ಹುಳಿಯಾರು: ವಾರದ ಸಂತೆಯಿಂದ ಒಂದಿಷ್ಟು ಕಳೆ

ಹುಳಿಯಾರು: ವಾರದ ಸಂತೆಯಿಂದ ಒಂದಿಷ್ಟು ಕಳೆ

ಹುಳಿಯಾರು: ವಾರದ ಸಂತೆಯಿಂದ ಒಂದಿಷ್ಟು ಕಳೆ

ಹುಳಿಯಾರು: ಮಳೆ ಕೊರತೆ ಸೇರಿದಂತೆ ಹಲವು ಸಂಕಷ್ಟಗಳಿಗೆ ನಲುಗಿ ಸ್ತಬ್ಧಗೊಂಡಿದ್ದ ಇಲ್ಲಿನ ಎಪಿಎಂಸಿಗೆ ಇತ್ತೀಚೆಗೆ ಪಟ್ಟಣದಲ್ಲಿ ನಡೆಯುತ್ತಿರುವ ವಾರದ ಸಂತೆ ಕೊಂಚ ಕಳೆ ತುಂಬಿದೆ.

ಚಿಕ್ಕನಾಯಕನಹಳ್ಳಿ ತಾಲ್ಲೂಕು ಕೇಂದ್ರದಲ್ಲಿರ ಬೇಕಿದ್ದ ಎಪಿಎಂಸಿ ಪ್ರಮುಖ ವಾಣಿಜ್ಯ ಕೇಂದ್ರವಾಗಿದ್ದ ಹುಳಿಯಾರಿನಲ್ಲಿ 1968ರಲ್ಲಿ ಆರಂಭವಾಯಿತು. ಪಟ್ಟಣದ ಗಾಂಧಿಪೇಟೆ ವಾರದ ಸಂತೆ ಸೇರಿದಂತೆ ದವಸ ಧಾನ್ಯಗಳ ಮಾರಾಟ ಸ್ಥಳವಾಗಿದ್ದ ಕಾರಣ ಎಪಿಎಂಸಿಯು ಇಲ್ಲಿಯೇ ಖಾಸಗಿ ಕಟ್ಟಡದಲ್ಲಿ ನಡೆಯುತ್ತಿತ್ತು. 1995ರಲ್ಲಿ ಪಟ್ಟಣದ ಹೊರವಲಯಕ್ಕೆ ಸ್ಥಳಾಂತರಗೊಂಡಿತು.

ಮೊದಲು ಕೊಬ್ಬರಿ ವಹಿವಾಟು ಮಾತ್ರ ನಡೆಯುತ್ತಿತ್ತು. ನಾಲ್ಕೈದು ವರ್ಷಗಳ ನಂತರ ಉಳಿದ ದವಸ ಧಾನ್ಯಗಳ ವ್ಯಾಪಾರವೂ ಆರಂಭವಾಯಿತು. ಒಂದು ಕಾಲದಲ್ಲಿ ಜಿಲ್ಲೆಯಲ್ಲಿ ತಿಪಟೂರು ಬಿಟ್ಟರೆ ಹುಳಿಯಾರು ಎಪಿಎಂಸಿ ಕೊಬ್ಬರಿ ವ್ಯಾಪಾರಕ್ಕೆ ಹೆಸರು ಪಡೆದಿತ್ತು. ಪೂರ್ವ ಮುಂಗಾರಿನಲ್ಲಿ ಬೆಳೆಯುವ ಹೆಸರುಕಾಳು ಮಾರಾಟಕ್ಕೂ ಹೆಸರುವಾಸಿಯಾಗಿತ್ತು. ಇಲ್ಲಿನ ಮಾರುಕಟ್ಟೆಗೆ ಬರುವ ಹೆಸರುಕಾಳು ಇಲ್ಲಿಂದ ಹೊರರಾಜ್ಯಗಳಿಗೆ ರಫ್ತಾಗುತ್ತಿತ್ತು. ರಾಗಿ, ನವಣೆ, ಸಾಮೆ ಸೇರಿದಂತೆ ಸಿರಿಧಾನ್ಯಗಳ ಮಾರಾಟದ ಕಣಜವೇ ಆಗಿತ್ತು. ಚಿಕ್ಕನಾಯಕನಹಳ್ಳಿಯಲ್ಲಿ ಉಪ ಮಾರುಕಟ್ಟೆಯಿದ್ದು ವಿಶಾಲವಾದ ಜಾಗವಿದ್ದು ಕೊಬ್ಬರಿ, ದವಸ ಹಾಗೂ ಪ್ರಸ್ತುತ ವಾರದ ತರಕಾರಿ ಹಾಗೂ ಕುರಿಸಂತೆ ನಡೆಯುತ್ತಿದೆ. ಜಿಲ್ಲೆಯಲ್ಲಿಯೇ ಪ್ರಮುಖ ಕುರಿ ಸಂತೆ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ.

ಇತ್ತೀಚಿನ ದಿನಗಳಲ್ಲಿ ಮಾರುಕಟ್ಟೆಗೆ ಗ್ರಹಣ ಬಡಿದು ಜನ ಸಂಚಾರ ಕಡಿಮೆಯಾಗಿತ್ತು. ಮೂಲಸೌಕರ್ಯಗಳ ಕೊರತೆಯಿಂದ ನಲುಗಿದೆ. ಮಾರುಕಟ್ಟೆ ಪ್ರದೇಶ ವಿಶಾಲವಾಗಿದ್ದು ನೀರು ಹೊರಹೋಗಲು ಉತ್ತಮ ಚರಂಡಿ ವ್ಯವಸ್ಥೆ ಇಲ್ಲ. ಎರಡು ವರ್ಷಗಳ ಹಿಂದೆ ಮಾರುಕಟ್ಟೆಯೊಳಗೆ ನೀರು ನುಗ್ಗಿ ಹೊರ ಹೋಗಲು ಸ್ಥಳಾವಾಕಾಶವಿಲ್ಲದೆ ಕಾಂಪೌಂಡ್‌ ಗೋಡೆ ಒಡೆದು ನೀರು ಹೊರ ಹೋಗಿತ್ತು. ಮಾರುಕಟ್ಟೆಯಲ್ಲಿ ಬಹು ವರ್ಷಗಳಿಂದಲೂ ಬೀದಿದೀಪ, ಎಲ್ಲೆಂದರಲ್ಲಿ ವಿದ್ಯುತ್‌ ಕಂಬಗಳು ಇರುವುದರಿಂದ ಆವರಣದ ಅಂದಗೆಡಿಸಿದೆ. ಉತ್ತಮ ಶೌಚಾಲಯ ಸೇರಿದಂತೆ ಕುಡಿಯುವ ನೀರಿನ ಸಮಸ್ಯೆ ಬಹು ವರ್ಷಗಳಿಂದ ಬಾಧಿಸುತ್ತಿದೆ.

ಸಿಬ್ಬಂದಿ ಕೊರತೆ: ಮಾರುಕಟ್ಟೆಯಲ್ಲಿ ಕಾರ್ಯದರ್ಶಿ ಸೇರಿದಂತೆ 10 ಮಂದಿ ಸಿಬ್ಬಂದಿ ಇರಬೇಕು. ಆದರೆ ಇಲ್ಲಿ ಕಾರ್ಯದರ್ಶಿಯನ್ನು ಹೊರತುಪಡಿಸಿದರೆ ಕಾಯಂ ಸಿಬ್ಬಂದಿ ಇಲ್ಲ. ಹೊರಗುತ್ತಿಗೆ ಆಧಾರದಲ್ಲಿ ಐದು ಜನ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಮಾರುಕಟ್ಟೆಗೆ ಬರುವ ರೈತರಿಗೆ ಉತ್ಪನ್ನಗಳನ್ನು ಇಳಿಸಲು, ಸಂಗ್ರಹಿಸಲು ಅವಕಾಶ ಕಲ್ಪಿಸಬೇಕು. ಉತ್ತಮ ಶೌಚಾಲಯ, ಕುಡಿಯುವ ನೀರು, ರಸ್ತೆಯನ್ನು ಅಭಿವೃದ್ಧಿ ಪಡಿಸಬೇಕು. ಮಾರುಕಟ್ಟೆಯಲ್ಲಿ ರೈತರಿಗೆ ನ್ಯಾಯಯುತ ಬೆಲೆ ಸಿಗುತ್ತದೆ ಎಂಬ ಭರವಸೆಯನ್ನು ಎಪಿಎಂಸಿ ಅಧಿಕಾರಿಗಳು ಸೃಷ್ಟಿಸಿದರೆ ಮಧ್ಯವರ್ತಿಗಳಿಗೆ ಮಾರಾಟ ಮಾಡದೆ ನೇರ ಮಾರುಕಟ್ಟೆಗೆ ರೈತರು ಬರುತ್ತಾರೆ ಎನ್ನುವುದು ರೈತರ ಪ್ರಮುಖ ಬೇಡಿಕೆ.

ಕೊಬ್ಬರಿ, ಸಿರಿಧಾನ್ಯ, ತರಕಾರಿ ಹರಾಜು ಪ್ರಕ್ರಿಯೆ ನಡೆಯಲು ಸಣ್ಣ ಸಣ್ಣ ಮಳಿಗೆಗಳ ನಿರ್ಮಿಸಬೇಕು. ಹೈಮಾಸ್ಟ್‌ ದೀಪ ಸೇರಿದಂತೆ ಉತ್ತಮ ಬೆಳಕಿನ ವ್ಯವಸ್ಥೆ ಆಗಬೇಕು. ಕೊಬ್ಬರಿ ಮತ್ತು ರಾಗಿಯನ್ನು ಸರ್ಕಾರ ಬೆಂಬಲ ಬೆಲೆಯಲ್ಲಿ ಖರೀದಿಸುವ ಸಂದರ್ಭದಲ್ಲಿ ಎದುರಾಗುವ ಸಮಸ್ಯೆಗಳನ್ನು ತಪ್ಪಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ರೈತರು ಒತ್ತಾಯಿಸಿದ್ದಾರೆ.

ಎಪಿಎಂಸಿಯಲ್ಲಿ ಕುಡಿಯುವ ನೀರಿನ ಘಟಕ ಸದ್ಯದಲ್ಲಿಯೇ ಪ್ರಾರಂಭವಾಗಲಿದೆ. ಜಿಲ್ಲಾ ಪಂಚಾಯಿತಿಯಿಂದ ₹5 ಲಕ್ಷ ವೆಚ್ಚದಲ್ಲಿ ಆಧುನಿಕ ಶೌಚಾಲಯ ಮಂಜೂರಾಗಿದೆ. ವಾರದ ಸಂತೆ ಕೂಡ ಇಲ್ಲಿಗೆ ಸ್ಥಳಾಂತರವಾಗಿರುವುದರಿಂದ ತರಕಾರಿ, ದಿನಸಿ ಸೇರಿದಂತೆ ಇತರ ಉತ್ಪನ್ನಗಳ ಮಾರಾಟಕ್ಕೆ ಅನುಕೂಲವಾಗುವಂತೆ ಮಳಿಗೆ ನಿರ್ಮಿಸಲು ಡಿಪಿಆರ್‌ ಸಿದ್ಧಪಡಿಸಿ ಜಿಲ್ಲಾ ಕಚೇರಿಗೆ ಸಲ್ಲಿಸಲಾಗಿದೆ.

ಎಂ.ನಾಗೇಂದ್ರಕುಮಾರ್‌ ಎಪಿಎಂಸಿ ಕಾರ್ಯದರ್ಶಿ

ಎಪಿಎಂಸಿಯಲ್ಲಿ ರಕ್ಷಣೆ ಅಗತ್ಯವಾಗಿದ್ದು ಬೀದಿದೀಪ ಅಳವಡಿಸಬೇಕು. ಸಂಜೆಯಾಗುತ್ತಿದ್ದಂತೆ ಕುಡುಕರ ಅಡ್ಡೆಯಾಗಿ ಬೇರೆ ಬೇರೆ ಅವಘಡಗಳಿಗೆ ಕಾರಣವಾಗುತ್ತದೆ.

ಎಲ್.ಆರ್.ಬಾಲಾಜಿ, ವರ್ತಕ

ತಾಲ್ಲೂಕಿನಲ್ಲಿ ತೆಂಗು, ಅಡಿಕೆಯೊಂದಿಗೆ ಉಪ ಬೆಳೆಯಾಗಿ ಟೊಮೆಟೊ ಸೇರಿದಂತೆ ಇತರ ತರಕಾರಿಗಳನ್ನು ಹೆಚ್ಚಾಗಿ ಬೆಳೆಯುತ್ತಾರೆ. ಬೆಲೆ ಕುಸಿತದ ವೇಳೆ ಸಂಸ್ಕರಿಸಲು ಶೀತಲ ಘಟಕ ನಿರ್ಮಿಸಬೇಕು. ರೈತರ ಉತ್ಪನ್ನಗಳ ಮೌಲ್ಯವರ್ಧನೆಗೆ ಗ್ರಾಮಗಳಲ್ಲಿ ಘಟಕ ಸ್ಥಾಪಿಸಲು ಅರಿವು ನೀಡಿ ಉತ್ತೇಜನ ನೀಡಬೇಕು.

ಸುನಿಲ್‌, ರೈತ, ಕೆಂಕೆರೆ

ಹೋರಾಟದ ಫಲವಾಗಿ ಪಟ್ಟಣದ ಪ್ರಮುಖ ರಸ್ತೆಯಲ್ಲಿ ನಡೆಯುತ್ತಿದ್ದ ವಾರದ ಸಂತೆ ಎಪಿಎಂಸಿಗೆ ಬಂದಿದೆ. ಮಾರುಕಟ್ಟೆಯಲ್ಲಿ ಮೂಲ ಸೌಕರ್ಯ, ಕೃಷಿ ಉತ್ಪನ್ನಗಳ ಪ್ರತ್ಯೇಕ ಮಾರಾಟ, ರೈತರಿಗೆ ಪಾರದರ್ಶಕ ಬೆಲೆ ಸಿಗುವಂತೆ ಕ್ರಮ ವಹಿಸಬೇಕು.

ಹೊಸಹಳ್ಳಿ ಚಂದ್ರಣ್ಣ, ರೈತಸಂಘ

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260906-17-399668763

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ