ನವದೆಹಲಿ: ಸಾಧಾರಣ ಮಟ್ಟದಲ್ಲಿರುವ ಕೊರೋನಾ ಸೋಂಕಿತರ ಚಿಕಿತ್ಸೆಗಾಗಿ ‘ಮಾಲ್ನುಪಿರವಿರ್’ ಮಾತ್ರೆಯ ಕ್ಲಿನಿಕಲ್ ಪ್ರಯೋಗ ನಡೆಸಲು ದೇಶದ ಐದು ಫಾರ್ಮಾ ಕಂಪನಿಗಳು ಮುಂದಾಗಿವೆ.
ಇಂತಹದೊಂದು ಜಂಟಿ ಕಾರ್ಯಾಚರಣೆ ದೇಶದಲ್ಲಿ ಇದೇ ಮೊದಲಾಗಿದ್ದು, ಡಾ.ರೆಡ್ಡೀಸ್ ಲ್ಯಾಬೊರೇಟರೀಸ್, ಸಿಪ್ಲಾ, ಎಮ್ಯೂರ್ ಫಾರ್ಮಾಸ್ಯೂಟಿಕಲ್ಸ್, ಸನ್ ಫಾರ್ಮಾ ಇಂಡಸ್ಟ್ರೀಸ್ ಹಾಗೂ ಟಾರೆಂಟ್ ಫಾರ್ಮಾಸ್ಯೂಟಿಕಲ್ಸ್ ಜತೆಯಾಗಿ ದೇಶದಲ್ಲಿ ಮಾಲ್ನುಪಿರವಿರ್ ವೈರಸ್ ನಿರೋಧಕ ಮಾತ್ರೆಗಳ ಕ್ಲಿನಿಕಲ್ ಪ್ರಯೋಗ ನಡೆಸಲಿವೆ.
ಐದೂ ಕಂಪನಿಗಳ ಸಹಯೋಗದಲ್ಲಿ ಕ್ಲಿನಿಕಲ್ ಪ್ರಯೋಗಗಳ ಮೇಲ್ವಿಚಾರಣೆ, ನಿರ್ವಹಣೆ ನಡೆಯಲಿದೆ ಎಂದು ಸಿಪ್ಲಾ ಮತ್ತು ಡಾ.ರೆಡ್ಡೀಸ್ ತಿಳಿಸಿವೆ.
ದೇಶದಲ್ಲಿ 1,200 ಕೊರೋನಾ ಸೋಂಕಿತರ ಮೇಲೆ ಕ್ಲಿನಿಕಲ್ ಪ್ರಯೋಗ ನಡೆಸಲು ನಿರ್ಧರಿಸಲಾಗಿದೆ. ಜೂನ್‌ನಿಂದ ಸೆಪ್ಟೆಂಬರ್ ನಡುವೆ ತೀವ್ರವಲ್ಲದ ಮಟ್ಟದ ಕೊರೋನಾ ಸೋಂಕಿತರಿಗೆ ಹೊರರೋಗಿಗಳಾಗಿ ಚಿಕಿತ್ಸೆ ನೀಡಲು ನಿರ್ಧರಿಸಲಾಗಿದೆ.
ಪ್ರಯೋಗ ಯಶಸ್ವಿಯಾದ ಬಳಿಕ ಕಂಪನಿಗಳು ಕೋವಿಡ್–19 ಚಿಕಿತ್ಸೆಗಾಗಿ ಪ್ರತ್ಯೇಕವಾಗಿ ಮಾಲ್ನುಪಿರವಿರ್ ಮಾತ್ರೆಗಳ ತಯಾರಿ ಮತ್ತು ಪೂರೈಕೆ ನಡೆಸಲು ಅನುಮತಿ ಕೋರಲಿವೆ.
ಅಮೆರಿಕದ ಪ್ರಮುಖ ಔಷಧ ಕಂಪನಿ ಮೆರ್ಕ್ ಮತ್ತು ರಿಡ್ಜ್‌ಬ್ಯಾಕ್ ಬಯೋಥೆರಪಿಟಿಕ್ಸ್ ಜತೆಯಾಗಿ ಜಾಗತಿಕ ಮಟ್ಟದಲ್ಲಿ ಮೂರನೇ ಹಂತದ ಕ್ಲಿನಿಕಲ್ ಪ್ರಯೋಗ ನಡೆಸುತ್ತಿವೆ. ಮಾಲ್ನುಪಿರವಿರ್ ಮಾತ್ರೆಗಳು ಪ್ರಬಲವಾದ ಶೀತಜ್ವರ ನಿರೋಧಕ ಚಟುವಟಿಕೆಯನ್ನು(ಆಂಟಿ ಇನ್ಫ್ಲ್ಯೂಯೆಂಜಾ) ಹಾಗೂ ಸಾರ್ಸ್–ಕೋವ್–2 ವೈರಸ್ ಮರುಕಳಿಸುವುದನ್ನು ಪ್ರಬಲವಾಗಿ ಪ್ರತಿಬಂಧಿಸುವ ಗುಣ ಹೊಂದಿದೆ ಎಂದು ಮೂಲಗಳು ತಿಳಿಸಿವೆ.
