ಶಿವರಾಮ ಕಾರಂತ ಬಡಾವಣೆ: ಎರಡು ಹಂತಗಳಲ್ಲಿ ನಿವೇಶನ ಹಂಚಿಕೆ
ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಅಭಿವೃದ್ಧಿಪಡಿಸುತ್ತಿರುವ ಶಿವರಾಮ ಕಾರಂತ ಬಡಾವಣೆಯ ನಿವೇಶನಗಳನ್ನು ಎರಡು ಹಂತಗಳಲ್ಲಿ ಹಂಚಿಕೆ ಮಾಡಲು ನಿರ್ಧರಿಸಲಾಗಿದೆ.
ಮೊದಲ ಹಂತದಲ್ಲಿ ಯೋಜನೆಗೆ ಭೂಮಿ ನೀಡಿದ ರೈತರಿಗೆ ಪರಿಹಾರ ರೂಪದಲ್ಲಿ 18,400 ನಿವೇಶನಗಳನ್ನು ವಿತರಿಸಲಾಗುತ್ತದೆ. ಸಾರ್ವಜನಿಕರಿಂದ ಅರ್ಜಿ ಆಹ್ವಾನಿಸುವ ಪ್ರಕ್ರಿಯೆಗೂ ಆಗಸ್ಟ್ 31 ರಂದು ಚಾಲನೆ ದೊರೆಯಲಿದೆ.
ಅಂದು 600–1,000 ಮಂದಿ ಭೂ ಮಾಲೀಕರಿಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಸಾಂಕೇತಿಕವಾಗಿ ನಿವೇಶನ ವಿತರಿಸಿ, ಉಳಿದವರಿಗೆ ಕೌಂಟರ್ನಲ್ಲಿ ವಿತರಿಸುವ ವ್ಯವಸ್ಥೆ ಮಾಡಲಾಗಿದೆ.
ಹೈಕೋರ್ಟ್ ಹಸಿರು ನಿಶಾನೆ ತೋರಿರುವ ಬೆನ್ನಲ್ಲೇ ಪ್ರಾಧಿಕಾರವು ಅರ್ಜಿ ಆಹ್ವಾನಿಸುವ ಪ್ರಕ್ರಿಯೆ ಆರಂಭಿಸಲು ಸಿದ್ಧತೆ ಮಾಡಿಕೊಂಡಿದೆ. ವಸತಿ ನಿವೇಶನಗಳಿಗೆ ಚದರ ಅಡಿಗೆ ₹6,000 ದರ ನಿಗದಿಪಡಿಸಿದೆ. ಮೂರು ವರ್ಷಗಳ ಹಿಂದೆ ಚದರ ಅಡಿ ನಿವೇಶನಕ್ಕೆ ₹4,900 ನಿಗದಿಪಡಿಸಲಾಗಿತ್ತು. ಈಗ ಪ್ರಾಧಿಕಾರ ದರ ಪರಿಷ್ಕರಿಸಿದೆ. ಪರಿಷ್ಕರಣೆ ಪ್ರಕಾರ 30X40 ಅಡಿ (1,200 ಚದರ ಅಡಿ) ನಿವೇಶನ ದರ ₹72 ಲಕ್ಷ, 60X40 ಅಡಿ ನಿವೇಶನ ದರ ₹1.44 ಕೋಟಿಗೆ ಏರಿಕೆಯಾಗಿದೆ.
‘ಬಡಾವಣೆ ನಿರ್ಮಾಣ, ಭೂ ಮಾಲೀಕರಿಗೆ ಪರಿಹಾರ ವಿತರಣೆ, ಮೂಲಸೌಕರ್ಯ ಕಲ್ಪಿಸಲು ದೊಡ್ಡ ಮೊತ್ತ ಖರ್ಚು ಮಾಡುತ್ತಿದ್ದು, ನಿವೇಶನದ ದರ ಹೆಚ್ಚಳ ಅನಿವಾರ್ಯವಾಗಿದೆ. ಈ ಪ್ರಸ್ತಾವಕ್ಕೆ ಪ್ರಾಧಿಕಾರದ ಆಡಳಿತ ಮಂಡಳಿ ಸಭೆ ಒಪ್ಪಿಗೆ ನೀಡಿದೆ’ ಎಂದು ಪ್ರಾಧಿಕಾರದ ಅಧಿಕಾರಿಯೊಬ್ಬರು ತಿಳಿಸಿದರು.
ವಿವಿಧ ಅಳತೆಯ ಒಟ್ಟು 34,992 ನಿವೇಶನಗಳನ್ನು ಅಭಿವೃದ್ಧಿಪಡಿಸಲಾಗಿದೆ. ಈ ಪೈಕಿ 20X30 ಅಡಿ ನಿವೇಶನಗಳೇ ಹೆಚ್ಚು. 20X30 ಅಡಿಯ 18,400 ನಿವೇಶನಗಳನ್ನು ರೈತರಿಗೆ ಮೀಸಲಿಡಲಾಗಿದ್ದು, ಕಂದಾಯ ನಿವೇಶನದಾರರಿಗೆ 3,200 ಮತ್ತು ಸಾರ್ವಜನಿಕರಿಗೆ 6,000 ನಿವೇಶನ (30x40 ಅಡಿ) ಹಂಚಿಕೆ ಮಾಡಲು ನಿರ್ಧರಿಸಲಾಗಿದೆ.
‘ಬಡಾವಣೆಗೆ ಜಮೀನು ಬಿಟ್ಟುಕೊಟ್ಟಿರುವ ರೈತರಿಗೆ 60:40 ಅನುಪಾತದಲ್ಲಿ ಪರಿಹಾರ ನೀಡಲಾಗುತ್ತದೆ. ಕೆಎಸ್ಆರ್ಸಿಎಎಲ್ ಮತ್ತು ಸಿಇಜಿ ಯುಎಲ್ಎಂಎಸ್ ಸಾಫ್ಟ್ವೇರ್ ಮೂಲಕ ನಿವೇಶನ ಹಂಚಿಕೆ ಮಾಡಲಾಗುತ್ತದೆ. ಅರ್ಜಿಗಳನ್ನು ಸ್ವೀಕರಿಸಲು ಮತ್ತು ನಿವೇಶನಗಳನ್ನು ವಿತರಿಸಲು ಸಾಫ್ಟ್ವೇರ್ ಅಭಿವೃದ್ಧಿಪಡಿಸಲಾಗಿದೆ. ರೈತರ ಮಾಹಿತಿ ಹಾಗೂ ಭೂಮಿ ವಿಸ್ತೀರ್ಣವನ್ನು ಅಳವಡಿಸಲಾಗುತ್ತಿದೆ. ಹತ್ತು ಸಾವಿರ ನಿವೇಶನಗಳು ನ್ಯಾಯಾಲಯದಲ್ಲಿ ವ್ಯಾಜ್ಯದಲ್ಲಿವೆ. ಇತ್ಯರ್ಥವಾದ ಬಳಿಕ ಮುಂದಿನ ಹಂತದಲ್ಲಿ ಹಂಚಿಕೆ ಮಾಡಲು ಕ್ರಮ ಕೈಗೊಳ್ಳಲಾಗುವುದು’ ಎಂದು ಬಿಡಿಎ ಮೂಲಗಳು ತಿಳಿಸಿವೆ.
ಉತ್ತರ ಬೆಂಗಳೂರಿನ ಆವಲಹಳ್ಳಿ, ರಾಮಗೊಂಡನಹಳ್ಳಿ, ಜಾರಕಬಂಡೆ ಕಾವಲ್ ಸೇರಿದಂತೆ ಒಟ್ಟು 17 ಹಳ್ಳಿಗಳ ಸುಮಾರು 3,069 ಎಕರೆ ಪ್ರದೇಶದಲ್ಲಿ ಬಡಾವಣೆ ನಿರ್ಮಿಸಲಾಗಿದೆ. ದಶಕಕ್ಕೂ ಹೆಚ್ಚು ಕಾಲ ಈ ಬಡಾವಣೆ ಕಾನೂನು ಸಂಕೋಲೆಯಲ್ಲಿ ಸಿಲುಕಿತ್ತು.
ಹೈಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ಎ.ವಿ.ಚಂದ್ರಶೇಖರ್, ನಿವೃತ್ತ ಡಿಜಿಪಿ ಎಸ್.ಟಿ.ರಮೇಶ್, ಬಿಡಿಎ ಮಾಜಿ ಆಯುಕ್ತ ಜಯಕರ್ ಜೆರೋಮ್ ಅವರನ್ನು ಒಳಗೊಂಡ ಸಮಿತಿಯ ಮೇಲ್ವಿಚಾರಣೆಯಲ್ಲಿ ಬಡಾವಣೆ ಅಭಿವೃದ್ಧಿ ಪಡಿಸಲಾಗಿದೆ.
ಮಧ್ಯವರ್ತಿಗಳನ್ನು ದೂರವಿಡಿ: ಹ್ಯಾರಿಸ್
‘ಶಿವರಾಮ ಕಾರಂತ ಬಡವಾಣೆಯ ನಿವೇಶನ ಹಂಚಿಕೆಗೆ ನ್ಯಾಯಾಲಯದಿಂದ ಅನುಮತಿ ದೊರೆತಿದೆ. ಆಗಸ್ಟ್ 31ರಂದು ಮೊದಲ ಹಂತದಲ್ಲಿ ರೈತರಿಗೆ ನಿವೇಶನ ಹಂಚಿಕೆ ಮಾಡಲು ಉದ್ದೇಶಿಸಲಾಗಿದೆ. ಮುಖ್ಯಮಂತ್ರಿ ಅವರೊಂದಿಗೆ ಚರ್ಚಿಸಿ ಕಾರ್ಯಕ್ರಮದ ಸಮಯ ನಿಗದಿ ಮಾಡಲಾಗುವುದು’ ಎಂದು ಬಿಡಿಎ ಅಧ್ಯಕ್ಷ ಎನ್.ಎ.ಹ್ಯಾರಿಸ್ ತಿಳಿಸಿದರು ‘ಭೂಮಿ ಕಳೆದುಕೊಂಡ ರೈತರಿಗೆ 3 ಕೋಟಿ ಚದರ ಅಡಿ ಜಾಗ ನೀಡಬೇಕಿದೆ. ಈ ಪೈಕಿ ಒಂದೇ ದಿನ 1 ಕೋಟಿ ಚದರ ಅಡಿ ಜಾಗವನ್ನು ನೀಡಲಾಗುವುದು. ಮಧ್ಯವರ್ತಿಗಳನ್ನು ದೂರವಿಡಿ. ನಿವೇಶನ ಕೊಡಿಸುವುದಾಗಿ ಯಾರಾದರೂ ಬಂದರೆ ಹೋಗಬೇಡಿ. ಅರ್ಜಿ ಹಾಕಿ ಪ್ರಾಧಿಕಾರದಿಂದಲೇ ನೇರವಾಗಿ ನಿವೇಶನ ಪಡೆದುಕೊಳ್ಳಿ’ ಎಂದು ಹೇಳಿದರು. ‘ರೈತರು ಸಲ್ಲಿಸಿರುವ ದಾಖಲೆಗಳ ಪರಿಶೀಲನೆ ಮಾಡಲಾಗಿದೆ. ರ್ಯಾಂಡಮೈಸೇಷನ್ ಮೂಲಕ ನಿವೇಶನ ಹಂಚಿಕೆ ಮಾಡಲಾಗುವುದು. ಅದೇ ದಿನ ಸಾರ್ವಜನಿಕರಿಂದ ಅರ್ಜಿ ಆಹ್ವಾನಿಸಲಾಗುವುದು. ಚದರ ಅಡಿಗೆ ಆರು ಸಾವಿರ ರೂಪಾಯಿ ನಿಗದಿ ಪಡಿಸಲಾಗಿದೆ. ಬೆಂಗಳೂರು ನಗರದ ಅಕ್ಕಪಕ್ಕ ಚದರ ಅಡಿ ಆರು ಸಾವಿರ ರೂಪಾಯಿಗೂ ಸಿಗುವುದಿಲ್ಲ. ಬಿಡಿಎ ನಿರ್ಮಿತ ಬಡಾವಣೆಯು ಶೇಕಡ ನೂರು ಪ್ರತಿಶತ ಕಾನೂನು ಪ್ರಕಾರವಾಗಿರುತ್ತದೆ’ ಎಂದು ಹೇಳಿದರು.