ಹನೂರು: ಹೊಸ ಚಪ್ಪಲಿ ಬಂದಿದ್ದು ಎಲ್ಲಿಂದ? ವಿಡಿಯೊ ಹರಿಯಬಿಟ್ಟ 4ನೇ ಆರೋಪಿ

ಹನೂರು: ಹೊಸ ಚಪ್ಪಲಿ ಬಂದಿದ್ದು ಎಲ್ಲಿಂದ? ವಿಡಿಯೊ ಹರಿಯಬಿಟ್ಟ 4ನೇ ಆರೋಪಿ

ಹನೂರು: ಹೊಸ ಚಪ್ಪಲಿ ಬಂದಿದ್ದು ಎಲ್ಲಿಂದ? ವಿಡಿಯೊ ಹರಿಯಬಿಟ್ಟ 4ನೇ ಆರೋಪಿ

ಹನೂರು(ಚಾಮರಾಜನಗರ): ಕಾವೇರಿ ವನ್ಯಜೀವಿಧಾಮದಲ್ಲಿ ಈಚೆಗೆ ನಡೆದ ಶೂಟೌಟ್ ಸ್ಥಳದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ವಶಪಡಿಸಿಕೊಂಡಿರುವ ವಸ್ತುಗಳಲ್ಲಿರುವ ಒಂದು ಜೊತೆ ಹೊಸ ಹವಾಯ್ ಚಪ್ಪಲಿ ಹಲವು ಅನುಮಾನ ಹುಟ್ಟು ಹಾಕಿದೆ. 

ಆರೋಪಿಗಳು ಧರಿಸಿದ್ದರು ಎನ್ನಲಾದ ಹವಾಯ್‌ ಚಪ್ಪಲಿಗಳು ಹೊಸದಾಗಿ ಖರೀದಿಸಿ ತಂದಿರುವಂತೆ ಕಾಣುತ್ತಿವೆ. ಎಲ್ಲಿಯೂ ಸ್ವಲ್ಪವೂ ಕೊಳೆಯಾಗಿಲ್ಲ. ಪಾದದ ಅಚ್ಚು ಮೂಡಿಲ್ಲ. ಚಪ್ಪಲಿಗಳ ಮೇಲಿನ ಲೇಬಲ್ ಕೂಡ ಹಾಗೆಯೇ ಇದೆ. ಮಲೆ ಮಹದೇಶ್ವರ ವನ್ಯಧಾಮದ ಹೆಸರಿರುವ ಬ್ಯಾಗ್ ಕೂಡ ಇದೆ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಆಕ್ಷೇಪ ವ್ಯಕ್ತವಾಗಿವೆ. 

‘ಅರಣ್ಯ ಇಲಾಖೆ ಅಧಿಕಾರಿಗಳು ಪ್ರಕರಣದ ದಿಕ್ಕು ತಪ್ಪಿಸಲು ಯತ್ನಿಸುತ್ತಿದ್ದಾರೆ. ರಾತ್ರಿಪೂರ್ತಿ ಕಾಡಿನಲ್ಲಿ ಸುತ್ತಾಡಿದರೂ ನನ್ನ ಪತಿ ಧರಿಸಿದ್ದಾರೆ ಎಂದು ಹೇಳಲಾದ ಚಪ್ಪಲಿಗಳು ಏಕೆ ಸ್ವಲ್ಪವೂ ಕೊಳೆಯಾಗಿಲ್ಲ’ ಎಂದು ಮೃತ ಕುಮಾರ್ ಅವರ ಪತ್ನಿ ಡೊಮಿನಾ ಪ್ರಶ್ನಿಸಿದ್ದಾರೆ. ಇದೊಂದು ಪೂರ್ವನಿಯೋಜಿತ ಎನ್‌ಕೌಂಟರ್ ಕೃತ್ಯದಂತೆ ಕಾಣುತ್ತಿದೆ ಎಂದು ಅವರು ಅನುಮಾನ ವ್ಯಕ್ತಪಡಿಸಿದ್ದಾರೆ.  

ಅಧಿಕಾರಿಗಳ ಸ್ಪಷ್ಟನೆ: ಹೊಸ ಚಪ್ಪಲಿಗಳು ಆರೋಪಿಗಳು ಧರಿಸಿದ್ದ ಚಪ್ಪಲಿಗಳಲ್ಲ. ಅವರು ಬ್ಯಾಗ್‌ನಲ್ಲಿಟ್ಟು ಕೊಂಡು ತಂದಿದ್ದ ಚಪ್ಪಲಿಗಳು’ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ.‌

ಘಟನಾ ಸ್ಥಳದಲ್ಲಿ ವಶಕ್ಕೆ ಪಡೆಯಲಾದ ವಸ್ತುಗಳ ಪೈಕಿ ಒಂದು ಜೊತೆ ಹೊಸ ಚಪ್ಪಲಿ ಸಿಕ್ಕಿರುವ ಕುರಿತು ಹೊರಡಿಸಿದ್ದ ಅಧಿಕೃತ ಪ್ರಕಟಣೆಯನ್ನು ಅವರು ಸಮರ್ಥಿಸಿಕೊಂಡಿದ್ದಾರೆ.

ಕಾವೇರಿ ವನ್ಯಜೀವಿಧಾಮದಲ್ಲಿ ಈಚೆಗೆ ನಡೆದ ಶೂಟೌಟ್ ಸಂದರ್ಭದಲ್ಲಿ ತಪ್ಪಿಸಿಕೊಂಡಿದ್ದ ನಾಲ್ಕನೇ ಆರೋಪಿ ಮಹಿಮ ದಾಸ್‌ ಅಜ್ಞಾತ ಸ್ಥಳವೊಂದರಿಂದ ವಿಡಿಯೊ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಇದು ಭಾರಿ ಸದ್ದು ಮಾಡುತ್ತಿದೆ.

‘ಘಟನೆ ನಡೆದಾಗ ಬೆಳಗಿನ ಜಾವ ಸುಮಾರು 5.30 ಇರಬಹುದು. ಅರಣ್ಯ ಇಲಾಖೆ ಸಿಬ್ಬಂದಿ ಏಕಾಏಕಿ ಗುಂಡು ಹಾರಿಸಿದರು. ಭಯಗೊಂಡು ಅಲ್ಲಿಂದ ತಪ್ಪಿಸಿಕೊಂಡು ಓಡಿ ಹೋದೆ. ಅನಾರೋಗ್ಯದಿಂದಾಗಿ ಮನೆಗೆ ತೆರಳಿ ಅಲ್ಲಿಂದ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದೆ. ಪ್ರಕರಣದಲ್ಲಿ ನನ್ನನ್ನು ಸಾಕ್ಷಿಯಾಗಿಸಲು ಅರಣ್ಯ ಇಲಾಖೆ ಸಿಬ್ಬಂದಿ ಹುಡುಕಾಡುತ್ತಿದ್ದು, ಭಯಗೊಂಡಿದ್ದೇನೆ. ಪೊಲೀಸರು ರಕ್ಷಣೆ ನೀಡಬೇಕು’ ಎಂದು ಮಹಿಮ ದಾಸ್ ವಿಡಿಯೊದಲ್ಲಿ ಹೇಳಿದ್ದಾರೆ.

ಪಿಎಂಕೆ ಮುಖಂಡರ ಭೇಟಿ: ತಮಿಳುನಾಡಿನ ಪಟ್ಟಾಳಿ ಮಕ್ಕಳ್ ಕಚ್ಚಿ(ಪಿಎಂಕೆ) ಪಕ್ಷದ ಮುಖಂಡರು ಶೂಟೌಟ್‌ನಲ್ಲಿ ಮೃತಪಟ್ಟವರ ಕುಟುಂಬಸ್ಥರನ್ನು ಭೇಟಿಯಾಗಿ ಸಾಂತ್ವನ ಹೇಳಿದರು.

ಕಾಡುಪ್ರಾಣಿಗಳನ್ನು ಬೇಟೆಯಾಡಿದ ಕಾರಣಕ್ಕೆ ಕರ್ನಾಟಕ ಅರಣ್ಯ ಇಲಾಖೆ ಸಿಬ್ಬಂದಿ ಗುಂಡಿಟ್ಟು ಕೊಂದಿರುವುದು ಖಂಡನೀಯ. ಪ್ರಕರಣದಲ್ಲಿ ಸಿಬಿಐ ತನಿಖೆ ನಡೆಸಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಅವರು ಒತ್ತಾಯಿಸಿದರು.

ಮೃತರ ಕುಟುಂಬಗಳಿಗೆ ತಲಾ ₹1 ಕೋಟಿ ಪರಿಹಾರ ಮತ್ತು ಸರ್ಕಾರಿ ಉದ್ಯೋಗ ನೀಡಬೇಕು. ತಮಿಳು ಭಾಷಿಕರಿಗೆ ರಕ್ಷಣೆ ನೀಡಬೇಕು‘ ಎಂದು ಆಗ್ರಹಿಸಿದರು. ಮಾಜಿ ಶಾಸಕರಾದ ವೆಂಕಟೇಶ್‌, ವೇಲುಸ್ವಾಮಿ, ಅರಸಂಗ, ಮಂಜುನಾಥ್‌ ಸೇರಿದಂತೆ ಹಲವರು ಜೊತೆಗಿದ್ದರು. 

ಎಫ್‌ಎಸ್‌ಎಲ್‌ ತಂಡ ಭೇಟಿ: ಘಟನಾ ಸ್ಥಳಕ್ಕೆ ವಿಧಿವಿಜ್ಞಾನ ಪ್ರಯೋಗಾಲಯ ತಜ್ಞರ ತಂಡ ಭೇಟಿ ನೀಡಿ ಗುಂಡಿನ ಚೂರು, ರಕ್ತದ ಮಾದರಿ ಸಹಿತ ಹಲವು ಸಾಕ್ಷ್ಯಗಳನ್ನು ಸಂಗ್ರಹಿಸಿತು.

ಮೃತರ ಕುಟುಂಬಸ್ಥರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ನೀಡಿರುವ ಹೇಳಿಕೆಗಳು ವ್ಯತಿರಿಕ್ತವಾಗಿರುವುದರಿಂದ ಎಲ್ಲ ಆಯಾಮಗಳಲ್ಲಿ ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ