
ತುಮಕೂರು: ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧಿ ಕೊರತೆ; ರೋಗಿಗಳ ಪರದಾಟ
ತುಮಕೂರು: ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳಿಗೆ ಅಗತ್ಯ ಪ್ರಮಾಣದಷ್ಟು ಔಷಧಿ, ಮಾತ್ರೆ ಪೂರೈಕೆಯಾಗುತ್ತಿಲ್ಲ. ಸಕಾಲಕ್ಕೆ ಚಿಕಿತ್ಸೆ ಸಿಗದೆ ರೋಗಿಗಳು ಖಾಸಗಿ ಆಸ್ಪತ್ರೆ ಕಡೆಗೆ ಹೆಜ್ಜೆ ಹಾಕುತ್ತಿದ್ದಾರೆ. ಇನ್ನೂ ಕೆಲವರು ಆಸ್ಪತ್ರೆ ಹೊರಗಿನ ಔಷಧಾಲಯಗಳಿಗೆ ದುಬಾರಿ ಹಣ ನೀಡಿ ಔಷಧಿ ಖರೀದಿಸುತ್ತಿದ್ದಾರೆ.
ಹಾವು ಕಡಿತಕ್ಕೆ ಬೇಕಾದ ಔಷಧಿ ಎಲ್ಲ ಆಸ್ಪತ್ರೆಗಳಲ್ಲಿ ಲಭ್ಯವಿಲ್ಲ. ಹಾವು ಕಚ್ಚಿದವರಿಗೆ ಕನಿಷ್ಠ 10 ವಯಲ್ ಎಎಸ್‌ವಿ ಔಷಧಿ ಬೇಕು. ತಾಲ್ಲೂಕು ಆಸ್ಪತ್ರೆ, ಪಿಎಚ್‌ಸಿಗಳಲ್ಲಿ ಇಷ್ಟು ಪ್ರಮಾಣದಲ್ಲಿ ಸಿಗುತ್ತಿಲ್ಲ. ಹಾವು ಕಡಿತಕ್ಕೆ ಒಳಗಾದವರು ಪ್ರಾಣ ಉಳಿಸಿಕೊಳ್ಳಲು ದೊಡ್ಡಾಸ್ಪತ್ರೆಗೆ ಬರುವ ಮಾರ್ಗ ಮಧ್ಯದಲ್ಲಿಯೇ ಉಸಿರು ಚೆಲ್ಲುತ್ತಿರುವ ಪ್ರಕರಣಗಳು ವರದಿಯಾಗುತ್ತಲೇ ಇವೆ.
ವಿಷ ಸೇವಿಸಿದವರಿಗೆ ತುರ್ತು ಸಮಯದಲ್ಲಿ ಒದಗಿಸಬೇಕಾದ ಔಷಧಿ ಸಮರ್ಪಕವಾಗಿ ಸರಬರಾಜು ಆಗುತ್ತಿಲ್ಲ. ಗಾಯಾಳುಗಳಿಗೆ ಬ್ಯಾಂಡೇಜ್ ಹಾಕಲು ಬೇಕಾದ ಹತ್ತಿಯೂ (ಕಾಟನ್) ಇಲ್ಲದಂತಹ ಸ್ಥಿತಿ ಕೆಲ ಆಸ್ಪತ್ರೆಗಳಲ್ಲಿ ನಿರ್ಮಾಣವಾಗಿದೆ. ಕಾಟನ್ ಖರೀದಿಗೆ ಜಿಲ್ಲಾ ಆಸ್ಪತ್ರೆಯಿಂದ 2 ವರ್ಷಕ್ಕೊಮ್ಮೆ ಟೆಂಡರ್ ಕರೆಯಲಾಗುತ್ತಿದೆ. ಈಗ ಟೆಂಡರ್ ಪ್ರಕ್ರಿಯೆ ನಡೆಯುತ್ತಿದೆ.
1 ಜಿಲ್ಲಾ ಆಸ್ಪತ್ರೆ, 9 ತಾಲ್ಲೂಕು ಆಸ್ಪತ್ರೆ, 4 ಸಮುದಾಯ ಆರೋಗ್ಯ ಕೇಂದ್ರ, 144 ಪ್ರಾಥಮಿಕ ಆರೋಗ್ಯ ಕೇಂದ್ರ, 6 ನಗರ ಆರೋಗ್ಯ ಕೇಂದ್ರ, 10 ವಿಸ್ತರಣಾ ಘಟಕ, 572 ಆರೋಗ್ಯ ಉಪಕೇಂದ್ರ ಮತ್ತು ಆರೋಗ್ಯ ಕ್ಷೇಮ ಕೇಂದ್ರ ಸೇರಿ ಒಟ್ಟು 746 ಸರ್ಕಾರಿ ಆರೋಗ್ಯ ಸಂಸ್ಥೆಗಳಿವೆ.
ಆರೋಗ್ಯ ಇಲಾಖೆ ಅಂಕಿ– ಅಂಶದ ಪ್ರಕಾರ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ದಿನಕ್ಕೆ ಅಂದಾಜು 7,919, ತಾಲ್ಲೂಕು ಆಸ್ಪತ್ರೆಗಳಿಗೆ 5,220 ಹೊರ ರೋಗಿಗಳು ಭೇಟಿ ನೀಡುತ್ತಿದ್ದಾರೆ. ರೋಗಿಗಳ ಸಂಖ್ಯೆಗೆ ತಕ್ಕಷ್ಟು ಔಷಧಿ ಲಭ್ಯವಿಲ್ಲದೆ ಇಲ್ಲಿಗೆ ಬರುವವರು ಪರದಾಡುತ್ತಿದ್ದಾರೆ. ಒಂದೆಡೆ ವೈದ್ಯರ ಕೊರತೆ, ಮತ್ತೊಂದೆಡೆ ಔಷಧಿ ಅಲಭ್ಯತೆಯಿಂದ ಆಸ್ಪತ್ರೆಗಳು ನಲುಗುತ್ತಿವೆ.
ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿರುವ ರಾಜ್ಯ ವೈದ್ಯಕೀಯ ಸರಬರಾಜು ನಿಗಮದ ಜಿಲ್ಲಾ ಔಷಧ ಉಗ್ರಾಣದಿಂದ ಎಲ್ಲ ಆಸ್ಪತ್ರೆಗಳಿಗೆ ಔಷಧಿ ಸರಬರಾಜು ಮಾಡಲಾಗುತ್ತಿದೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಶೇ 80ರಷ್ಟು, ತಾಲ್ಲೂಕು ಆಸ್ಪತ್ರೆಗಳಿಗೆ ಶೇ 60ರಷ್ಟು ಔಷಧಿ ಮಾತ್ರ ತಲುಪುತ್ತಿವೆ. ಎಲ್ಲ ಕಡೆಗಳಲ್ಲಿ ಶೇ 20ರಿಂದ 40 ರಷ್ಟು ಕೊರತೆ ಎದುರಾಗಿದೆ.
ಉಗ್ರಾಣಕ್ಕೆ ಔಷಧಿ ಬಂದ ನಂತರ 20 ದಿನ ಕ್ವಾರಂಟೈನ್‌ನಲ್ಲಿ ಇಡಲಾಗುತ್ತದೆ. ಅಗತ್ಯ ಪರೀಕ್ಷೆಗಳನ್ನು ನಡೆಸಿದ ನಂತರವೇ ಆಸ್ಪತ್ರೆಗಳಿಗೆ ವಿತರಿಸಲಾಗುತ್ತದೆ. ಉಗ್ರಾಣದ ವಾಹನದಲ್ಲಿಯೇ ಆಸ್ಪತ್ರೆಗೆ ತಲುಪಿಸಲಾಗುತ್ತಿದೆ. ಸದ್ಯ 6 ವಾರಕ್ಕೆ ಒಮ್ಮೆ ಪೂರೈಸಲಾಗುತ್ತಿದೆ.