
ಬಂಡೀಪುರ: ಸೂಕ್ಷ್ಮ ವಲಯದಲ್ಲಿ ರೇಜರ್ ಫೆನ್ಸ್
ಚಾಮರಾಜನಗರ: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶಕ್ಕೆ ಹೊಂದಿಕೊಂಡು ಇರುವ ಪರಿಸರ ಸೂಕ್ಷ್ಮ ವಲಯದಲ್ಲಿ ಪ್ರವಾಸೋದ್ಯಮದ ಹೆಸರಿನಲ್ಲಿ ನಡೆಯುತ್ತಿರುವ ಚಟುವಟಿಕೆಗಳು ವನ್ಯಜೀವಿಗಳ ಪ್ರಾಣಕ್ಕೆ ಸಂಚಕಾರ ಒಡ್ಡುತ್ತಿವೆ ಎಂಬ ದೂರು ವ್ಯಾಪಕವಾಗಿದೆ.
ಕೆಬ್ಬೆಪುರ ಗ್ರಾಮದ ಸರ್ವೆ ನಂಬರ್ 116ರಲ್ಲಿರುವ ಜಮೀನಿನಲ್ಲಿ ನಿರ್ಮಿಸಿರುವ ಮನೆ ಹಾಗೂ ಶೆಡ್‌ನಲ್ಲಿ 48 ಜಿಂಕೆ ಕೊಂಬು, ತಲೆ ಬುರುಡೆ, ಪ್ರಾಣಿಗಳ ಚರ್ಮ, ರಿವಾಲ್ವಾರ್, ಮದ್ದು, ಗುಂಡು, ಬ್ಲೇಡ್ ಅಳವಡಿಸಿದ್ದ ಅಪಾಯಕಾರಿ ಬೇಲಿ (ರೇಜರ್ ಫೆನ್ಸ್) ಪತ್ತೆಯಾಗಿದೆ.
ಇಂತಹ ಬೇಲಿಗೆ ಸಿಲುಕುವ ಪ್ರಾಣಿಗಳು ವಿಲವಿಲ ಒದ್ದಾಡಿ ಪ್ರಾಣ ಕಳೆದುಕೊಳ್ಳುತ್ತವೆ. ಜಿಂಕೆ, ಸಾರಂಗ, ಮೊಲ, ನವಿಲು ಸೇರಿದಂತೆ ಬೇಲಿಗೆ ಸಿಕ್ಕು ಪ್ರಾಣ ಕಳೆದುಕೊಂಡ ಪ್ರಾಣಿಗಳ ಮಾಂಸವನ್ನು ಹೋಂ ಸ್ಟೇ ಅತಿಥಿಗಳ ಸತ್ಕಾರಕ್ಕೆ ಬಳಸಲಾಗಿದೆ. ಕೊಂಬು, ಚರ್ಮ, ನವಿಲುಗರಿಗಳನ್ನು ಸಂಗ್ರಹಿಸಲಾಗಿದೆ ಎಂಬ ಶಂಕೆ ವ್ಯಕ್ತವಾಗಿದೆ.
ವನ್ಯಜೀವಿಗಳಿಂದ ಬೆಳೆ ಹಾಗೂ ಪ್ರಾಣ ರಕ್ಷಣೆ ಮಾಡಿಕೊಳ್ಳಲು ಕಾಡಂಚಿನಲ್ಲಿರುವ ರೈತರು ಕೃಷಿ ಭೂಮಿಗೆ ಬೇಲಿ ಅಳವಡಿಸುತ್ತಾರೆ. ಸೇನೆಯಲ್ಲಿದ್ದು ನಿವೃತ್ತರಾದ ಕರ್ನಲ್ ಜಾಕೊಬ್ ಅಂತಹ ಬೇಲಿಯನ್ನು ತಮ್ಮ ಹೋಂ ಸ್ಟೇ ಸುತ್ತ ಅಳವಡಿಸಿದ್ದರು.
ಪರಿಸರ ಸೂಕ್ಷ್ಮ ವಲಯದಲ್ಲಿರುವ ಹೋಂ ಸ್ಟೇನಲ್ಲಿ ಪ್ರಾಣಿಗಳ ಪ್ರಾಣಕ್ಕೆ ಕುತ್ತು ತರುವ ರೇಜರ್ ಬೇಲಿ ಅಳವಡಿಸಿರುವುದು ಅರಣ್ಯ ಅಧಿಕಾರಿಗಳ ಗಮನಕ್ಕೆ ಬಂದಿರಲಿಲ್ಲವೇ ಎನ್ನುವುದು ಪ್ರಾಣಿಪ್ರಿಯರ ಪ್ರಶ್ನೆ.
ರೇಜರ್ ಫೆನ್ಸ್: ನುಸುಳುಕೋರರನ್ನು ತಡೆಯಲು ಗಡಿಗಳಲ್ಲಿ, ನಿಷೇಧಿತ ವಲಯಗಳಲ್ಲಿ ಸಾಮಾನ್ಯವಾಗಿ ರೇಜರ್ ಫೆನ್ಸ್ ಅಳವಡಿಸಲಾಗುತ್ತದೆ. ಆದರೆ, ಬಂಡೀಪುರ ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ಅವ್ಯಾಹತವಾಗಿ ರೇಜರ್ ಫೆನ್ಸ್ ಅಳವಡಿಕೆ ಮಾಡುತ್ತಿರುವ ಬಗ್ಗೆ ಆ.27, 2025ರಲ್ಲಿ ಅರಣ್ಯ ಇಲಾಖೆಗೆ ದೂರು ನೀಡಲಾಗಿತ್ತು. ಈ ಘಟನೆಯ ಬಳಿಕವಾದರೂ ಅಧಿಕಾರಿಗಳು ಎಲ್ಲೆಲ್ಲಿ ಅಪಾಯಕಾರಿ ರೇಜರ್ ಫೆನ್ಸ್ ಅಳವಡಿಕೆ ಮಾಡಲಾಗಿದೆ ಎಂಬುದನ್ನು ಪತ್ತೆಹಚ್ಚಿ ತೆರವುಗೊಳಿಸಬೇಕಿತ್ತು ಎನ್ನುತ್ತಾರೆ ಪರಿಸರವಾದಿ ಜೋಸೆಫ್ ಹೂವರ್.
ಹನೂರು ತಾಲ್ಲೂಕಿನ ಕಾವೇರಿ ವನ್ಯಧಾಮದಲ್ಲಿ ಮೂವರು ಬೇಟೆಗಾರರನ್ನು ಗುಂಡಿಕ್ಕಿದ ಅರಣ್ಯ ಇಲಾಖೆ ಅಧಿಕಾರಿಗಳು ಅಪಾರ ಪ್ರಮಾಣದ ಜಿಂಕೆ ಕೊಂಬುಗಳು ಸಿಕ್ಕ ಪ್ರಕರಣದಲ್ಲಿ ಯಾವ ಕ್ರಮ ತೆಗೆದುಕೊಳ್ಳಬಹುದು ಎಂಬುವುದು ಕುತೂಹಲ ಮೂಡಿಸಿದೆ. ಕಳ್ಳ ಬೇಟೆಗಾರರು ಮತ್ತು ಹೋಂ ಸ್ಟೇ ಮಾಲೀಕರಿಗೆ ಕಾನೂನು ಒಂದೇ ತಾನೇ ಎಂದು ಅವರು ಪ್ರಶ್ನಿಸಿದರು.
ಕುಂದುಕರೆ ವಲಯದಲ್ಲಿ ಮಿತಿಮೀರಿದ ವಾಣಿಜ್ಯ ಚಟುವಟಿಕೆ ನಡೆಯುತ್ತಿವೆ. ಪರಿಸರಸೂಕ್ಷ್ಮ ವಲಯದಲ್ಲಿ ಹೋಂ ಸ್ಟೇ, ಬಡಾವಣೆ ನಿರ್ಮಾಣ ಮಾಡಲಾಗುತ್ತಿದ್ದರೂ ಅಧಿಕಾರಿಗಳು ತಡೆಯಲು ಮುಂದಾಗದಿರುವುದು ವಿಪರ್ಯಾಸ ಎಂದು ಅವರು ಅಸಮಾಧಾನ ಹೊರ ಹಾಕಿದರು.
‘ಜಾರಿಯಾಗದ ಝೋನಲ್ ಪ್ಲಾನ್’
ಬಂಡೀಪುರ ಹುಲಿ ಸಂರಕ್ಷಿತ ಅರಣ್ಯವನ್ನು 2012ರಲ್ಲಿ ಪರಿಸರ ಸೂಕ್ಷ್ಮ ವಲಯ ಎಂದು ಘೋಷಿಸಿ ಅಧಿಸೂಚನೆ ಹೊರಡಿಸಲಾಗಿದೆ. ಇದಾಗಿ 14 ವರ್ಷ ಕಳೆದರೂ ಝೋನಲ್ ಮಾಸ್ಟರ್ ಪ್ಲಾನ್ ರೂಪಿಸಿಲ್ಲ. ಪರಿಣಾಮ ಇಎಸ್‌ಝೆಡ್‌ನಲ್ಲಿ ಕಾನೂನುಬಾಹಿರ ಚಟುವಟಿಕೆ ತಡೆ ಸಾಧ್ಯವಾಗುತ್ತಿಲ್ಲ. ಪ್ಲಾನ್ ಜಾರಿಯಾದರೆ ನಿರ್ಬಂಧಿತ ಚಟುವಟಿಕೆಗೆ ಅವಕಾಶ ಇರುವುದಿಲ್ಲ.
ಗಿರಿಧರ್ ಕುಲಕರ್ಣಿ, ವನ್ಯಜೀವಿ ತಜ್ಞ
ಜಿಂಕೆ ಕೊಂಬು, ಚರ್ಮ ವಶ ಪ್ರಕರಣ ಜಮೀನು ಮಾಲೀಕ ಸೆನೆಟಿಲಾ ಲಾಂಗ್ ಕುಮೆರ ಹಾಗೂ ಕರ್ನಲ್ ಜಾಕೊಬ್ ತಲೆಮರೆಸಿಕೊಂಡಿದ್ದು, ಇನ್ನೂ ಅವರಿಗಾಗಿ ಶೋಧ ಕಾರ್ಯ ನಡೆಯುತ್ತಿದೆ. ಸುರೇಶ್ ಪರಿಯಾರ್ ಎಂಬಾತನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260821-37-630024823