
ಹೊಸದುರ್ಗ: ಲಂಬಾಣಿ ತಾಂಡಾದಲ್ಲಿ ಸಂಭ್ರಮದ ದೀಪಾವಳಿ ಆಚರಣೆ
ಹೊಸದುರ್ಗ: ತಾಲ್ಲೂಕಿನ ಚಿನ್ನಾಪುರ ಲಂಬಾಣಿ ತಾಂಡಾದಲ್ಲಿ ಮಂಗಳವಾರ ದೀಪಾವಳಿಯನ್ನು ವಿಜೃಂಭಣೆಯಿಂದ ಆಚರಿಸಿದರು.
ದೀಪಾವಳಿಯ ಮೊದಲ ದಿನವಾದ ಸೋಮವಾರ ರಾತ್ರಿ ಊರಿನ ಯುವತಿಯರೆಲ್ಲರೂ ಸೇರಿ ಗ್ರಾಮದ ದೇವಾಲಯ ಸೇರಿದಂತೆ ಪ್ರತಿ ಮನೆಗೂ ತೆರಳಿ ಆರತಿ ಬೆಳಗಿದರು. ಮಂಗಳವಾರ ಬಿದಿರಿನ ಬುಟ್ಟಿಗಳನ್ನು ಹಿಡಿದು ಗುಂಪು ಗುಂಪಾಗಿ ಹಾಡುತ್ತಾ, ಕುಣಿಯುತ್ತಾ ಗುಡ್ಡದಡೆಗೆ ಹೋಗಿ ಅಲ್ಲಿಂದ ತಂಗಡಿಕೆ ಹೂವು ಬಿಡಿಸಿಕೊಂಡು ಬಂದರು. ಹೂಗಳನ್ನು ಹೊತ್ತ ಯುವತಿಯರನ್ನು ಗ್ರಾಮಸ್ಥರು ಮತ್ತು ಮಹಿಳೆಯರು ಲಂಬಾಣಿ ಸಾಂಪ್ರದಾಯಿಕ ನೃತ್ಯದೊಂದಿಗೆ ಬರಮಾಡಿಕೊಂಡರು. ನಂತರ ಆ ಹೂವುಗಳನ್ನು ಸೇವಾಲಾಲ್ ಮತ್ತು ಮರಿಯಮ್ಮ ದೇವಿಗೆ ಅರ್ಪಿಸಿ ಪ್ರಾರ್ಥಿಸಿದರು.
‘ತಂಗಡಿಕೆ ಹೂವು ಬಂಗಾರ ಹಾಗೂ ಸಮೃದ್ಧಿಯ ಸಂಕೇತವಾಗಿದ್ದು, ಕುಲದೈವಗಳ ನೆಚ್ಚಿನ ಹೂವು. ದೀಪಾವಳಿಯಲ್ಲಿ ಈ ಹೂವುಗಳಿಗೆ ಪ್ರಾಮುಖ್ಯತೆ ಹೆಚ್ಚು’ ಎಂದು ಚಿನ್ನಾಪುರ ಗ್ರಾಮದ ಪವನ್ ಕುಮಾರ್ ತಿಳಿಸಿದರು.
ಬಂಜಾರ ಸಮುದಾಯದ ವಿಶೇಷ ಆಕರ್ಷಣೆಯಾದ ಸಾಂಪ್ರದಾಯಿಕ ಉಡುಪುಗಳು, ಜನಪದ ಹಾಡು ಹಾಗೂ ನೃತ್ಯಗಳು ಹಬ್ಬದ ಸಂಭ್ರಮವನ್ನು ಇಮ್ಮಡಿಗೊಳಿಸಿದವು.