
ರಾಯಚೂರು | ಹೆದ್ದಾರಿ ಕಾಮಗಾರಿ ವಿಳಂಬ: ಜಿಲ್ಲೆ ಪ್ರಗತಿಗೆ ಅಡ್ಡಿ
ರಾಯಚೂರು: ಭಾರತಮಾಲಾ ಯೋಜನೆಯ ಪ್ಯಾಕೇಜ್–3 ಮತ್ತು 4 ಹಾಗೂ ಹುನುಗುಂದ–ರಾಯಚೂರು ಚತುಷ್ಪಥ ಹೆದ್ದಾರಿ ಪ್ಯಾಕೇಜ್–5 ಮತ್ತು 6 ಕಾಮಗಾರಿಗಳ ವಿಳಂಬಕ್ಕೆ ಅಧಿಕಾರಿಗಳ ಕಾರ್ಯವೈಖರಿಯೇ ಕಾರಣವಾಗಿದೆ.
ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಭಾರತಮಾಲಾ ಯೋಜನೆ ಅಡಿಯಲ್ಲಿ ಭೂಸ್ವಾಧೀನ ಮತ್ತು ಪರಿಹಾರ ಧನ ವಿತರಣೆಯಲ್ಲಿ ಅನೇಕ ಅಕ್ರಮಗಳು ನಡೆದಿವೆ. ಹೆದ್ದಾರಿ ಯೋಜನೆಗಾಗಿ ಭೂಮಿ ನೀಡಿದ ರೈತರು ಹಾಗೂ ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟು ಮಾಡಿರುವ ಆರೋಪಗಳೂ ಕೇಳಿ ಬಂದಿವೆ.
ಯೋಜನೆಗಾಗಿ ಜಮೀನು ಸ್ವಾಧೀನಪಡಿಸಿಕೊಳ್ಳುವ ಪ್ರಕ್ರಿಯೆಯಲ್ಲಿ ಕೆಲವು ಮಧ್ಯವರ್ತಿಗಳು ಮತ್ತು ಅಧಿಕಾರಿಗಳು ಶಾಮೀಲಾಗಿ, ನಕಲಿ ದಾಖಲೆಗಳನ್ನು ಸೃಷ್ಟಿಸಿ ಸರ್ಕಾರದ ಹಾಗೂ ಖಾಸಗಿ ಜಮೀನುಗಳನ್ನು ಕಬಳಿಸಲು ಯತ್ನಿಸಿರುವ ದೂರುಗಳು ದಾಖಲಾಗಿವೆ. ಮೂಲ ರೈತರಿಗೆ ಸಿಗಬೇಕಾದ ಭೂಸ್ವಾಧೀನದ ಕೋಟ್ಯಂತರ ರೂಪಾಯಿ ಪರಿಹಾರದ ಹಣವನ್ನು ನಕಲಿ ಖಾತೆಗಳಿಗೆ ವರ್ಗಾಯಿಸಿಕೊಂಡಿರುವ ಅಕ್ರಮಗಳು ಗುಟ್ಟಾಗಿ ಉಳಿದುಕೊಂಡಿಲ್ಲ.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್ಎಚ್‌ಎಐ) ಭೂಮಿ ಸ್ವಾಧೀನಪಡಿಸಿಕೊಳ್ಳುವಾಗ ಮಾರುಕಟ್ಟೆ ದರಕ್ಕಿಂತ ಅತ್ಯಂತ ಕಡಿಮೆ ಪರಿಹಾರ ನಿಗದಿಪಡಿಸಿದೆ ಎನ್ನುವುದು ರೈತರು ಆರೋಪವಾಗಿದೆ.
ರಾಯಚೂರು-ಬೆಳಗಾವಿ ಹೆದ್ದಾರಿ ಹಾಗೂ ಹಾಸನ-ರಾಯಚೂರು ಎಕ್ಸ್‌ಪ್ರೆಸ್‌ವೇ ಯೋಜನೆಗಳಿಗಾಗಿ ನೂರಾರು ಎಕರೆ ಭೂಮಿಯನ್ನು ವಶಪಡಿಸಿಕೊಳ್ಳುವಾಗ ಸ್ಥಳೀಯ ರೈತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಏಕಪಕ್ಷೀಯವಾಗಿ ನಿರ್ಧಾರ ಕೈಗೊಳ್ಳಲಾಗಿದೆ ಎನ್ನುವ ದೂರುಗಳು ಇವೆ.
ಒಂದೇ ಸರ್ವೆ ನಂಬರ್ ಅಡಿಯಲ್ಲಿ ಹಂಚಿಕೆಯಾಗಿರುವ ಜಂಟಿ ಆಸ್ತಿಗಳಲ್ಲಿ, ಕೇವಲ ಒಬ್ಬರಿಗೆ ಮಾತ್ರ ಪರಿಹಾರ ನೀಡಲು ಮುಂದಾಗಿದ್ದು ನಿಜವಾದ ವಾರಸುದಾರರಿಗೆ ಅನ್ಯಾಯವಾಗಲು ಕಾರಣವಾಗಿದೆ ಎಂದು ಹೆದ್ದಾರಿಯಲ್ಲಿ ಜಮೀನು ಕಳೆದುಕೊಂಡ ಸಂತ್ರಸ್ತರು ಹೇಳುತ್ತಾರೆ.
ಜನರ ಬೇಡಿಕೆಗೆ ಸ್ಪಂದಿಸುತ್ತಿಲ್ಲ: ‘ಕಾಮಗಾರಿ ಪ್ರಾರಂಭವಾಗಿ ಹಲವು ವರ್ಷಗಳು ಕಳೆದಿದ್ದರೂ ಇನ್ನೂ ಪೂರ್ಣಗೊಂಡಿಲ್ಲ. ಸಾರ್ವಜನಿಕರು ಹಾಗೂ ವಾಹನ ಸವಾರರು ಎದುರಿಸುತ್ತಿರುವ ಸಮಸ್ಯೆಗಳನ್ನು ಅಧಿಕಾರಿಗಳು ಗಂಭೀರವಾಗಿ ತೆಗೆದುಕೊಂಡಂತಿಲ್ಲ.
ಹೆದ್ದಾರಿ ಕಾಮಗಾರಿಗಳ ಸಂದರ್ಭದಲ್ಲಿ ಸ್ಥಳೀಯರು, ರೈತರಿಗೆ ಆಗುತ್ತಿರುವ ತೊಂದರೆಗಳನ್ನು ನಿವಾರಿಸಲು ಅಗತ್ಯವಿರುವ ಕಡೆಗಳಲ್ಲಿ ಸರ್ವಿಸ್ ರಸ್ತೆ, ಅಂಡರ್‌ಪಾಸ್ ಹಾಗೂ ಸುರಕ್ಷಿತ ಸಂಪರ್ಕ ಮಾರ್ಗಗಳನ್ನು ಕಲ್ಪಿಸಬೇಕು ಎನ್ನುವ ಬೇಡಿಕೆಯನ್ನೂ ಗಂಭೀರವಾಗಿ ಪರಿಗಣಿಸಿದಂತಿಲ್ಲ.
‘ರಾಯಚೂರು ಅತ್ಯಂತ ಹಳೆಯ ಜಿಲ್ಲೆ. ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳು ಬೇಗ ಪೂರ್ಣಗೊಂಡರೆ ಸಾರಿಗೆ ಸಂಪರ್ಕ, ವ್ಯಾಪಾರ ವಹಿವಾಟು ಹೆಚ್ಚಾಗಲಿದೆ. ಜಿಲ್ಲೆಯ ಆರ್ಥಿಕ ಪ್ರಗತಿಗೆ ಅನುಕೂಲವಾಗಲಿದೆ. ಆದರೆ, ಅಧಿಕಾರಿಗಳು ನಿಗದಿತ ಸಮಯದಲ್ಲಿ ಕಾಮಗಾರಿ ಪೂರ್ಣಗಳಿಸಲು ಆಸಕ್ತಿ ವಹಿಸುತ್ತಿಲ್ಲ’ ಎಂದು ಸಾಮಾಜಿಕ ಹೋರಾಟಗಾರ ರಾಘವೇಂದ್ರ ಕುಷ್ಟಗಿ ಬೇಸರ ವ್ಯಕ್ತಪಡಿಸುತ್ತಾರೆ.
‘ಆಗಸ್ಟ್ ಎರಡನೇ ವಾರದಲ್ಲಿ ಎನ್‌ಎಚ್‌ಎಐ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಹಲವು ವಿಷಯಗಳ ಕುರಿತು ಚರ್ಚಿಸಿರುವೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಕೈಗೆತ್ತಿಕೊಂಡಿರುವ ಕಾಮಗಾರಿಯನ್ನು ಸಕಾಲದಲ್ಲಿ ಪೂರ್ಣಗೊಳಿಸಲು ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದೇನೆ’ ಎಂದು ಸಂಸದ ಜಿ. ಕುಮಾರ ನಾಯಕ ಹೇಳುತ್ತಾರೆ.
‘ಶಾಲೆಗಳು, ಗ್ರಾಮಗಳು, ಕೃಷಿ ಜಮೀನುಗಳು ಹಾಗೂ ಪ್ರಮುಖ ಸಂಪರ್ಕ ಸ್ಥಳಗಳ ಬಳಿ ಸಾರ್ವಜನಿಕರ ಸುರಕ್ಷತೆಗೆ ಅಗತ್ಯವಿರುವ ಅಂಡರ್‌ಪಾಸ್ ಮತ್ತು ಇತರೆ ಸುರಕ್ಷತಾ ವ್ಯವಸ್ಥೆಗಳನ್ನು ಕಲ್ಪಿಸಬೇಕು. ಕಾಮಗಾರಿಗಳಲ್ಲಿ ಯಾವುದೇ ಸಮಸ್ಯೆಗಳಿದ್ದರೆ ಅವುಗಳನ್ನು ಸಂಬಂಧಪಟ್ಟ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸಿ ತ್ವರಿತವಾಗಿ ಪರಿಹರಿಸಬೇಕು. ಕಾಮಗಾರಿ ವಿಳಂಬವಾಗದಂತೆ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿರುವೆ’ ಎನ್ನುತ್ತಾರೆ.
‘ಸಂತ್ರಸ್ತರಿಗೆ ಸೂಕ್ತ ಪರಿಹಾರ ಕೊಡಿ’
‘ಬೆಳಗಾವಿ–ರಾಯಚೂರು ಆರ್ಥಿಕ ಕಾರಿಡಾರ್–10ರ ಚತುಷ್ಪಥ ಹೆದ್ದಾರಿ ನಿರ್ಮಾಣಕ್ಕಾಗಿ ಕೈಗೊಂಡಿರುವ ಭೂಸ್ವಾಧೀನ ಪ್ರಕ್ರಿಯೆಯಲ್ಲಿ ತಮ್ಮ ಮನೆ ಹಾಗೂ ನಿವೇಶನವೂ ಸ್ವಾಧೀನಕ್ಕೊಳಪಟ್ಟಿದೆ. ಸರ್ಕಾರ ಸೂಕ್ತ ಪರಿಹಾರ ನೀಡಬೇಕು’ ಎಂದು ಸಿರವಾರ ತಾಲ್ಲೂಕಿನ ಕವಿತಾಳ ಹೋಬಳಿಯ ಶ್ರೀದೇವಿ ಮಲ್ಲಯ್ಯ ಸ್ವಾಮಿ ಮನವಿ ಮಾಡಿದ್ದಾರೆ.‘ಯಾವುದೇ ದಾಖಲೆ ಇಲ್ಲದೆ ನಮ್ಮ ಮನೆಯ ಹಣವನ್ನು ಬೇರೆಯವರಿಗೆ ನೀಡಿದ್ದಾರೆ. ಗ್ರಾಮ ಪಂಚಾಯಿತಿ, ಕಂದಾಯ ಇಲಾಖೆ ಪಂಚಾಮನಾಮ, ತಹಶೀಲ್ದಾರ್ ವರದಿಯನ್ವಯ ಭೂ ಸ್ವಾಧೀನ ಅಧಿಕಾರಿಗಳ ಆದೇಶದಂತೆ ನಮಗೆ ಹಣ ನೀಡಬೇಕು. ಹಣ ನೀಡುವವರೆಗೂ ನಮ್ಮ ಮನೆ ತೆರವುಗೊಳಿಸಲು ಅವಕಾಶ ನೀಡುವುದಿಲ್ಲ’ ಎಂದು ಸಂತ್ರಸ್ತೆ ಶ್ರೀದೇವಿ ಪಾತಾಪೂರು ಹೇಳುತ್ತಾರೆ.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260827-32-1261773088