
118 ಎಕರೆ ಸರ್ಕಾರಿ ಜಮೀನು ರದ್ದತಿಗೆ ಎಸಿ ಆದೇಶ
ಮಂಡ್ಯ: ನಾಗಮಂಗಲ ತಾಲ್ಲೂಕಿನಲ್ಲಿ ‘ಬಗರ್‌ಹುಕುಂ ಸಕ್ರಮೀಕರಣ’ ಯೋಜನೆಯಡಿ ನಿಯಮ ಉಲ್ಲಂಘಿಸಿ ಸರ್ಕಾರಿ ಜಮೀನು ಮಂಜೂರಾತಿ ಮಾಡಿದ್ದ 694 ಪ್ರಕರಣಗಳ ಪೈಕಿ, 56 ಪ್ರಕರಣಗಳಲ್ಲಿ 118 ಎಕರೆಯನ್ನು ರದ್ದುಪಡಿಸಲು ಪಾಂಡವಪುರ ಉಪ ವಿಭಾಗಾಧಿಕಾರಿ ಶ್ರೀನಿವಾಸ್ ಅಂತಿಮ ಆದೇಶ ಹೊರಡಿಸಿದ್ದಾರೆ.
ಪ್ರಕರಣಗಳ ವಿಚಾರಣೆ ನಡೆಸುತ್ತಿರುವ ಉಪವಿಭಾಗಾಧಿ ಕಾರಿ ಹಲವಾರು ನ್ಯೂನತೆಗಳನ್ನು ಪತ್ತೆ ಹಚ್ಚಿದ್ದಾರೆ. ಲೋಕಾಯುಕ್ತ ಸಂಸ್ಥೆಯಲ್ಲಿ ಸ್ವಯಂಪ್ರೇರಿತ ಪ್ರಕರಣ (ಸುಮೊಟೊ) ದಾಖಲಾಗಿರುವ ಕಾರಣ, ಪ್ರಕರಣಗಳ ವರದಿಯನ್ನು ಉಪಲೋಕಾಯುಕ್ತ ಬಿ.ವೀರಪ್ಪ ಅವರಿಗೆ ಈಚೆಗೆ ಸಲ್ಲಿಸಿದ್ದಾರೆ.
‘ನಿಯಮಬಾಹಿರವಾಗಿ ಸರ್ಕಾರಿ ಜಮೀನು ಪಡೆದಿರುವುದನ್ನು ರದ್ದುಗೊಳಿಸಿ, ಆ ಜಮೀನನ್ನು ಮತ್ತೆ ಸರ್ಕಾರದ ವಶಕ್ಕೆ ಪಡೆಯಬೇಕು ಹಾಗೂ ತಪ್ಪಿತಸ್ಥ ಅಧಿಕಾರಿಗಳು ಮತ್ತು ಖಾಸಗಿ ವ್ಯಕ್ತಿಗಳ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಿ, ಶಿಸ್ತುಕ್ರಮ ಕೈಗೊಳ್ಳಬೇಕು. ಉಪವಿಭಾಗಾಧಿಕಾರಿ ಆದೇಶವನ್ನು ತಹಶೀಲ್ದಾರ್ ಅನುಷ್ಠಾನಗೊಳಿಸ ಬೇಕು’ ಎಂದು ಉಪಲೋಕಾಯುಕ್ತ–2 ಬಿ.ವೀರಪ್ಪ ಆದೇಶಿಸಿದ್ದಾರೆ.
ಬಾಕಿ 638 ಪ್ರಕರಣಗಳ ವಿಚಾರಣೆಯನ್ನು ಶೀಘ್ರಗತಿಯಲ್ಲಿ ನಡೆಸಿ, ಕೈಗೊಂಡ ಕ್ರಮಗಳ ಬಗ್ಗೆ ಸೆ.22ರಂದು ವಿಚಾರಣೆಗೆ ಹಾಜರಾಗುವಂತೆ ಉಪಲೋಕಾಯುಕ್ತರು ಆದೇಶಿಸಿದ್ದಾರೆ.
ಅಕ್ರಮವಾಗಿ ಸಾಗುವಳಿ ಚೀಟಿ ವಿತರಿಸಿ, ಸರ್ಕಾರಿ ಜಮೀನು ಕಬಳಿಸುತ್ತಿರುವ ಬಗ್ಗೆ ದೂರು ಅರ್ಜಿಗಳು ಬಂದ ಮೇರೆಗೆ 2024ರಲ್ಲಿ ಅಂದಿನ ಹೆಚ್ಚುವರಿ ಜಿಲ್ಲಾಧಿಕಾರಿ ಎಚ್.ಎಲ್. ನಾಗರಾಜು ನೇತೃತ್ವದಲ್ಲಿ ‘ತನಿಖಾ ತಂಡ’ ರಚಿಸಲಾಗಿತ್ತು. ತನಿಖಾ ತಂಡವು 694 ಅರ್ಜಿಗಳನ್ನು ಪರಿಶೀಲಿಸಿ, ವಿವರವಾದ ತನಿಖಾ ವರದಿ ನೀಡಿತ್ತು.
‘2022ರ ಜನವರಿ 1ರಿಂದ 2023ರ ಜೂನ್ 30ರ ಅವಧಿಯಲ್ಲಿ ಮಂಜೂರಾತಿಗೆ ಪರಿಗಣಿಸಿರುವ 694 ಅರ್ಜಿಗಳು ‘ಬಗರ್ ಹುಕುಂ ಸಕ್ರಮೀಕರಣ ಸಮಿತಿ’ ಸಭೆಯ ನಡಾವಳಿಯಲ್ಲಿ ನಮೂದಾಗಿರುವುದಿಲ್ಲ. ಆದರೂ 359 ಪ್ರಕರಣಗಳಲ್ಲಿ ‘ಮಂಜೂರಾತಿ ಆದೇಶ’ ನೀಡಿ ಸಾಗುವಳಿ ಚೀಟಿ ವಿತರಿಸಲಾಗಿದೆ. 335 ಪ್ರಕರಣಗಳಲ್ಲಿ ಕಿಮ್ಮತ್ತು ಪಾವತಿಸಲು ‘ನೋಟಿಸ್’ ನೀಡಲಾಗಿದೆ’ ಎಂದು 2024ರಲ್ಲಿ ಅಂದಿನ ಹೆಚ್ಚುವರಿ ಜಿಲ್ಲಾಧಿಕಾರಿ ಎಚ್.ಎಲ್. ನಾಗರಾಜು ನೇತೃತ್ವದ ‘ತನಿಖಾ ತಂಡ’ ವರದಿ ಸಲ್ಲಿಸಿತ್ತು.
‘ಈ ತನಿಖಾ ವರದಿ ಆಧರಿಸಿ, ಆ ಅವಧಿಯಲ್ಲಿ ಕರ್ತವ್ಯ ನಿರ್ವಹಿಸಿದ ತಹಶೀಲ್ದಾರ್ ಎಲ್.ಎಂ. ನಂದೀಶ್, ಕೆ.ಎಂ. ಸ್ವಾಮಿಗೌಡ, ಪ್ರಸನ್ನಕುಮಾರ್, ಎಫ್‌ಡಿಎ ಎನ್.ಪಿ. ಶಶಿಧರ್, ಎಸ್‌ಡಿಎ ಬಿ.ಸಿ. ಸತೀಶ್, ಎ.ಡಿ. ಅಭಿನಂದನ್ ಕುಮಾರ್ ಅವರು ಅಕ್ರಮ ಭೂ ಮಂಜೂರಾತಿ ಮಾಡುವ ಮೂಲಕ ಲೋಪವೆಸಗಿರುವುದು ಕಂಡು ಬಂದಿದೆ. ಈ ನೌಕರರ ವಿರುದ್ಧ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳುವುದು ಅಗತ್ಯ’ ಎಂದು ಜಿಲ್ಲಾಧಿಕಾರಿ ಕುಮಾರ 2025ರ ಮಾರ್ಚ್ 6ರಂದು ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಪತ್ರ ಬರೆದಿದ್ದರು.
ಪ್ರಕರಣಗಳಲ್ಲಿ ಕಂಡುಬಂದ ನ್ಯೂನತೆಗಳೇನು?
l ನಮೂನೆ 53ರ ಮೂಲ ಅರ್ಜಿಯು ಇಲ್ಲದಿದ್ದರೂ ಅರ್ಜಿಯ ನಕಲಿನ ಮೇಲೆ ಕಡತವನ್ನು ತಯಾರಿಸಲಾಗಿದೆ.
l ಅರ್ಜಿದಾರರು ಅರ್ಜಿ ಸಲ್ಲಿಸುವ ವೇಳೆಯಲ್ಲಿ ಅರ್ಜಿದಾರರ ಕುಟುಂಬವು 4.38 ಎಕರೆ ಜಮೀನಿಗಿಂತ ಹೆಚ್ಚು ಜಮೀನು ಹೊಂದಿದ್ದರೂ ಮತ್ತೊಮ್ಮೆ ಜಮೀನು ಮಂಜೂರಾತಿಗೆ ಕ್ರಮವಹಿಸಲಾಗಿದೆ.
l ಸಮಿತಿಯಲ್ಲಿ ಕಡತವನ್ನು ಮಂಡಿಸದಿದ್ದರೂ ಮಂಜೂರಾಗಿದೆ ಎಂದು ಕಡತ ಸಿದ್ಧಪಡಿಸಿ ತಿಳಿವಳಿಕೆ ನೋಟಿಸ್ ನೀಡಲಾಗಿದೆ.
l ಸಮಿತಿಯಲ್ಲಿ ಕಡತ ಮಂಡಿಸಿ, ನಿರ್ಣಯ ನಮೂದಿಸದೇ ಇದ್ದರೂ ಮಂಜೂರಾತಿಗೆ ತೀರ್ಮಾನಿಸಿದೆ ಎಂದು ನಮೂದಿಸಲಾಗಿದೆ.
l ನಮೂನೆ 54 ಅನ್ನು ಪ್ರಚುರಪಡಿಸಿರುವುದಾಗಿ ನಮೂದಿಸಲಾಗಿದೆ. ಆದರೆ, ನಂತರದಲ್ಲಿ ಈ ಅರ್ಜಿಯನ್ನು ಮತ್ತೊಮ್ಮೆ ಸಭೆಯಲ್ಲಿ ಮಂಡಿಸದೇ ಇದ್ದರೂ ಸಾಗುವಳಿ ಚೀಟಿ ನೀಡಿರುವುದು ಕಂಡುಬಂದಿದೆ.
l ಮೂಲ ದರಖಾಸ್ತು ಮೆಮೊರಂಡಂನಲ್ಲಿ ಎಲ್ಲ ಅಧಿಕಾರಿಗಳ ಸಹಿ ಇರುವುದಿಲ್ಲ ಹಾಗೂ ಅಭಿಪ್ರಾಯ ಬರೆದಿರುವುದಿಲ್ಲ. ಆದರೂ ಮಂಜೂರಾತಿ ಸಂಬಂಧ ತಯಾರಿಸಿರುವುದು ಕಂಡುಬಂದಿದೆ.
ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ
‘56 ಪ್ರಕರಣಗಳಲ್ಲಿ 118 ಎಕರೆ ಅಕ್ರಮವಾಗಿ ಮಂಜೂರಾಗಿರುವುದು ದೃಢಪಟ್ಟಿದೆ. ಬಾಕಿ 638 ಪ್ರಕರಣಗಳ ವಿಚಾರಣೆ ಪೂರ್ಣಗೊಂಡರೆ ಸಾವಿರ ಎಕರೆಗೂ ಹೆಚ್ಚು ಸರ್ಕಾರಿ ಭೂಮಿ ಕಬಳಿಕೆಯಾಗಿರುವುದು ಬೆಳಕಿಗೆ ಬರಲಿದೆ. ಈ ಪ್ರಕರಣದಲ್ಲಿ ಭಾಗಿಯಾದ ತಪ್ಪಿತಸ್ಥ ಅಧಿಕಾರಿಗಳು ಮತ್ತು ಖಾಸಗಿ ವ್ಯಕ್ತಿಗಳ ವಿರುದ್ಧ ಎಫ್‌ಐಆರ್ ದಾಖಲಿಸಿ, ಸೂಕ್ತ ಕಾನೂನು ಕ್ರಮ ಜರುಗಿಸಬೇಕು. ತಹಶೀಲ್ದಾರ್ ಅವರು ರಾಜಕೀಯ ಪ್ರಭಾವಕ್ಕೆ ಒಳಗಾಗದೆ, ಸರ್ಕಾರಿ ಭೂಮಿ ಹಿಂಪಡೆಯಲು ಮುಂದಾಗಬೇಕು’ ಎಂದು ಮಂಡ್ಯದ ಸಾಮಾಜಿಕ ಕಾರ್ಯಕರ್ತ ಕೆ.ಆರ್. ರವೀಂದ್ರ ಆಗ್ರಹಿಸಿದ್ದಾರೆ.
ಕಾನೂನುಬಾಹಿರವಾಗಿ ಮಂಜೂರಾಗಿರುವ ಸರ್ಕಾರಿ ಭೂಮಿಯನ್ನು ಹಿಂಪಡೆಯಲು ತಹಶೀಲ್ದಾರ್‌ಗೆ ಸೂಚಿಸಲಾಗಿದೆ. ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಕ್ರಮವಹಿಸಲಾಗುವುದು ಕುಮಾರ, ಜಿಲ್ಲಾಧಿಕಾರಿ
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260904-40-1272446343