
ಗಜೇಂದ್ರಗಡ: ಕೊಡಗಳಿಂದ ಹೊಲಕ್ಕೆ ನೀರು;ಬೆಳೆ ಉಳಿಸಿಕೊಳ್ಳಲು ಸಹೋದರಿಯರ ಭಗೀರಥ ಯತ್ನ
ಗಜೇಂದ್ರಗಡ: ಮಳೆಯ ತೀವ್ರ ಕೊರತೆ ಹಾಗೂ ಬಿಸಿಲಿನ ಧಗೆಯಿಂದ ಕಮರುತ್ತಿರುವ ಬೆಳೆ ಉಳಿಸಿಕೊಳ್ಳಲು ಇಲ್ಲಿನ ಸಹೋದರರಿಬ್ಬರು ಕೊಡಗಳಿಂದ ಹಳ್ಳದ ನೀರು ಹೊತ್ತು, ಹೊಲಕ್ಕೆ ನೀರೆಯುತ್ತಿದ್ದಾರೆ.
ಸಮೀಪದ ರಾಜೂರ ಗ್ರಾಮದ ಸುರೇಶ ಶರಣಪ್ಪ ಮಾಟರಂಗಿ ಹಾಗೂ ಈಶಪ್ಪ ಶರಣಪ್ಪ ಮಾಟರಂಗಿ ಅವರು ತಮ್ಮ ನಾಲ್ಕು ಎಕರೆ ಜಮೀನಿನ ಪೈಕಿ ಒಂದು ಎಕರೆಯಲ್ಲಿ ಡಬ್ಬಿಗಾಯಿ ಮೆಣಸಿನಕಾಯಿ ಬಿತ್ತನೆ ಮಾಡಿದ್ದರು. ಗಿಡಗಳಲ್ಲಿ ಮೊಳಯೊಡೆದಿದ್ದು, ಮಳೆ ಇಲ್ಲದೆ ಕಾರಣ ತೇವಾಂಶ ಕೊರತೆಯಾಗಿ ಒಣಗುತ್ತಿದೆ. ಬೆಳೆ ಉಳಿಸಿಕೊಳ್ಳಬೇಕೆಂದು, ತಮ್ಮ ಜಮೀನಿನ ಪಕ್ಕದ ಹಳ್ಳದ ಗುಂಡಿಯಲ್ಲಿ ನಿಂತಿದ್ದ ನೀರನ್ನು 15 ದಿನಗಳವರೆಗೆ ಕೊಡಗಳಲ್ಲಿ ಹೊತ್ತು ಗಿಡಗಳಿಗೆ ಹಾಯಿಸಿದ್ದಾರೆ.
ಮಾಟರಂಗಿ ಸಹೋದರರು ಬೆಳೆಗಳಿಗೆ ಒಂದು ಬಾರಿ ಟ್ಯಾಂಕರ್ ನೀರು ಹಾಯಿಸಿದ್ದಾರೆ. ಆದರೂ, ಭೂಮಿಯಲ್ಲಿ ತೇವಾಂಶ ಉಳಿಯದೆ, ಬೆಳೆಗಳು ಬಾಡುವ ಹಂತ ತಲುಪಿದ್ದವು. ಹಣಕಾಸಿನ ಕೊರತೆ ಕಾರಣ ಮತ್ತೆ ಟ್ಯಾಂಕರ್ ಮೊರೆ ಹೋಗಿಲ್ಲ. ಅದಕ್ಕಾಗಿ, ಇಂತಹೊಂದು ಪ್ರಯತ್ನ ಮಾಡಿದ್ದರಿಂದ ಬೆಳೆಯಲ್ಲಿ ಅಲ್ಪಮಟ್ಟಿಗೆ ಚೇತರಿಕೆ ಕಂಡುಬಂದಿದೆ.
‘ಮಳೆ ಬರುತ್ತದೆಂದು 1 ಎಕರೆ ಮೆಣಸಿನಕಾಯಿ ಬಿತ್ತಿಬಿಟ್ವಿ. ಮೊದಲ ಚೊಲ ಹುಟ್ಟಿತ್ತು. ಆದ್ರ ಮಳಿ ಹೋಗಿದ್ದರಿಂದ ಹಳ್ಳದ ನೀರು ಹೊತ್ತು ಹಾಕಿ ಬೆಳಿಸಿದ್ವಿ. ಈಗ ಗಿಡ ದೊಡ್ಡವಾಗ್ಯಾವು ಕಾಯಿ ಹಿಡಿಯಕತ್ತವು. ಆದ್ರ ಹಸಿ ಸಾಲಲಾರದಕ ಕಾಯಿನು ಉದ್ರಕತ್ತೈತಿ. ಈಗ ಮಳಿಯಾದ್ರ ಏನರ ಒಂದೀಟು ಫೀಕ ಕೈಗ ಬರುತ್ತ. ಇಲ್ಲಂದ್ರ ದೇವರು ಮಾಡಿದಂಗ ಆಗುತ್ತ’ ಎಂದು ರೈತ ಸುರೇಶ ಮಾಟರಂಗಿ ಅಲವತ್ತುಕೊಂಡರು.