
ಬೀದರ್ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷಗಿರಿ: ಪ್ರಭಾವಿಗಳಿಂದ ಪೈಪೋಟಿ
ಶಶಿಕಾಂತ ಎಸ್. ಶೆಂಬೆಳ್ಳಿ
ಬೀದರ್: ಬೀದರ್ ಜಿಲ್ಲಾ ಕಾಂಗ್ರೆಸ್ ಸಮಿತಿ ನೂತನ ಅಧ್ಯಕ್ಷರ ನೇಮಕ ಪ್ರಕ್ರಿಯೆ ಅಂತಿಮ ಹಂತದಲ್ಲಿದ್ದು, ಜಿಲ್ಲೆಯ ಹಲವು ‘ಪ್ರಭಾವಿ’ಗಳು ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ.
ಇಷ್ಟೇ ಅಲ್ಲ, ತಮಗಿರುವ ಸಂಪರ್ಕ ಬಳಸಿಕೊಂಡು ಸ್ಥಾನ ಪಡೆದುಕೊಳ್ಳಲು ಎಲ್ಲಾ ರೀತಿಯ ಪ್ರಯತ್ನ ನಡೆಸಿದ್ದಾರೆ. ಹೊಸ ಅಧ್ಯಕ್ಷರ ನೇಮಕ ಸಂಬಂಧ ನವದೆಹಲಿಯಲ್ಲಿ ಪಕ್ಷದ ವರಿಷ್ಠರು ಸಭೆ ನಡೆಸಿದ್ದು, ಎರಡ್ಮೂರು ದಿನದೊಳಗೆ ಹೊಸಬರ ಹೆಸರು ಘೋಷಿಸುವ ಸಾಧ್ಯತೆ ಎಂದು ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ ಅವರು ‘ಪ್ರಜಾವಾಣಿ’ಗೆ ದೃಢಪಡಿಸಿದ್ದಾರೆ.
‘ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಈ ಸಲ ಪಕ್ಷದ ನಿಷ್ಠಾವಂತ ಕಾರ್ಯಕರ್ತರು ಹಾಗೂ ಸಂವಿಧಾನದ ಬಗ್ಗೆ ಗೌರವ ಹೊಂದಿ ಅದಕ್ಕಾಗಿ ಹೋರಾಡುವ ವ್ಯಕ್ತಿಯನ್ನು ಅಧ್ಯಕ್ಷ ಸ್ಥಾನಕ್ಕೆ ಪರಿಗಣಿಸಬೇಕೆಂದು ಸೂಚಿಸಿದ್ದಾರೆ. ಜೊತೆಗೆ ಯಾವುದೇ ಪ್ರಭಾವಿಗಳ ನೆರಳಿನಲ್ಲಿ ಅವರು ಕೆಲಸ ಮಾಡುವವರಾಗಿರಬಾರದು. ಪ್ರಭಾವಿಗಳ ನೇಮಕ ಪ್ರಕ್ರಿಯೆ ಮೇಲೆ ಪ್ರಭಾವ ಬೀರದಂತೆ ನೋಡಿಕೊಳ್ಳಬೇಕು’ ಎಂದು ಸೂಚಿಸಿದ್ದಾರೆ ಎಂದು ಇತ್ತೀಚೆಗೆ ಜಿಲ್ಲೆಗೆ ಆಗಮಿಸಿದ್ದ ಎಐಸಿಸಿ ವೀಕ್ಷಕ ರಾಜೇಶ್ ಲಿಲೋಥಿಯಾ ತಿಳಿಸಿದ್ದರು.
ಆದರೆ, ಅಧ್ಯಕ್ಷ ಸ್ಥಾನಕ್ಕೆ ಅರ್ಜಿ ಸಲ್ಲಿಸಿದವರಲ್ಲಿ ಕೆಲವು ಪ್ರಭಾವಿಗಳು ಸೇರಿದ್ದಾರೆ. ರಾಜ್ಯದ ಪ್ರಮುಖ ನಾಯಕರ ನಿಕಟ ಸಂಪರ್ಕವೂ ಹೊಂದಿದ್ದಾರೆ. ಮಾಜಿಸಚಿವ ರಾಜಶೇಖರ್ ಪಾಟೀಲ ಹುಮನಾಬಾದ್ ಅವರ ಸಹೋದರ ಡಾ. ಚಂದ್ರಶೇಖರ್ ಪಾಟೀಲ ಕೂಡ ಅರ್ಜಿ ಸಲ್ಲಿಸಿದವರಲ್ಲಿ ಪ್ರಮುಖರು. ವಿಧಾನ ಪರಿಷತ್ ಮಾಜಿ ಸದಸ್ಯ ಅರವಿಂದಕುಮಾರ ಅರಳಿ, ವಿವಿಧ ನಿಗಮ ಮಂಡಳಿಗಳಲ್ಲಿ ಕೆಲಸ ಮಾಡಿದವರು, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರು ರೇಸ್‌ನಲ್ಲಿದ್ದಾರೆ.
ಡಾ. ಚಂದ್ರಶೇಖರ್ ಪಾಟೀಲ ಅವರು ಸ್ಪರ್ಧೆಯಲ್ಲಿರುವುದರಿಂದ ಸಹಜವಾಗಿಯೇ ರಾಜಶೇಖರ್ ಪಾಟೀಲ ಹುಮನಾಬಾದ್ ಅವರ ಬೆಂಬಲವೂ ಅವರ ಬೆನ್ನಿಗಿರಲಿದೆ. ಇನ್ನೊಂದೆಡೆ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಶಿವರಾಜ ಹಾಸನಕರ್ ಅವರಿಗೆ ಸಚಿವ ಈಶ್ವರ ಬಿ. ಖಂಡ್ರೆ ಅವರ ಬೆಂಬಲವಿದ್ದು, ಇವರ ಹೆಸರು ಅಂತಿಮಗೊಂಡರೂ ಅಚ್ಚರಿಪಡಬೇಕಿಲ್ಲ. ‘ಖಂಡ್ರೆಯವರ ಸಮ್ಮತಿ ಇಲ್ಲದೆ ಹೊಸಬರ ಕೈಗೆ ಅಧಿಕಾರದ ಚುಕ್ಕಾಣಿ ಕೊಡುವುದು ಅಷ್ಟು ಸುಲಭವಲ್ಲ’ ಎನ್ನುವ ಮಾತುಗಳು ಕಾಂಗ್ರೆಸ್ ಪಕ್ಷದ ಪಡಸಾಲೆಯಲ್ಲಿ ಕೇಳಿ ಬರುತ್ತಿದೆ.
ಆದರೆ, ಕಾರ್ಯಕರ್ತರಿಗೆ ಮಣೆ ಹಾಕಿ ಪಕ್ಷ ಹೊಸ ಸಂದೇಶ ನೀಡಲಿದೆ ಎಂಬ ಉಮೇದಿನಲ್ಲಿ ಅನೇಕ ಜನ ಕಾರ್ಯಕರ್ತರು ಅಧ್ಯಕ್ಷ ಸ್ಥಾನಕ್ಕೆ ಅರ್ಜಿ ಸಲ್ಲಿಸಿದ್ದು, ಹೊಸ ಅಧ್ಯಕ್ಷರ ಹೆಸರು ಘೋಷಣೆಯತ್ತ ಎಲ್ಲರ ದೃಷ್ಟಿ ನೆಟ್ಟಿದೆ.
ಅಧ್ಯಕ್ಷ ಸ್ಥಾನದ ರೇಸ್‌ನಲ್ಲಿರುವ ವಿವಿಧ ಜಾತಿಗಳ ಮುಖಂಡರ ಹೆಸರುಗಳು...
ಎಂಎಲ್‌ಸಿ ಡಾ. ಚಂದ್ರಶೇಖರ ಬಿ. ಪಾಟೀಲ (ಲಿಂಗಾಯತ), ಮುಖಂಡರಾದ ಅರವಿಂದಕುಮಾರ ಅರಳಿ (ಎಸ್‌ಸಿ), ಭೀಮಸೇನ್‌ರಾವ್ ಶಿಂಧೆ (ಎಸ್‌ಸಿ), ಅಬ್ದುಲ್ ಮನ್ನಾನ್ ಸೇಠ್ (ಮುಸ್ಲಿಂ), ಆನಂದ್ ಬಾಬು (ಲಿಂಗಾಯತ), ಶಿವರಾಜ ಹಾಸನಕರ್ (ಎಸ್‌ಸಿ), ಮುರಳೀಧರ್ ಏಕಲಾರಕರ್ (ಎಸ್‌ಟಿ ಗೊಂಡ), ಮೀನಾಕ್ಷಿ ಸಂಗ್ರಾಮ (ಲಿಂಗಾಯತ), ಗೀತಾ ಪಂಡಿತ್‌ರಾವ್ ಚಿದ್ರಿ (ಎಸ್‌ಟಿ ಗೊಂಡ), ಶೋಭಾ ಪಾಟೀಲ (ಲಿಂಗಾಯತ), ಚಂದ್ರಕಾಂತ್ ಎಚ್. (ಎಸ್‌ಸಿ ಮಾದಿಗ), ಶಂಕರರಾವ್ ದೊಡ್ಡಿ (ಎಸ್‌ಸಿ), ಸಂಜೀವ್‌ಕುಮಾರ್ ಜಾಗೀರದಾರ್ (ಕ್ರಿಶ್ಚಿಯನ್), ಅನಿಲ್‌ಕುಮಾರ್ ಬೆಲ್ದಾರ್ (ಎಸ್‌ಸಿ), ಡಾ. ಚರಣ್ ಸಿಂಗ್ ರಾಮರಾವ್ ರಾಠೋಡ್ (ಎಸ್‌ಸಿ ಲಂಬಾಣಿ), ಜಾನ್ಸನ್ ಘೋಡೆ (ಎಸ್‌ಸಿ ಮಾದಿಗ), ಅಬ್ದುಲ್ ಸತ್ತಾರ್, ನಿಸಾರ್ ಅಹಮ್ಮದ್, ಮುಹಮ್ಮದ್ ಅಯಾಜ್ ಖಾನ್, ಅಜ್ಮತ್ ಅಲಿ ಪಟೇಲ್, ಇರ್ಷಾದ್ ಅಲಿ (ಮುಸ್ಲಿಂ), ಮುಹಮ್ಮದ್ ದಾವೂದ್ (ಮುಸ್ಲಿಂ ಬಾಗವಾನ್), ಡಾ. ರಾಜಶೇಖರ್ ಸೇಡಂಕರ್ (ಹಿಂದೂ ಒಬಿಸಿ), ಅನಿಲ್ ಕುಮಾರ್ ಜಾಧವ್ (ಮತಾಂತರ ಕ್ರಿಶ್ಚಿಯನ್), ಅಮರ್ ಜಾಧವ್ (ಹಿಂದೂ ಮರಾಠ), ಪ್ರಶಾಂತ್ ದೊಡ್ಡಿ (ಎಸ್‌ಸಿ), ರಾಜಕುಮಾರ್ (ಎಸ್‌ಟಿ), ಶಿವಕುಮಾರ ತುಂಗಾ (ಎಸ್‌ಸಿ), ರಮೇಶ್ ಡಾಕುಳಗಿ (ಎಸ್‌ಸಿ), ಮುಹಮ್ಮದ್ ಅಬ್ದುಲ್ ಸಮ್ಮೆ (ಮುಸ್ಲಿಂ), ಮನೋಜ್‌ಕುಮಾರ್ (ಲಿಂಗಾಯತ), ವೆಂಕಟರಾವ್ ಶಿಂಧೆ (ಎಸ್‌ಸಿ ಮಾದಿಗ), ಚಂದ್ರಕಾಂತ್ (ಎಸ್‌ಸಿ), ಶೇಕ್ ಹಾಜಿ (ಮುಸ್ಲಿಂ), ಜಾನ್ ವೆಸ್ಲಿ (ಕ್ರಿಶ್ಚಿಯನ್).
ಯಾವ ಜಾತಿಯಿಂದ ಎಷ್ಟು ಜನ ಅರ್ಜಿ ಸಲ್ಲಿಕೆ
(ಮೂಲ: ಕಾಂಗ್ರೆಸ್ ಪಕ್ಷ)
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260819-33-1974947471