ಗೃಹಜ್ಯೋತಿ ಅರ್ಜಿ ಮರುಪರಿಶೀಲನೆ: ಫಲಾನುಭವಿಗಳಿಂದ ಇಲ್ಲ ಸೂಕ್ತ ಸ್ಪಂದನೆ

ಗೃಹಜ್ಯೋತಿ ಅರ್ಜಿ ಮರುಪರಿಶೀಲನೆ: ಫಲಾನುಭವಿಗಳಿಂದ  ಇಲ್ಲ ಸೂಕ್ತ ಸ್ಪಂದನೆ

ಗೃಹಜ್ಯೋತಿ ಅರ್ಜಿ ಮರುಪರಿಶೀಲನೆ: ಫಲಾನುಭವಿಗಳಿಂದ ಇಲ್ಲ ಸೂಕ್ತ ಸ್ಪಂದನೆ

ಶಿರಸಿ: ತಾಲ್ಲೂಕಿನಲ್ಲಿ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಗೃಹಜ್ಯೋತಿ ಯೋಜನೆಯ ಫಲಾನುಭವಿಗಳ ಅರ್ಜಿಗಳ ಮರುಪರಿಶೀಲನೆ ಪ್ರಕ್ರಿಯೆಯು ನಿರೀಕ್ಷಿತ ಗುರಿಸಾಧನೆ ಕಾಣದೆ ಹಿನ್ನಡೆ ಅನುಭವಿಸಿದೆ. ಕ್ಷೇತ್ರ ಮಟ್ಟದ ಮರುಪರಿಶೀಲನೆಗೆ ತೆರಳುವ ಹೆಸ್ಕಾಂ ಅಧಿಕಾರಿ ಹಾಗೂ ಸಿಬ್ಬಂದಿಗೆ ಫಲಾನುಭವಿಗಳಿಂದ ಸೂಕ್ತ ಸ್ಪಂದನೆ ಸಿಗದಿರುವುದೇ ಈ ವಿಳಂಬಕ್ಕೆ ಪ್ರಮುಖ ಕಾರಣವಾಗಿದೆ.

ಕೆಲವು ಕಡೆಗಳಲ್ಲಿ ಒಂದೇ ಆಧಾರ್ ಕಾರ್ಡ್ ಅಥವಾ ಒಂದೇ ಪಡಿತರ ಚೀಟಿಯನ್ನು ಬಳಸಿ ಒಂದಕ್ಕಿಂತ ಹೆಚ್ಚು ವಿದ್ಯುತ್ ಮೀಟರ್‌ಗಳಿಗೆ ಯೋಜನೆಯ ಸೌಲಭ್ಯ ಪಡೆದಿರುವ ಶಂಕೆ ವ್ಯಕ್ತವಾಗಿದ್ದು, ಅಂತಹ ಖಾತೆಗಳ ನೈಜತೆಯನ್ನು ಪರಿಶೀಲಿಸಲು ಸಿಬ್ಬಂದಿ ಕ್ಷೇತ್ರ ಮಟ್ಟದ ತನಿಖೆ ನಡೆಸುತ್ತಿದ್ದಾರೆ.

ತಾಲ್ಲೂಕಿನಲ್ಲಿ ಇದುವರೆಗೆ ಶೇ. 80ರಷ್ಟು ಅರ್ಜಿಗಳ ಮರುಪರಿಶೀಲನೆ ಪ್ರಕ್ರಿಯೆ ಮುಕ್ತಾಯಗೊಂಡಿದೆ. ಆದರೆ, ಇನ್ನೂ 8,519 ಫಲಾನುಭವಿಗಳ ಅರ್ಜಿಗಳ ಮರುಪರಿಶೀಲನೆ ಬಾಕಿ ಇದೆ. ಇದರಲ್ಲಿ ನಗರ ಪ್ರದೇಶದಲ್ಲಿ 3,500ಕ್ಕೂ ಹೆಚ್ಚು ಅರ್ಜಿಗಳು ಬಾಕಿ ಉಳಿದುಕೊಂಡಿರುವುದು ಹೆಸ್ಕಾಂ ಅಧಿಕಾರಿಗಳಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ.

‘ಅರ್ಜಿಗಳ ಪರಿಶೀಲನೆಗೆ ತೆರಳುವ ಮೀಟರ್‌ ರೀಡರ್‌ಗಳು ಮನೆಗೆ ಹೋದಾಗ ಫಲಾನುಭವಿಗಳು ಲಭ್ಯ ಇರುವುದಿಲ್ಲ. ಇದರಿಂದ ಸಮಸ್ಯೆಯಾಗುತ್ತಿದೆ. ಹಲವೆಡೆ ಮನೆಗಳಿಗೆ ಬೀಗ ಹಾಕಿರುವುದು ಮತ್ತು ಬಾಡಿಗೆದಾರರು ಪೂರ್ಣ ಮಾಹಿತಿ ನೀಡದೆ ಮನೆ ಖಾಲಿ ಮಾಡಿರುವುದು ಮರುಪರಿಶೀಲನೆ ಕಾರ್ಯ ವಿಳಂಬವಾಗಲು ಕಾರಣವಾಗಿದೆ’ ಎಂದು ಹೆಸ್ಕಾಂ ಎಇಇ ನಾಗರಾಜ ಪಾಟೀಲ ತಿಳಿಸಿದರು.

'ನಗರ ಪ್ರದೇಶಗಳಲ್ಲಿ ಬಾಡಿಗೆದಾರರ ಸಂಖ್ಯೆ ಹೆಚ್ಚಿದ್ದು, ಅವರು ಪದೇಪದೇ ಮನೆ ಬದಲಾಯಿಸುವುದರಿಂದ ವಿದ್ಯುತ್ ಸಂಪರ್ಕ ಸಂಖ್ಯೆ (ಆರ್‌ಆರ್ ಸಂಖ್ಯೆ) ಮತ್ತು ಆಧಾರ್ ಜೋಡಣೆಯಲ್ಲಿ ತಾಂತ್ರಿಕ ವ್ಯತ್ಯಾಸಗಳು ಕಂಡು ಬಂದಿವೆ. ಜತೆಗೆ, ಆಧಾರ್ ಕಾರ್ಡ್‌ನಲ್ಲಿರುವ ವಿಳಾಸ ಮತ್ತು ಸದ್ಯ ವಾಸವಿರುವ ಸ್ಥಳದ ನಡುವಿನ ವ್ಯತ್ಯಾಸಗಳು ಮರುಪರಿಶೀಲನೆಯನ್ನು ಮತ್ತಷ್ಟು ಸಂಕೀರ್ಣಗೊಳಿಸಿವೆ. ಇನ್ನೊಂದೆಡೆ ಗ್ರಾಮೀಣ ಭಾಗಗಳಲ್ಲೂ ಸಹ ಕೃಷಿ ಕಾಯಕ ಅಥವಾ ಕೂಲಿ ಕೆಲಸಕ್ಕಾಗಿ ಬೆಳಿಗ್ಗೆಯೇ ಮನೆ ಬಿಡುವ ಕುಟುಂಬಗಳು ಸಂಜೆಯವರೆಗೂ ಸಿಗದಿರುವುದರಿಂದ ಪರಿಶೀಲನಾ ಸಿಬ್ಬಂದಿ ಖಾಲಿ ಕೈಯಲ್ಲಿ ಹಿಂತಿರುಗುವಂತಾಗಿದೆ' ಎನ್ನುತ್ತಾರೆ ಅವರು.

‘ಒಂದೇ ಮನೆಗೆ ಮೂರ್ನಾಲ್ಕು ಬಾರಿ ಭೇಟಿ ಕೊಟ್ಟಿದ್ದೇವೆ. ಮಾಹಿತಿ ಕೊರತೆ ಇರಬಹುದು. ಮುಂದಿನ ದಿನಗಳಲ್ಲಿ ಬಾಕಿ ಉಳಿದ ಮನೆಗಳಿಗೆ ಮತ್ತೊಮ್ಮೆ ಭೇಟಿ ಕೊಡುತ್ತೇವೆ’ ಎಂದು ಸಿಬ್ಬಂದಿಯೊಬ್ಬರು ಹೇಳಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260819-20-721040291

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ