
ಬಂಗಾರಪೇಟೆ: ಸರ್ಕಾರಿ ಶಾಲೆಗಳಲ್ಲಿ ಪಾಠ ಮಾಡಲು ಶಿಕ್ಷಕರಿಲ್ಲ!
ಬಂಗಾರಪೇಟೆ: ಶೈಕ್ಷಣಿಕ ವರ್ಷದಲ್ಲಿ ಅರ್ಧ ವಾರ್ಷಿಕ ಪರೀಕ್ಷೆಗಳು ಹತ್ತಿರವಾಗಿದ್ದು, ಸರ್ಕಾರಿ ಶಾಲೆಗಳಲ್ಲಿ ಪಾಠ ಮಾಡಲು ಶಿಕ್ಷಕರಿಲ್ಲದೆ ಬಡ ಮಕ್ಕಳ ಶೈಕ್ಷಣಿಕ ಭವಿಷ್ಯ ತೀವ್ರ ಸಂಕಷ್ಟಕ್ಕೆ ಸಿಲುಕಿದೆ.
ತಾಲ್ಲೂಕಿನಾದ್ಯಂತ ಸರ್ಕಾರಿ ಶಾಲಾ ಶಿಕ್ಷಕನ್ನು ಎಸ್‌ಐಆರ್ ಕಾರ್ಯಕ್ಕಾಗಿ ಬೂತ್ ಮಟ್ಟದ ಅಧಿಕಾರಿಗಳನ್ನಾಗಿ (ಬಿಎಲ್‌ಒ) ನಿಯೋಜಿಸಿರುವುದೇ ಈ ಶೈಕ್ಷಣಿಕ ಬಿಕ್ಕಟ್ಟಿಗೆ ಕಾರಣವಾಗಿದೆ.
ತಾಲ್ಲೂಕಿನಲ್ಲಿ ಎಸ್‌ಐಆರ್‌ಗಾಗಿ ಒಟ್ಟು 259 ಬೂತ್ ಮಟ್ಟದ ಅಧಿಕಾರಿಗಳನ್ನು ನೇಮಿಸಲಾಗಿದೆ. ಇದರಲ್ಲಿ 201 ಶಾಲಾ ಶಿಕ್ಷಕರು, 52 ಅಂಗನವಾಡಿ ಕಾರ್ಯಕರ್ತೆಯರು ಹಾಗೂ 6 ಇತರೆ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಬಿಎಲ್‌ಒ ಸಿಬ್ಬಂದಿಯಲ್ಲಿ ಶೇ 77ಕ್ಕೂ ಹೆಚ್ಚು ಮಂದಿ ಶಾಲಾ ಶಿಕ್ಷಕರನ್ನೇ ಬಳಸಿಕೊಂಡಿದ್ದಾರೆ. ಇದರಿಂದ ಶಾಲೆಗಳಲ್ಲಿ ಶಿಕ್ಷಕರ ಅಭಾವ ಹೆಚ್ಚಾಗಿದೆ. ಹಾಗಾಗಿ ಶಿಕ್ಷಕರು ಪೂರ್ಣ ಪ್ರಮಾಣದಲ್ಲಿ ಬಿಎಲ್‌ಒ ಕಾರ್ಯದಲ್ಲಿ ತೊಡಗಿರುವುದರಿಂದ ಬೋಧನೆ ಸಂಪೂರ್ಣ ಸ್ಥಗಿತಗೊಂಡಿದೆ.
ಪ್ರಸ್ತುತ ಅರ್ಧ ವಾರ್ಷಿಕ ಪರೀಕ್ಷೆಗಳು ಸಮೀಪಿಸುತ್ತಿದ್ದರೂ, ಹಲವು ವಿಷಯಗಳ ಪಠ್ಯಕ್ರಮ ಅರ್ಧದಷ್ಟೂ ಮುಗಿದಿಲ್ಲ. ಮಕ್ಕಳು ಹೇಗೆ ಪರೀಕ್ಷೆ ಎದುರಿಸುತ್ತಾರೆ ಎಂಬುದು ಪೋಷಕರ ಪ್ರಶ್ನೆಯಾಗಿದೆ. ಶಿಕ್ಷಕರು ಶಾಲಾ ಅವಧಿಯಲ್ಲಿ ಮನೆ ಮನೆಗೆ ತೆರಳಿ ಮತದಾರರ ಪಟ್ಟಿ ಪರಿಷ್ಕರಣೆ, ದಾಖಲೆ ಪರಿಶೀಲನೆ, ಮನೆ ಸಂಖ್ಯೆ ನಮೂದು ಹಾಗೂ ಆನ್‌ಲೈನ್ ಡೇಟಾ ಎಂಟ್ರಿ ಕೆಲಸಗಳಲ್ಲಿ ನಿರತವಾಗಿದೆ. ತರಗತಿಗಳು ಶಿಕ್ಷಕರಿಲ್ಲದೆ ಖಾಲಿ ಇದ್ದು ವಿದ್ಯಾರ್ಥಿಗಳು ಪಾಠವಿಲ್ಲದೆ ದಿನ ಕಳೆಯುವಂತಾಗಿದೆ.
ಶಿಕ್ಷಕರನ್ನು ಆಡಳಿತಾತ್ಮಕ ಕಾರ್ಯಗಳಿಗೆ ನೇಮಕ ಮಾಡಿಕೊಳ್ಳುತ್ತಿರುವುದು ಸರ್ಕಾರಿ ಶಾಲೆಗಳ ಶೈಕ್ಷಣಿಕ ಗುಣಮಟ್ಟ ಕಡಿಮೆಯಾಗುತ್ತಿದೆ. ಹಾಗಾಗಿ ಶಿಕ್ಷಕರ ಬದಲು, ಸಾರ್ವಜನಿಕ ಇಲಾಖೆ, ಪಂಚಾಯತ್ ರಾಜ್, ಪುರಸಭೆ ಮತ್ತು ಇತರ ಇಲಾಖೆಗಳ ಹೆಚ್ಚುವರಿ ಸಿಬ್ಬಂದಿ ಅಥವಾ ಗುತ್ತಿಗೆ ಆಧಾರದ ಮೇಲೆ ನೌಕರರನ್ನು ಬಳಸಿಕೊಳ್ಳಬಹುದು. ಪ್ರಸ್ತುತ ಪರೀಕ್ಷೆ ಸಂದರ್ಭದಲ್ಲಾದರೂ ತಕ್ಷಣವೇ ಶಿಕ್ಷಕರನ್ನು ಬಿಎಲ್‌ಒ ಕರ್ತವ್ಯದಿಂದ ಮುಕ್ತಗೊಳಿಸಿ, ತರಗತಿಗಳಿಗೆ ಮರಳಲು ಪತ್ರ ನೀಡಬೇಕೆಂದು ಪೋಷಕರು ಒತ್ತಾಯಿಸಿದ್ದಾರೆ.
ಮಕ್ಕಳ ಭವಿಷ್ಯದ ಜೊತೆ ಚೆಲ್ಲಾಟ ಸರಿಯೇ?
ಖಾಸಗಿ ಶಾಲೆಯಲ್ಲಿ ಪಠ್ಯಕ್ರಮ ಪುನರಾವರ್ತನೆ ಅಭ್ಯಾಸ ನಡೆಯುತ್ತಿದೆ. ಆದರೆ, ಸರ್ಕಾರಿ ಶಾಲೆಗಳಲ್ಲಿ ಅರ್ಧ ಪಠ್ಯವೂ ಮುಗಿದಿಲ್ಲ. ಅರ್ಧ ವಾರ್ಷಿಕ ಪರೀಕ್ಷೆಗಳು ಹತ್ತಿರವಿದ್ದು, ಶಿಕ್ಷಕರಿಲ್ಲದ ಮಕ್ಕಳಿಗೆ ತರಗತಿಯಲ್ಲಿ ಪಾಠವಿಲ್ಲದೆ ಕುಳಿತುಕೊಳ್ಳಬೇಕಾಗಿದೆ. ಸರ್ಕಾರಿ ಶಾಲೆಗೆ ಕಳುಹಿಸುವ ಬಡ ಮಕ್ಕಳ ಭವಿಷ್ಯದ ಜೊತೆ ಚೆಲ್ಲಾಟ ಸರಿಯೇ?
ಪರ್ಯಾಯ ಬೋಧನಾ ವ್ಯವಸ್ಥೆಗೆ ಸೂಚನೆ
ಎಸ್‌ಐಆರ್ ಪ್ರಕ್ರಿಯೆಗೆ ಸರ್ಕಾರದ ನಿರ್ದೇಶನದಂತೆ ಶಿಕ್ಷಕರನ್ನು ಬಿಎಲ್ಒ ಕಾರ್ಯಕ್ಕೆ ನಿಯೋಜಿಸಲಾಗಿದೆ. ಆದರೆ, ಶಾಲೆಗಳಲ್ಲಿ ಶೈಕ್ಷಣಿಕ ಚಟುವಟಿಕೆಗಳಿಗೆ ತೊಂದರೆಯಾಗದಂತೆ ನಿಗಾ ವಹಿಸಲಾಗಿದೆ. ಅರ್ಧ ವಾರ್ಷಿಕ ಪರೀಕ್ಷೆಗಳು ಹತ್ತಿರವಿರುವ ವಿದ್ಯಾರ್ಥಿಗಳ ಪಠ್ಯಕ್ರಮವನ್ನು ಪೂರ್ಣಗೊಳಿಸಲು ಮತ್ತು ಪರ್ಯಾಯ ಬೋಧನಾ ವ್ಯವಸ್ಥೆ ಮಾಡಿಕೊಳ್ಳಲು ಶಾಲಾ ಮುಖ್ಯಸ್ಥರಿಗೆ ಸೂಚನೆ ನೀಡಲಾಗಿದೆ.
–ಚಂದ್ರಶೇಖರ್, ಕ್ಷೇತ್ರ ಶಿಕ್ಷಣಾಧಿಕಾರಿ
ಬಿಎಲ್ಒ ಕಾರ್ಯಕ್ಕೆ ನಿಯೋಜಿಸಿರುವ ಶಿಕ್ಷಕರನ್ನು ಕರ್ತವ್ಯದಿಂದ ಮುಕ್ತಗೊಳಿಸಿ, ತರಗತಿಗಳಿಗೆ ಕಳುಹಿಸಿ. ಪುರಸಭೆ ಅಥವಾ ಪಂಚಾಯತ್ ರಾಜ್ ಇಲಾಖೆ ಹೆಚ್ಚುವರಿ ಸಿಬ್ಬಂದಿಯನ್ನು ಬಳಸಿಕೊಳ್ಳಿ
–ಜ್ಯೋತೇನಹಳ್ಳಿ ನಾಗೇಶ್, ಶಿಕ್ಷಣ ಪ್ರೇಮಿ