
ಜೆನ್–ಝೀಗಳು ಯಾರ ಕೈಗೊಂಬೆಯಾಗಬೇಡಿ: ರಾಹುಲ್ ಗಾಂಧಿ ಕಾರ್ಯಕ್ರಮಕ್ಕೂ ಮುನ್ನ ಬಿಜೆಪಿ
ಬರ್ವಾನಿ(ಮಧ್ಯಪ್ರದೇಶ): ಜೆನ್–ಝೀಗಳು ಯಾರ ಕೈಗೊಂಬೆಯಾಗಬೇಡಿ. ಯಾವುದೇ ರಾಜಕೀಯ ಸಂಚುಗಳಿಗೆ ಬಲಿಯಾಗಬೇಡಿ. ಯುವಜನರ ಸಮಸ್ಯೆಗಳನ್ನು ಪರಿಹರಿಸಲು ನಾವು ಬದ್ಧವಾಗಿದ್ದೇವೆ ಎಂದು ಮಧ್ಯಪ್ರದೇಶದ ಆಡಳಿತಾರೂಢ ಬಿಜೆಪಿ ಹೇಳಿದೆ.
ಸೆಪ್ಟೆಂಬರ್ 19ರಂದು ಇಂದೋರ್‌ನಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ 'ಛಾತ್ರೋಂ ಕೀ ಗೂಂಜ್' ಕಾರ್ಯಕ್ರಮ ಆಯೋಜನೆಗೊಂಡಿರುವ ಬೆನ್ನಲ್ಲೇ ಬಿಜೆಪಿ ಈ ಹೇಳಿಕೆ ನೀಡಿದೆ.
ರಾಹುಲ್ ಗಾಂಧಿ ಅವರು ಈ ವಿದ್ಯಾರ್ಥಿ ಸಂವಾದದಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ, ದುಬಾರಿ ಶಿಕ್ಷಣ, ಸರ್ಕಾರಿ ನೇಮಕಾತಿಯಲ್ಲಿನ ಅಕ್ರಮಗಳು ಮತ್ತು ನಿರುದ್ಯೋಗದಂತಹ ವಿಷಯಗಳಿಗೆ ಸಂಬಂಧಿಸಿದಂತೆ ಬಿಜೆಪಿಯನ್ನು ಗುರಿಯಾಗಿಸಿಕೊಂಡಿದ್ದಾರೆ.
ನೀಟ್ ಪ್ರಶ್ನೆಪತ್ರಿಕೆ ಸೋರಿಕೆಗೆ ಸಂಬಂಧಿಸಿದಂತೆ ದೆಹಲಿಯ ಜಂತರ್ ಮಂತರ್‌ನಲ್ಲಿ ಕಾಕ್ರೋಚ್ ಜನತಾ ಪಾರ್ಟಿ(ಸಿಜೆಪಿ) ನೇತೃತ್ವದಲ್ಲಿ ಜೆನ್–ಝೀಗಳು ಪ್ರತಿಭಟನೆ ನಡೆಸಿದ್ದರು. ಇದನ್ನು ಉಲ್ಲೇಖಿಸಿ ಮಾತನಾಡಿದ ರಾಜ್ಯ ಬಿಜೆಪಿ ವಕ್ತಾರೆ ಉಷಾ ಠಾಕೂರ್, ‘ನಮ್ಮ ನಾಯಕತ್ವವು ಮಕ್ಕಳ ಮಾತನ್ನು ಕೇಳಿದೆ. ನಾವು ಖಂಡಿತವಾಗಿಯೂ ಅವರ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳುತ್ತೇವೆ. ಇಡೀ ಬಿಜೆಪಿ ವಿದ್ಯಾರ್ಥಿಗಳ ಬೇಡಿಕೆಗಳನ್ನು ಆಲಿಸಲು ಮತ್ತು ಅವುಗಳಿಗೆ ಪರಿಹಾರ ಕಂಡುಕೊಳ್ಳಲು ಬದ್ಧವಾಗಿದೆ’ ಎಂದು ಹೇಳಿದ್ದಾರೆ.
‘ನಾವು ಜೆನ್–ಝೀಗಳಿಂದ ಒಂದೇ ನಿರೀಕ್ಷೆಯನ್ನು ಮಾಡುತ್ತೇವೆ. ನೀವು ಮರ್ಯಾದೆಯ ಎಲ್ಲೆಯೊಳಗೆ ಮತ್ತು ನಮ್ಮ ಸಂಸ್ಕೃತಿ ಹಾಗೂ ಮೌಲ್ಯಗಳನ್ನು ಗಮನದಲ್ಲಿಟ್ಟುಕೊಂಡು ಮಾತನಾಡಿ. ಯಾವುದೊ ವ್ಯಕ್ತಿಯ ಕೈಗೊಂಬೆಯಾಗಬೇಡಿ, ಅವರ ಸಂಚುಗಳಿಗೆ ಬಲಿಯಾಗಬೇಡಿ. ಏಕೆಂದರೆ ಆ ವಿದ್ಯಾರ್ಥಿ ಪ್ರತಿಭಟನೆಯಲ್ಲಿ ಸಮಾಜಘಾತಕ ಶಕ್ತಿಗಳು ಹೇಗೆ ನುಸುಳಿದವು ಎಂಬುದನ್ನು ಇಡೀ ದೇಶವೇ ನೋಡಿದೆ’ ಎಂದು ಹೇಳಿದ್ದಾರೆ.
ರಾಹುಲ್ ಗಾಂಧಿ ಅವರು ಯುವಜನರೊಂದಿಗೆ ಸಂವಾದ ನಡೆಸುವ ಹೆಸರಿನಲ್ಲಿ ರಾಜಕೀಯ ಅಭಿಯಾನ ನಡೆಸುತ್ತಿದ್ದಾರೆ. ಕಾಂಗ್ರೆಸ್ ಅಥವಾ ಅದರ ಮಿತ್ರಪಕ್ಷಗಳು ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ವಿದ್ಯಾರ್ಥಿಗಳ ಸಮಸ್ಯೆಗಳ ಬಗ್ಗೆ ಅವರ ಧೋರಣೆ ಸಂಪೂರ್ಣವಾಗಿ ಭಿನ್ನವಾಗಿದೆ ಎಂದು ಆರೋಪಿಸಿದ್ದಾರೆ.