ಯಾದಗಿರಿ | ಅವಳಿ ಜಲಾಶಯಗಳ ಒಡಲು ಖಾಲಿ: ಭತ್ತ ಬೆಳೆಗಾರರಲ್ಲಿ ಆತಂಕ

ಯಾದಗಿರಿ | ಅವಳಿ ಜಲಾಶಯಗಳ ಒಡಲು ಖಾಲಿ: ಭತ್ತ ಬೆಳೆಗಾರರಲ್ಲಿ ಆತಂಕ

ಯಾದಗಿರಿ | ಅವಳಿ ಜಲಾಶಯಗಳ ಒಡಲು ಖಾಲಿ: ಭತ್ತ ಬೆಳೆಗಾರರಲ್ಲಿ ಆತಂಕ

ಯಾದಗಿರಿ: ಕಳೆದ ವರ್ಷದ ಜುಲೈ ಅಂತ್ಯದ ವೇಳೆಗೆ ಮೈದುಂಬಿದ್ದ ತಾಲ್ಲೂಕಿನ ಹತ್ತಿಕುಣಿ ಮತ್ತು ಸೌದಗಾರ ಜಲಾಶಗಳ ಒಡಲು ಈ ವರ್ಷ ಅರ್ಧ ಮುಂಗಾರು ಮುಗಿದರೂ ಭರ್ತಿಯಾಗಿಲ್ಲ. ಜಲಾಶಯ ನಂಬಿ ಭತ್ತ ನಾಟಿ ಮಾಡಿರುವ ರೈತರಲ್ಲಿ ಆತಂಕ ಮೂಡಿದೆ.

5,300 ಎಕರೆ ಕೃಷಿ ಭೂಮಿಗೆ ನೀರುಣಿಸುವ ಹತ್ತಿಕುಣಿ ಹಾಗೂ 3,501 ಎಕರೆ ಪ್ರದೇಶಕ್ಕೆ ನೀರುಣಿಸುವ ಸೌದಗಾರ ಜಲಾಶಯಗಳನ್ನು ಬೆಟ್ಟಗುಡ್ಡಗಳನ್ನು ಬಳಸಿ ನೀರಾವರಿ ಇಲಾಖೆಯು ಪರಸ್ಪರ ಅಭಿಮುಖವಾಗಿ ನಿರ್ಮಾಣ ಮಾಡಿದೆ.

0.352 ಟಿಎಂಸಿ ಅಡಿ ನೀರಿನ ಸಾಮರ್ಥ್ಯದ ಹತ್ತಿಕುಣಿ ಜಲಾಶಯವು ಹತ್ತಿಕುಣಿ, ಯಡ್ಡಳ್ಳಿ, ಹೊನಗೇರಾ, ಬಂದಳ್ಳಿ, ದಸ್ತರಾಬಾದ್, ಮಂಡರಗಿ ಸೇರಿದಂತೆ ಮತ್ತಿತರೆ ಗ್ರಾಮಗಳ ರೈತರ ಜೀವನಾಡಿಯಾಗಿದೆ. 0.28 ಟಿಎಂಸಿ ಅಡಿ ನೀರಿನ ಸಂಗ್ರಹ ಸಾಮರ್ಥ್ಯದ ಸೌದಗಾರ ಜಲಾಶಯವು ಸೌದಗಾರ ತಾಂಡಾ, ವಾರಿ ತಾಂಡಾ, ಹೊರುಂಚ, ಹೊರುಂಚ ತಾಂಡಾ ಸೇರಿದಂತೆ ಇತರೆ ಗ್ರಾಮಗಳ ಜಮೀನುಗಳಿಗೆ ನೀರುಣಿಸುತ್ತದೆ.

ಸೌದಗಾರ ಜಲಾಶಯದಿಂದ ನೀರು ಹರಿಸುವುದು ಸ್ಥಗಿತವಾಗಿದೆ. ಆದರೆ, ಹತ್ತಿಕುಣಿ ಜಲಾಶಯದ ಕಾಲವೆ ಗೇಟ್‌ಗಳನ್ನು ಎರಡ್ಮೂರು ಇಂಚು ಎತ್ತರಿಸಿ ಹರಿಸಲಾಗುತ್ತಿದೆ. ಕಾಲುವೆಗಳು ಬಹುತೇಕ ಶಿಥಿಲವಾಗಿದ್ದರಿಂದ ಜಲಾಶಯ ಸಮೀಪದ ಹತ್ತಿಕುಣಿ, ಯಡ್ಡಳ್ಳಿ ಗ್ರಾಮಗಳ ರೈತರು ಕಾಲುವೆ ನಂಬಿ ಭತ್ತ ನಾಟಿ ಮಾಡಿದ್ದಾರೆ. ಆದರೆ, ಜಲಾಶಯದಿಂದ ಕಾಲುವೆಗೆ ಸುಮಾರು 30 ದಿನಗಳ ಮಟ್ಟಿಗೆ ಹರಿಸುವಷ್ಟು ನೀರಿದೆ ಎನ್ನುತ್ತಾರೆ ಎಂಜಿನಿಯರ್‌ಗಳು.

‘30 ಅಡಿ ಇರುವ ಜಲಾಶಯದಲ್ಲಿ ಪ್ರಸ್ತುತ 6 ಅಡಿ ಮಾತ್ರ ನೀರಿದ್ದು, 4 ಅಡಿಯ ನಂತರ ಕಾಲುವೆಯಲ್ಲಿ ಹರಿವಿನ ರಭಸ ಕಡಿಮೆಯಾಗುತ್ತದೆ. ಮೋಟ್ನಹಳ್ಳಿ, ರಾಂಪುರ, ಹೊಸಳ್ಳಿ, ಕೊಟಗೇರಾ, ಚಿಂತಕುಂಟ, ನಾಚವಾರ, ಬಾರಿಗಿಡ ವ್ಯಾಪ್ತಿಯಲ್ಲಿ ಜೋರು ಮಳೆಯಾದರೆ ಮಾತ್ರವೇ ಜಲಾಶಯಕ್ಕೆ ನೀರು ಹರಿದು ಬರುತ್ತದೆ’ ಎನ್ನುತ್ತಾರೆ ಹತ್ತಿಕುಣಿ ನಿವಾಸಿ ಸಿದ್ದಣ್ಣ.

ಯಡ್ಡಳ್ಳಿಯ ಕೆಲವು, ಹೊನಗೇರಾ, ಬಂದಳ್ಳಿ, ದಸ್ತರಾಬಾದ್, ಕಟಗಿ ಶಹಾಪುರ, ಮಂಡರಗಿ ಗ್ರಾಮದ ರೈತರು ಕಾಲುವೆ ನಂಬಿ ಭತ್ತ ನಾಟಿಯನ್ನು ಕೈಬಿಟ್ಟಿದ್ದಾರೆ. ಮಳೆಯ ಕೊರತೆಯ ನಡುವೆಯೂ ಹತ್ತಿಕುಣಿ, ಯಡ್ಡಳ್ಳಿ ಭಾಗದ ಕೆಲವು ರೈತರು ಕಾಲುವೆ ನಂಬಿಕೊಂಡು ಭತ್ತ ನಾಟಿಯನ್ನು ಮಾಡಿದ್ದಾರೆ.

ನಾಟಿಯಾದ ಭತ್ತ ಕೆಲವೆಡೆ ಒಂದು ವಾರ ಕಳೆದರೆ, ಹಲವೆಡೆ ಎರಡ್ಮೂರು ವಾರಗಳಾಗಿದ್ದು, ಮತ್ತೆ ಕೆಲವೆಡೆ ಗದ್ದೆಗಳನ್ನು ನಾಟಿಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಮಳೆ ಬಂದು ಜಲಾಶಯದಲ್ಲಿ ನೀರಿನ ಸಂಗ್ರಹ ಹೆಚ್ಚಾದರೆ ಭತ್ತ ಫಸಲು ಕೈಗೆ ಬರುತ್ತದೆ. ಇಲ್ಲದಿದ್ದರೆ ಕೊಳವೆಬಾವಿಗಳ ಮೊರೆ ಹೋಗುವ ಸ್ಥಿತಿ ಇದ್ದು, ಕೊಳವೆಬಾವಿ ಇಲ್ಲದವರಲ್ಲಿ ಆತಂಕ ತೀವ್ರವಾಗಿದೆ.

ಗೋಚರಿಸಿದ ತಾಯಮ್ಮ ದೇವಸ್ಥಾನ

ಸೌದಗಾರ ಜಲಾಶಯದ ನಡುವಿನ ಕಲ್ಲು ಬಂಡಿಗಳ ಬದಿಯಲ್ಲಿ ಭಗ್ನ ಅವಶೇಷದಂತೆ ಇರುವ ತಾಯಮ್ಮ ದೇವಿಯ ದೇವಸ್ಥಾನದ ಕಲ್ಲಿನ ಕಂಬಗಳು, ಗೋಡೆಗಳು ಗೋಚರಿಸುತ್ತಿದ್ದು, ಮಳೆಯ ಕೊರತೆಯ ಗಂಭೀರತೆಯನ್ನು ಸಾರುತ್ತಿವೆ.

ಬೇಸಿಗೆ ಅವಧಿಯಲ್ಲಿ ನೀರು ಇಲ್ಲದೆ ದೇವಸ್ಥಾನದ ಅಳಿದು ಉಳಿದ ಜೋಡಿ ಕಂಬಗಳು ಕಾಣಿಸುವುದು ಸಾಮಾನ್ಯ. ಆದರೆ, ಈ ವರ್ಷ ಆಗಸ್ಟ್‌ ತಿಂಗಳು ಬಂದು ಒಂದು ವಾರ ಕಳೆದರೂ ಜಲಾಶಯದ ಒಡಲು ಬೇಸಿಗೆಯಂತೆ ಕಾಣಿಸುತ್ತಿದೆ. ಕಳೆದ ವರ್ಷ ಶ್ರಾವಣ ಮಾಸದ ವೇಳೆಗೆ ಭರ್ತಿಯಾಗಿ ಕೋಡಿ ಬಿದ್ದಿತ್ತು. ಈ ವರ್ಷ ಕಾಲುವೆಯ ಮಟ್ಟಕ್ಕೆ ನೀರು ನಿಂತಿವೆ’ ಎನ್ನುತ್ತಾರೆ ಸೌದಗಾರ ನಿವಾಸಿ ವೀರಸಿಂಗ್ ಚವ್ಹಾಣ್.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260809-30-1425997586

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ