
ತುಮಕೂರು | ಏಲಕ್ಕಿ ಬಾಳೆ: ಕೆ.ಜಿ ₹100
ತುಮಕೂರು: ಏಲಕ್ಕಿ ಬಾಳೆ ಹಣ್ಣಿನ ಬೆಲೆಯಲ್ಲಿ ದಿಢೀರ್ ಏರಿಕೆಯಾಗಿದ್ದು, ಕಳೆದ ಒಂದು ವಾರದ ಅಂತರದಲ್ಲಿ ಕೆ.ಜಿ.ಗೆ ₹10ರಿಂದ ₹15 ಹೆಚ್ಚಳವಾಗಿದೆ. ಸದ್ಯ ಕೆ.ಜಿ ₹100ಕ್ಕೆ ಮಾರಾಟವಾಗುತ್ತಿದೆ.
ಜಿಲ್ಲೆಯಲ್ಲಿ ಕಳೆದ ಮೂರು– ನಾಲ್ಕು ದಿನಗಳಿಂದ ತುಂತುರು ಮಳೆ ಸುರಿಯುತ್ತಿದ್ದು, ಅಗತ್ಯ ಪ್ರಮಾಣದಲ್ಲಿ ಬಾಳೆ ಹಣ್ಣು ಮಾರುಕಟ್ಟೆಗೆ ಬರುತ್ತಿಲ್ಲ. ಇನ್ನೂ ಕೆಲವು ರೈತರು ಶ್ರಾವಣ ಮಾಸದಲ್ಲಿ ಉತ್ತಮ ದರ ಸಿಗುತ್ತದೆ ಎಂಬ ಕಾರಣಕ್ಕೆ ಈಗ ಹಣ್ಣು ಮಾರುಕಟ್ಟೆಗೆ ತರುತ್ತಿಲ್ಲ. ಇದರಿಂದ ಬಾಳೆ ಹಣ್ಣಿಗೆ ಅಭಾವ ಸೃಷ್ಟಿಯಾಗಿದೆ.
ಬೇಡಿಕೆಗೆ ತಕ್ಕಷ್ಟು ಪೂರೈಕೆಯಾಗದೆ ಬೆಲೆ ಏರಿಕೆಯಾಗಿದೆ. ಶ್ರಾವಣ ಹಾಗೂ ವರಮಹಾಲಕ್ಷ್ಮಿ ಹಬ್ಬದ ವೇಳೆಗೆ ಮತ್ತಷ್ಟು ದುಬಾರಿಯಾಗಲಿದೆ ಎಂದು ಹೇಳಲಾಗುತ್ತಿದೆ.
‘ತೋಟದಲ್ಲಿಯೇ ಕೆ.ಜಿ ₹70–75ಕ್ಕೆ ಖರೀದಿಸಲಾಗುತ್ತಿದೆ. ಮುಂದಿನ ವಾರದಿಂದ ಶ್ರಾವಣ ಮಾಸ ಶುರುವಾಗಲಿದ್ದು, ಇನ್ನೂ ₹20ರಿಂದ ₹30 ಹೆಚ್ಚಾಗಬಹುದು. ತಮಿಳುನಾಡು ಸೇರಿ ಬೇರೆ ಕಡೆಗಳಿಂದ ಬೆಂಗಳೂರು, ತುಮಕೂರಿಗೆ ಹಣ್ಣು ಬರುವುದು ಕಡಿಮೆಯಾಗಿದೆ. ಬೆಲೆ ಏರಿಕೆಗೆ ಇದೂ ಒಂದು ಕಾರಣ’ ಎಂದು ಹೆಬ್ಬೂರಿನ ಬಾಳೆ ಮಂಡಿ ಮಾಲೀಕ ರವಿ ಪ್ರತಿಕ್ರಿಯಿಸಿದರು.
ತುಮಕೂರು: ಹಣ್ಣಿನ ಧಾರಣೆಯಲ್ಲಿ ಏರಿಕೆ ಕಂಡು ಬಂದಿದ್ದು, ಏಲಕ್ಕಿ ಬಾಳೆ ಕೆ.ಜಿ ₹100ರ ಗಡಿ ತಲುಪಿದೆ. ಸೀಬೆ ಕೆ.ಜಿ ₹150ಕ್ಕೆ ಮಾರಾಟವಾಗುತ್ತಿದೆ.
ಬೇಡಿಕೆಗೆ ತಕ್ಕಷ್ಟು ಪೂರೈಕೆ ಇಲ್ಲದಿರುವುದು ಬೆಲೆ ಹೆಚ್ಚಳಕ್ಕೆ ಪ್ರಮುಖ ಕಾರಣವಾಗಿದೆ. ಒಂದು ವಾರದಲ್ಲಿ ಏಲಕ್ಕಿ ಬಾಳೆ ಬೆಲೆಯಲ್ಲಿ ₹10, ಸೀಬೆ ₹30 ಜಾಸ್ತಿಯಾಗಿದೆ. ಸಪೋಟ ಕಡಿಮೆಯಾಗಿದ್ದು, ದಾಳಿಂಬೆ, ಮೂಸಂಬಿ, ಪೈನಾಪಲ್, ಪಪ್ಪಾಯ ದರದಲ್ಲಿ ಹೆಚ್ಚಿನ ವ್ಯತ್ಯಾಸಗಳು ಆಗಿಲ್ಲ.
ಸೊಪ್ಪು ಯಥಾಸ್ಥಿತಿ ಕಾಯ್ದುಕೊಂಡಿದೆ. ಕೊತ್ತಂಬರಿ ಸೊಪ್ಪು ಕೆ.ಜಿ ₹30–₹40, ಮೆಂತ್ಯ ಕೆ.ಜಿ ₹30–₹40, ಸಬ್ಬಕ್ಕಿ ಕೆ.ಜಿ ₹40–₹50, ಪಾಲಕ್ ಸೊಪ್ಪು (ಕಟ್ಟು) ₹30ಕ್ಕೆ ಅಂತರಸನಹಳ್ಳಿ ಮಾರುಕಟ್ಟೆಯಲ್ಲಿ ಸಿಗುತ್ತಿದೆ. ಟೊಮೆಟೊ ಅಗ್ಗವಾಗಿದ್ದು, ಕೆ.ಜಿ ₹10–₹15ಕ್ಕೆ ಇಳಿದಿದೆ.
ಮಾರುಕಟ್ಟೆಯಲ್ಲಿ ಸಕ್ಕರೆ, ಬೆಲ್ಲ ತೇಜಿಯಾಗಿದೆ. ಸಕ್ಕರೆ ಕೆ.ಜಿ ₹52–₹53, ಬೆಲ್ಲ ಕೆ.ಜಿ ₹55–₹65ಕ್ಕೆ ಗ್ರಾಹಕರು ಖರೀದಿಸುತ್ತಿದ್ದಾರೆ. ಅಡುಗೆ ಎಣ್ಣೆ ದರದಲ್ಲಿ ಏರಿಳಿತ ಕಾಣಿಸುತ್ತಿದೆ. ಕಡಲೆಕಾಯಿ ಎಣ್ಣೆ ಕೆ.ಜಿ ₹180–₹185, ಗೋಲ್ಡ್‌ವಿನ್ನರ್ ಕೆ.ಜಿ ₹173–₹177, ಪಾಮಾಯಿಲ್ ಕೆ.ಜಿ ₹140–₹142 ಇದೆ.
ಮಸಾಲೆ ಪದಾರ್ಥ: ಬಾದಾಮಿ, ಗೋಡಂಬಿ, ಒಣ ದ್ರಾಕ್ಷಿ ತುಟ್ಟಿಯಾಗಿದೆ. ದನಿಯ ಕೆ.ಜಿ ₹190–₹250, ಬ್ಯಾಡಗಿ ಮೆಣಸಿನಕಾಯಿ ಕೆ.ಜಿ ₹480–₹550, ಗೌರಿಬಿದನೂರುಖಾರದ ಮೆಣಸಿನಕಾಯಿ ಕೆ.ಜಿ ₹250–₹270, ಕಾಳುಮೆಣಸು ಕೆ.ಜಿ ₹740–₹760, ಜೀರಿಗೆ ₹ 240–₹280.
ಚಕ್ಕೆ ಕೆ.ಜಿ ₹280–₹320, ಲವಂಗ ಕೆ.ಜಿ ₹780–₹840, ಗಸಗಸೆ ಕೆ.ಜಿ ₹1,450–₹1,650, ಏಲಕ್ಕಿ ಕೆ.ಜಿ ₹3,800–₹4,400, ಬಾದಾಮಿ ಕೆ.ಜಿ ₹1,000, ಗೋಡಂಬಿ ಕೆ.ಜಿ ₹820–₹980, ಒಣದ್ರಾಕ್ಷಿ ಕೆ.ಜಿ ₹380–₹460ಕ್ಕೆ ಮಂಡಿಪೇಟೆ ಮಾರುಕಟ್ಟೆಯಲ್ಲಿ ಮಾರಾಟ ಮಾಡಲಾಗುತ್ತಿದೆ.
ಕೋಳಿ ಇಳಿಕೆ: ಕೋಳಿ ಮಾಂಸದ ಬೆಲೆ ಮತ್ತಷ್ಟು ಇಳಿಕೆಯಾಗಿದೆ. ಕಳೆದ ವಾರ ಕೆ.ಜಿ ₹280 ಇದ್ದ ರೆಡಿ ಚಿಕನ್ ಈಗ ₹220ಕ್ಕೆ ಕುಸಿದಿದೆ. ಸ್ಕಿನ್‌ಲೆಸ್ ಕೆ.ಜಿ ₹280ರಿಂದ ₹240ಕ್ಕೆ ಬಂದಿದೆ. ಫಾರಂ ಕೋಳಿ ಕೆ.ಜಿ ₹130, ಬ್ರಾಯ್ಲರ್ ಕೋಳಿ ಈಗ ₹140ಕ್ಕೆ ಖರೀದಿಸಲಾಗುತ್ತಿದೆ. ಮೊಟ್ಟೆ ಒಂದಕ್ಕೆ ₹6 ನಿಗದಿ ಪಡಿಸಲಾಗಿದೆ.
ಏರಿಕೆಯಾಗಿರುವ ಮೀನು ದರ ಕಡಿಮೆಯಾಗಿಲ್ಲ. ಅಂಜಲ್ ಕೆ.ಜಿ ₹1,380, ಬಿಳಿಮಾಂಜಿ ಕೆ.ಜಿ ₹1,700, ಕಪ್ಪುಮಾಂಜಿ ₹1,210, ಇಂಡಿಯನ್ ಸಾಲ್ಮನ್ ₹1,190, ಬಂಗುಡೆ ₹480, ಸೀಗಡಿ ಕೆ.ಜಿ ₹540–₹850ಕ್ಕೆ ನಗರದ ಜಿಲ್ಲಾ ಕ್ರೀಡಾಂಗಣ ಪಕ್ಕದ ಮತ್ಸ್ಯದರ್ಶಿನಿಯಲ್ಲಿ ಸಿಗುತ್ತಿದೆ.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260809-17-221251156