
ಹಂಪಾಪುರ | ಹುಳು ಹಾವಳಿ: ತೆಂಗು ಫಸಲು ಕುಸಿತ, ಬೆಳೆಗಾರರಲ್ಲಿ ಆತಂಕ
ಹಂಪಾಪುರ: ಎಚ್.ಡಿ. ಕೋಟೆ ತಾಲ್ಲೂಕಿನ ಹಂಪಾಪುರ ಹೋಬಳಿ ವ್ಯಾಪ್ತಿಯಲ್ಲಿ ಕಪ್ಪುತಲೆಯ ಹುಳು (ಗರಿ ತಿನ್ನುವ ಹುಳು) ಬಾಧೆ ತೆಂಗಿನ ಬೆಳೆಗಾರರಿಗೆ ಹೊಸ ತಲೆನೋವಾಗಿ ಕಾಣಿಸಿಕೊಂಡಿದೆ.
ಹಂಪಾಪುರ, ಮಾದಾಪುರ, ಕರಿಗಳ, ಕೋಳಗಾಲ ಹಾಗೂ ಗಂಗಡ ಹೊಸಹಳ್ಳಿ ಮುಂತಾದ ಹಲವು ಗ್ರಾಮಗಳ ತೆಂಗಿನ ತೋಟಗಳಲ್ಲಿ ಈ ಕೀಟದ ಹಾವಳಿ ಹೆಚ್ಚುತ್ತಿದ್ದು, ರೈತರ ಆತಂಕಕ್ಕೆ ಕಾರಣವಾಗಿದೆ.
ಕೆಲವು ವಾರಗಳಿಂದ ಹಲವು ತೋಟಗಳಲ್ಲಿ ತೆಂಗಿನ ಮರಗಳ ಗರಿಗಳು ಹಳದಿ ಬಣ್ಣಕ್ಕೆ ತಿರುಗಿ ಒಣಗುತ್ತಿರುವುದು ಗಮನಕ್ಕೆ ಬಂದಿದೆ. ನಂತರ ಗರಿಗಳ ಹಸಿರು ಭಾಗವನ್ನು ಸಂಪೂರ್ಣವಾಗಿ ಕೆರೆದು ತಿನ್ನುವ ಈ ಕೀಟದ ಮರಿ ಹುಳುಗಳಿಂದ ಮರಗಳು ಸುಟ್ಟುಹೋದಂತೆ ಕಂಡುಬರುತ್ತಿದೆ. ಇದರಿಂದ ಮರದ ಆಹಾರ ತಯಾರಿ ಪ್ರಕ್ರಿಯೆ ( ದ್ಯುತಿಸಂಶ್ಲೇಷಣೆ) ಕುಂಠಿತಗೊಂಡು ಮರಗಳ ಬೆಳವಣಿಗೆ ಕುಸಿತ, ತೆಂಗಿನ ಕಾಯಿಗಳ ಸಂಖ್ಯೆ ಮತ್ತು ಗಾತ್ರದ ಮೇಲೂ ದುಷ್ಪರಿಣಾಮ ಉಂಟಾಗುತ್ತಿದೆ ಎಂದು ರೈತರು ತಿಳಿಸಿದ್ದಾರೆ.
ಎಚ್ಚರ ವಹಿಸಿ: ಕೀಟದ ಬಾಧೆ ಆರಂಭದಲ್ಲೇ ನಿಯಂತ್ರಿಸಿದರೆ ನಷ್ಟವನ್ನು ತಪ್ಪಿಸಬಹುದು. ಕೀಟದ ಲಕ್ಷಣಗಳು ಕಂಡುಬಂದ ಕೂಡಲೇ ಬಾಧಿತ ಗರಿಗಳ ಭಾಗವನ್ನು ಮಾತ್ರ ಕತ್ತರಿಸಿ ಸುಡಬೇಕು. ತೋಟದಲ್ಲಿ ಒಣ ಗರಿಗಳು ಹಾಗೂ ಕಸವನ್ನು ತೆರವುಗೊಳಿಸಿ ಸ್ವಚ್ಛತೆ ಕಾಪಾಡಬೇಕು. ಎಲ್ಲಾ ಗರಿಗಳನ್ನು ಒಮ್ಮೆಯೇ ಕತ್ತರಿಸುವುದು ಸರಿಯಲ್ಲ ಎಂದು ಎಂದು ತೋಟಗಾರಿಕೆ ಇಲಾಖೆ ತಿಳಿಸಿದೆ.
ಜೈವಿಕ ನಿಯಂತ್ರಣ: ಕೀಟಗಳನ್ನು ನಿಯಂತ್ರಿಸಲು ಜೈವಿಕ ಕ್ರಮ ಹೆಚ್ಚು ಪರಿಣಾಮಕಾರಿ ಎಂದು ಇಲಾಖೆ ತಿಳಿಸಿದೆ. ಮರಿಹುಳುಗಳ ಹಂತದಲ್ಲಿ ಗೋನಿಯೋಜಸ್ ನೆಫಾಂಟಿಡಿಸ್ ಪರಭಕ್ಷಕ ಜೀವಿಗಳನ್ನು ಪ್ರತಿ ಕೀಟಬಾಧಿತ ಮರಕ್ಕೆ 15 ರಿಂದ 20ರಂತೆ 15 ದಿನಗಳಿಗೊಮ್ಮೆ ಕನಿಷ್ಠ 4 ಬಾರಿ ಬಿಡುಗಡೆ ಮಾಡಬೇಕು. ಈ ಜೀವಿಗಳು ಮರಿಹುಳುಗಳನ್ನು ನಿಷ್ಕ್ರಿಯಗೊಳಿಸುತ್ತವೆ. ಮೊಟ್ಟೆಗಳನ್ನು ನಾಶಪಡಿಸಲು ಓರಿಯಸ್ ಟೆಂಟಿಲಸ್ ಪರಭಕ್ಷಕ ಕೀಟಗಳನ್ನು ಬಳಸಬಹುದು. ತೋಟಗಾರಿಕೆ ಇಲಾಖೆ ಸಂಪರ್ಕಿಸಬುದು ಎಂದು ಇಲಾಖೆ ತಿಳಿಸಿದೆ. ರಾಸಾಯನಿಕಗಳನ್ನು ತಜ್ಞರ ಸಲಹೆಯಂತೆ ಬಳಸಬೇಕು.
ಜಾಗೃತಿ ಅಗತ್ಯ : ಹಂಪಾಪುರ ಭಾಗದಲ್ಲಿ ತೆಂಗು ಪ್ರಮುಖ ವಾಣಿಜ್ಯ ಬೆಳೆಯಾಗಿರುವುದರಿಂದ ರೈತರು ತಮ್ಮ ತೋಟಗಳನ್ನು ನಿಯಮಿತವಾಗಿ ಪರಿಶೀಲಿಸಿ, ವೈಜ್ಞಾನಿಕ ನಿಯಂತ್ರಣ ಕ್ರಮಗಳನ್ನು ಅನುಸರಿಸುವುದು ಅಗತ್ಯವಾಗಿದೆ. ರೈತರ ಜಾಗೃತಿ, ಇಲಾಖೆಯ ಸಹಕಾರದಿಂದ ಮಾತ್ರ ಈ ಕೀಟದ ಹಾವಳಿಯನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಿಲು ಸಾಧ್ಯ.
ಕಪ್ಪುತಲೆಯ ಹುಳದ ಮರಿಹುಳುಗಳು ತೆಂಗಿನ ಗರಿಗಳ ಕೆಳಭಾಗದಲ್ಲಿ ತಮ್ಮ ಹಿಕ್ಕೆ ಹಾಗೂ ನೂಲಿನಿಂದ ಸುರಂಗದಂತಹ ರಕ್ಷಣಾತ್ಮಕ ಗೂಡು ನಿರ್ಮಿಸಿಕೊಂಡು ಅದರೊಳಗೆ ವಾಸಿಸುತ್ತವೆ. ಎಲೆಯ ಹಸಿರು ಭಾಗವನ್ನು ಕೆರೆದು ತಿನ್ನುತ್ತವೆ. ಆರಂಭದಲ್ಲಿ ಸಣ್ಣ ಬಿಳಿ ಗೆರೆಗಳಂತೆ ಕಾಣುವ ಹಾನಿ, ಕ್ರಮೇಣ ಸಂಪೂರ್ಣ ಗರಿಗೆ ವ್ಯಾಪಿಸಿ, ಗರಿಗಳು ಒಣಗಿ ಕಂದು ಬಣ್ಣಕ್ಕೆ ತಿರುಗುತ್ತವೆ. ಕೊನೆಗೆ ಮರಗಳು ಸುಟ್ಟಂತೆ ಕಾಣಿಸುತ್ತವೆ.
ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕಿ ನೇತ್ರಾವತಿ ಮಾಹಿತಿ ನೀಡಿ, ‘ಕಪ್ಪುತಲೆಯ ಹುಳು ಕಾಣಿಸಿಕೊಂಡ ತಕ್ಷಣ ರೈತರು ಇಲಾಖೆಯನ್ನು ಸಂಪರ್ಕಿಸುವುದು ಅತ್ಯಗತ್ಯ. ಆರಂಭಿಕ ಹಂತದಲ್ಲೇ ನಿಯಂತ್ರಣ ಕ್ರಮ ಕೈಗೊಂಡರೆ ಹೆಚ್ಚಿನ ಹಾನಿಯನ್ನು ತಪ್ಪಿಸಬಹುದು. ಪರೋಪಜೀವಿಗಳ ಬಿಡುಗಡೆ ಅತ್ಯಂತ ಪರಿಣಾಮಕಾರಿ ವಿಧಾನವಾಗಿದೆ. ರಾಸಾಯನಿಕ ಕೀಟನಾಶಕಗಳನ್ನು ತಜ್ಞರ ಸಲಹೆಯಿಲ್ಲದೆ ಬಳಸಬಾರದು’ ಎಂದಿದ್ದಾರೆ.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260809-38-1217637255