
ಚಿತ್ರದುರ್ಗದಲ್ಲಿ ಮಳೆ ಅಳೆಯುವ ಯಂತ್ರಗಳಿಗೆ ಅನಾರೋಗ್ಯ
ಚಿತ್ರದುರ್ಗ: ಮಳೆ ಬಂತೇ? ಎಷ್ಟು ಬಂತು? ಯಾವ ಭಾಗದಲ್ಲಿ ಹೆಚ್ಚು, ಯಾವ ಪ್ರದೇಶದಲ್ಲಿ ಕಡಿಮೆ?...
ಬರಪೀಡಿತ ಚಿತ್ರದುರ್ಗದಲ್ಲಿ ಈ ಪ್ರಶ್ನೆಗಳಿಗೆ ಉತ್ತರಿಸುವುದು ಮಳೆ ಮಾಪನ ಕೇಂದ್ರಗಳ ಅಂಕಿ ಅಂಶಗಳು. ಆದರೆ ಮಳೆ ಅಳೆಯುವ ವ್ಯವಸ್ಥೆಯಲ್ಲೇ ದೋಷವಿದ್ದರೆ, ಆ ಅಂಕಿ ಅಂಶವನ್ನು ನಂಬುವುದು ಹೇಗೆ ಎಂಬ ಪ್ರಶ್ನೆ ಈಗ ಎದುರಾಗಿದೆ.
ಮಳೆ ಪ್ರಮಾಣದ ಅಧಿಕೃತ ದಾಖಲೆಗಳು ಬರ ನಿರ್ವಹಣೆ, ಬೆಳೆ ಹಾನಿ ಅಂದಾಜು, ಬೆಳೆ ವಿಮೆ, ಪರಿಹಾರ ಹಾಗೂ ಕೃಷಿ ಸಂಬಂಧಿತ ಹಲವು ನಿರ್ಧಾರಗಳಿಗೆ ಪ್ರಮುಖ ಆಧಾರವಾಗಿವೆ. ಜಿಲ್ಲೆಯ ಎಲ್ಲ ಗ್ರಾಮ ಪಂಚಾಯಿತಿ ಕಟ್ಟಡಗಳ ಮೇಲೆ ಟೆಲಿಮೆಟ್ರಿಕ್ ಮಳೆ ಮಾಪಕ ಅಳವಡಿಸಲಾಗಿದೆ ಎಂಬುದು ಲೆಕ್ಕದಲ್ಲಿದೆ. ಆದರೆ, ಬಹುತೇಕ ಕಡೆ ಅವುಗಳ ಕುರುಹೂ ಸಿಗುತ್ತಿಲ್ಲ. ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೂ ಇದರ ಮಾಹಿತಿ ಇಲ್ಲದಿರುವುದು ವಿಪರ್ಯಾಸ. ಹೀಗಾಗಿ ಜಿಲ್ಲೆಯ ಕೆಲವು ಟೆಲಿಮೆಟ್ರಿಕ್ ಮಳೆ ಮಾಪಕಗಳ ಕಾರ್ಯನಿರ್ವಹಣೆ ಹಾಗೂ ದತ್ತಾಂಶದ ನಿಖರತೆ ಬಗ್ಗೆ ಪ್ರಶ್ನೆಗಳು ಎದುರಾಗಿವೆ.
ಚಳ್ಳಕೆರೆ ತಾಲ್ಲೂಕಿನಲ್ಲಿ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಸ್ಥಾಪಿಸಿರುವ 44 ಟೆಲಿಮೆಟ್ರಿಕ್ ಮಳೆಮಾಪನ ಕೇಂದ್ರಗಳ ಪೈಕಿ 26 ಮಾತ್ರ ಕಾರ್ಯನಿರ್ವಹಿಸುತ್ತಿವೆ. ಉಳಿದವು ದುರಸ್ತಿಯಲ್ಲಿವೆ.
ಇದೇ ಕಾರಣಕ್ಕೆ ಈಚೆಗೆ ನಡೆದ ಬರ ನಿರ್ವಹಣೆ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಟಿ.ರಘುಮೂರ್ತಿ ಅವರು ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ. ಜನವರಿ ಯಿಂದ ಆಗಸ್ಟ್‌ವರೆಗೆ ಚಳ್ಳಕೆರೆಯಲ್ಲಿ 191.8 ಮಿ.ಮೀ. ವಾಡಿಕೆ ಮಳೆ ಆಗಬೇಕಿತ್ತು. 190 ಮಿ.ಮೀ. ಮಳೆಯಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದರು. ಆದರೆ ತಾಲ್ಲೂಕಿನಲ್ಲಿ ಬಿತ್ತನೆ ಪ್ರಮಾಣ ನಿರೀಕ್ಷಿತ ಮಟ್ಟದಲ್ಲಿ ಆಗಿಲ್ಲ. ಹೀಗಾಗಿ ‘ಮಳೆ ಸಮರ್ಪಕವಾಗಿದ್ದರೆ ಬಿತ್ತನೆ ಏಕೆ ಕುಂಠಿತವಾಗಿದೆ?’ ಎಂದು ಸಚಿವರು ಪ್ರಶ್ನಿಸಿದ್ದರು. ಅವರ ಪ್ರಶ್ನೆ ಮಳೆ ಅಂಕಿ-ಅಂಶಗಳ ಪರಿಶೀಲನೆಯ ಅಗತ್ಯವನ್ನು ಎತ್ತಿ ತೋರಿಸಿದೆ.
‘ಜಿಲ್ಲೆಯ ಎಲ್ಲ ಮಳೆಮಾಪನ ಕೇಂದ್ರಗಳ ಸ್ಥಿತಿಗತಿಯ ಕುರಿತು ಜಿಲ್ಲಾ ಡಳಿತ ಸಮಗ್ರ ಪರಿಶೀಲನೆ ನಡೆಸಬೇಕಿದೆ. ಕಾರ್ಯನಿರ್ವಹಿಸುತ್ತಿರುವ ಕೇಂದ್ರಗಳು, ತಾಂತ್ರಿಕ ದೋಷ ಹೊಂದಿರುವ ಕೇಂದ್ರಗಳು ಹಾಗೂ ದುರಸ್ತಿ ಅಗತ್ಯವಿರುವ ಉಪಕರಣಗಳ ಕುರಿತು ಸ್ಪಷ್ಟ ಮಾಹಿತಿ ನೀಡಬೇಕಿದೆ’ ಎನ್ನುತ್ತಾರೆ ರೈತ ಮುಖಂಡ ಡಿ.ಎಸ್.ಹಳ್ಳಿ ಮಲ್ಲಿಕಾರ್ಜುನ್.
ಮಳೆಯನ್ನೇ ಸರಿಯಾಗಿ ಅಳೆಯಲಾಗದಿದ್ದರೆ, ಮಳೆ ಕೊರತೆ ಅಥವಾ ಅತಿವೃಷ್ಟಿಯ ಲೆಕ್ಕ ಹೇಗೆ? ಹೀಗಾಗಿ ಮಳೆ ಮಾಪನ ಕೇಂದ್ರಗಳು ಸದಾ ಸುಸ್ಥಿತಿಯಲ್ಲಿರುವಂತೆ ನೋಡಿಕೊಳ್ಳುವುದು ಮತ್ತು ದಾಖಲಾಗುವ ಮಾಹಿತಿಯ ವಿಶ್ವಾಸಾರ್ಹತೆಯನ್ನು ಖಚಿತಪಡಿಸುವುದು ಅಗತ್ಯವಾಗಿದೆ.
ಅಸಮರ್ಪಕ ಕಾರ್ಯನಿರ್ವಹಣೆ
ನಾಯಕನಹಟ್ಟಿ: ಯಾವ ಭಾಗದಲ್ಲಿ ಎಷ್ಟು ಮಳೆಯಾಗಿದೆ ಎಂಬ ನೈಜ ವರದಿ ಲಭಿಸುವುದು ಮಳೆ ಮಾಪನ ಕೇಂದ್ರದಲ್ಲಿ ಮಾತ್ರ. ಅಂತಹ ಕೇಂದ್ರದ ಸುತ್ತ ಗಿಡಗಂಟಿಗಳು ಬೆಳೆದರೂ ಸ್ವಚ್ಛತೆಗೆ ಮುಂದಾಗದೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ.
ಪಟ್ಟಣದ ಹೃದಯ ಭಾಗದಲ್ಲಿರುವ ಪೊಲೀಸ್ ಠಾಣೆ ಹಿಂಭಾಗದಲ್ಲಿ ಮಳೆ ಮಾಪನ ಕೇಂದ್ರವಿದ್ದು, ಹಲವು ವರ್ಷಗಳಿಂದ ನಿರ್ವಹಣೆಯಿಲ್ಲದೆ ಸೊರಗಿದೆ. ಇದರಿಂದ ಎಷ್ಟು ಪ್ರಮಾಣದಲ್ಲಿ ಮಳೆ ಸುರಿದಿದೆ ಎಂಬ ಮಾಹಿತಿ ಲಭಿಸುತ್ತಿಲ್ಲ.
ಮಳೆ ಮಾಪನ ಕೇಂದ್ರದ 15 ಮೀಟರ್ ಸುತ್ತ ಮುಳ್ಳುಕಂಟಿ, ಗಿಡ ಮರ ಇರುವ ಹಾಗಿಲ್ಲ. ಇದ್ದರೆ ಮಳೆಯ ಪ್ರಮಾಣದ ಕುರಿತು ಸ್ಪಷ್ಟ ಮಾಹಿತಿ ಸಿಗದೆ ಏರುಪೇರು ಆಗುತ್ತದೆ. ಈ ಕಾರಣದಿಂದ ಮಳೆ ಮಾಪನ ಕೇಂದ್ರದ ಸುತ್ತ ತಂತಿ ಬೇಲಿ ನಿರ್ಮಾಣ ಮಾಡಲಾಗಿದೆ. ಜತೆಗೆ ಕೇಂದ್ರಕ್ಕೆ ಹೊಂದಿಕೊಂಡಂತೆ ಅಂಬೇಡ್ಕರ್ ಭವನದ ನಿರ್ಮಾಣ ನಡೆಯುತ್ತಿದೆ. ಅಲ್ಲಿ ಆಳೆತ್ತರದ ಮುಳ್ಳುಗಂಟಿಗಳು ಬೆಳೆದಿವೆ. ಹೀಗಾಗಿ ಮಳೆ ಮಾಪನ ಕೇಂದ್ರದತ್ತ ಯಾರೂ ಗಮನ ಹರಿಸುತ್ತಿಲ್ಲ.
ಹೋಬಳಿಯ ಹಲವು ಗ್ರಾಮ ಪಂಚಾಯಿತಿ ಕಟ್ಟಡಗಳ ಮೇಲೆ ಗಣಕೀಕೃತ ವ್ಯವಸ್ಥೆಯ ಸ್ವಯಂಚಾಲಿತ ಮಿನಿ ಮಳೆಮಾಪನ ಯಂತ್ರಗಳನ್ನು ಅಳವಡಿಸಲಾಗಿದೆ. ಇದು ಕಾರ್ಯನಿರ್ವಹಿಸುತ್ತಿದೆಯೋ ಇಲ್ಲವೋ ಎಂಬುದರ ಬಗ್ಗೆ ಸ್ವತಃ ಕಂದಾಯ ಇಲಾಖೆ ಅಧಿಕಾರಿಗಳಿಗೂ ಮಾಹಿತಿ ಇಲ್ಲ.
ಕಳೆದ ಸಾಲಿನಲ್ಲಿ ಕಡಿಮೆ ಮಳೆಯಾಗಿದ್ದರೂ ಕೆಲವು ಗ್ರಾಮ ಪಂಚಾಯಿತಿಗಳ ಮಳೆ ಮಾಪನ ಯಂತ್ರಗಳು ಕಾರ್ಯನಿರ್ವಹಿಸದ ಕಾರಣ, ಪಕ್ಕದ ಪಂಚಾಯಿತಿಗಳ ಮಳೆಯ ದಾಖಲೆ ಆಧರಿಸಿ ಪರಿಹಾರ ನೀಡಲಾಗಿತ್ತು. ಇದರಿಂದ ಕೆಲವು ರೈತರಿಗೆ ಅಧಿಕ ಮತ್ತು ಕೆಲವರಿಗೆ ಕಡಿಮೆ ಪರಿಹಾರ ದೊರೆತಿದೆ ಎಂಬ ಆರೋಪಗಳು ಕೇಳಿಬಂದಿದ್ದವು.
ನಿರ್ವಹಣೆಗೆ ಒತ್ತು ಅಗತ್ಯ
ಹೊಸದುರ್ಗ: ತಾಲ್ಲೂಕಿನಲ್ಲಿ ಒಟ್ಟು 33 ಪಂಚಾಯಿತಿಗಳಿದ್ದು, ಅದರಲ್ಲಿ 32 ಪಂಚಾಯಿತಿ ಕಚೇರಿ ಮೇಲೆ ಟೆಲಿಮೆಟ್ರಿಕ್ ಮಳೆಮಾಪನ ಕೇಂದ್ರ ಅಳವಡಿಸಲಾಗಿದೆ. 7 ಪಂಚಾಯಿತಿಗಳಲ್ಲಿ ಮಳೆಮಾಪನಗಳು ದುರಸ್ತಿಗೆ ಬಂದು ತಿಂಗಳುಗಳೇ ಕಳೆದರೂ ಅಧಿಕಾರಿಗಳು ಮಾತ್ರ ಜಾಣ ಕುರುಡು ಪ್ರದರ್ಶಿಸುತ್ತಿದ್ದಾರೆ.
ತಾಲ್ಲೂಕಿನ ಕಂಚೀಪುರ, ಕುರುಬರಹಳ್ಳಿ, ಮಲ್ಲಪ್ಪನಹಳ್ಳಿ, ಬಾಗೂರು, ಶ್ರೀರಾಂಪುರ, ಕೆಲ್ಲೋಡು ಪಂಚಾಯಿತಿಗಳಲ್ಲಿ ಮಳೆ ಮಾಪನ ಕೇಂದ್ರ ದುರಸ್ತಿಯಲ್ಲಿವೆ. ಹೊಸದುರ್ಗ, ಮತ್ತೋಡು, ಮಾಡದಕೆರೆ ಹಾಗೂ ಶ್ರೀರಾಂಪುರ ಹೋಬಳಿಗಳ ಮಳೆ ಮಾಪನ ಕೇಂದ್ರಗಳ ಸುತ್ತ ಗಿಡಗಂಟಿಗಳು ಆವರಿಸಿವೆ.
ಹೊಸದುರ್ಗ ಪಟ್ಟಣದ ಪಿಡಬ್ಲ್ಯುಡಿ ಆವರಣದಲ್ಲಿರುವ ಮಳೆಮಾಪನ ಕೇಂದ್ರದ ಉಪಕರಣಗಳು ದುರಸ್ತಿಗೆ ಬಂದು ತಿಂಗಳು ಕಳೆದಿವೆ. ಅಧಿಕಾರಿಗಳು ಕಾಲಕಾಲಕ್ಕೆ ಕೇಂದ್ರಗಳಿಗೆ ಭೇಟಿ ನೀಡಿ ಸಾಧನಗಳ ಕಾರ್ಯಕ್ಷಮತೆ ಪರಿಶೀಲಿಸಬೇಕು ಎಂಬುದು ಜನರ ಒತ್ತಾಯ.
ಮಳೆ ಮಾಪನ ನಿರ್ವಾಹಕರಿಗಿಲ್ಲ ಸಹಾಯ ಧನ
ಚಿಕ್ಕಜಾಜೂರು: ಇಲ್ಲಿನ ಮಳೆ ಮಾಪನ ಘಟಕಗಳು ನಿರ್ವಹಣೆ ಕಾಣದೆ ಶೋಚನೀಯ ಸ್ಥಿತಿಗೆ ತಲುಪಿವೆ. ಮಳೆಯ ಪ್ರಮಾಣ ತಿಳಿದುಕೊಳ್ಳಲು ಜಲ ಸಂಪನ್ಮೂಲ ಇಲಾಖೆ ವತಿಯಿಂದ ತಾಲ್ಲೂಕಿನ ಆಯ್ದ ಗ್ರಾಮಗಳಲ್ಲಿ ಸಾಮಾನ್ಯ ಮಳೆ ಮಾಪನ ಕೇಂದ್ರಗಳನ್ನು ಸ್ಥಾಪಿಸಿ, ಮಳೆ ಪ್ರಮಾಣ ದಾಖಲು ಮಾಡುತ್ತಿದ್ದವರಿಗೆ ಗೌರವ ಧನ ನೀಡಲಾಗುತ್ತಿತ್ತು.
ನೆಲದ ಮೇಲೆ ಇಡಲಾದ ಘಟಕಗಳ ಸುತ್ತ ಗಿಡಗಂಟಿಗಳು ಬೆಳೆದು ನಿಂತಿವೆ. ಕೆಲವು ಕಡೆಗಳಲ್ಲಿ ಸರ್ಕಾರಿ ಕಟ್ಟಡಗಳ ಮೇಲೆ ಮಳೆ ಮಾಪನ ಘಟಕ ಅಳವಡಿಸಿದ್ದು, ಅದರ ಸುತ್ತ ಮಳೆ ನೀರು ನಿಂತಿದೆ. ಆನ್‌ಲೈನ್ ಮೂಲಕ ಮಳೆ ವರದಿಯನ್ನು ಪಡೆಯುತ್ತಿರುವ ಕಾರಣ ಮಳೆ ಮಾಪನ ವರದಿ ಮಾಡುತ್ತಿದ್ದವರಿಗೆ ಗೌರವ ಧನ ನಿಲ್ಲಿಸಲಾಗಿದೆ. ಈ ಕಾರಣಕ್ಕೆ ನಿರ್ವಹಣೆಯಲ್ಲಿ ಸಮಸ್ಯೆ ಎದುರಾಗಿದೆ.
ಮಳೆ ಮಾಪನ ಘಟಕಗಳನ್ನು ಇಟ್ಟಿರುವ ಸ್ಥಳಗಳ ನಿರ್ವಹಣೆಯನ್ನು ಆಯಾ ಇಲಾಖೆಗಳು ನೋಡಿಕೊಳ್ಳಬೇಕು. ಇಲ್ಲದಿದ್ದರೆ, ಘಟಕಗಳು ಹಾಳಾಗಿ ಸರ್ಕಾರಕ್ಕೆ ಆರ್ಥಿಕ ಹೊರೆ ಹೆಚ್ಚಾಗುತ್ತದೆ ಮತ್ತು ತಪ್ಪು ಮಾಹಿತಿ ವರದಿಗಳು ಬರುವ ಸಾಧ್ಯತೆ ಇದೆ ಎನ್ನುತ್ತಾರೆ ಚಿಕ್ಕಜಾಜೂರು, ಬಿ.ದುರ್ಗ ಗ್ರಾಮಸ್ಥರು.
ಲೆಕ್ಕಕ್ಕುಂಟು ಆಟಕ್ಕಿಲ್ಲದಂತಹ ಸ್ಥಿತಿ
ಹಿರಿಯೂರು: ತಾಲ್ಲೂಕಿನಲ್ಲಿ ಅಳವಡಿಸಿರುವ 34 ಮಳೆ ಮಾಪನ ಕೇಂದ್ರಗಳ ಪೈಕಿ 23 ಕಾರ್ಯನಿರ್ವಹಿಸುತ್ತಿವೆ ಎಂದು ಹೇಳಲಾಗುತ್ತಿದ್ದರೂ ಮಳೆಯ ವರದಿ ದಾಖಲಿಸುತ್ತಿರುವ ಕೇಂದ್ರಗಳ ಸಂಖ್ಯೆ 4 ದಾಟುತ್ತಿಲ್ಲ.
ಮಳೆ ಎಷ್ಟು ಪ್ರಮಾಣದಲ್ಲಿ ಬಿದ್ದಿದೆ ಎಂಬುದನ್ನು ವೈಜ್ಞಾನಿಕವಾಗಿ ತಿಳಿಯಲು ಹಿರಿಯೂರು, ಬಬ್ಬೂರು, ಈಶ್ವರಗೆರೆ, ಜವನಗೊಂಡನಹಳ್ಳಿ, ಐಮಂಗಲ, ಸೂಗೂರು, ಇಕ್ಕನೂರು ಗ್ರಾಮಗಳಲ್ಲಿ ಮಳೆ ಮಾಪನ ಕೇಂದ್ರಗಳನ್ನು ಆರಂಭಿಸಲಾಗಿತ್ತು. ಅವುಗಳಲ್ಲಿ ಜವನಗೊಂಡನಹಳ್ಳಿ, ಐಮಂಗಲ ಗ್ರಾಮಗಳಲ್ಲಿ ಮಳೆ ಮಾಪನ ಕೇಂದ್ರಗಳು ಎಲ್ಲಿವೆ ಎಂದು ಪ್ರಶ್ನೆ ಮಾಡಿದರೆ ‘ಗೊತ್ತಿಲ್ಲ’ ಎಂಬ ಉತ್ತರ ಸಿಗುತ್ತದೆ.
ತಾಲ್ಲೂಕಿನಲ್ಲಿ ಕೃಷಿ, ಕಂದಾಯ, ತೋಟಗಾರಿಕೆ ಇಲಾಖೆಗಳಿಗೆ ಪ್ರಸ್ತುತ ಮಳೆಯ ವಿವರ ಲಭ್ಯವಿರುವುದು ಹಿರಿಯೂರು, ಬಬ್ಬೂರು, ಸೂಗೂರು, ಇಕ್ಕನೂರು ಮತ್ತು ಈಶ್ವರಗೆರೆ ಗ್ರಾಮಗಳಿಂದ ಮಾತ್ರ. ಜವನಗೊಂಡನಹಳ್ಳಿ, ಐಮಂಗಲ ಹೋಬಳಿಗಳಲ್ಲಿ ಮಳೆ ಮಾಪನ ಕೇಂದ್ರಗಳು ಇಲ್ಲದಿರುವುದರಿಂದ ತಾಲ್ಲೂಕಿನಲ್ಲಿ ಎಷ್ಟು ಪ್ರಮಾಣದಲ್ಲಿ ಮಳೆ ಆಗಿದೆ ಎಂಬ ನಿಖರ ವರದಿ ದೊರೆಯುತ್ತಿಲ್ಲ. ಇದರ ಪರಿಣಾಮ ನೇರವಾಗಿ ಬರ ತಾಲ್ಲೂಕು ಘೋಷಣೆ ಮೇಲೆ ಆಗುತ್ತಿದೆ ಎನ್ನುತ್ತಾರೆ ರೈತ ಆಲೂರು ಸಿದ್ದರಾಮಣ್ಣ.
ಹೈದರಾಬಾದ್ ಮೂಲದ ಖಾಸಗಿ ಸಂಸ್ಥೆಯೊಂದಕ್ಕೆ ಮಳೆ ಮಾಪನ ಕೇಂದ್ರಗಳನ್ನು ಅಳವಡಿಸುವ ಜವಾಬ್ದಾರಿ ವಹಿಸಲಾಗಿದ್ದು, ಸ್ಯಾಟಲೈಟ್ ಮೂಲಕ ಮಳೆಯ ಪ್ರಮಾಣ ಗುರುತಿಸಲಾಗುತ್ತಿದೆ ಎಂದು ಹೇಳಲಾಗುತ್ತಿದ್ದರೂ ಎಲ್ಲ ಕೇಂದ್ರಗಳ ವರದಿಗಳು ಸಿಗುತ್ತಿಲ್ಲ. ಹೀಗಾಗಿ ಇವೆಲ್ಲಾ ಲೆಕ್ಕಕ್ಕುಂಟು ಆಟಕ್ಕಿಲ್ಲ ಎಂಬ ಸ್ಥಿತಿಗೆ ತಲುಪಿವೆ.