
BBK 13: ಸೆಗಣಿ ಫೇಸ್‌ಮಾಸ್ಕ್, ತಲೆ ಬೋಳಿಸುವುದು; ಸ್ಪರ್ಧಿಗಳಿಗೆ 'ಬಿಗ್' ಟಾಸ್ಕ್
ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 13ರ ಪ್ರಾರಂಭಕ್ಕೆ ದಿನಗಣನೆ ಶುರುವಾಗಿದೆ. ಇದೇ 16 ರಿಂದ ಬಿಗ್ ಬಾಸ್ ಸೀಸನ್ 13 ಆರಂಭವಾಗುತ್ತಿದೆ.
ಇದೀಗ ಬಿಗ್ ಬಾಸ್ ಮನೆಗೆ ಪ್ರವೇಶಿಸುವ ಸ್ಫರ್ಧಿಗಳನ್ನು ಆಯ್ಕೆ ಮಾಡಲು ಅಗ್ನಿಪರೀಕ್ಷೆ ಎಂಬ ವಿಶೇಷ ಸ್ಪರ್ಧೆಯನ್ನು ಏರ್ಪಡಿಸಿದ್ದು, ಇದರಲ್ಲಿ ಗೆದ್ದವರು ಬಿಗ್‌ಬಾಸ್ ಮನೆಯನ್ನು ಪ್ರವೇಶಿಸಲಿದ್ದಾರೆ.
ಈ ಅಗ್ನಿಪರೀಕ್ಷೆ ಸುತ್ತಿನಲ್ಲಿ ಬಿಗ್‌ಬಾಸ್‌ನ ಮಾಜಿ ಸ್ಫರ್ಧಿಗಳಾದ ಶ್ರುತಿ, ವಿನಯ್ ಗೌಡ, ಚಂದನ್ ಶೆಟ್ಟಿ ಹಾಗೂ ಸಂಗೀತಾ ಶೃಂಗೇರಿ ಅವರು ತೀರ್ಪುಗಾರರಾಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಅಗ್ನಿಪರೀಕ್ಷೆಯ ಕುರಿತು ಕಲರ್ಸ್ ಕನ್ನಡ ವಾಹಿನಿಯು ಪ್ರೊಮೊ ಹಂಚಿಕೊಂಡಿದ್ದು, ‘ಅಗ್ನಿಪರೀಕ್ಷೆಯಲ್ಲಿ ಗೆದ್ದು ಮುಂದೆ ಸಾಗಲು ಸಖತ್ ಗುಂಡಿಗೆ ಬೇಕು’ ಎಂದು ಬರೆದುಕೊಂಡಿದೆ.
ಬಿಗ್‌ಬಾಸ್ ಸೀಸನ್ 13ರ ಸ್ಪರ್ಧಿಗಳಾಗಲು ಲಕ್ಷಕ್ಕೂ ಹೆಚ್ಚು ಜನರು ಅರ್ಜಿ ಸಲ್ಲಿಸಿದ್ದರು. ಆ ಪೈಕಿ 60 ಜನರನ್ನು ಅಗ್ನಿಪರೀಕ್ಷೆ ಸುತ್ತಿಗೆ ಆಯ್ಕೆ ಮಾಡಲಾಗಿದೆ. ಈ ಮಹಾ ಕಾಳಗದಲ್ಲಿ ಭಾಗಿಯಾಗಿರುವ ಸ್ಫರ್ಧಿಗಳಿಗೆ, ತಲೆ ಬೋಳಿಸಿಕೊಳ್ಳುವುದು, ಮುಖಕ್ಕೆ ಸೆಗಣಿಯನ್ನು ಫೇಸ್ ಮಾಸ್ಕ್‌ನಂತೆ ಹಚ್ಚಿಕೊಳ್ಳುವುದು ಸೇರಿದಂತೆ ವಿವಿಧ ಟಾಸ್ಕ್‌ಗಳನ್ನು ನೀಡಲಾಗಿದೆ.
ಅಮುಕು ಡುಮುಕು ಮಂಜುನಾಥ್
ಈ ಅಗ್ನಿಪರೀಕ್ಷೆ ಸುತ್ತಿನಲ್ಲಿ ಸಾಮಾಜಿಕ ಮಾಧ್ಯಮ ಪ್ರಭಾವಿ ಅಮುಕು ಡುಮುಕು ಮಂಜುನಾಥ್ ಸೇರಿದಂತೆ ಇತರ ಸ್ಪರ್ಧಿಗಳು ಭಾಗಿಯಾಗಿದ್ದಾರೆ. ಪ್ರೊಮೊದಲ್ಲಿ ಸಂಗೀತ ಅವರು 'ಐ ಲವ್ ಯು ಹೇಳುವಂತೆ ಇಂಪ್ರೆಸ್ ಮಾಡು' ಎಂದು ಮಂಜುನಾಥ್‌ಗೆ ಹೇಳಿದ್ದಾರೆ. ಅದಕ್ಕೆ ಅವರು ‘ನಾನು ಯಾರನ್ನು ಇಂಪ್ರೆಸ್ ಮಾಡಲು ಬಂದಿಲ್ಲ. ನಾನು ಇರುವುದೇ ಹೀಗೆ ಎಂದು ಹೇಳಿದ್ದಕ್ಕೆ, ವಿನಯ್ ಗೌಡ ಕೋಪದಿಂದ ‘ಆಗಲ್ಲ ಅಂದ್ರೆ ಹೊರಗೆ ಹೋಗು’ ಎಂದಿದ್ದಾರೆ.
ಬಿಗ್‌ಬಾಸ್ ಸೀಸನ್ 12ರ ವಿಜೇತ ಗಿಲ್ಲಿನಟ ಅವರನ್ನು ಏಕೆ ತೀರ್ಪುಗಾರರಾಗಿ ಅಗ್ನಿಪರೀಕ್ಷೆಗೆ ಕರೆದಿಲ್ಲ ಎಂಬ ಪ್ರಶ್ನೆಗಳು ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆಯಾಗುತ್ತಿವೆ. ಮಾತ್ರವಲ್ಲದೆ, ಈವರೆಗೆ ಬಿಗ್‌ಬಾಸ್‌ನ ಯಾವುದೇ ಪ್ರೊಮೊದಲ್ಲಿ ಕಳೆದ ಸೀಸನ್‌ನ ವಿಜೇತ ಗಿಲ್ಲಿನಟ ಅವರು ಕಾಣಿಸಿಕೊಳ್ಳದಿರುವುದಕ್ಕೆ ಅಭಿಮಾನಿಗಳಲ್ಲಿ ಬೇಸರ ವ್ಯಕ್ತವಾಗಿದೆ.
ಸದ್ಯ ಈ ಅಗ್ನಿಪರೀಕ್ಷೆಯ ಸುತ್ತಿನಲ್ಲಿ ವಿಜೇತರಾಗುವ ಸ್ಪರ್ಧಿಗಳು ಬಿಗ್‌ಬಾಸ್ ಮನೆ ಪ್ರವೇಶಿಸುವ ನಿರೀಕ್ಷೆ ಇದೆ. ಆದರೆ ಕೊನೆಯಲ್ಲಿ ಯಾವ ರೀತಿಯ ಟ್ವಿಸ್ಟ್ ಇರಲಿದೆ ಎಂಬುದನ್ನು ಕಾದು ನೋಡಬೇಕಿದೆ.