
ವಿದ್ಯಾರ್ಥಿಗಳಿಗೆ ದುಬಾರಿ ಶುಲ್ಕ: ಬಿಎಂಟಿಸಿ ಸಮರ್ಥನೆ
ಬೆಂಗಳೂರು: ವಿದ್ಯಾರ್ಥಿಗಳಿಂದ ₹35 ಅನ್ನು ನೈಸ್ ರಸ್ತೆ ಶುಲ್ಕವಾಗಿ ವಸೂಲಿ ಮಾಡುತ್ತಿರುವ ಕ್ರಮವನ್ನು ಬಿಎಂಟಿಸಿ ಸಮರ್ಥಿಸಿಕೊಂಡಿದೆ. ಟೋಲ್ ಶುಲ್ಕ ಬೇಡದಿದ್ದರೆ ಬೇರೆ ಮಾರ್ಗಗಳಲ್ಲಿ ಸಂಚರಿಸಲಿ ಎಂದು ಸಲಹೆ ನೀಡಿದೆ.
ಮಾದಾವರ–ನೈಸ್ ರಸ್ತೆ ಮೈಸೂರು ರಸ್ತೆ ಜಂಕ್ಷನ್ ನಡುವೆ ಓಡಾಡುವ ಸಾಮಾನ್ಯ ಪ್ರಯಾಣಿಕರಿಗೆ ಟೋಲ್ ಶುಲ್ಕ ₹15 ಇದ್ದರೆ, ವಿದ್ಯಾರ್ಥಿಗಳಿಗೆ ₹35 ವಸೂಲಿ ಮಾಡಲಾಗುತ್ತಿದೆ. ಈ ಬಗ್ಗೆ ‘ನೈಸ್ ರಸ್ತೆಯಲ್ಲಿ ಬಿಎಂಟಿಸಿ ಸುಲಿಗೆ’ ಎಂಬ ವಿಶೇಷ ‘ವರದಿ’ ಮೂಲಕ ಗಮನ ಸೆಳೆಯಲಾಗಿತ್ತು. ಆದರೆ, ಪಾಸ್ ಮಾಡಿ ನೈಸ್ ರಸ್ತೆಯಲ್ಲಿ ಸಾಗುವ ಎಲ್ಲರಿಗೂ ₹35 ನಿಗದಿಪಡಿಸಲಾಗಿದೆ. ಇದು ‘ವಿಸ್ತಾರ’ ಪಾಸ್, ತಿಂಗಳ ಪಾಸ್, ವಿದ್ಯಾರ್ಥಿ ಪಾಸ್ ಸಹಿತ ಎಲ್ಲ ಪಾಸ್‌ಗಳಿಗೆ ಅನ್ವಯ ಎಂದು ಹೇಳಿದೆ.
ವಿದ್ಯಾರ್ಥಿನಿಯರು ಶಕ್ತಿ ಯೋಜನೆಯಡಿ ಉಚಿತವಾಗಿ ಪ್ರಯಾಣಿಸಲು ಅವಕಾಶ ನೀಡಲಾಗಿದೆ. ‘ಶಕ್ತಿ’ ಟಿಕೆಟ್‌ನಲ್ಲಿಯೂ ಟೋಲ್ ₹15 ಎಂದು ನಮೂದಿಸಲಾಗಿದ್ದು, ಅದನ್ನು ವಿದ್ಯಾರ್ಥಿನಿಯರಿಂದ ತೆಗೆದುಕೊಳ್ಳದೇ ಬಿಎಂಟಿಸಿಯೇ ಭರಿಸುತ್ತಿದೆ. ವಿದ್ಯಾರ್ಥಿನಿಯರಂತೆ ವಿದ್ಯಾರ್ಥಿಗಳಿಗೂ ಪ್ರಯಾಣ ಉಚಿತ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಘೋಷಣೆ ಮಾಡಿದ್ದರೂ ಟೋಲ್ ವಿದ್ಯಾರ್ಥಿನಿಯರಿಗಷ್ಟೇ ಉಚಿತವಾಗಿದೆ. ವಿದ್ಯಾರ್ಥಿಗಳಿಂದ ಮಾತ್ರ ಸಾಮಾನ್ಯ ಪ್ರಯಾಣಿಕರಿಗೆ ನಿಗದಿಪಡಿಸಿರುವ ಟೋಲ್ ಶುಲ್ಕದ ಸುಮಾರು ಎರಡೂವರೆ ಪಟ್ಟು ವಸೂಲಿ ಮಾಡಲಾಗುತ್ತಿದೆ. ವಿದ್ಯಾರ್ಥಿನಿಯರಂತೆ ವಿದ್ಯಾರ್ಥಿಗಳಿಗೂ ಟೋಲ್ ಶುಲ್ಕ ಪಡೆಯಬಾರದು ಎಂದು ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ.
‘ನೈಸ್ ರಸ್ತೆಯು ಟೋಲ್ ರಸ್ತೆಯಾಗಿದ್ದು, ಈ ಮಾರ್ಗಕ್ಕೆ ಪರ್ಯಾಯ ರಸ್ತೆಗಳು ಲಭ್ಯವಿವೆ. ಆದ್ದರಿಂದ ವಿದ್ಯಾರ್ಥಿ ರಿಯಾಯಿತಿ ಪಾಸ್ ಹೊಂದಿರುವವರು ಪ್ರಯಾಣದ ಅಗತ್ಯಕ್ಕೆ ಅನುಗುಣವಾಗಿ ಲಭ್ಯ ಇರುವ ಪರ್ಯಾಯ ಮಾರ್ಗಗಳನ್ನು ಬಳಸಬೇಕು. ಆದರೂ ನೈಸ್ ರಸ್ತೆಯನ್ನೇ ಆಯ್ಕೆ ಮಾಡಿಕೊಂಡು ಪ್ರಯಾಣಿಸಿದರೆ ಟೋಲ್ ಶುಲ್ಕವನ್ನು ಪಾವತಿಸಬೇಕಾಗುತ್ತದೆ’ ಎಂದು ಬಿಎಂಟಿಸಿ ಸ್ಪಷ್ಟನೆ ನೀಡಿದೆ.
‘ಟೋಲ್ ರಸ್ತೆಯಲ್ಲಿ ಉಚಿತವಾಗಿ ಪ್ರಯಾಣಿಸಲು ಅವಕಾಶ ಇಲ್ಲದ ಮೇಲೆ ಪಾಸ್ ಯಾಕೆ ನೀಡಲಾಗಿದೆ? ನೈಸ್ ರಸ್ತೆಗೆ ಅವಕಾಶವಿಲ್ಲ ಎಂದು ಪರ್ಯಾಯ ರಸ್ತೆಗೇ ಪಾಸ್ ನೀಡಬೇಕಿತ್ತು. ವಿದ್ಯಾರ್ಥಿನಿಯರಿಗೆ ನೈಸ್ ಮಾರ್ಗದಲ್ಲಿ ಉಚಿತವಾಗಿ ಪ್ರಯಾಣಿಸಲು ಅವಕಾಶ ಇರುವಾಗ ವಿದ್ಯಾರ್ಥಿಗಳಿಗೆ ಯಾಕಿಲ್ಲ’ ಎಂದು ವಿದ್ಯಾರ್ಥಿಗಳು ಪ್ರಶ್ನಿಸಿದ್ದಾರೆ.
ಟೋಲ್ ₹15 ಇರುವಾಗ ವಿದ್ಯಾರ್ಥಿಗಳಿಂದ ₹35 ವಸೂಲಿ ಮಾಡುತ್ತಿರುವುದನ್ನೂ ಸಮರ್ಥಿಸಿಕೊಂಡಿರುವ ಬಿಎಂಟಿಸಿ, ‘ಎಲ್ಲ ಪಾಸ್ ಹೊಂದಿರುವವರಿಗೆ ಟೋಲ್ ಒಂದೇ ರೀತಿ ನಿಗದಿಯಾಗಿದೆ. ವಿದ್ಯಾರ್ಥಿಗಳಿಗಾಗಿ ಈ ನಿಯಮ ಬದಲಾಯಿಸಲು ಸಾಧ್ಯವಿಲ್ಲ’ ಎಂದು ಹೇಳಿದೆ.
‘ನಿಗಮಗಳ ಬಸ್‌ಗಳಲ್ಲಿ ವಿದ್ಯಾರ್ಥಿನಿಯರಂತೆ ವಿದ್ಯಾರ್ಥಿಗಳಿಗೂ ಪ್ರಯಾಣ ಉಚಿತ ಯೋಜನೆ ಜಾರಿ ಮಾಡಿ ಲಕ್ಷಾಂತರ ವಿದ್ಯಾರ್ಥಿಗಳಿಗೆ ಸರ್ಕಾರ ಅನುಕೂಲ ಮಾಡಿಕೊಟ್ಟಿದೆ. ನೈಸ್ ರಸ್ತೆಯಲ್ಲಿ ಸಾಗುವ ವಿದ್ಯಾರ್ಥಿಗಳಿಂದ ಮಾತ್ರ ಯಾಕೆ ದುಬಾರಿ ಶುಲ್ಕ ವಸೂಲಿ ಮಾಡಲಾಗುತ್ತಿದೆ’ ಎಂದು ಪ್ರಶ್ನಿಸಿರುವ ವಿದ್ಯಾರ್ಥಿಗಳು ‘ಸಾರಿಗೆ ಸಚಿವರೇ ಇದನ್ನು ಗಮನಿಸಿ’ ಎಂದು ಆಗ್ರಹಿಸಿದ್ದಾರೆ.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260809-4-1409371048