ಮುಂಗಾರು ಕೈಕೊಟ್ಟರೂ ಕಳೆಗುಂದದ ವಹಿವಾಟು: ಮೂಡಲಗಿ ಜಾನುವಾರು ಪೇಟೆಗೆ ರೈತರ ಲಗ್ಗೆ

ಮುಂಗಾರು ಕೈಕೊಟ್ಟರೂ ಕಳೆಗುಂದದ ವಹಿವಾಟು: ಮೂಡಲಗಿ ಜಾನುವಾರು ಪೇಟೆಗೆ ರೈತರ ಲಗ್ಗೆ

ಮುಂಗಾರು ಕೈಕೊಟ್ಟರೂ ಕಳೆಗುಂದದ ವಹಿವಾಟು: ಮೂಡಲಗಿ ಜಾನುವಾರು ಪೇಟೆಗೆ ರೈತರ ಲಗ್ಗೆ

ಮೂಡಲಗಿ: ಪ್ರತಿವರ್ಷ ಜುಲೈ, ಆಗಸ್ಟ್‌ ತಿಂಗಳು ಬರುತ್ತಿದ್ದಂತೆ, ಮೂಡಲಗಿಯ ಜಾನುವಾರು ಪೇಟೆಗೆ ಎಮ್ಮೆ, ಎತ್ತುಗಳ ಖರೀದಿಗೆ ವಿವಿಧೆಡೆಯ ರೈತರು ಲಗ್ಗೆ ಇಡುತ್ತಾರೆ. ಈ ಬಾರಿ ಮುಂಗಾರು ಕೈಕೊಟ್ಟಿದ್ದರೂ, ಭಾನುವಾರ ನಡೆಯುವ ಸಂತೆಯಲ್ಲಿ ಖರೀದಿದಾರರಿಗೇನು ಕೊರತೆ ಇಲ್ಲ.

ಮೂಡಲಗಿ ಜಾನುವಾರು ಪೇಟೆ ಮೊದಲಿನಿಂದಲೂ ಖಿಲಾರಿ ಎತ್ತುಗಳ ಮಾರಾಟಕ್ಕೆ ಗಮನಸೆಳೆದಿದೆ. ಕರ್ನಾಟಕ ಮಾತ್ರವಲ್ಲದೆ; ಮಹಾರಾಷ್ಟ್ರ, ಆಂಧ್ರಪ್ರದೇಶ, ಗೋವಾ, ತಮಿಳುನಾಡಿನ ಎತ್ತುಗಳ ಖರೀದಿಗೆ ಆಗಮಿಸುತ್ತಾರೆ. ನೂರಾರು ವರ್ಷಗಳ ಇತಿಹಾಸ ಹೊಂದಿದ ಪೇಟೆ ಈಗಲೂ ತನ್ನ ಐತಿಹಾಸಿಕ ಪರಂಪರೆ ಉಳಿಸಿಕೊಂಡು ಬಂದಿರುವುದು ವಿಶೇಷ.

‘ನಲವತ್ತು ವರ್ಷಗಳಿಂದ ಮೂಡಲಗಿ ದನದ ಪ್ಯಾಟಿಗೆ ಬರುತ್ತಿದ್ದೇನೆ. ಇಲ್ಲಿ ಸಿಗುವಂತಹ ಗಟ್ಟಿಮುಟ್ಟಾದ ದನಗಳು ಬೇರೆ ಪೇಟೆಯಲ್ಲಿ ಸಿಗುವುದಿಲ್ಲ. ಇಲ್ಲಿ ಎಲ್ಲ ತಳಿಗಳ ಎಮ್ಮೆ, ಎತ್ತು ಸಿಗುತ್ತವೆ’ ಎಂದು ಮಂಟೂರಿನ ರೈತ ಬಾಪುಸಾಹೇಬ ಪಾಟೀಲ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಪೇಟೆ ಪ್ರವೇಶಿಸುತ್ತದ್ದಂತೆ ಎದುರಿನ ಒಂದು ಭಾಗದಲ್ಲಿ ಖಿಲಾರಿ ಎತ್ತುಗಳು ಮತ್ತು ಹೋರಿಗಳ ವಹಿವಾಟು ಜೋರಾಗಿ ನಡೆದಿದ್ದರೆ, ಅದರ ಪಕ್ಕದ ಜಾಗದಲ್ಲಿ ಜವಾರಿ ಮತ್ತು ಎಚ್‌ಎಫ್‌ ತಳಿಗಳ ಹಸುಗಳ ಖರೀದಿ ಭರ್ಜರಿಯಾಗಿ ನಡೆದಿತ್ತು.

‘ಕಾರ ಹುಣ್ಣಿಮೆ ಮುಗಿದ ನಂತರ ರೈತರು ಎತ್ತುಗಳ ಖರೀದಿಯಲ್ಲಿ ತೊಡಗುತ್ತಾರೆ. ಕಳೆದ ಎರಡು ವಾರಗಳಿಂದ ಎತ್ತುಗಳ ಮಾರಾಟ ಜೋರಾಗಿದೆ’ ಎಂದು ದನಗಳ ವ್ಯಾಪಾರಿ ಸುಭಾಷ ತಳವಾರ ತಿಳಿಸಿದರು.

ಈ ಭಾನುವಾರ ಜೋಡಿ ಖಿಲಾರಿ ಎತ್ತುಗಳ ದರ ₹1.50 ಲಕ್ಷದಿಂದ ಹಿಡಿದು ₹3.60 ಲಕ್ಷದವರೆಗೆ ಇರುವುದು ಕಂಡುಬಂತು.

ಪೇಟೆ ಪ್ರವೇಶದ ಎಡಭಾಗದಲ್ಲಿ ಎಲ್ಲಿ ನೋಡಿದರಲ್ಲಿ ಎಮ್ಮೆಗಳ ಸಾಲು ಇತ್ತು. ಮುರ್ರಾ, ಮೇಂಡಾ, ಜಾಪ್ರಿ, ಮಶಾಳ, ಕರ್ನಾಲಿ, ಜವಾರಿ, ಪಂಢರಪುರ ಗವಳಿ ಹೀಗೆ... ವಿವಿಧ ತಳಿಗಳಿದ್ದವು. ಮೇಂಡಾ ತಳಿಯ ಎಮ್ಮೆಗೆ ₹2.50 ಲಕ್ಷದವರೆಗೆ ದರ ಇತ್ತು.

‘ಮೇಂಡಾ ತಳಿಯ ಎಮ್ಮೆ ದಿನಕ್ಕೆ ಎರಡೂ ಹೊತ್ತು ಸೇರಿ 20 ಲೀಟರ್‌ವರೆಗೆ ಹಾಲು ಕೊಡುತ್ತದೆ’ ಎಂದು ಎಮ್ಮೆ ಮಾಲೀಕ ರವೀಂದ್ರ ಸಣ್ಣಕ್ಕಿ ಹೇಳಿದರು.

₹80 ಸಾವಿರದಿಂದ ₹1 ಲಕ್ಷದವರೆಗೆ ದರ ಇರುವ ಕರ್ನಾಲಿ ತಳಿಯು ಪ್ಯಾಟ್ಯಾಗ ಬಾಳ ಖರೀದಿಯಾಗುತ್ತದೆ’ ಎಂದು ಜಾನುವಾರ ವ್ಯಾಪಾರಿ ಸಲೀಲ ಹೊಸಮನಿ ತಿಳಿಸಿದರು.

ಮಾರುಕಟ್ಟೆಯಲ್ಲಿ ಹಲವು ಸಮಸ್ಯೆ

ಪೇಟೆ ಆವರಣದಲ್ಲಿ ಬೆಳೆದಿರುವ ಕಸ ತೆಗೆದು ಸ್ವಚ್ಛವಾಗಿಡಬೇಕು. ಪೇಟೆ ತುಂಬೆಲ್ಲ ವಿದ್ಯುತ್‌ ವ್ಯವಸ್ಥೆ ಮಾಡಬೇಕು. ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು. ರೈತರ ವಿಶ್ರಾಂತಿಗೆ ಸುಸಜ್ಜಿತವಾದ ರೈತ ಭವನ ನಿರ್ಮಿಸಬೇಕು ಎಂಬುದು ರೈತರ ಒತ್ತಾಯ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260809-21-1348344774

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ