆ’ ಎಂದು ‘ಟೀಮ್ ಯುವಾ’ ಸಂಚಾಲಕ ವಿನಯ್ ಕುಮಾರ್ ಮಾಳಗೆ ಹೇಳುತ್ತಾರೆ.
ಇದೇ ‘ಟೀಮ್ ಯುವಾ’ ತಂಡದ ಸತತ ಪ್ರಯತ್ನದ ಫಲವಾಗಿ ಬೀದರ್ ಸಮೀಪದ ಅಲಿಯಾಬಾದ್ ಬಳಿ ಜಿಲ್ಲಾಡಳಿತವು ‘ಕರೇಜ್’ ಜೀರ್ಣೋದ್ಧಾರ ಮಾಡಿದೆ. ಇಡೀ ಬೀದರ್‌ನಾದ್ಯಂತ ಹರಡಿಕೊಂಡಿರುವ ಈ ಪ್ರಾಚೀನ ಜಲವ್ಯವಸ್ಥೆಯನ್ನು ಪುನರುಜ್ಜೀವನಗೊಳಿಸುವ ಉದ್ದೇಶದಿಂದ ತಂಡ ಅವಿರತವಾಗಿ ಶ್ರಮಿಸುತ್ತಿದೆ.
ಐದು ಶತಮಾನಗಳ ಹಿಂದೆ ರೂಪಿಸಿದ ಈ ಜಲವ್ಯವಸ್ಥೆ ಇಂದು ಕೂಡ ಬಹಮನಿ ಸುಲ್ತಾನರ ಕಾಲದ ಎಂಜಿನಿಯರಿಂಗ್ ಕೌಶಲ ಮತ್ತು ನೀರಿನ ಬಗ್ಗೆ ಅವರಿಗಿದ್ದ ದೂರದೃಷ್ಟಿಗೆ ಸಾಕ್ಷಿಯಾಗಿ ಉಳಿದಿದೆ.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260906-51-1902226518