
ಮಾರುತಿ ವ್ಯಾಯಾಮ ಶಾಲೆಗೆ 75ರ ಸಂಭ್ರಮ: ಮಗ್ಗದ ನಾಡಿನಲ್ಲಿ ದೇಹದಾರ್ಢ್ಯ ಕಸರತ್ತು
ದೊಡ್ಡಬಳ್ಳಾಪುರ: ಮಗ್ಗಗಳ ಲಟ ಪಟ ಸದ್ದಿನ ನಡುವೆ ನಗರದ ಕಾರ್ಮಿಕ ವರ್ಗ ಹಾಗೂ ಯುವ ಜನತೆಗೆ ದೈಹಿಕ ಕಸರತ್ತು, ವ್ಯಾಯಾಮ ಹಾಗೂ ದೇಹದಾರ್ಢ್ಯದ ಹವ್ಯಾಸ ರೂಢಿಸಲು ಆರಂಭವಾದ ಕುಚ್ಚಪ್ಪನ ಪೇಟೆಯಲ್ಲಿರುವ ಮಾರುತಿ ವ್ಯಾಯಾಮ ಶಾಲೆಗೆ ಈಗ 75ರ ಸಂಭ್ರಮ.
ಮಗ್ಗಗಳಲ್ಲಿ ದುಡಿಯುವ ಯುವ ಜನರಿಗೆ ಹಾಗೂ ಶ್ರಮಿಕರಿಗೆ ದೈಹಿಕ ಶಕ್ತಿ, ಮಾನಸಿಕ ಚೈತನ್ಯ ನೀಡಲು 1951ರಲ್ಲಿ ಆರಂಭವಾದ ಶಾಲೆ ಈಗ ಅಮೃತ ಮಹೋತ್ಸವದ ಸಂಭ್ರಮದಲ್ಲಿದೆ. ಆಗಸ್ಟ್ 9ರಂದು ಅಮೃತ ಮಹೋತ್ಸವ ಆಚರಿಸಿಕೊಳ್ಳುತ್ತಿದ್ದು, ರಾಜ್ಯಮಟ್ಟದ ದೇಹದಾರ್ಢ್ಯ ಸ್ಪರ್ಧೆ ಆಯೋಜಿಸಿದೆ.
‘ಒಂದು ವ್ಯಾಯಾಮ ಶಾಲೆ ಕಟ್ಟಿದರೆ, ಹತ್ತು ಆಸ್ಪತ್ರೆ ಕಟ್ಟುವುದು ತಪ್ಪುತ್ತದೆ’ ಎಂಬ ಧ್ಯೇಯವಾಕ್ಯದೊಂದಿಗೆ ಆರಂಭವಾದ ಈ ವ್ಯಾಯಾಮ ಶಾಲೆ ಕೇವಲ ಕಸರತ್ತು ಮಾಡುವ ಸ್ಥಳವಾಗಿರದೆ ಹಲವು ತಲೆಮಾರುಗಳ ಸಾಮಾಜಿಕ ಸಾಮರಸ್ಯದ ಸಂಕೇತವಾಗಿದೆ. ಅಲ್ಲದೆ ಇಲ್ಲಿ ಸಾಂಪ್ರದಾಯಿಕ ಗರಡಿಯಿಂದ ಆಧುನಿಕ ಮಲ್ಟಿಜಿಮ್ ವ್ಯವಸ್ಥೆ ಇದೆ.
ಮಗ್ಗದ ಮುಂದೆ ದಿನಪೂರ್ತಿ ನಿಲ್ಲುವ ನೇಕಾರರು ವ್ಯಾಯಾಮ ಹಾಗೂ ದೈಹಿಕ ಕಸರತ್ತು ಮಾಡುವ ಮೂಲಕ ಆರೋಗ್ಯ ಕಾಪಾಡಿಕೊಳ್ಳಲಿ ಎಂಬ ಸದುದ್ದೇಶದಿಂದ ಪುರಸಭೆಯ ವಾಟರ್ ಆಪರೇಟರ್ ಹಾಗೂ ಕಸರತ್ತು ಪ್ರೇಮಿ ನಾರಾಯಣಮೂರ್ತಿ ಗರಡಿ ಆರಂಭಿಸಿದರು. ಮುಂದೆ ಸದಾಶಿವಯ್ಯ, ಬಿ.ಆರ್.ಪದ್ಮನಾಭ, ಡಿ.ಎಂ.ಚಂದ್ರಶೇಖರ್, ಗುರುರಾಜಪ್ಪ, ಎಂ.ಎನ್.ಶಿವಶಂಕರ್, ಎಂ.ಬಿ.ಗುರುದೇವ್ ಅವರಂತಹವರು ನೀರೆರೆದು ಬೆಳೆಸಿದರು.
ಅಂದಿನಿಂದಲೂ ಇಲ್ಲಿ ಅತ್ಯಂತ ಕಡಿಮೆ ಹಾಗೂ ರಿಯಾಯಿತಿ ದರದಲ್ಲಿ ವ್ಯಾಯಾಮ ಶಾಲೆಗೆ ಪ್ರವೇಶ ನೀಡಲಾಗುತ್ತಿದೆ. ಇಲ್ಲಿ ಕಸರತ್ತು ನಡೆಸಿದವರಲ್ಲಿ ಬಹುತೇಕ ಮಂದಿ ರಾಷ್ಟ್ರಮಟ್ಟದ ವೇಟ್‌ಲಿಫ್ಟಿಂಗ್, ಯೋಗ ಹಾಗೂ ದೇಹದಾರ್ಢ್ಯ ಪಟುವಾಗಿ ರೂಪುಗೊಂಡಿದ್ದಾರೆ.
ಆರಂಭದಲ್ಲಿ ಮಣ್ಣು, ಮಟ್ಟಿ, ಕರೋಲು ಮತ್ತು ಸಾಂಬ್ರಾಣಿ ಕಲ್ಲುಗಳಿಂದ ತರಬೇತಿ ನೀಡಲಾಗುತ್ತಿತ್ತು. ಕಾಲಕ್ರಮೇಣ ಡಂಬಲ್ಸ್, ಬಾರ್ ಬೆಲ್ಸ್, ಪ್ಯಾರಲೆಲ್ ಬಾರ್, ಬುಲ್ ವರ್ಕರ್ ಹಾಗೂ ಮಲ್ಟಿಜಿಮ್ ವರೆಗೂ ಆಧುನಿಕ ಉಪಕರಣ ಅಳವಡಿಸಲಾಗಿದೆ.
75 ವರ್ಷದಲ್ಲಿ ಅಸಂಖ್ಯಾತ ಯುವಕರು ವ್ಯಾಯಾಮ ಶಾಲೆಯ ಶಿಷ್ಯ ಬಳಗದಲ್ಲಿದ್ದಾರೆ. ಈ ಭಾಗದಿಂದ ರಾಷ್ಟ್ರಮಟ್ಟದ ವೇಟ್‌ಲಿಫ್ಟಿಂಗ್ ಹಾಗೂ ದೇಹದಾರ್ಢ್ಯ ಪಟುಗಳನ್ನು ಸಿದ್ಧಪಡಿಸಿದ ಕೀರ್ತಿ ಈ ಸಂಸ್ಥೆಗೆ ಸಲ್ಲುತ್ತದೆ. ಎಂ.ಎನ್.ಶಿವಶಂಕರ್, ಎ.ಪ್ರಭೂಜಿ, ಡಿ.ಎಲ್.ನರಸಿಂಹಮೂರ್ತಿ, ಎಂ.ಟಿ.ಬಾಲಕೃಷ್ಣ ಹಾಗೂ ನಯಾಜ್ ಪಾಷಾ ವೇಟ್ ಲಿಫ್ಟಿಂಗ್ ಸಾಧಕರು. ಪತ್ರಕರ್ತ ಕೆ.ವೆಂಕಟೇಶ್ ವ್ಯಾಯಾಮ ಶಾಲೆಯಲ್ಲಿ ಸತತ ಮೂರು ಬಾರಿ ಜೂನಿಯರ್ ಹಾಗೂ ಸೀನಿಯರ್ ಪುರಸ್ಕಾರಗಳನ್ನು ಪಡೆದಿದ್ದಾರೆ. ಲಕ್ಷ್ಮಣ ಮುಂತಾದವರು ರಾಜ್ಯ ಮಟ್ಟದಲ್ಲಿ ಯಶಸ್ಸು ಸಾಧಿಸಿದ ದೇಹದಾರ್ಢ್ಯ ಪಟುಗಳು ಇಲ್ಲಿಂದಲೇ ರೂಪುಗೊಂಡವರು.
ಸಾಂಪ್ರದಾಯಿಕ ಗರಡಿ ಶೈಲಿಯಿಂದ ಆರಂಭವಾಗಿ ಇಂದು ಆಧುನಿಕ ಜಿಮ್ ಸಾಧನಗಳವರೆಗೆ ಬೆಳೆದು ಬಂದಿದ್ದರೂ, ಪ್ರತಿಯೊಬ್ಬ ವಿದ್ಯಾರ್ಥಿ ಹಾಗೂ ಕಾರ್ಮಿಕನಿಗೆ ಕಡಿಮೆ ದರದಲ್ಲಿ ವ್ಯಾಯಾಮ ಶಾಲೆಗೆ ಪ್ರವೇಶ ನೀಡಲಾಗುತ್ತದೆ.
ಯೋಗ ವಿಭಾಗ: ಮಾರುತಿ ವ್ಯಾಯಾಮ ಶಾಲೆಯಲ್ಲಿ ಡಿ.ಎನ್.ರಾಮು ಮಾರ್ಗದರ್ಶನದಲ್ಲಿ ವಿಶೇಷ ಯೋಗ ತಂಡ ಕಟ್ಟಲಾಯಿತು. ಯೋಗಕ್ಕಾಗಿಯೇ ಪ್ರತ್ಯೇಕವಾದ ವಿಭಾಗವನ್ನು ತೆರೆಯಲಾಯಿತು. ಈ ವಿಭಾಗದ ಮೂಲಕ ತರಬೇತಿ ಪಡೆದ ಯೋಗ ಪಟುಗಳು ರಾಜ್ಯ ಹಾಗೂ ರಾಷ್ಟ್ರಮಟ್ಟದ ಸ್ಪರ್ಧೆಗಳಲ್ಲಿ ಪಾಲ್ಗೊಂಡು ಹಲವಾರು ಪ್ರಶಸ್ತಿ, ಬಿರುದು ಪಡೆದಿದ್ದಾರೆ. ಯೋಗ ವಿಭಾಗದ ಯಶಸ್ಸು ಮತ್ತು ಬೆಳವಣಿಗೆಯಲ್ಲಿ ಡಿ.ಸಿ.ಬಾಬು, ದಯಾನಂದ, ವಿ.ಎಲ್.ಪ್ರಕಾಶ್, ಎಲ್.ಎ.ಆದಿಪ್ರಕಾಶ್, ಭಾಸ್ಕರ್, ಕೆ.ಎನ್. ಮೋಹನ್ ಕುಮಾರ್ ಹಾಗೂ ಇತರ ಸಾಧಕರ ಪಾತ್ರ ಅತ್ಯಂತ ಪ್ರಮುಖವಾಗಿದೆ.
ಜಿ.ವಿಶ್ವನಾಥ್, ಕೆ.ಎಸ್.ಚಿಕ್ಕಣ್ಣ, ಡಿ.ಬಿ.ಶ್ರೀನಾಥ್, ಎಸ್.ದುರ್ಗಾ ಪ್ರಸಾದ್, ಎನ್.ಪ್ರಕಾಶ್, ಆರ್. ಮನೋಜ್, ಕೆ.ಮುರಳಿ, ಡಿ.ಎ.ನರಸಿಂಹ ಪ್ರಸಾದ್, ಎ.ಬಾಲು, ಬಿ.ತೇಜ, ಡಿ.ನಟರಾಜು ಮುಂತಾದವರು ವ್ಯಾಯಾಮ ಶಾಲೆಯ ನಿರ್ವಹಣೆಯ ಹೊಣೆ ಹೊತ್ತಿದ್ದಾರೆ.
‘ದೊಡ್ಡಬಳ್ಳಾಪುರದಂತಹ ನೇಯ್ಗೆ ಪ್ರಭಾವದ ಊರಿನಲ್ಲಿ ವ್ಯಾಯಮ ಶಾಲೆಯು 75 ವರ್ಷ ತಲುಪಿರುವುದು ಇಲ್ಲಿನ ಜನರ ಆರೋಗ್ಯ, ದೇಹದಾರ್ಢ್ಯತೆ ಕುರಿತಾದ ಆಸಕ್ತಿಗೆ ಸಾಕ್ಷಿ. ದೂಳು, ಕಲುಷಿತ ಗಾಳಿ, ಶಬ್ದ ಮಾಲಿನ್ಯ, ಅಪಾಯಕಾರಿ ತ್ಯಾಜ್ಯ ಹಾಗೂ ಅಶುದ್ಧ ಕುಡಿಯುವ ನೀರಿನಂತಹ ಬಾಹ್ಯ ವಾತಾವರಣ ನಮ್ಮ ಹಿಡಿತದಲ್ಲಿರುವುದಿಲ್ಲ. ಆದರೆ ನಮ್ಮ ಸ್ವಂತ ಆರೋಗ್ಯ ಕಾಪಾಡಿಕೊಳ್ಳುವುದು ನಮ್ಮ ಕೈಯಲ್ಲೇ ಇದೆ. ಅತ್ಯಂತ ಕಡಿಮೆ ಶುಲ್ಕದಲ್ಲಿ ಸೇವೆ ಒದಗಿಸುತ್ತಿರುವ ವ್ಯಾಯಾಮ ಶಾಲೆಯು ಪ್ರತಿಯೊಬ್ಬ ನಾಗರಿಕನಿಗೂ ಲಭ್ಯವಾಗಬೇಕು ಎನ್ನುವ ಸಂಸ್ಥಾಪಕರ ಉದ್ದೇಶವನ್ನು ಮುಂದಕ್ಕೆ ಕೊಂಡೊಯ್ಯುತ್ತಿದ್ದೇವೆ’ ಎನ್ನುತ್ತಾರೆ ಟ್ರಸ್ಟಿ ಎಂ.ಬಿ.ಗುರುದೇವ್.
ನಿಧಿ ಸಂಗ್ರಹಿಸಿದ್ದ ವರನಟ ರಾಜ್‌ಕುಮಾರ್
50ರ ದಶಕದಲ್ಲಿ ವರನಟ ರಾಜಕುಮಾರ್ ಅವರ ಹವ್ಯಾಸಿ ನಾಟಕ ತಂಡವು ‘ಮಣ್ಣಿನ ಮಗ’ ನಾಟಕದ ಪ್ರದರ್ಶನದಿಂದ ಸಂಗ್ರಹವಾದ ಧನಸಹಾಯದ ಉಳಿದ ಹಣದಲ್ಲಿ ವ್ಯಾಯಾಮ ಶಾಲೆಗೆ ಸ್ವಂತ ಜಾಗ ಖರೀದಿಸಿ, ಕಟ್ಟಡ ನಿರ್ಮಾಣ ಮಾಡಲಾಯಿತು.
ಲಾಭವಲ್ಲ: ಜನರ ಆರೋಗ್ಯವೇ ಗುರಿ
ಇಡೀ ದಿನ ಮಗ್ಗದ ಮುಂದೆ ನಿಂತು ಕೆಲಸ ಮಾಡುವ ನೇಕಾರರಿಗೆ ಸಂಜೆ ಒಂದಿಷ್ಟು ಸರಳ ವ್ಯಾಯಮ, ದೈಹಿಕ ಕಸರತ್ತು ಮಾಡಿದರೆ ಆರೋಗ್ಯವಾಗಿರಲು ಸಾಧ್ಯ ಎನ್ನುವ ಉದ್ದೇಶದಿಂದ ಮಾರುತಿ ವ್ಯಾಯಾಮ ಶಾಲೆ ಆರಂಭವಾಯಿತು.
ನೇಕಾರರು, ಕೂಲಿ ಕಾರ್ಮಿಕರು ಹೆಚ್ಚಾಗಿ ಬರುವ ಕಾರಣಕ್ಕೆ ಕಡಿಮೆ ಶುಲ್ಕ ವಿಧಿಸಲಾಗುತ್ತಿದೆ. ಲಾಭದ ಉದ್ದೇಶ ಇಲ್ಲದೆ ಜನರ ಆರೋಗ್ಯ ಮತ್ತು ಕ್ಷೇಮದ ಗುರಿ ಹೊಂದಲಾಗಿದೆ. ಈ ಹಿಂದೆ ₹1 ಪ್ರವೇಶ ದರ ಏರಿಕೆ ಮಾಡಬೇಕಾದರೂ ವ್ಯಾಯಾಮ ಶಾಲೆಯ ಸರ್ವ ಸದಸ್ಯರ ಸಭೆ ಕರೆಯಲಾಗಿತ್ತು. ಈಗಲೂ ದರ ಏರಿಕೆ ಮಾಡಬೇಕಾದರೆ ಸರ್ವ ಸದಸ್ಯರ ಸಭೆ ಕರೆಯಲಾಗುತ್ತದೆ. ಶಾಲೆಯ ನಿರ್ವಹಣೆಗೆ ಬೇಕಾಗುವಷ್ಟು ಹಣದ ಲೆಕ್ಕಚಾರದ ಮೇಲೆ ಜನರಿಗೆ ಅತಿ ಕಡಿಮೆ ಪ್ರವೇಶ ಶುಲ್ಕ ನಿಗದಿ ಪಡಿಸಲಾಗಿದೆ ಎಂದು ಶಾಲೆಯ ಮಾಜಿ ಕಾರ್ಯದರ್ಶಿ ಕೆ.ವೆಂಕಟೇಶ್ ತಿಳಿಸಿದರು.
ರಾಜ್ಯಮಟ್ಟದ ಸ್ಪರ್ಧೆ ಇಂದು
ಮಾರುತಿ ವ್ಯಾಯಾಮ ಶಾಲೆ ಅಮೃತ ಮಹೋತ್ಸವ ಅಂಗವಾಗಿ ಆ. 9ರಂದು ಕೆ.ಎಂ.ಎಚ್ ಕನ್ವೆಂಷನ್ ಹಾಲ್‌ನಲ್ಲಿ ರಾಜ್ಯಮಟ್ಟದ ದೇಹದಾರ್ಢ್ಯ ಸ್ಪರ್ಧೆ ನಡೆಸುತ್ತಿದೆ.
ರಾಜ್ಯದ ವಿವಿಧ ಭಾಗಗಳಿಂದ 100ಕ್ಕೂ ಹೆಚ್ಚು ದೇಹದಾರ್ಢ್ಯಪಟುಗಳು ಭಾಗವಹಿಸಲಿದ್ದಾರೆ. ಸಂಜೆ 6.30ಕ್ಕೆ ನಡೆಯಲಿರುವ ಸಮಾರಂಭದಲ್ಲಿ ಶಾಸಕ ಧೀರಜ್ ಮುನಿರಾಜು ಬಹುಮಾನ ವಿತರಣೆ ಮಾಡಲಿದ್ದಾರೆ.
ವ್ಯಾಯಾಮ ಶಾಲೆಗೆ ಬರುವವರು ಶಿಸ್ತಿಗೆ ಬದ್ಧವಾಗಿರಬೇಕು. ಧೂಮಪಾನ, ಗುಟ್ಕ, ಮದ್ಯಪಾನ ಸೇವನೆ ಮಾಡಿ ಬಂದವರಿಗೆ ಇಲ್ಲಿ ಪ್ರವೇಶವಿಲ್ಲ. ಯುವಕರನ್ನು ದುಶ್ಚಟಗಳಿಂದ ಮುಕ್ತವಾಗಿಸಿ, ಉತ್ತಮ ನಾಗರಿಕರಾಗಿ ರೂಪಿಸಲು ಮಾರುತಿ ವ್ಯಾಯಾಮ ಶಾಲೆ ಬುದ್ಧವಾಗಿದೆ.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260809-15-1369513333