
ಮೈಸೂರು ದಸರಾ: ಜಂಬೂ ಸವಾರಿಗಿಲ್ಲ ‘ಕ್ಯಾಪ್ಟನ್’ ಅಭಿಮನ್ಯು!
ಮೈಸೂರು: ಕಳೆದ ಆರು ವರ್ಷ ದಸರಾ ಗಜಪಡೆಯನ್ನು ಮುನ್ನಡೆಸಿದ್ದ ‘ಕ್ಯಾಪ್ಟನ್’ ಅಭಿಮನ್ಯುವನ್ನು ಅರಣ್ಯ ಇಲಾಖೆ ಈ ವರ್ಷ ನಾಡಹಬ್ಬದಿಂದ ಹೊರಗಿಟ್ಟಿದೆ. ಅಭಿಮನ್ಯುವಿಗೆ 60 ವರ್ಷ ದಾಟಿದ ಕಾರಣ ನಿಯಮಾವಳಿಯಂತೆ ನಿವೃತ್ತಿ ನೀಡಲಾಗಿದ್ದು, ಆಯ್ಕೆಗೆ ಪರಿಗಣಿಸಿಲ್ಲ.
ಅಭಿಮನ್ಯು ಕೈಬಿಟ್ಟಿರುವುದರಿಂದ ಉತ್ತರಾಧಿಕಾರಿ ಆಯ್ಕೆ ಮಾಡಬೇಕಿದೆ.
60 ವರ್ಷ ತುಂಬಿದ ಆನೆಗಳನ್ನು ಯಾವುದೇ ಕಾರ್ಯಗಳಿಗೆ ಬಳಸದೆ ವಿಶ್ರಾಂತಿ ನೀಡಬೇಕು. ಹೀಗಾಗಿ ಈ ಬಾರಿಯ ಗಜಪಡೆ ಪಟ್ಟಿಯಿಂದ ಅಭಿಮನ್ಯುವನ್ನು ಕೈಬಿಟ್ಟಿದ್ದೇವೆ ಎನ್ನುತ್ತಾರೆ ಅರಣ್ಯ ಇಲಾಖೆಯ ಅಧಿಕಾರಿಗಳು.
2020ರಲ್ಲಿ ಅರ್ಜುನನ ಬದಲಿಗೆ ಅಂಬಾರಿ ಹೊರುವ ಜವಾಬ್ದಾರಿ ವಹಿಸಿಕೊಂಡಿದ್ದ ಅಭಿಮನ್ಯು ತನ್ನ ಶಿಸ್ತಿನ ನಡೆಯಿಂದ ಗಮನ ಸೆಳೆದಿತ್ತು. ವನ್ಯಮೃಗಗಳ ಸೆರೆ ಕಾರ್ಯಾಚರಣೆಗಳಲ್ಲಿ ಅಬ್ಬರಿಸಿದರೂ ಅಂಬಾರಿ ಹೊರುವಾಗ ಮಾತ್ರ ಸಂಯಮ ಕಳೆದುಕೊಂಡಿದ್ದಿಲ್ಲ.
ಈ ಮೊದಲು ವಯಸ್ಸಿನ ಕಾರಣಕ್ಕೆ ಅರ್ಜುನನಿಗೆ ಅಂಬಾರಿ ಹೊರುವ ಜವಾಬ್ದಾರಿ ಇಳಿಸಿದ್ದರೂ ಪ್ರತಿ ದಸರೆಗೆ ಕರೆ ತರಲಾಗಿತ್ತು. ನಿಶಾನೆ ಆನೆಯಾಗಿ ಅರ್ಜುನ ಪಾಲ್ಗೊಳ್ಳುತ್ತಿತ್ತು. ಆದರೆ ಅಭಿಮನ್ಯುವನ್ನು ಅದಕ್ಕೂ ಪರಿಗಣಿಸಿಲ್ಲ!
ಈ ಬಾರಿಯ ಜಂಬೂ ಸವಾರಿಯಲ್ಲಿ ‘ಭೀಮ’ ಸಹ ಪಾಲ್ಗೊಳ್ಳುವುದು ಅನುಮಾನ. ಸದ್ಯ ಮದದಲ್ಲಿರುವ ಭೀಮ ಹಾಗೂ ಹರ್ಷ ಆನೆಗಳನ್ನು ಮೀಸಲು ಎಂದು ಪರಿಗಣಿಸಲಾಗಿದೆ. ಮದ ಇಳಿದರೆ ಮಾತ್ರ ಕರೆತರಲಾಗುತ್ತದೆ ಎಂದು ಇಲಾಖೆಯ ಮೂಲಗಳು ತಿಳಿಸಿವೆ.
‘ಕಳೆದ ವರ್ಷವೂ ಈ ಆನೆಗಳಿಗೆ ಅಂಬಾರಿ ತಾಲೀಮು ಮಾಡಿಸಿದ್ದೆವು. ಈ ವರ್ಷವೂ ಸಾಕಷ್ಟು ತಾಲೀಮಿನ ಬಳಿಕ ಒಂದರ ಹೆಸರು ಅಂತಿಮವಾಗಲಿದೆ. ಅವುಗಳ ವರ್ತನೆ, ಧೈರ್ಯವೇ ಆಯ್ಕೆಯ ಮಾನದಂಡವಾಗಿರಲಿದೆ’ ಎಂದು ಡಿಸಿಎಫ್ ಪ್ರಭುಗೌಡ ಹೇಳುತ್ತಾರೆ.
ಆಗಸ್ಟ್ 26ರಂದು ನಾಗರಹೊಳೆ ಸಮೀಪದ ವೀರನಹೊಸಳ್ಳಿಯಿಂದ ಗಜಪಯಣ ಆರಂಭ ಆಗಲಿದೆ. ಈ ಮೂಲಕ ದಸರಾ ಜಂಬೂಸವಾರಿ ಸಿದ್ಧತೆಗೆ ಚಾಲನೆ ದೊರೆಯಲಿದೆ.
ದಸರೆ: 12 ಆನೆಗಳ ಹೆಸರು ಪ್ರಕಟ
ದಸರಾದಲ್ಲಿ ಪಾಲ್ಗೊಳ್ಳಲಿರುವ ಗಜಪಡೆಯ ಪಟ್ಟಿಯನ್ನು ಅರಣ್ಯ ಸಚಿವ ರಾಮಲಿಂಗಾರೆಡ್ಡಿ ಬೆಂಗಳೂರಿನಲ್ಲಿ ಮಂಗಳವಾರ ಬಿಡುಗಡೆ ಮಾಡಿದರು.
ಜಂಬೂಸವಾರಿಗೆ ಎಂಟು ಗಂಡು ಹಾಗೂ ನಾಲ್ಕು ಹೆಣ್ಣು ಸೇರಿದಂತೆ ಒಟ್ಟು 12 ಆನೆಗಳು ಆಯ್ಕೆಯಾಗಿವೆ. ಧನಂಜಯ, ಮಹೇಂದ್ರ, ಏಕಲವ್ಯ, ಪ್ರಶಾಂತ, ಗೋಪಿ, ಶ್ರೀರಾಮ, ಸುಗ್ರೀವ, ಲಕ್ಷ್ಮಿ ಹಾಗೂ ಕಾವೇರಿ ಆನೆಗಳು ಮೊದಲ ತಂಡದಲ್ಲಿ ಬರಲಿವೆ. ರೂಪಾ, ಚೈತ್ರಾ ಹಾಗೂ ಶ್ರೀಕಂಠ ಆನೆಗಳು ಎರಡನೇ ತಂಡದಲ್ಲಿವೆ.
ಅಭಿಮನ್ಯು ಬದಲಿಗೆ ಚಿನ್ನದ ಅಂಬಾರಿ ಹೊರಲು ಧನಂಜಯ, ಮಹೇಂದ್ರ, ಪ್ರಶಾಂತ ಹಾಗೂ ಸುಗ್ರೀವನ ಹೆಸರು ಚಾಲ್ತಿಯಲ್ಲಿದೆ. ಈ ನಾಲ್ಕರಲ್ಲಿ ಒಂದಕ್ಕೆ ಅವಕಾಶ ಸಿಗಲಿದೆ.