ಸಮಸ್ಯೆಗಳಿಗೆ ಒಂದೇ ಕಡೆ ಪರಿಹಾರ: ಪೂರ್ವ ನಗರ ಪಾಲಿಕೆ ಆಯುಕ್ತ ಡಿ.ಎಸ್. ರಮೇಶ್

ಸಮಸ್ಯೆಗಳಿಗೆ ಒಂದೇ ಕಡೆ ಪರಿಹಾರ: ಪೂರ್ವ ನಗರ ಪಾಲಿಕೆ ಆಯುಕ್ತ ಡಿ.ಎಸ್. ರಮೇಶ್

ಸಮಸ್ಯೆಗಳಿಗೆ ಒಂದೇ ಕಡೆ ಪರಿಹಾರ: ಪೂರ್ವ ನಗರ ಪಾಲಿಕೆ ಆಯುಕ್ತ ಡಿ.ಎಸ್. ರಮೇಶ್

ಬೆಂಗಳೂರು: ನಾಗರಿಕರು ತಮ್ಮ ಸಮಸ್ಯೆಗಳು, ಅರ್ಜಿಗಳು ಹಾಗೂ ದೂರುಗಳಿಗಾಗಿ ವಿವಿಧ ಕಚೇರಿಗಳಿಗೆ ಅಲೆದಾಡುವುದನ್ನು ತಪ್ಪಿಸಿ, ಒಂದೇ ಸ್ಥಳದಲ್ಲಿ ಅರ್ಜಿ ಹಾಗೂ ದೂರುಗಳನ್ನು ಸ್ವೀಕರಿಸಿ, ಸಂಬಂಧಪಟ್ಟ ಇಲಾಖೆಗೆ ರವಾನಿಸಿ, ಪರಿಹಾರವಾಗುವವರೆಗೆ ನಿರಂತರವಾಗಿ ಮೇಲ್ವಿಚಾರಣೆ ನಡೆಸುವ ‘ನಾಗರಿಕ ಸಹಾಯ ಕೇಂದ್ರ’ ಸ್ಥಾಪಿಸಲಾಗುತ್ತದೆ ಎಂದು ಪೂರ್ವ ನಗರ ಪಾಲಿಕೆ ಆಯುಕ್ತ ಡಿ.ಎಸ್. ರಮೇಶ್ ಹೇಳಿದರು.

ನಾಗರಿಕ ಸಹಾಯ ಕೇಂದ್ರದ ಮೂಲಕ ‘ಒಂದೇ ಕಡೆ ಅರ್ಜಿ– ನಿಗದಿತ ಅಧಿಕಾರಿಗೆ ರವಾನೆ– ಕಾಲಮಿತಿಯಲ್ಲಿ ಪರಿಹಾರ– ನಿರಂತರ ಮೇಲ್ವಿಚಾರಣೆ– ನಾಗರಿಕರ ಪ್ರತಿಕ್ರಿಯೆ’ ಎಂಬ ಸಮಗ್ರ ವ್ಯವಸ್ಥೆ ರೂಪಿಸಲು ಉದ್ದೇಶಿಸಲಾಗಿದೆ ಎಂದರು.

ನಾಗರಿಕರಿಗೆ ಸರಳ, ವೇಗದ, ಪಾರದರ್ಶಕ ಹಾಗೂ ಜವಾಬ್ದಾರಿಯುತ ಸಾರ್ವಜನಿಕ ಸೇವೆ ಒದಗಿಸುವ ಉದ್ದೇಶದಿಂದ ತಂತ್ರಜ್ಞಾನ ಆಧಾರಿತ ವ್ಯವಸ್ಥೆಯನ್ನು ರೂಪಿಸುವ ಕುರಿತು ಸಭೆಯಲ್ಲಿ ಅಧಿಕಾರಿಗಳಿಗೆ ಹಲವು ನಿರ್ದೇಶನಗಳನ್ನು ನೀಡಿದರು.

ಆಸ್ತಿ ತೆರಿಗೆ, ನಗರ ಯೋಜನೆ, ರಸ್ತೆ ಮತ್ತು ಮೂಲಸೌಕರ್ಯ, ಘನತ್ಯಾಜ್ಯ ನಿರ್ವಹಣೆ, ಆರೋಗ್ಯ, ತೋಟಗಾರಿಕೆ, ವಿದ್ಯುತ್, ಟಿಡಿಆರ್, ಮಳೆನೀರು ಕಾಲುವೆ ಸೇರಿದಂತೆ ಪಾಲಿಕೆಯ ವಿವಿಧ ವಿಭಾಗಗಳಿಗೆ ಸಂಬಂಧಿಸಿದ ಅರ್ಜಿಗಳು, ಮನವಿಗಳು ಹಾಗೂ ದೂರುಗಳನ್ನು ಒಂದೇ ಸ್ಥಳದಲ್ಲಿ ಸ್ವೀಕರಿಸುವ ವ್ಯವಸ್ಥೆ ರೂಪಿಸಲು ಉದ್ದೇಶಿಸಲಾಗಿದೆ. ನಾಗರಿಕರು ಕಚೇರಿಗೆ ನೇರವಾಗಿ ಭೇಟಿ ನೀಡಿ ಅರ್ಜಿ ಸಲ್ಲಿಸುವುದರ ಜೊತೆಗೆ, ಅಂಚೆ, ಇ-ಮೇಲ್, ದೂರವಾಣಿ, ವಾಟ್ಸ್‌ಆ್ಯಪ್ ಹಾಗೂ ಸಾಮಾಜಿಕ ಜಾಲತಾಣಗಳ ಮೂಲಕ ಸಲ್ಲಿಸುವ ದೂರುಗಳನ್ನೂ ದಾಖಲಿಸಿಕೊಂಡು ಸಂಬಂಧಪಟ್ಟ ಇಲಾಖೆಗೆ ರವಾನಿಸಿ, ಕ್ರಮ ಕೈಗೊಳ್ಳುವ ವ್ಯವಸ್ಥೆಯನ್ನು ರೂಪಿಸಲಾಗುತ್ತದೆ ಎಂದು ಆಯುಕ್ತರು ತಿಳಿಸಿದರು.

ನಾಗರಿಕರು ಸಲ್ಲಿಸುವ ಪ್ರತಿಯೊಂದು ಅರ್ಜಿ ಹಾಗೂ ದೂರಿಗೂ ವಿಶಿಷ್ಟ ಸ್ವೀಕೃತಿ ಸಂಖ್ಯೆ ನೀಡುವ ವ್ಯವಸ್ಥೆ ಜಾರಿಗೆ ತರಲು ಉದ್ದೇಶಿಸಲಾಗಿದೆ. ಅರ್ಜಿಯೊಂದಿಗೆ ಸಲ್ಲಿಸಲಾಗುವ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಡಿಜಿಟಲ್ ರೂಪದಲ್ಲಿ ದಾಖಲಿಸಿಕೊಳ್ಳಲಾಗುತ್ತದೆ. ಸ್ವೀಕೃತಿ ಸಂಖ್ಯೆಯ ಮೂಲಕ ನಾಗರಿಕರು ತಮ್ಮ ಅರ್ಜಿಯ ಪ್ರಸ್ತುತ ಸ್ಥಿತಿ, ಯಾವ ವಿಭಾಗಕ್ಕೆ ರವಾನಿಸಲಾಗಿದೆ ಹಾಗೂ ಯಾವ ಅಧಿಕಾರಿಯ ಬಳಿ ಪರಿಶೀಲನೆಯಲ್ಲಿದೆ ಎಂಬ ಮಾಹಿತಿಯನ್ನು ತಿಳಿದುಕೊಳ್ಳಲು ಸಾಧ್ಯವಾಗುವಂತೆ ವ್ಯವಸ್ಥೆ ರೂಪಿಸಲಾಗುತ್ತದೆ ಎಂದು ಹೇಳಿದರು.

ನಾಗರಿಕ ಸಹಾಯ ಕೇಂದ್ರದ ಕಾರ್ಯನಿರ್ವಹಣೆಗೆ 24 ಗಂಟೆಯೂ ಕಾರ್ಯನಿರ್ವಹಿಸುವ ನಿಯಂತ್ರಣ ಕೊಠಡಿ ಸ್ಥಾಪಿಸಿ, ಸ್ವೀಕರಿಸಲಾದ ಅರ್ಜಿಗಳು ಹಾಗೂ ದೂರುಗಳನ್ನು ಸಂಬಂಧಪಟ್ಟ ವಿಭಾಗಗಳಿಗೆ ತಕ್ಷಣ ರವಾನಿಸುವುದರ ಜೊತೆಗೆ, ಅವುಗಳ ಪ್ರಗತಿಯನ್ನು ನಿರಂತರವಾಗಿ ಪರಿಶೀಲಿಸಲಾಗುತ್ತದೆ. ನಿಗದಿತ ಕಾಲಮಿತಿಯೊಳಗೆ ಸಮಸ್ಯೆ ಬಗೆ ಹರಿಯದಿದ್ದಲ್ಲಿ, ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದು ಅಗತ್ಯ ಕ್ರಮ ಕೈಗೊಳ್ಳುವಂತೆ ಮೇಲ್ವಿಚಾರಣೆ ನಡೆಸುವ ವ್ಯವಸ್ಥೆ ರೂಪಿಸಲಾಗುತ್ತದೆ ಎಂದರು.

ಸಮಸ್ಯೆ ಪರಿಹಾರವಾದ ಬಳಿಕ ನಾಗರಿಕರಿಂದ ಪ್ರತಿಕ್ರಿಯೆ ಪಡೆಯಲು ವ್ಯವಸ್ಥೆ ಕಲ್ಪಿಸಲಾಗುತ್ತದೆ. ಸಮರ್ಪಕ ಪರಿಹಾರ ದೊರೆತಿಲ್ಲವೆಂದು ತಿಳಿದು ಬಂದಲ್ಲಿ, ಅಂತಹ ಪ್ರಕರಣಗಳನ್ನು ಮೇಲ್ಮಟ್ಟದ ಪರಿಶೀಲನೆಗೆ ಕಳುಹಿಸಿ ಸೂಕ್ತ ಕ್ರಮ ಕೈಗೊಳ್ಳುವ ವ್ಯವಸ್ಥೆ ರೂಪಿಸಲಾಗುತ್ತದೆ ಎಂದು ಹೇಳಿದರು.

ನಾಗರಿಕರ ದೂರುಗಳನ್ನು ಸ್ವೀಕರಿಸಿ ಮುಂದಿನ ಇಲಾಖೆಗೆ ರವಾನಿಸುವುದಕ್ಕೆ ಸೀಮಿತವಾಗದೆ, ಪ್ರತಿಯೊಂದು ಅರ್ಜಿಯ ಪರಿಹಾರಕ್ಕೆ ಸಂಬಂಧಪಟ್ಟ ಅಧಿಕಾರಿಗಳ ಜವಾಬ್ದಾರಿಯನ್ನು ನಿಗದಿ ಪಡಿಸುವ ವ್ಯವಸ್ಥೆ ರೂಪಿಸಲಾಗುವುದು. ಪ್ರತಿಯೊಂದು ಅರ್ಜಿಗೂ ಸಂಬಂಧಪಟ್ಟ ವಿಭಾಗ, ಜವಾಬ್ದಾರಿಯುತ ಅಧಿಕಾರಿ ಹಾಗೂ ಪರಿಹಾರದ ನಿಗದಿತ ಕಾಲಮಿತಿಯನ್ನು ನಮೂದಿಸಿ, ನಿಗದಿತ ಅವಧಿಯೊಳಗೆ ಕ್ರಮ ಕೈಗೊಳ್ಳಲಾಗುತ್ತಿದೆಯೇ ಎಂಬುದನ್ನು ಮೇಲ್ವಿಚಾರಣೆ ಮಾಡುವ ವ್ಯವಸ್ಥೆ ಜಾರಿಗೆ ತರಲು ಉದ್ದೇಶಿಸಲಾಗಿದೆ ಎಂದು ಮಾಹಿತಿ ನೀಡಿದರು.

ಸಮಗ್ರ ಮೇಲ್ವಿಚಾರಣಾ ವ್ಯವಸ್ಥೆ

ನಾಗರಿಕ ಸಹಾಯ ಕೇಂದ್ರಕ್ಕೆ ಬಂದಿರುವ ಒಟ್ಟು ಅರ್ಜಿಗಳು, ಪರಿಹಾರಗೊಂಡ ಪ್ರಕರಣಗಳು, ಪ್ರಗತಿಯಲ್ಲಿರುವ ಅರ್ಜಿಗಳು ಹಾಗೂ ಬಾಕಿ ಇರುವ ಪ್ರಕರಣಗಳ ಸಂಪೂರ್ಣ ಮಾಹಿತಿಯನ್ನು ಒಂದೇ ಡ್ಯಾಶ್‌ಬೋರ್ಡ್ ಅಥವಾ ಮೇಲ್ವಿಚಾರಣಾ ವ್ಯವಸ್ಥೆಯ ಮೂಲಕ ವೀಕ್ಷಿಸಲು ಸಾಧ್ಯವಾಗುವಂತೆ ವ್ಯವಸ್ಥೆ ರೂಪಿಸಲಾಗುತ್ತದೆ ಎಂದು ಆಯುಕ್ತ ಡಿ.ಎಸ್‌. ರಮೇಶ್‌ ತಿಳಿಸಿದರು.

ಇದರಿಂದ ಪಾಲಿಕೆಯ ವಿವಿಧ ವಿಭಾಗಗಳಲ್ಲಿ ನಾಗರಿಕರ ಸಮಸ್ಯೆಗಳ ಪರಿಹಾರದ ಸ್ಥಿತಿಯನ್ನು ಹಿರಿಯ ಅಧಿಕಾರಿಗಳು ನಿರಂತರವಾಗಿ ಪರಿಶೀಲಿಸಲು ಸಾಧ್ಯವಾಗಲಿದೆ. ಬಾಕಿ ಇರುವ ಪ್ರಕರಣಗಳನ್ನು ಗುರುತಿಸಿ ಅವುಗಳ ಪರಿಹಾರಕ್ಕೆ ಅಗತ್ಯ ಕ್ರಮ ಕೈಗೊಳ್ಳಲು ಸಹಕಾರಿಯಾಗಲಿದೆ. ಇದರ ಮೂಲಕ ಸಾರ್ವಜನಿಕ ಸೇವೆಯಲ್ಲಿ ಪಾರದರ್ಶಕತೆ, ವೇಗ ಹಾಗೂ ಅಧಿಕಾರಿಗಳ ಜವಾಬ್ದಾರಿತನವನ್ನು ಮತ್ತಷ್ಟು ಹೆಚ್ಚಿಸಲು ಸಾಧ್ಯವಾಗಲಿದೆ ಎಂದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260809-4-775041176

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ