ದಾವಣಗೆರೆ | ‘ವಿನಾಯಕ’ನ ಸ್ವಾಗತಕ್ಕೆ ಸಜ್ಜಾಗುತ್ತಿವೆ ಮಂಟಪ

ದಾವಣಗೆರೆ | ‘ವಿನಾಯಕ’ನ ಸ್ವಾಗತಕ್ಕೆ ಸಜ್ಜಾಗುತ್ತಿವೆ ಮಂಟಪ

ದಾವಣಗೆರೆ | ‘ವಿನಾಯಕ’ನ ಸ್ವಾಗತಕ್ಕೆ ಸಜ್ಜಾಗುತ್ತಿವೆ ಮಂಟಪ

ದಾವಣಗೆರೆ: ವಿಘ್ನ ವಿನಾಯಕನ ಹಬ್ಬದ ಸಂಭ್ರಮಕ್ಕೆ ದಿನಗಣನೆ ಶುರುವಾಗಿದ್ದು, ನಗರದಲ್ಲಿ ಸಾರ್ವಜನಿಕ ಗಣೇಶೋತ್ಸವ ಸಮಿತಿಗಳ ಸದಸ್ಯರು ಭರದ ಸಿದ್ಧತೆ ನಡೆಸಿದ್ದಾರೆ. ಜಿಲ್ಲಾಡಳಿತವೂ ಹತ್ತು ಹಲವು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುತ್ತಿದೆ.

ನಗರ ಸೇರಿದಂತೆ ಜಿಲ್ಲೆಯ ವಿವಿಧಡೆ ಪೆಂಡಾಲ್‌ ಅಳವಡಿಸುವ ಕಾರ್ಯವು ಚುರುಕು ಪಡೆದಿದೆ. ಗಣೇಶ ಪ್ರತಿಷ್ಠಾಪನೆ ಸಮಿತಿಯವರು ಮಹಾನಗರ ಪಾಲಿಕೆ, ಪೊಲೀಸ್ ಇಲಾಖೆ, ಬೆಸ್ಕಾಂ ಹಾಗೂ ಅಗ್ನಿಶಾಮಕ ದಳದಿಂದ ನಿರಾಕ್ಷೇಪಣ ಪತ್ರ (ಎನ್‌ಒಸಿ) ಪಡೆಯಲು ಕಚೇರಿಗಳತ್ತ ಹೆಜ್ಜೆ ಹಾಕುತ್ತಿದ್ದಾರೆ.

ಕಳೆದ ವರ್ಷ ನಗರ ವ್ಯಾಪ್ತಿಯಲ್ಲಿ 350 ಹಾಗೂ ಜಿಲ್ಲೆಯಲ್ಲಿ 600ಕ್ಕೂ ಹೆಚ್ಚು ಸಾರ್ವಜನಿಕ ಗಣೇಶ ಸಮಿತಿಗಳು ಸ್ಥಳೀಯ ಆಡಳಿತದಿಂದ ನಿರಾಕ್ಷೇಪಣ ಪತ್ರ (ಎನ್‌ಒಸಿ) ಪಡೆದು ವಿನಾಯಕ ಮೂರ್ತಿಯನ್ನು ಪ್ರತಿಷ್ಠಾಪಿಸಿದ್ದವು. ಈ ಬಾರಿ ಅವುಗಳ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ.

ಸ್ವಚ್ಛತೆ, ಸುರಕ್ಷತೆ ಹಾಗೂ ಇನ್ನಿತರ ಅಂಶಗಳನ್ನು ಪಾಲಿಸುವ ಬಗ್ಗೆ ಅಫಿಡವಿಟ್‌ ಪಡೆದು ₹ 300 ಶುಲ್ಕ ಪಾವತಿಸಿಕೊಂಡು ಮಹಾನಗರ ಪಾಲಿಕೆಯ ಕಚೇರಿಯಲ್ಲಿ ನಿರಾಕ್ಷೇಪಣ ಪತ್ರ ನೀಡಲಾಗುತ್ತಿದೆ. ಪಾಲಿಕೆಯಲ್ಲಿ ಪಡೆದ ಅನುಮತಿ ಪತ್ರವನ್ನು ಹಿಡಿದು ಡಿವೈಎಸ್‌ಪಿ ಕಚೇರಿಗೆ (ಬಡಾವಣೆ ಪೊಲೀಸ್ ಠಾಣೆ) ತೆರಳುವ ಸದಸ್ಯರು ಪೊಲೀಸ್ ಇಲಾಖೆಯೊಂದಿಗೆ ಬೆಸ್ಕಾಂ ಹಾಗೂ ಅಗ್ನಿಶಾಮಕ ದಳದಿಂದಲೂ ಎನ್‌ಒಸಿ ಪಡೆಯುತ್ತಿದ್ದಾರೆ.

ಗಣೇಶ ಮೂರ್ತಿ ಪ್ರತಿಷ್ಠಾಪಿಸುವ ಜಾಗ, ಮೂರ್ತಿಯ ಗಾತ್ರ, ಮೆರವಣಿಗೆಯ ದಿನಾಂಕ, ವಿಸರ್ಜನೆಯ ಸ್ಥಳ ಸೇರಿದಂತೆ ಪ್ರತಿಯೊಂದು ಅಂಶಗಳನ್ನು ಪರಿಶೀಲಿಸಿ ಪಾಲಿಕೆ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಎನ್‌ಒಸಿ ನೀಡುತ್ತಿದ್ದಾರೆ.

ಮಂಗಳವಾರ ಸಂಜೆಯವರೆಗೆ ಮಹಾನಗರ ಪಾಲಿಕೆಯಿಂದ 96 ಸಾರ್ವಜನಿಕ ಗಣೇಶ ಪ್ರತಿಷ್ಠಾಪನಾ ಸಮಿತಿಗಳು ಎನ್‌ಒಸಿ ಪಡೆದಿವೆ. ಸೆಪ್ಟೆಂಬರ್ 13ರ (ಭಾನುವಾರ) ವರೆಗೂ ಎನ್‌ಒಸಿ ನೀಡಲಾಗುತ್ತಿದೆ. ಇನ್ನು 2–3 ದಿನಗಳಲ್ಲಿ ಅತಿ ಹೆಚ್ಚು ಸದಸ್ಯರು ಎನ್‌ಒಸಿ ಪಡೆಯುವ ನಿರೀಕ್ಷೆ ಇದೆ. ಪಟ್ಟಣ ಹಾಗೂ ನಗರಗಳಲ್ಲಿ ಪುರಸಭೆ ಹಾಗೂ ನಗರಸಭೆಯಿಂದ ಎನ್‌ಒಸಿ ನೀಡಲಾಗುತ್ತಿದೆ ಎಂದು ಮಹಾನಗರ ಪಾಲಿಕೆ ಎಂಜಿನಿಯರ್‌ಗಳು ತಿಳಿಸಿದರು.

ಮೂರ್ತಿಗಳ ವಿಸರ್ಜನೆಗೆ ಹೊಂಡ: ಗಣೇಶ ಮೂರ್ತಿಗಳ ವಿಸರ್ಜನೆಗೆ ಈ ಬಾರಿಯೂ ಬಾತಿ ಕೆರೆ, ಹದಡಿ ರಸ್ತೆ ಹಾಗೂ ಬಳ್ಳಾರಿ ಸಿದ್ದಮ್ಮ ಉದ್ಯಾನದಲ್ಲಿ ಪಾಲಿಕೆಯಿಂದ ಹೊಂಡಗಳನ್ನು ನಿರ್ಮಿಸಲಾಗುತ್ತಿದೆ. ಬಾತಿ ಕೆರೆ ಬಳಿ ದೊಡ್ಡ ಹೊಂಡಗಳನ್ನು ತೆಗೆಯಲಾಗುತ್ತಿದ್ದು, ಬೃಹತ್ ಗಾತ್ರದ ಗಣೇಶ ಮೂರ್ತಿಗಳ ವಿಸರ್ಜನೆಗೆ ಅಲ್ಲಿ ಅವಕಾಶ ಕಲ್ಪಿಸಲಾಗುತ್ತದೆ.

ಚಿಕ್ಕ ಗಾತ್ರದ ಮೂರ್ತಿಗಳ ವಿಸರ್ಜನೆಗೆ 30 ಮೊಬೈಲ್ ಟ್ಯಾಂಕರ್‌ಗಳನ್ನು (ಟ್ರ್ಯಾಕ್ಟರ್‌ಗಳು) ಆಯಾ ವಾರ್ಡ್‌ಗಳಲ್ಲಿ ನಿಲ್ಲಿಸಲು ಪಾಲಿಕೆ ನಿರ್ಧರಿಸಿದೆ. ಪ್ರತಿಷ್ಠಾಪನೆಯ ಮೊದಲ ದಿನ ಸಂಜೆ, 3ನೇ ದಿನ ಹಾಗೂ 5ನೇ ದಿನ ಈ ಟ್ಯಾಂಕರ್‌ಗಳು ನಗರದ ವಿವಿಧೆಡೆ ಸಂಚರಿಸಲಿವೆ.

ಈ ಬಾರಿ ಪಿಒಪಿ (ಪ್ಲಾಸ್ಟರ್ ಆಫ್ ಪ್ಯಾರಿಸ್) ಮೂರ್ತಿಗಳನ್ನು ತಯಾರಿಸುವುದು, ಮಾರಾಟ ಮಾಡುವುದು ಹಾಗೂ ಪ್ರತಿಷ್ಠಾಪಿಸುವುದನ್ನು ನಿಷೇಧಿಸಿ ಜಿಲ್ಲಾಡಳಿತ ಆದೇಶಿಸಿದೆ. ಪಿಒಪಿ ಮೂರ್ತಿ ತಯಾರಿಸುವುದನ್ನು ತಡೆಗಟ್ಟಲು ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಪಾಲಿಕೆಯ ಅಧಿಕಾರಿಗಳು ಜಂಟಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಹೈಸ್ಕೂಲ್ ಮೈದಾನದಲ್ಲಿ ಶಿವಶಕ್ತಿಧಾಮ ಮಹಾಮಂಟಪ

ಇಲ್ಲಿನ ಹೈಸ್ಕೂಲ್ ಮೈದಾನದಲ್ಲಿ ಸಾರ್ವಜನಿಕ ಹಿಂದೂ ಮಹಾಗಣಪತಿ ಟ್ರಸ್ಟ್‌ನಿಂದ ಈ ಬಾರಿ ಕೋಲ್ಕತ್ತದ ಶಿವಶಕ್ತಿಧಾಮ ದೇವಸ್ಥಾನದ ಮಾದರಿಯ ಮಹಾಮಂಟಪ ಮಾದರಿಯನ್ನು ನಿರ್ಮಿಸಲಾಗುತ್ತಿದೆ. ಇದಕ್ಕಾಗಿ 12 ದಿನಗಳಿಂದ 17ಕ್ಕೂ ಹೆಚ್ಚು ಕಾರ್ಮಿಕರು ಶ್ರಮ ವಹಿಸುತ್ತಿದ್ದಾರೆ.

100 ಅಡಿ ಅಗಲ, 65 ಅಡಿ ಎತ್ತರದ ಮಹಾಮಂಟಪದಲ್ಲಿ 15 ಅಡಿ ಎತ್ತರದ ಭವ್ಯ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗುತ್ತದೆ. ಈ ಮೂರ್ತಿಯನ್ನು ಬೆಳಗಾವಿಯಲ್ಲಿ ತಯಾರಿಸಲಾಗುತ್ತಿದೆ ಎಂದು ಟ್ರಸ್ಟ್‌ನ ಸದಸ್ಯರೂ ಆದ ಮಹಾಮಂಟಪದ ಉಸ್ತುವಾರಿ ಬಸವರಾಜ್ ಹಿಂಡಿ ತಿಳಿಸಿದರು.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ