
ಸಂತೇಬೆನ್ನೂರು | ಶಿಕ್ಷಕನ ಬ್ಯಾಂಕ್ ಖಾತೆಯಿಂದ ₹54,000 ವರ್ಗಾವಣೆ ವಂಚನೆ
ಸಂತೇಬೆನ್ನೂರು: ಇಲ್ಲಿನ ವಿಜಯ ಪ್ರೌಢಶಾಲೆಯ ಶಿಕ್ಷಕ ಜಿ.ಎಸ್.ಜಗದೀಶ್ ಅವರ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಖಾತೆಯಿಂದ ₹54,000ವನ್ನು ಅಪರಿಚಿತ ವ್ಯಕ್ತಿಗಳು ವರ್ಗಾವಣೆ ಮಾಡಿಕೊಂಡಿದ್ದಾರೆ.
ಎಂದಿನಂತೆ ಫೋನ್ ಪೇ ಮೂಲಕ ಹಣ ವರ್ಗಾವಣೆ ಮಾಡಲು ಮುಂದಾದಾಗ ಖಾತೆಯಲ್ಲಿ ಹಣವಿಲ್ಲದೇ ಇರುವುದನ್ನು ಗಮನಿಸಿ ಆತಂಕಗೊಂಡಿದ್ದಾರೆ. ತಮ್ಮ ಖಾತೆಯಲ್ಲಿ ₹53,000 ಇದ್ದದ್ದನ್ನು ಖಾತರಿ ಪಡಿಸಿಕೊಂಡು ಪರಿಶೀಲನೆ ನಡೆಸಿದ್ದಾರೆ.
ಸೋಮವಾರ ಎಸ್‌ಬಿಐ ಖಾತೆಯಿಂದ ₹53,000 ಮೊತ್ತವನ್ನು ಇವರದೇ ಕೆನರಾ ಬ್ಯಾಂಕ್ ಖಾತೆಗೆ ಫೋನ್ ಪೇ ಮೂಲಕ ವರ್ಗಾವಣೆ ಆಗಿದೆ. ಆನಂತರ ಕೆನರಾ ಬ್ಯಾಂಕ್‌ನಿಂದ ಮತ್ತೆ ಫೋನ್ ಪೇ ಮೂಲಕ ಬ್ಯಾಂಕ್ ಟು ಬ್ಯಾಂಕ್ ಯುಪಿಐ ಖಾತೆಯಲ್ಲಿ ಇಬ್ಬರಿಗೆ ವರ್ಗಾವಣೆ ಆಗಿದೆ. ನಿರ್ಮಾಣ್ ಇಂಡಿಯಾ ಬಿಲ್ಡರ್ಸ್‌ಗೆ ₹30,000 ಹಾಗೂ ಮುಬಾರಕ್ ಹುಸೇನ್ ಎಂಬ ವ್ಯಕ್ತಿಗೆ ₹24,000 ವರ್ಗಾವಣೆ ಆಗಿದೆ. ಅದರಲ್ಲಿ ಅವರ ಯಾವುದೇ ವಿವರಣೆ ಇಲ್ಲ. ಈ ಬಗೆಯ ವಂಚನೆಯಿಂದ ಸಾರ್ವಜನಿಕರು ಆತಂಕಗೊಂಡಿದ್ದಾರೆ.
ಈ ಬಗ್ಗೆ ಸೈಬರ್ ಪೊಲೀಸರಿಗೆ ದೂರು ನೀಡಲಾಗಿದೆ.