ಸಿಡ್ನಿಯಲ್ಲಿ ಎಂಟಿಆರ್ ಶಾಖೆ: ಆಸ್ಟ್ರೇಲಿಯಾದಲ್ಲೂ ಸಿಗಲಿದೆ ಬೆಂಗಳೂರಿನ ರುಚಿ
ಬೆಂಗಳೂರಿನ ಪ್ರಸಿದ್ಧ ರೆಸ್ಟೊರೆಂಟ್‌ಗಳಲ್ಲಿ ಒಂದಾದ ಮಾವಳ್ಳಿ ಟಿಫನ್ ರೂಮ್ಸ್ (ಎಂಟಿಆರ್) ತನ್ನ ಉದ್ಯಮವನ್ನು ವಿಸ್ತರಿಸಿದ್ದು, ಸಿಡ್ನಿಯಲ್ಲಿ ಹೊಸ ಪ್ರಾಂಚೈಸಿ ತೆರೆದಿದೆ. ಆ ಮೂಲಕ ಆಸ್ಟ್ರೇಲಿಯಾದ ಆಹಾರ ಪ್ರೀಯರಿಗೆ ದೋಸೆ, ಫಿಲ್ಟರ್ ಕಾಫಿ ಹಾಗೂ ದಕ್ಷಿಣ ಭಾರತದ ಖಾದ್ಯಗಳನ್ನು ಉಣಬಡಿಸುತ್ತಿದೆ.
ಆಸ್ಟ್ರೇಲಿಯಾದ ಸಂಸತ್ ಸದಸ್ಯ ಜುಲಿಯನ್ ಹಿಲ್ ಎಂಟಿಆರ್‌ಗೆ ಭೇಟಿ ನೀಡಿದ್ದು, ಅಲ್ಲಿ ದೋಸೆ, ಮೆದುವಡೆ ಹಾಗೂ ಫಿಲ್ಟರ್ ಕಾಫಿ ಸವಿದಿದ್ದಾರೆ. ಇದನ್ನು ಅವರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
‘ಎಂಟಿಆರ್ ಆಸ್ಟ್ರೇಲಿಯಾಗೆ ಬಂದಿದೆ. 100 ವರ್ಷಗಳಿಗೂ ಅಧಿಕ ಇತಿಹಾಸ ಹೊಂದಿರುವ ಬೆಂಗಳೂರಿನ ಐತಿಹಾಸಿಕ ಉಪಹಾರ ಮಂದಿರ ಮಾವಳ್ಳಿ ಟಿಫಿನ್ ರೂಮ್ಸ್ (ಎಂಟಿಆರ್) ತನ್ನ ಫ್ರಾಂಚೈಸಿಯನ್ನು ಸಿಡ್ನಿಯಲ್ಲಿ ಆರಂಭಿಸಿದೆ’ ಎಂದು ಬರೆದುಕೊಂಡಿದ್ದಾರೆ.
‘ನಿಜವಾಗಿಯೂ ಇದು ಅದ್ಭುತ ದೋಸೆ’ ಎಂದು ಹರ್ಷ ವ್ಯಕ್ತಪಡಿಸಿರುವ ಅವರು, ರೆಸ್ಟೋರೆಂಟ್‌ನ ಅಡುಗೆಮನೆಗೆ ಭೇಟಿ ನೀಡಿ ಅಲ್ಲಿನ ಸಿಬ್ಬಂದಿಯೊಂದಿಗೆ ಮಾತುಕತೆ ನಡೆಸಿದ್ದಾರೆ. ಪಾಕ ಪದ್ಧತಿಯ ಬಗ್ಗೆ ತಿಳಿದುಕೊಂಡಿದ್ದಾರೆ. ಅದರ ಚಿತ್ರಗಳೂ ಅವರ ಪೋಸ್ಟ್‌ನಲ್ಲಿವೆ.
ಸಿಡ್ನಿಯಲ್ಲಿ ಆರಂಭವಾಗಿದ್ದು ಆಸ್ಟ್ರೇಲಿಯಾದ ಮೊದಲ ಫ್ರಾಂಚೈಸಿಯಾಗಿದ್ದು, ಈಗಾಗಲೇ ಎಂಟಿಆರ್‌ಗೆ ಕಠ್ಮಂಡು, ದಬೈ, ಕೌಲಾಲಂಪುರ, ಬ್ಯಾಂಕಾಕ್, ಸಿಂಗಪುರ, ಯುಕೆ ಹಾಗೂ ಅಮೆರಿಕದಲ್ಲಿ ಶಾಖೆಗಳಿವೆ.