ಶಿರಸಿ | ಮಳೆಗೆ ಸೋರುತಿದೆ ಗಣೇಶನಗರದ ‘ನಮ್ಮ ಕ್ಲಿನಿಕ್’: ರೋಗಿಗಳಿಗೆ ತೊಂದರೆ

ಶಿರಸಿ | ಮಳೆಗೆ ಸೋರುತಿದೆ ಗಣೇಶನಗರದ  ‘ನಮ್ಮ ಕ್ಲಿನಿಕ್’: ರೋಗಿಗಳಿಗೆ ತೊಂದರೆ

ಶಿರಸಿ | ಮಳೆಗೆ ಸೋರುತಿದೆ ಗಣೇಶನಗರದ ‘ನಮ್ಮ ಕ್ಲಿನಿಕ್’: ರೋಗಿಗಳಿಗೆ ತೊಂದರೆ

ಶಿರಸಿ: ಇಲ್ಲಿನ ಗಣೇಶನಗರ ಬಸ್ ನಿಲ್ದಾಣದ ಆವರಣದಲ್ಲಿ ಕಾರ್ಯ ನಿರ್ವಹಿಸುತ್ತಿರುವ ನಮ್ಮ ಕ್ಲಿನಿಕ್ ಕಟ್ಟಡವು ಮಳೆಗೆ ಸೋರುತ್ತಿದ್ದು, ಚಿಕಿತ್ಸೆಗೆ ಬರುವ ರೋಗಿಗಳು ಹಾಗೂ ಆಸ್ಪತ್ರೆಯ ಸಿಬ್ಬಂದಿ ತೊಂದರೆ ಎದುರಿಸುವಂತಾಗಿದೆ.

ವಾಯವ್ಯ ರಸ್ತೆ ಸಾರಿಗೆ ಸಂಸ್ಥೆಯ ಶಿರಸಿ ವಿಭಾಗದಿಂದ ವರ್ಷದಿಂದೀಚೆಗೆ ಗಣೇಶನಗರದ ಬಸ್ ನಿಲ್ದಾಣದಲ್ಲಿ ಬಾಡಿಗೆ ಆಧಾರದಲ್ಲಿ ಕೊಠಡಿಗಳನ್ನು ಪಡೆದು ನಮ್ಮ ಕ್ಲಿನಿಕ್ ನಡೆಸಲಾಗುತ್ತಿದೆ. ಈ ಕಟ್ಟಡಕ್ಕಾಗಿ ಆರೋಗ್ಯ ಇಲಾಖೆಯು ಮಾಸಿಕ ₹14 ಸಾವಿರ ಬಾಡಿಗೆ ಹಾಗೂ ತೆರಿಗೆ ಪಾವತಿಸುತ್ತಿದೆ.

ಮಳೆಗಾಲ ಆರಂಭದಿಂದಲೇ ಕಟ್ಟಡದ ಚಾವಣಿಯಿಂದ ನೀರು ಸೋರಲು ಪ್ರಾರಂಭವಾಗಿದೆ. ಕ್ಲಿನಿಕ್‌ನಲ್ಲಿ ಅಲ್ಲಲ್ಲಿ ನೀರು ಸೋರುತ್ತಿರುವುದರಿಂದ ಬೆಲೆಬಾಳುವ ವೈದ್ಯಕೀಯ ಉಪಕರಣಗಳು ಮತ್ತು ರೋಗಿಗಳಿಗೆ ವಿತರಿಸಲು ಇಟ್ಟಿರುವ ಔಷಧಗಳು ಹಾಳಾಗುವ ಭೀತಿ ಎದುರಾಗಿದೆ ಎಂಬುದಾಗಿ ಇಲ್ಲಿನ ಸಿಬ್ಬಂದಿ ಹೇಳುತ್ತಾರೆ.

‘ದಿನನಿತ್ಯ ನೂರಾರು ಬಡ ಹಾಗೂ ಮಧ್ಯಮ ವರ್ಗದ ರೋಗಿಗಳು ಉಚಿತ ವೈದ್ಯಕೀಯ ಸೇವೆಗಾಗಿ ಈ ಕ್ಲಿನಿಕ್‌ಗೆ ಬರುತ್ತಾರೆ. ಕಟ್ಟಡದೊಳಗೆ ನೀರು ಸೋರುತ್ತಿರುವುದರಿಂದ ರೋಗಿಗಳು ಕುಳಿತುಕೊಳ್ಳಲು ಮತ್ತು ವೈದ್ಯರು ಪರೀಕ್ಷೆ ನಡೆಸಲು ಕಷ್ಟವಾಗಿದೆ. ಚಾವಣಿಯಿಂದ ನಿರಂತರವಾಗಿ ಸೋರುವ ನೀರಿನಿಂದಾಗಿ ಇಡಿ ಆವರಣದಲ್ಲಿ ತೇವಾಂಶ ಹೆಚ್ಚಿದ್ದು, ಸೋಂಕಿನ ಅಪಾಯವೂ ಕಾಡುತ್ತಿದೆ’ ಎಂಬುದು ಅವರ ದೂರು.

‘ಕಟ್ಟಡದ ದುರಸ್ತಿ ಹಾಗೂ ಸೋರಿಕೆ ತಡೆಯುವ ಕುರಿತು ಸಂಬಂಧಪಟ್ಟ ಆರೋಗ್ಯ ಇಲಾಖೆಯ ಮೇಲಧಿಕಾರಿಗಳಿಗೆ ಹಾಗೂ ಕಟ್ಟಡದ ಮಾಲೀಕತ್ವ ಹೊಂದಿರುವ ಸಾರಿಗೆ ಸಂಸ್ಥೆಯ ಅಧಿಕಾರಿಗಳಿಗೆ ಈಗಾಗಲೇ ಮಾಹಿತಿ ನೀಡಲಾಗಿದೆ. ಆದಾಗ್ಯೂ, ಈವರೆಗೆ ದುರಸ್ತಿ ಕಾರ್ಯಗಳು ನಡೆದಿಲ್ಲ. ನಿರಂತರ ಮಳೆಯಿಂದಾಗಿ ದಿನದಿಂದ ದಿನಕ್ಕೆ ಸಮಸ್ಯೆ ಇನ್ನಷ್ಟು ಉಲ್ಬಣಗೊಳ್ಳುತ್ತಿದೆ’ ಎನ್ನುತ್ತಾರೆ ಹೆಸರು ಹೇಳಲಿಚ್ಛಿಸದ ಸಿಬ್ಬಂದಿ.

‘ಗಣೇಶನಗರ ಬಸ್ ನಿಲ್ದಾಣದ ಕಟ್ಟಡವು ಬಹುತೇಕ ಕಡೆ ಸಂಪೂರ್ಣ ಸೋರುತ್ತಿದೆ. ಹಲವು ವರ್ಷಗಳಿಂದ ಸಮಸ್ಯೆ ಇದ್ದರೂ, ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ನಿರ್ವಹಣೆ ಕೈಗೊಳ್ಳದೆ ನಿರ್ಲಕ್ಷಿಸಿದ್ದಾರೆ. ನಮ್ಮ ಕ್ಲಿನಿಕ್ ಕಟ್ಟಡವೂ ಈಗ ಮಳೆಗೆ ಸೋರುತ್ತಿದೆ. ಮಾಸಿಕ ಬಾಡಿಗೆ ಪಡೆಯುತ್ತಿರುವ ವಾಯುವ್ಯ ರಸ್ತೆ ಸಾರಿಗೆ ಸಂಸ್ಥೆಯು ಚಾವಣಿ ದುರಸ್ತಿಗೊಳಿಸಬೇಕು’ ಎನ್ನುತ್ತಾರೆ ಸ್ಥಳೀಯ ಸಾಮಾಜಿಕ ಕಾರ್ಯಕರ್ತ ಮಂಜುನಾಥ ನಾಯ್ಕ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260821-20-571831197

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ