
ಬೆಂಗಳೂರು: ನೈಸ್ ರಸ್ತೆಯಲ್ಲಿ ಬಿಎಂಟಿಸಿ ಸುಲಿಗೆ
ಬೆಂಗಳೂರು: ಶಾಲಾ ಕಾಲೇಜುಗಳಿಗೆ ಹೋಗುವ ಬಾಲಕಿಯರಿಗೆ ಅಷ್ಟೇ ಅಲ್ಲ, ಬಾಲಕರಿಗೂ ಬಸ್ ಪ್ರಯಾಣ ಉಚಿತ ಎಂದು ಸರ್ಕಾರ ಘೋಷಣೆ ಮಾಡಿದ್ದರೂ ನೈಸ್ ರಸ್ತೆಯಲ್ಲಿ ಬಿಎಂಟಿಸಿ ಬಸ್‌ಗಳಲ್ಲಿ ಸಂಚರಿಸುವ ಬಾಲಕರಿಂದ ಟೋಲ್ ಹೆಸರಲ್ಲಿ ದುಬಾರಿ ಮೊತ್ತವನ್ನು ವಸೂಲಿ ಮಾಡಲಾಗುತ್ತಿದೆ.
‘ಶಕ್ತಿ’ ಯೋಜನೆಯಡಿ ವಿದ್ಯಾರ್ಥಿನಿಯರಿಗೆ ಉಚಿತ ಪ್ರಯಾಣದ ಸೌಲಭ್ಯ ಇದೆ. ಅವರಿಗೆ ಯಾವುದೇ ಟೋಲ್ ಶುಲ್ಕ ಇಲ್ಲ. ಇಲ್ಲಿವರೆಗೆ ವಿದ್ಯಾರ್ಥಿಗಳಿಗೆ ರಿಯಾಯಿತಿ ದರದಲ್ಲಿ ಪಾಸ್‌ಗಳನ್ನು ನೀಡಲಾಗುತ್ತಿತ್ತು. ಈ ಪಾಸ್ ಹೊಂದಿದವರು ರಿಯಾಯಿತಿ ದರದೊಂದಿಗೆ ₹ 15 ಟೋಲ್ ನೀಡುತ್ತಿದ್ದರು.
ವಿದ್ಯಾರ್ಥಿನಿಯರಿಗೆ ಮಾತ್ರವಲ್ಲ, ವಿದ್ಯಾರ್ಥಿಗಳಿಗೆ ನಾಲ್ಕು ನಿಗಮಗಳ ಸಾರಿಗೆ ಬಸ್‌ಗಳಲ್ಲಿ ಉಚಿತ ಪ್ರಯಾಣ ಎಂದು ಡಿ.ಕೆ. ಶಿವಕುಮಾರ್ ಅವರು ಎರಡು ತಿಂಗಳ ಹಿಂದೆ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ದಿನವೇ ಘೋಷಣೆ ಮಾಡಿದ್ದರು. ಈ ಶೈಕ್ಷಣಿಕ ವರ್ಷದಲ್ಲಿ ಈಗಾಗಲೇ ರಿಯಾಯಿತಿ ಪಾಸ್ ಪಡೆದವರಿಗೆ ಅದರ ಮೊತ್ತವನ್ನು ಹಿಂತಿರುಗಿಸಲಾಗುವುದು ಎಂದೂ ಹೇಳಿದ್ದರು.
ಈ ಉಚಿತ ಪ್ರಯಾಣವು ನೈಸ್ ರಸ್ತೆಯಲ್ಲಿ ಸಂಚರಿಸುವ ಮಕ್ಕಳಿಗೆ ಅಷ್ಟಾಗಿ ಉಪಯೋಗ ಇಲ್ಲದಂತಾಗಿದೆ. ಸಾಮಾನ್ಯ ಪ್ರಯಾಣಿಕರು ಮಾದಾವರದಿಂದ ಮೈಸೂರು ರಸ್ತೆ ಜಂಕ್ಷನ್‌ವರೆಗೆ ಬಿಎಂಟಿಸಿ ಬಸ್‌ನಲ್ಲಿ ಪ್ರಯಾಣಿಸಿದರೆ ಅವರು ಟಿಕೆಟ್ ದರ ₹ 35 ಮತ್ತು ಟೋಲ್ ₹ 15 ಒಟ್ಟು ₹ 50 ಪಾವತಿಸುತ್ತಿದ್ದಾರೆ. ಟಿಕೆಟ್‌ನಲ್ಲಿ ಪ್ರಯಾಣ ದರ ಮತ್ತು ಟೋಲ್ ದರ ಪ್ರತ್ಯೇಕವಾಗಿ ನಮೂದಾಗಿರುತ್ತದೆ. ಬಾಲಕರು ಪ್ರಯಾಣಿಸಿದಾಗ ಅವರಿಗೆ ಟೋಲ್ ದರವನ್ನಷ್ಟೇ ಟಿಕೆಟ್‌ನಲ್ಲಿ ತೋರಿಸಲಾಗುತ್ತಿದ್ದು, ಅದು ₹ 35 ಆಗಿದೆ.
‘ಮಹಿಳೆಯರಿಗೆ, ವಿದ್ಯಾರ್ಥಿನಿಯರಿಗೆ ನೀಡುವ ಶಕ್ತಿ ಯೋಜನೆಯ ಟಿಕೆಟ್‌ನಲ್ಲಿಯೂ ಟೋಲ್ ದರ ₹ 15 ಎಂದು ನಮೂದಾಗಿರುತ್ತದೆ. ಆದರೆ ಅದು ಪಾವತಿ ಇರುವುದಿಲ್ಲ. ಸಾಮಾನ್ಯ ಟಿಕೆಟ್‌ನಲ್ಲಿಯೂ ಟೋಲ್ ದರ ಅಷ್ಟೇ ಇದ್ದಿದ್ದು, ಬಾಲಕರಿಗೆ ಮಾತ್ರ ₹ 35 ಆಗುವುದು ಹೇಗೆ’ ಎಂದು ಈ ರಸ್ತೆಯಲ್ಲಿ ಪ್ರಯಾಣಿಸುವ ವಿದ್ಯಾರ್ಥಿ ನಿಖಿಲ್ ಪ್ರಶ್ನಿಸಿದರು.
‘ಬಾಲಕಿಯರಿಂದ ಟೋಲ್ ಸಂಗ್ರಹಿಸದೇ ಉಚಿತ ಪ್ರಯಾಣಕ್ಕೆ ಅವಕಾಶ ನೀಡಿರುವಾಗ ಬಾಲಕರಿಗೂ ಅದೇ ರೀತಿ ಪ್ರಯಾಣಿಸಲು ಅವಕಾಶ ನೀಡಬೇಕು. ಅಲ್ಲದೇ ಯಾರಿಗೂ ಇಲ್ಲದ ಟೋಲ್ ದರವನ್ನು ವಿದ್ಯಾರ್ಥಿಗಳಿಗೆ ವಿಧಿಸುವ ಮೂಲಕ ಉಚಿತ ಪ್ರಯಾಣ ಎಂಬುದು ಹೆಸರಿಗಷ್ಟೇ ಇದ್ದಂತಾಗಿದೆ’ ಎಂದು ಮತ್ತೊಬ್ಬ ವಿದ್ಯಾರ್ಥಿ ಹರೀಶ್ ಹೇಳಿದರು.
‘ವಿದ್ಯಾರ್ಥಿಗಳಿಗೆ ಪಾಸ್ ನೀಡುವಾಗ ಅದರಲ್ಲಿ ಎಲ್ಲಿಂದ ಎಲ್ಲಿಗೆ? ಯಾವ ಮಾರ್ಗ? ಬಸ್ ಬದಲಾವಣೆ ಇದ್ದರೆ ಯಾವ ಸ್ಥಳದಲ್ಲಿ ಬಸ್ ಬದಲಾವಣೆ ಎಂಬುದೆಲ್ಲ ನಮೂದಾಗಿರುತ್ತದೆ. ನಿಗದಿತ ಮಾರ್ಗ ಬಿಟ್ಟು ಅಥವಾ ನಿಗದಿತ ಸ್ಥಳದಲ್ಲಿ ಬಸ್ ಬದಲಾಯಿಸುವುದು ಬಿಟ್ಟು ನೈಸ್ ರೋಡ್ ಸಹಿತ ಬೇರೆ ಮಾರ್ಗಗಳಲ್ಲಿ ಹೋದಾಗ ಹಣ ಪಾವತಿಸಬೇಕಾಗುತ್ತದೆ. ಇಲ್ಲಿ ಯಾವ ಸಮಸ್ಯೆ ಉಂಟಾಗಿದೆ ಎಂಬುದನ್ನು ಪರಿಶೀಲಿಸಲಾಗುವುದು’ ಎಂದು ಬಿಎಂಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.
‘ನಮಗೆ ನೀಡಿದ ಬಸ್ ಪಾಸ್ ನಲ್ಲಿ ನೈಸ್ ರಸ್ತೆ ಮಾರ್ಗ ಎಂಬುದು ಸ್ಪಷ್ಟವಾಗಿ ನಮೂದಾಗಿದೆ. ಮಾರ್ಗ ಬದಲಾವಣೆ ಮಾಡಿಲ್ಲ’ ಎಂದು ವಿದ್ಯಾರ್ಥಿಗಳು ಮಾಹಿತಿ ನೀಡಿದ್ದಾರೆ.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260806-4-1892735710