
ಬೆಂಗಳೂರಿನಲ್ಲಿ 30 ಲಕ್ಷ ಮೌಲ್ಯದ ಡ್ರಗ್ಸ್ ಜಪ್ತಿ: 6 ಪೆಡ್ಲರ್ ಬಂಧನ
ಬೆಂಗಳೂರು: ನಗರದ ನಾಲ್ಕು ಠಾಣೆಗಳ ಪೊಲೀಸರು ಕಾರ್ಯಾಚರಣೆ ನಡೆಸಿ, ಆರು ಮಂದಿ ಡ್ರಗ್ ಪೆಡ್ಲರ್‌ಗಳನ್ನು ಬಂಧಿಸಿ ಅವರಿಂದ ₹30 ಲಕ್ಷ ಮೌಲ್ಯದ ವಿವಿಧ ಮಾದರಿಯ ಮಾದಕ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ.
ಬೊಮ್ಮನಹಳ್ಳಿ, ಸಿಟಿ ಮಾರುಕಟ್ಟೆ, ಡಿ.ಜೆ. ಹಳ್ಳಿ ಹಾಗೂ ಬೈಯಪ್ಪನಹಳ್ಳಿ ಠಾಣೆಯ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ 25 ಕೆ.ಜಿ. 370 ಗ್ರಾಂ ಗಾಂಜಾ, 20 ಗ್ರಾಂ ಎಂಡಿಎಂಎ ಹಾಗೂ ಏಳು ಗ್ರಾಂ ಹೈಡ್ರೊಗಾಂಜಾ ವಶಕ್ಕೆ ಪಡೆಯಲಾಗಿದೆ. ಹೊರ ರಾಜ್ಯದ ಮೂವರು, ಸ್ಥಳೀಯ ಮೂವರನ್ನು ಬಂಧಿಸಲಾಗಿದೆ ಎಂದು ಮೂಲಗಳು ಹೇಳಿವೆ.
‘ಆಂಧ್ರಪ್ರದೇಶ, ತೆಲಂಗಾಣ ಹಾಗೂ ತಮಿಳುನಾಡಿನ ವ್ಯಕ್ತಿಗಳಿಂದ ವಿವಿಧ ಮಾದರಿಯ ಮಾದಕ ವಸ್ತುಗಳನ್ನು ಆರೋಪಿಗಳು ಕಡಿಮೆ ಬೆಲೆಗೆ ಖರೀದಿಸಿ, ನಗರಕ್ಕೆ ತರುತ್ತಿದ್ದರು. ನಗರದ ಪೇಯಿಂಗ್ ಗೆಸ್ಟ್ ಹಾಸ್ಟೆಲ್‌ನಲ್ಲಿ ನೆಲಸಿದವರು ಹಾಗೂ ಟೆಕಿಗಳಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದರು’ ಎಂದು ಪೊಲೀಸರು ಹೇಳಿದರು.
ಈ ಜಾಲದ ಹಿಂದೆ ಇನ್ನೂ ಹಲವರು ಇರುವ ಶಂಕೆಯಿದೆ. ಅವರ ಪತ್ತೆ ಕಾರ್ಯವನ್ನು ಮುಂದುವರಿಸಲಾಗಿದೆ ಎಂದು ಪೊಲೀಸರು ಹೇಳಿದರು.
ಆಗ್ನೇಯ ವಿಭಾಗದ ಡಿಸಿಪಿ ಎಂ.ಎಸ್.ಮೊಹಮ್ಮದ್ ಸುಜಿತಾ, ಪಶ್ಚಿಮ ವಿಭಾಗದ ಡಿಸಿಪಿ ಎನ್.ಯತೀಶ್, ಪೂರ್ವ ವಿಭಾಗದ ಡಿಸಿಪಿ ವಿಕ್ರಮ್ ಅಮಟೆ ಮಾರ್ಗದರ್ಶನದಲ್ಲಿ ಈ ಕಾರ್ಯಾಚರಣೆ ನಡೆದಿದೆ.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260819-4-1284513864