ಇಂಡಿ | ನಿವೇಶನವಿದ್ದರೂ ಮನೆ ಕಟ್ಟಲಾಗದ ಸಂಕಷ್ಟ: ಯೋಜನಾ ಪ್ರಾಧಿಕಾರ ನಿರಾಸಕ್ತಿ

ಇಂಡಿ | ನಿವೇಶನವಿದ್ದರೂ ಮನೆ ಕಟ್ಟಲಾಗದ ಸಂಕಷ್ಟ: ಯೋಜನಾ ಪ್ರಾಧಿಕಾರ ನಿರಾಸಕ್ತಿ

ಇಂಡಿ | ನಿವೇಶನವಿದ್ದರೂ ಮನೆ ಕಟ್ಟಲಾಗದ ಸಂಕಷ್ಟ: ಯೋಜನಾ ಪ್ರಾಧಿಕಾರ ನಿರಾಸಕ್ತಿ

ಇಂಡಿ: ಸ್ವಂತ ಮನೆಯೊಂದನ್ನು ಕಟ್ಟಿಕೊಳ್ಳಬೇಕು ಎಂದು ಆಸೆಪಟ್ಟು, ಕಷ್ಟಪಟ್ಟು ದುಡಿದ ಹಣದಲ್ಲಿ ನಿವೇಶನ (ಪ್ಲಾಟ್) ಖರೀದಿಸಿದ ಜನರಿಗೆ ಈಗ ನಗರಸಭೆ ಮತ್ತು ನಗರ ಯೋಜನಾ ಕಚೇರಿ ಅಧಿಕಾರಿಗಳು ಕಟ್ಟಡ ಕಟ್ಟಲು ಅನುಮತಿ ನೀಡುತ್ತಿಲ್ಲವಾದ್ದರಿಂದ ಸಾರ್ವಜನಿಕರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

2015 ರ ನಂತರ ಅಧಿಕೃತವಾಗಿ ಭೂ ಪರಿವರ್ತನೆ ಆಗಿರುವ ಪ್ಲಾಟ್‌ಗಳಿಗೆ ನಗರಸಭೆಗಳಿಂದ ಕಟ್ಟಡ ನಿರ್ಮಾಣ ಪರವಾನಗಿ ನೀಡಲು ನಿರಾಕರಿಸಲಾಗುತ್ತಿದ್ದು, ಮನೆ ಕಟ್ಟಲು ಮುಂದಾದ ಸಾರ್ವಜನಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಏನಿದು ಸಮಸ್ಯೆ?: ಸಾಮಾನ್ಯವಾಗಿ ಕೃಷಿ ಭೂಮಿಯನ್ನು ಕೃಷಿಯೇತರ ಉದ್ದೇಶಕ್ಕೆ ಬಳಸಿ, ಸರ್ಕಾರದ ನಿಯಮಾವಳಿಗಳ ಪ್ರಕಾರವೇ ಜಿಲ್ಲಾಧಿಕಾರಿಗಳಿಂದ ಅಥವಾ ಸಕ್ಷಮ ಪ್ರಾಧಿಕಾರದಿಂದ ಭೂ ಪರಿವರ್ತನೆ ಮಾಡಿಸಿ ನಿವೇಶನಗಳನ್ನು ರಚಿಸಲಾಗಿರುತ್ತದೆ.

ಆದರೆ, 2015ರ ನಂತರ ನಡೆದಿರುವ ಇಂತಹ ಭೂ ಪರಿವರ್ತಿತ ಲೇಔಟ್‌ಗಳಲ್ಲಿ ಕೆಲವು ತಾಂತ್ರಿಕ ನಿಯಮಗಳು, ನಗರಾಭಿವೃದ್ಧಿ ಪ್ರಾಧಿಕಾರದ ಅನುಮೋದನೆ, ನಿಯಮಾವಳಿಗಳ ನೆಪವೊಡ್ಡಿ ನಗರಸಭೆಗಳು ಪ್ಲಾನ್ ಅಪ್ರೂವಲ್ ಮತ್ತು ಬಿಲ್ಡಿಂಗ್ ಪರ್ಮಿಶನ್‌ ನೀಡುತ್ತಿಲ್ಲ ಎಂದು ಜನರು ದೂರುತ್ತಾರೆ.

ಬ್ಯಾಂಕ್ ಸಾಲ ಸಿಗುತ್ತಿಲ್ಲ: ನಗರಸಭೆಯ ಕಟ್ಟಡ ಪರವಾನಗಿ ಇಲ್ಲದೇ ಯಾವುದೇ ರಾಷ್ಟ್ರೀಕೃತ ಅಥವಾ ಖಾಸಗಿ ಬ್ಯಾಂಕ್‌ಗಳು ಗೃಹ ಸಾಲ ಮಂಜೂರು ಮಾಡುತ್ತಿಲ್ಲ. ಇದರಿಂದಾಗಿ ಮಧ್ಯಮ ವರ್ಗದ ಜನರು ಕಂಗಾಲಾಗಿದ್ದಾರೆ. ನಿಯಮಬದ್ಧವಾಗಿಯೇ ಇದೆ ಎಂದು ನಂಬಿ ಲಕ್ಷಾಂತರ ರೂಪಾಯಿ ಕೊಟ್ಟು ಸೈಟ್ ಕೊಂಡ ಸಾರ್ವಜನಿಕರ ಹಣ ಈಗ ಮಣ್ಣು ಪಾಲಾಗುವ ಭೀತಿ ಎದುರಾಗಿದೆ.

ಸ್ವಂತ ಸೈಟ್ ಇದ್ದರೂ ಅನುಮತಿ ಸಿಗದ ಕಾರಣ, ಜನ ಇಂದಿಗೂ ಬಾಡಿಗೆ ಮನೆಯಲ್ಲಿಯೇ ಕಾಲ ಕಳೆಯು ವಂತಾಗಿದೆ.

ಈ ಸಮಸ್ಯೆಯಿಂದಾಗಿ ಕೇವಲ ಸಾರ್ವಜನಿಕರಿಗೆ ತೊಂದರೆಯಾಗುತ್ತಿರುವುದು ಮಾತ್ರವಲ್ಲದೆ, ನಗರಸಭೆಗಳಿಗೆ ಬರಬೇಕಾದ ಆಸ್ತಿ ತೆರಿಗೆ ಮತ್ತು ಅಭಿವೃದ್ಧಿ ಶುಲ್ಕದ ಆದಾಯವೂ ಕುಂಠಿತಗೊಂಡಿದೆ.

ಸರ್ಕಾರ ಮತ್ತು ನಗರಾಭಿವೃದ್ಧಿ ಇಲಾಖೆ ತಕ್ಷಣವೇ ಈ ವಿಷಯದಲ್ಲಿ ಮಧ್ಯಪ್ರವೇಶಿಸಿ, 2015 ರ ನಂತರದ ಭೂ ಪರಿವರ್ತಿತ ಪ್ಲಾಟ್‌ಗಳ ಗೊಂದಲವನ್ನು ಬಗೆಹರಿಸಿ, ಮನೆ ನಿರ್ಮಾಣಕ್ಕೆ ಸೂಕ್ತ ಮಾರ್ಗಸೂಚಿ ಪ್ರಕಟಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ನಗರಸಭೆ ನೀಡುತ್ತಿಲ್ಲ ಅನುಮತಿ

‘ನಾವು ನಿಯಮಗಳ ಪ್ರಕಾರವೇ ರಿಜಿಸ್ಟ್ರೇಷನ್ ಮಾಡಿಸಿ, ಭೂ ಪರಿವರ್ತನೆಯಾದ ಜಾಗವನ್ನೇ ಖರೀದಿಸಿದ್ದೇವೆ. ಖರೀದಿ ಮಾಡುವಾಗ ಯಾವುದೇ ತೊಂದರೆ ಇಲ್ಲ ಎಂದು ನೋಂದಣಿ ಇಲಾಖೆ ಹೇಳುತ್ತದೆ. ಆದರೆ ಈಗ ಮನೆ ಕಟ್ಟಲು ಹೋದರೆ ನಗರಸಭೆಯವರು ಅನುಮತಿ ಕೊಡುತ್ತಿಲ್ಲ. ಅಧಿಕಾರಿಗಳ ಈ ಗೊಂದಲದ ನೀತಿಯಿಂದಾಗಿ ನಮ್ಮ ಸ್ವಂತ ಮನೆಯ ಕನಸು ಕಮರಿ ಹೋಗುತ್ತಿದೆ. ಮೂರು ವರ್ಷದ ಹಿಂದೆಯೇ ಅನುಮತಿ ಕೇಳಿದ್ದೇವೆ ಪರವಾನಿಗೆ ಸಿಕ್ಕಿಲ್ಲ’ ಎಂದು ನಾಗರಿಕ ಸಂತೋಷ ದೇವರ ಹೇಳುತ್ತಾರೆ.

‘ ಸರ್ಕಾರದ ಮಾರ್ಗಸೂಚಿಯಂತೆ 2015 ರ ಒಳಗೆ ಭೂ ಪರಿವರ್ತನೆ ಆದ ಸೈಟ್‌ಗಳಿಗೆ ಕಟ್ಟಡ ಕಟ್ಟಲು ಅನುಮತಿ ನೀಡಲಾಗುತ್ತಿದೆ. ಆದರೆ 2015 ರ ನಂತರ ಭೂ ಪರಿವರ್ತನೆ ಮಾಡಿದರೂ ಅಂತಿಮ ಅನುಮೋದನೆ ನೀಡಿದರೆ ಮಾತ್ರ ಕಟ್ಟಡ ಕಟ್ಟಲು ಅನುಮತಿ ನೀಡಬೇಕಾಗುತ್ತದೆ. 2015 ರ ನಂತರ ಭೂ ಪರಿವರ್ತನೆ ಮಾಡಿಕೊಂಡ ಇಂಡಿಯ ಭೂ ಪರಿವರ್ತಕರು ಅಂತಿಮ ಅನುಮೋದನೆ ನೀಡಿಲ್ಲ. ಹೀಗಾಗಿ ಕಟ್ಟಡಕ್ಕೆ ಅನುಮತಿ ನೀಡುತ್ತಿಲ್ಲ.ಎಂದು ಯೋಜನಾ ಪ್ರಾಧಿಕಾರದ ಸಹಾಯಕ ನಿರ್ದೇ ಶಕಿ ಸುನೀತಾ ಲಾಡ್‌ ಹೇಳುತ್ತಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260827-26-1979391886

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ