
ಸಿರುಗುಪ್ಪ: ಕೈಕೊಟ್ಟ ಮಳೆ; ಸಂಕಷ್ಟದಲ್ಲಿ ರೈತರು
ಸಿರುಗುಪ್ಪ: ತಾಲ್ಲೂಕಿನಲ್ಲಿ ಈ ಬಾರಿ ಮುಂಗಾರು ಮಳೆ ಸಂಪೂರ್ಣ ಕೈಕೊಟ್ಟಿದ್ದು, ನದಿ-ನಾಲೆಗಳು ನೀರಿಲ್ಲದೆ ಒಣಗಿವೆ. ಇದರಿಂದ ಕೃಷಿ ಚಟುವಟಿಕೆಗಳು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ಭತ್ತದ ನಾಟಿ ಕಾರ್ಯವನ್ನು ರೈತರು ಸಂಪೂರ್ಣವಾಗಿ ಕೈಬಿಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಅಷ್ಟೋ ಇಷ್ಟೋ ಮಳೆ ಹಾಗೂ ಕೊಳವೆಬಾವಿ ನೀರಿನ ಆಸರೆಯಲ್ಲಿ ರೈತರು ಲಕ್ಷಾಂತರ ರೂಪಾಯಿ ವೆಚ್ಚ ಮಾಡಿ ಸಸಿಮಡಿಗಳನ್ನು ತಯಾರಿಸಿಕೊಂಡಿದ್ದರು. ಸಸಿಗಳು ನಾಟಿಗೆ ಸಿದ್ಧವಾಗಿದ್ದರೂ, ಪ್ರಮುಖ ನೀರಿನ ಆಕರಗಳು ಬರಿದಾಗಿರುವುದರಿಂದ ಹೊಲಗಳಿಗೆ ನೀರು ಹಾಯಿಸಲು ಸಾಧ್ಯವಾಗುತ್ತಿಲ್ಲ. ಬೆಳೆದು ನಿಂತ ಸಸಿಗಳನ್ನು ಗದ್ದೆಗೆ ನೆಡಲಾಗದೆ ಹೊಲಗಳಲ್ಲೇ ಬಿಡುವ ಅನಿವಾರ್ಯತೆ ಎದುರಾಗಿದೆ.
ಪ್ರತಿ ವರ್ಷ ಈ ವೇಳೆಗೆ ತುಂಗಭದ್ರಾ ಹಾಗೂ ಹಗರಿ ನದಿಗಳು ಭರ್ತಿಯಾಗಿ ಹರಿದು, ನಾಟಿ ಕಾರ್ಯ ಚುರುಕಿನಿಂದ ನಡೆಯುತ್ತಿತ್ತು. ಆದರೆ, ಈ ವರ್ಷ ಜಲಾಶಯ ಮತ್ತು ನದಿಗಳಲ್ಲಿ ನೀರಿಲ್ಲದೆ ಗಡಿ ಭಾಗದ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಸಸಿಮಡಿಗಳು ಒಣಗಿ ಹಾಳಾದರೆ ಇಡೀ ಹಂಗಾಮು ಕೈತಪ್ಪುತ್ತದೆ ಎಂಬ ಭೀತಿಯಿಂದ ರೈತರು ಸಾವಿರಾರು ರೂಪಾಯಿ ವೆಚ್ಚ ಮಾಡಿ ಖಾಸಗಿ ಟ್ಯಾಂಕರ್ ಮೂಲಕ ನೀರು ತರಿಸಿ ಸಸಿಮಡಿ ಉಳಿಸಿಕೊಳ್ಳಲು ಹರಸಾಹಸ ಪಡುತ್ತಿದ್ದಾರೆ.
‘ಒಂದು ಟ್ಯಾಂಕರ್ ನೀರಿಗೆ ಭಾರಿ ಮೊತ್ತ ನೀಡಬೇಕಾಗಿದ್ದು, ಸಸಿಮಡಿ ಕಾಪಾಡಿಕೊಳ್ಳುವುದೇ ದೊಡ್ಡ ಸವಾಲಾಗಿದೆ’ ಎಂದು ರೈತ ವಿಘ್ನೇಶ ಅಳಲು ತೋಡಿಕೊಂಡಿದ್ದಾರೆ.
ಪರಿಹಾರಕ್ಕೆ ಆಗ್ರಹ: ಆರಂಭದಲ್ಲೇ ರೈತರಿಗೆ ದೊಡ್ಡ ಮಟ್ಟದ ಆರ್ಥಿಕ ನಷ್ಟವಾಗಿದ್ದು, ಸರ್ಕಾರ ಮತ್ತು ಕೃಷಿ ಇಲಾಖೆ ತಕ್ಷಣವೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಬೇಕು. ಜಲಾಶಯಗಳಿಂದ ನದಿಗೆ ತಕ್ಷಣ ನೀರು ಹರಿಸಬೇಕು ಹಾಗೂ ನಷ್ಟದಲ್ಲಿರುವ ರೈತರಿಗೆ ಸೂಕ್ತ ಬೆಳೆ ಪರಿಹಾರ ಘೋಷಿಸಬೇಕು ಎಂದು ರೈತ ಹೋರಾಟಗಾರ ವಾ.ಹುಲುಗಯ್ಯ ಆಗ್ರಹಿಸಿದ್ದಾರೆ.
ಸಸಿ ಮಡಿಗಳು ಕುರಿಗಳಿಗೆ ಮೇವು
‘ಸಾಕಷ್ಟು ಶ್ರಮ ಮತ್ತು ಹಣ ವ್ಯಯಿಸಿ ಭತ್ತದ ಸಸಿಮಡಿ ಬೆಳೆಸಿದ್ದೆವು. ಈಗ ಸಸಿಗಳು ಹಸನಾಗಿ ಬೆಳೆದಿವೆ. ಆದರೆ ಹೊಲಕ್ಕೆ ಹಾಯಿಸಲು ಹನಿ ನೀರಿಲ್ಲ. ನಾಟಿ ಮಾಡಿದರೂ ಬೆಳೆ ಒಣಗಿ ಹೋಗುವ ಭೀತಿ ಇದೆ. ಹೀಗಾಗಿ ಸಸಿಗಳನ್ನು ನಾಟಿ ಮಾಡದೆ ಹಾಗೆಯೇ ಬಿಟ್ಟು ಕುರಿಗಳಿಗೆ ಮೇಯಿಸಲು ನಿರ್ಧರಿಸಿದ್ದೇವೆ’ ಎಂದು ಬಗ್ಗೂರು ಗ್ರಾಮದ ರೈತ ಕುಂಬರ ಹನುಮಂತಪ್ಪ ಹೇಳಿದ್ಧಾರೆ.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260819-25-404889449