ಕಾರವಾರ | ಎಸ್‌ಐಆರ್: ಶೇ 8ರಷ್ಟು ಮತದಾರರಿಗೆ ಕೊಕ್‌

ಕಾರವಾರ | ಎಸ್‌ಐಆರ್: ಶೇ 8ರಷ್ಟು ಮತದಾರರಿಗೆ ಕೊಕ್‌

ಕಾರವಾರ | ಎಸ್‌ಐಆರ್: ಶೇ 8ರಷ್ಟು ಮತದಾರರಿಗೆ ಕೊಕ್‌

ಕಾರವಾರ: ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆಯ (ಎಸ್‌ಐಆರ್) ಮೊದಲ ಹಂತವಾಗಿ ಎನ್ಯುಮರೇಶನ್ ಅರ್ಜಿ ಸಂಗ್ರಹ ಮುಕ್ತಾಯಗೊಂಡಿದೆ. ಜಿಲ್ಲೆಯ ಒಟ್ಟೂ ಮತದಾರರ ಪೈಕಿ ಶೇ 8ರಷ್ಟು ಮತದಾರರು ಪಟ್ಟಿಯಿಂದ ಹೊರಬಿದ್ದಿದ್ದಾರೆ.

ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳ 12,30,037 ಮತದಾರರಲ್ಲಿ 1,06,994 ಮತದಾರರನ್ನು ವಿವಿಧ ಕಾರಣಗಳಿಂದ ಪಟ್ಟಿಯಿಂದ ಕೈಬಿಡಲಾಗಿದೆ. ಉದ್ಯೋಗ, ಉದ್ಯಮ ಸೇರಿದಂತೆ ಜಿಲ್ಲೆ ಬಿಟ್ಟು ಹೊರಗೆ ತೆರಳಿದ 45,579 ಮತದಾರರು ಜಿಲ್ಲೆಯಲ್ಲಿ ಮತ ಚಲಾಯಿಸುವ ಹಕ್ಕು ಕಳೆದುಕೊಳ್ಳಲಿದ್ದಾರೆ.

ಎನ್ಯುಮರೇಶನ್ ಅರ್ಜಿಗಳ ಡಿಜಿಟಲೀಕರಣ ಪ್ರಕ್ರಿಯೆ ಬಳಿಕ ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ ಕಾರವಾರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲೇ 24,419 ಮತದಾರರ ಹೆಸರು ಕೈಬಿಟ್ಟಿರುವುದಾಗಿ ತಿಳಿಸಲಾಗಿದೆ. ಅವರ ಪೈಕಿ 8,879 ಮತದಾರರು ವಲಸೆ ಹೋಗಿದ್ದಾಗಿಯೂ ತಿಳಿಸಲಾಗಿದೆ.

‘ಅವಧಿ ಪೂರ್ಣಗೊಳ್ಳುವ ಮುನ್ನವೇ ಜಿಲ್ಲೆಯಲ್ಲಿ ಮತಗಟ್ಟೆ ಅಧಿಕಾರಿಗಳು ಎನ್ಯುಮರೇಶನ್ ಅರ್ಜಿ ಸಂಗ್ರಹಿಸಿ, ಡಿಜಿಟಲೀಕರಣ ಪ್ರಕ್ರಿಯೆ ಮುಗಿಸಿದ್ದಾರೆ. ನಿರೀಕ್ಷೆಗೂ ಮೀರಿ ತ್ವರಿತವಾಗಿ ಈ ಪ್ರಕ್ರಿಯೆ ನಡೆಸಲಾಗಿದೆ. 12.30 ಲಕ್ಷ ಮತದಾರರ ಪೈಕಿ 1.06 ಮತದಾರರು ಪಟ್ಟಿಯಿಂದ ಹೊರಹೋಗಲಿದ್ದು, ಅವರ ಪೈಕಿ ಕಳೆದ ಮೂರು ವರ್ಷಗಳಿಂದ ಈಚೆಗೆ ಮೃತರಾದ 44 ಸಾವಿರದಷ್ಟು ಮತದಾರರಿದ್ದಾರೆ. ಮೃತಪಟ್ಟವರ ಸಂಖ್ಯೆಗಿಂತ ಶಾಶ್ವತವಾಗಿ ವಲಸೆ ಹೋದರೂ ಇಲ್ಲಿನ ಮತದಾರರ ಪಟ್ಟಿಯಲ್ಲಿ ಹೆಸರಿದ್ದವರ ಸಂಖ್ಯೆ ಅಧಿಕವಾಗಿತ್ತು’ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

‘ಎಸ್ಐಆರ್ ಪ್ರಕ್ರಿಯೆ ವೇಳೆ ಒಂದಕ್ಕಿಂತ ಹೆಚ್ಚು ಕಡೆಗಳಲ್ಲಿ ಮತದಾನದ ಹಕ್ಕು ಹೊಂದಿದ 12,726 ಮಂದಿಯನ್ನು ಪತ್ತೆ ಹಚ್ಚಲಾಗಿದೆ. ಅಂತಹವರ ಹೆಸರನ್ನೂ ಪಟ್ಟಿಯಿಂದ ಕೈಬಿಡಲಾಗುತ್ತಿದೆ. ಜಿಲ್ಲೆಯಿಂದ ಹೊರಗೆ, ಅವರು ಇರುವ ಸ್ಥಳದಲ್ಲಿ ಅವರ ಮತದ ಹಕ್ಕು ಉಳಿದುಕೊಳ್ಳಲಿದೆ’ ಎಂದರು.

‘ಎಸ್ಐಆರ್ ಪ್ರಕ್ರಿಯೆ ಮೂಲಕ 1.06 ಲಕ್ಷ ಮತದಾರರು ಪಟ್ಟಿಯಿಂದ ಕೈಬಿಡಲಾಗುತ್ತಿರುವುದು ಮುಂಬರುವ ಚುನಾವಣೆಗಳ ಫಲಿತಾಂಶದ ಮೇಲೂ ಪರಿಣಾಮ ಬೀರಬಹುದು. ಪ್ರತಿ ಚುನಾವಣೆಗಳಲ್ಲಿ ಸರಾಸರಿ ಶೇ 75–80ರಷ್ಟು ಮತದಾನ ನಡೆಯುತ್ತಿತ್ತು. ಬಹುತೇಕ ವಿಧಾನಸಭಾ ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವವರು ಅಲ್ಪ ಅಂತರದಲ್ಲಿ ಗೆಲುವು ಸಾಧಿಸಿದ್ದೇ ಹೆಚ್ಚು. ಕಾರವಾರ, ಹಳಿಯಾಳ ಕ್ಷೇತ್ರದಲ್ಲಿ ನಿರ್ಣಾಯಕ ಪ್ರಮಾಣ ಮತಗಳು ಪಟ್ಟಿಯಿಂದ ಹೊರಬಿದ್ದಿದೆ. ಎಲ್ಲ ಕ್ಷೇತ್ರಗಳಲ್ಲಿಯೂ ಮತಗಳ ಸಂಖ್ಯೆ 12 ಸಾವಿರಕ್ಕಿಂತ ಹೆಚ್ಚು ಕಡಿತಗೊಂಡಿರುವುದು ರಾಜಕೀಯ ಮುಖಂಡರ ಲೆಕ್ಕಾಚಾರ ತಲೆಕೆಳಗು ಮಾಡಲಿದೆ’ ಎಂದು ರಾಜಕೀಯ ವಿಶ್ಲೇಷಕ ಬಿ.ಎಸ್.ಜಗದೀಶ್ ಹೇಳಿದರು.

ಮರಳದ 4 ಸಾವಿರದಷ್ಟು ಅರ್ಜಿ

ಮತದಾರರ ಮನೆ ಮನೆಗೆ ವಿತರಿಸಿದ್ದ 4,645 ಅರ್ಜಿಗಳು ಮತಗಟ್ಟೆ ಅಧಿಕಾರಿಗಳಿಗೆ ಮರಳಿಸಿಲ್ಲ. ಅವರನ್ನು ಗೈರು ಮತದಾರರು ಎಂದು ಪರಿಗಣಿಸಲಾಗುತ್ತದೆ ಎಂಬುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

‘ಎನ್ಯುಮರೇಶನ್ ಅರ್ಜಿ ತ್ವರಿತವಾಗಿ ವಿತರಿಸುವ ಭರದಲ್ಲಿ ಬೀಗ ಹಾಕಿದ್ದ ಮನೆಗಳ ಒಳಗೆ ಮತಗಟ್ಟೆ ಅಧಿಕಾರಿಗಳು ಅರ್ಜಿ ಎಸೆದು ಬಂದಿದ್ದರು. ಆದರೆ, ಯಾರೊಬ್ಬರೂ ಇಲ್ಲದ್ದರಿಂದ, ಮತದಾರರು ಬಿಎಲ್‌ಎಗಳ ಸಂಪರ್ಕಕ್ಕೂ ಸಿಗದಿದ್ದರಿಂದ ಅರ್ಜಿ ಹಿಂಪಡೆಯಲು ಸಾಧ್ಯವಾಗಿಲ್ಲ. ಕಾರವಾರದಲ್ಲೇ 1,725 ಅರ್ಜಿ, ಹಳಿಯಾಳದಲ್ಲಿ 1,062 ಅರ್ಜಿ ಮರಳಿ ಸಿಕ್ಕಿಲ್ಲ’ ಎಂದು ಅಧಿಕಾರಿಯೊಬ್ಬರು ಹೇಳಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260821-20-1336547118

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ