
ಹಳೇಬೀಡು: ಆ. 28ರಿಂದ ಜಿನಮಂದಿರದಲ್ಲಿ ಪುಣ್ಯಪ್ರಭಾವನ
ಹಳೇಬೀಡು: ಅಡಗೂರು ಜಿನಮಂದಿರದಲ್ಲಿ ಆಗಸ್ಟ್ 28ರಿಂದ 3ದಿನ ನೂತನ ಮಾನಸ್ತಂಭದ ಮೇಲೆ ಚತುರ್ಮುಖ ಜಿನಬಿಂಬ ಪ್ರತಿಷ್ಠಾಪನಾ ಮಹೋತ್ಸವ ಹಾಗೂ ಪುಣ್ಯಪ್ರಭಾವನಾ ಕಾರ್ಯಕ್ರಮ ನಡೆಯಲಿದ್ದು, ಜಿನ ಮದಿರದಲ್ಲಿ ಸಂಭ್ರಮ ಮನೆ ಮಾಡಿದೆ.
21ಅಡಿ ಎತ್ತರದ ಬಿಳಿ ಗ್ರಾನೈಟ್ ಶಿಲೆಯಿಂದ ಅಷ್ಟ ಭುಜಾಕೃತಿಯಲ್ಲಿ ನಿರ್ಮಿಸಿರುವ ಮಾನಸ್ತಂಭದಲ್ಲಿ 104 ಜಿನ ಮೂರ್ತಿಗಳನ್ನು ಮೂಡಿಸಲಾಗಿದೆ. ಸ್ತಂಭದ ಮೇಲಿನ ಮಂಟಪದಲ್ಲಿ ಚತುರ್ಮುಖ ಜಿನಬಿಂಬ ಪ್ರತಿಷ್ಠಾಪಿಸಲಾಗುವುದು. ಜಿನ ಮಂದಿರ ಪ್ರವೇಶಿಸಿದ ತಕ್ಷಣ ಆಕರ್ಷಕವಾದ ಮಾನಸ್ತಂಭ ಭಕ್ತಿಭಾವ ಮೂಡಿಸುವಂತಿದೆ.
ಮಾನಸ್ತಂಭದಲ್ಲಿ ಅರಳಿರುವ ಕಲಾಕುಶಲತೆ ನೋಡಗರ ಕಣ್ಮನ ಸೆಳೆಯುವಂತಿದೆ. ನೂತನ ಮಾನಸ್ತಂಭದ ಮೇಲೆ ಜೈನಾಗಮ ವಿಧಿ ವಿಧಾನದೊಂದಿಗೆ ನಾಲ್ಕು ದಿಕ್ಕಿನಲ್ಲಿ ಜಿನ ಬಿಂಬ ಪ್ರತಿಷ್ಠಾಪಿಸುವ ಧಾರ್ಮಿಕ ಕಾರ್ಯಕ್ರಮಕ್ಕೆ ದೂರದ ಊರುಗಳಿಂದ ಭಕ್ತರು ಬರುತ್ತಿದ್ದಾರೆ.
ಜೈನ ಮುನಿ ತೀರ್ಥೋದ್ಧಾರಕ ವೀರಸಾಗರ ಮುನಿ ಮಹಾರಾಜರ ಸಾನಿಧ್ಯ ಹಾಗೂ ಶ್ರವಣಬೆಳಗೊಳದ ಜೈನ ಮಠದ ಪೀಠಾಧಿಪತಿ ಅಭಿನವ ಚಾರುಕೀರ್ತಿ ಭಟ್ಟಾರಕ ಪಟ್ಟಚಾರ್ಯವರ್ಯ ಸ್ವಾಮೀಜಿ ಅವರ ಉಪಸ್ಥಿತಿಯಲ್ಲಿ ಮೂರು ದಿನ ಪೂಜಾ ವಿಧಾನ ನಡೆಯಲಿದೆ ಎಂದು ಮಹಾವೀರ ಜೈನಸಂಘ ಅಧ್ಯಕ್ಷ ನಾಗೇಂದ್ರ ಕುಮಾರ್ ಹೇಳಿದರು.
ಜೈನಧರ್ಮದ 20ನೇ ಶತಮಾನದ ಪ್ರಥಮಚಾರ್ಯ ಶಾಂತಿಸಾಗರ ಮುನಿಮಹಾರಾಜರ ದೀಕ್ಷಾಗುರುಗಳಾದ ದೇವೇಂದ್ರಕೀರ್ತಿ (ದೇವಪ್ಪಸ್ವಾಮಿ) ಮುನಿ ಮಹಾರಾಜರ ಕರ್ಮ ಭೂಮಿಯಾಗಿದೆ ಅಡಗೂರು. ಜಿನ ಮಂದಿರವು ಹೊಯ್ಸರ ಕಾಲದಲ್ಲಿ ನಿರ್ಮಾಣವಾದ ಪುರಾತನ ಕಲಾಕೃತಿಯಾಗಿದೆ. ಹೀಗಾಗಿ ಅಡಗೂರು ಜಿನ ಮಂದಿರ ದೂರದ ಭಕ್ತರನ್ನು ಹೊಂದಿದೆ ಎಂದು ಮಹಾವೀರ ಜೈನ ಸಂಘ ಕಾರ್ಯದರ್ಶಿ ಶಶಿಕುಮಾರ್ ಹೇಳಿದರು.
ಆಗಸ್ಟ್ 28ರಂದು ಬೆಳಿಗ್ಗೆ 6ಗಂಟೆಗೆ ಮಂಗಲಾಷ್ಟಕ, ಸುಪ್ರಭಾತ, ಮಂಗಳವಾದ್ಯದೊಂದಿಗೆ ಪೂಜಾ ವಿಧಾನ ಆರಂಭವಾಗುತ್ತದೆ. ಮಹಾವೀರ ತೀರ್ಥಂಕರರಿಗೆ ನಿತ್ಯಾಭಿಷೇಕ, ರತ್ನತ್ರಯ ಸೂತ್ರಧಾರಣೆ, ಧ್ರಜಾರೋಹಣ, ಶಾಂತಿಹೋಮ, ವೇದಿಶುದ್ದಿ, ಶಿಖರ ಕಳಸ ಶುದ್ದಿ, ವಾಸ್ತುವಿಧಾನ, ಯಾಗಮಂಡಲ ಆರಾಧನೆ ಆರತಿ ಕಾರ್ಯಕ್ರಮ ನಡೆಯಲಿದೆ.
ಆಗಸ್ಟ್ 29ರಂದು ಆಗ್ರೋದಕ ಮೆರವಣಿಗೆ, ಬೃಹತ್ ಶಾಂತಿಧಾರೆ, ಶಾಂತಿವಿಧಾನ ಮುನಿಗಳ ಮಂಗಳ ಪ್ರವಚನ ನಡೆಯುತ್ತದೆ. ಆಗಸ್ಟ್ 30ರಂದು ಅಭಿನವ ಚಾರುಕೀರ್ತಿ ಭಟ್ಟಾರಕ ಪಟ್ಟಚಾರ್ಯಸ ಸ್ವಾಮೀಜಿ ಅವರ ಪುರಪ್ರವೇಶ, ಮಾನಸ್ತಂಭದ ಮೇಲೆ ಚತುರ್ಮುಖ ಜಿನ ಬಿಂಬ ಪ್ರತಿಷ್ಠಾಪನೆ ನಡೆಯಲಿದೆ. ನಂತರ ನೂತನ ಜಿನಬಿಂಬಗಳಿಗೆ ಮಸ್ತಕಾಭಿಷೇಕ ನಡೆಯುತ್ತದೆ. ಧ್ವಜ ಅವರೋಹಣ ಮಂಗಳಾರತಿಯೊಂದಿಗೆ ಸಮಾಪ್ತಿಯಾಗುತ್ತದೆ.
ಪ್ರತಿಷ್ಠಾಚಾರ್ಯ ಶ್ರವಣಬೆಳಗೊಳದ ನಂದಕುಮಾರಶಾಸ್ತ್ರಿ, ಸ್ಥಳೀಯ ಪುರೋಹಿತರಾದ ನಾಗರಾಜು, ಶೀತಲ ಕುಮಾರ್ ಪೂಜಾ ವಿಧಾನ ನಡೆಸುತ್ತಾರೆ. ಬೆಂಗಳೂರಿನ ಶಾಮಲ ಜಿನರಾಜಯ್ಯ ಪರಿವಾರ ಮಾನಸ್ತಂಭ ನಿರ್ಮಾಣ ಮಾಡಿಸಿಕೊಟ್ಟಿದ್ದಾರೆ. ಅಡಗೂರಿನ ಅಂಜನ ಶಶಿಕುಮಾರ್ ಪರಿವಾರ ಚತುರ್ಮುಖ ಜಿನಬಿಂಬ ಕೊಟ್ಟಿದ್ದಾರೆ. ಕಡದರವಳ್ಳಿಯ ಪದ್ಮಶ್ರೀ, ಮೖತ್ಯುಂಜಯ ಜೈನ್ ಶಿಖರ ಕಳಸ ನೀಡಿದ್ದಾರೆ. ಜಿನ ಭಕ್ತರ ಸಹಕಾರದಿಂದ ಕಾರ್ಯಕ್ರಮ ವೖಭವದಿಂದ ನಡೆಯಲಿದೆ ಎಂದು ಧವನ್ ಜೈನ್ ತಿಳಿಸಿದ್ದಾರೆ.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260827-36-1836172785