
ಗದಗ | ನರೇಗಾ ಯೋಜನೆ: ‘ಬದು’ ನಿರ್ಮಾಣಕ್ಕಿಲ್ಲ ಅವಕಾಶ
ಗದಗ: ನರೇಗಾ ಯೋಜನೆಯಡಿ ಹೆಚ್ಚು ಮಾನವ ದಿನ ಸೃಜನೆಗೆ ಸಹಕಾರಿ ಆಗಿದ್ದ ಬದು ನಿರ್ಮಾಣದಂತಹ ಕೆಲಸವು ವಿಬಿಜಿ ರಾಮ್‌ಜಿ ಕಾರ್ಯಯೋಜನೆಗಳ ಪಟ್ಟಿಯಲ್ಲಿ ಇಲ್ಲ. ಇದರಿಂದ ಹೆಚ್ಚು ಮಾನವ ದಿನಗಳ ಕೆಲಸದ ಸೃಜನೆ ಕಷ್ಟವಾಗಿದೆ.
ನರೇಗಾ ಯೋಜನೆಯಡಿ 267 ಕೆಲಸಗಳಿದ್ದವು. ವಿಬಿ–ಜಿ ರಾಮ್‌ಜಿ ಯೋಜನೆಯಡಿ 318 ಕೆಲಸಗಳಿಗೆ ಅವಕಾಶವಿದೆ. ಆದರೆ, ಹೆಚ್ಚು ಜನರಿಗೆ ಕೆಲಸ ಸಿಗುತ್ತಿದ್ದ ಬದು ನಿರ್ಮಾಣ ಕೈಬಿಡಲಾಗಿದೆ ಎಂಬ ಆರೋಪವಿದೆ.
‘ಏಪ್ರಿಲ್, ಮೇ ಮತ್ತು ಜೂನ್ ತಿಂಗಳಲ್ಲಿ ಸಾವಿರಾರು ಸಂಖ್ಯೆಯಲ್ಲಿ ಕಾರ್ಮಿಕರು ಕೂಲಿ ಕೆಲಸಕ್ಕೆ ಬರುತ್ತಾರೆ. ನರೇಗಾ ಯೋಜನೆಯಡಿ ಶೇ 80ರಷ್ಟು ಬದು ನಿರ್ಮಾಣ ಕೆಲಸ ಆಗುತ್ತಿದ್ದರಿಂದ ಹೆಚ್ಚು ಜನರಿಗೆ ಕೆಲಸ ಸಿಗುತಿತ್ತು. ಉಳಿದಂತೆ ರಸ್ತೆ, ಚರಂಡಿ ನಿರ್ಮಾಣ ಕಾರ್ಯ ನಡೆಯುತ್ತಿದ್ದವು. ಆದರೆ, ಬದು ನಿರ್ಮಾಣ ಪ್ರಕ್ರಿಯೆ ಕೈಬಿಟ್ಟಿದ್ದರಿಂದ ವರ್ಷಪೂರ್ತಿ ಎಲ್ಲರಿಗೂ ಕೆಲಸ ವಹಿಸುವುದು ಕಷ್ಟವಾಗಿದೆ’ ಎಂದು ಜಿಲ್ಲಾ ಪಂಚಾಯಿತಿ ಅಧಿಕಾರಿಯೊಬ್ಬರು ತಿಳಿಸಿದರು.
‘ವಿಬಿಜಿ ರಾಮ್‌ಜಿ ಯೋಜನೆಯಡಿ ಸಮುದಾಯ ಕೆಲಸಗಳಾದ ತಂಗುದಾಣ, ಸಮುದಾಯ ಭವನ, ಅಂಗನವಾಡಿ ಕಟ್ಟಡ, ನೆರೆ ಸಂತ್ರಸ್ತರಿಗೆ ಆಶ್ರಯ ತಾಣ, ಗೋದಾಮು ನಿರ್ಮಾಣ ಕೈಗೊಳ್ಳಬಹುದು. ವೈಯಕ್ತಿಕ ಕೆಲಸಗಳಾದ ದನ ಮತ್ತು ಕುರಿ ದೊಡ್ಡಿ ನಿರ್ಮಿಸಬಹುದು. ಇದಕ್ಕೆ ಕೌಶಲವುಳ್ಳ ಕಾರ್ಮಿಕರು ಬೇಕು. ಕಟ್ಟಡ ನಿರ್ಮಾಣಕ್ಕೆ 8ರಿಂದ 10 ಜನ ಸಾಕು. ಸಮುದಾಯ ಕೆಲಸಗಳಲ್ಲಿ ಕೆರೆ, ಚೆಕ್ ಡ್ಯಾಂ, ನೀರಾವರಿ ಕಾಲುವೆ ಹೂಳೆತ್ತಲು ಅವಕಾಶವಿದೆ. ಆದರೆ, ಸದ್ಯ ಮಳೆಗಾಲದಲ್ಲಿ ಇಂತಹ ಕಾಮಗಾರಿ ಕೈಗೊಳ್ಳುವುದು ಕಷ್ಟಸಾಧ್ಯ’ ಎಂದರು.
‘ಬರ ಪರಿಸ್ಥಿತಿ ಸಂದರ್ಭದಲ್ಲಿ ವಿ–ಬಿಜಿ ರಾಮ್‌ಜಿ ಯೋಜನೆಯು ಜನರಿಗೆ ನೆರವಾಗಬೇಕಿತ್ತು. ಬದು ನಿರ್ಮಾಣದಿಂದ ಕೃಷಿ ಜಮೀನಿನಲ್ಲಿ ಮಣ್ಣು–ನೀರಿನ ಸಂರಕ್ಷಣೆ ಸೇರಿ ಬೇರೆ ರೀತಿಯಲ್ಲಿ ಉಪಯುಕ್ತವಾಗುತಿತ್ತು’ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾ ಘಟಕದ ಅಧ್ಯಕ್ಷ ಶಂಕರಗೌಡ ಜಯನಗೌಡ್ರ ‘ಪ್ರಜಾವಾಣಿ’ ತಿಳಿಸಿದರು.