
ಮೊದಲು ವಿಷ ಕೊಡಿ, ನಂತರ ಮನೆ ತೆರವು ಮಾಡಿ: ಕೊಳೆಗೇರಿ ನಿವಾಸಿಗಳ ಆಕ್ರೋಶ
ಚಿತ್ರದುರ್ಗ: ನಗರದ ವಿಜಯನಗರ ಕೊಳೆಗೇರಿಯಲ್ಲಿರುವ ಅನಧಿಕೃತ ಮನೆ, ಗುಡಿಸಲುಗಳ ತೆರವಿಗೆ ರೈಲ್ವೆ ಇಲಾಖೆ 7 ದಿನಗಳ ಗಡುವು ನೀಡಿ ನೋಟಿಸ್ ನೀಡಿದೆ. ಇದಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ಕೊಳೆಗೇರಿ ನಿವಾಸಿಗಳು ‘ಮೊದಲು ವಿಷ ಕೊಡಿ, ನಂತರ ಮನೆ ತೆರವು ಮಾಡಿ’ ಎಂದು ತಿಳಿಸಿದ್ದಾರೆ.
ದಾವಣಗೆರೆ– ತುಮಕೂರು ನೇರ ರೈಲು ಮಾರ್ಗಕ್ಕೆ ಕಾಮಗಾರಿ ಮಾರ್ಗದಲ್ಲಿರುವ ಮನೆಗಳ ತೆರವಿಗೆ ರೈಲ್ವೆ ಇಲಾಖೆ ಯಿಂದ ಹಲವು ಬಾರಿ ನೋಟಿಸ್ ನೀಡಲಾಗಿದೆ. ಮನೆಗಳ ಮಾಲೀಕತ್ವಕ್ಕೆ ಸಂಬಂಧಿಸಿದ ಯಾವುದೇ ದಾಖಲೆ ಗಳಿದ್ದರೂ ರೈಲ್ವೆ ಇಲಾಖೆಗೆ ಸಲ್ಲಿಸಬೇಕು. ಇಲ್ಲದಿದ್ದರೆ 7 ದಿನದೊಳಗೆ ಮನೆ ಖಾಲಿ ಮಾಡಬೇಕು ಎಂದು ಸೂಚಿಸಿ ರೈಲ್ವೆ ಅಧಿಕಾರಿಗಳು, ಪೊಲೀಸರು ಶುಕ್ರವಾರ ಅಂತಿಮ ನೋಟಿಸ್ ನೀಡಿದರು.
ಇದಕ್ಕೆ ಆಕ್ರೋಶ ವ್ಯಕ್ತಪಡಿಸಿದ ನಿವಾಸಿಗಳು ‘ಕಳೆದ 50–60 ವರ್ಷಗಳಿಂದ ವಾಸ ಮಾಡುತ್ತಿದ್ದೇವೆ. ಸ್ಥಳೀಯ ಜನಪ್ರತಿನಿಧಿಗಳು ಹಕ್ಕುಪತ್ರ ನೀಡುತ್ತೇವೆ ಎಂದು ನಮ್ಮನ್ನು ನಂಬಿಸಿದ್ದಾರೆ. ರಾಜಕಾರಣಿಗಳ ಮಾತು ನಂಬಿ ನಾವು ಬೇರೆ ಮನೆ ವ್ಯವಸ್ಥೆ ಮಾಡಿಕೊಂಡಿಲ್ಲ. ಈಗ ಏಕಾಏಕಿ ಮನೆ ತೆರವು ಮಾಡಬೇಕು ಎಂದರೆ ನಾವು ಎಲ್ಲಿಗೆ ಹೋಗಬೇಕು? ನಾವು ಇಲ್ಲಿಯೇ ಪ್ರಾಣ ಬಿಡುತ್ತೇವೆ, ಮನೆ ತೆರವು ಮಾಡುವುದಿಲ್ಲ’ ಎಂದು ಹೇಳಿದರು.
‘ಹಿಂದೆ ನೋಟಿಸ್ ನೀಡಿದ್ದಾಗ ಪರ್ಯಾಯ ವ್ಯವಸ್ಥೆ ಮಾಡಿಕೊಡುವಂತೆ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ್ದೆವು. ಆದರೆ ಇಲ್ಲಿಯವರೆಗೂ ಪರ್ಯಾಯ ವ್ಯವಸ್ಥೆ ಆಗಿಲ್ಲ. ನಮಗೆ ಬೇರೆ ಕಡೆ ಜಾಗ ಕೊಟ್ಟು ಮನೆ ಕಟ್ಟಿಸಿಕೊಟ್ಟರೆ ಇಲ್ಲಿಯ ಜಾಗ ತೆರವು ಮಾಡಲು ಸಿದ್ಧರಿದ್ದೇವೆ. ಪರ್ಯಾಯ ಜಾಗ ನೀಡದೆ ನಾವು ಎಲ್ಲಿಗೂ ಹೋಗುವುದಿಲ್ಲ. ಮನೆಯಲ್ಲಿ ಮಕ್ಕಳು, ಸಾಕು ಪ್ರಾಣಿಗಳಿವೆ. ಅವುಗ ಳನ್ನು ಬಿಟ್ಟು ಹೋಗಲು ಸಾಧ್ಯವಿಲ್ಲ’ ಎಂದು ತಿಳಿಸಿದರು.
‘ಇಲ್ಲಿಯವರೆಗೂ ನಾವು ಸೂರಿನ ಕನಸಿನಲ್ಲಿಯೇ ಇದ್ದೆವು. ಒಂದಲ್ಲಾ ಒಂದು ದಿನ ಹಕ್ಕುಪತ್ರ ದೊರೆಯುತ್ತದೆ ಎಂದು ನಂಬಿದ್ದೆವು. ಸ್ಥಳೀಯ ಜನಪ್ರತಿನಿಧಿಗಳು ಕೂಡ ಮನೆ ನೀಡುವುದಾಗಿ ಹೇಳಿದ್ದರು. ರೈಲ್ವೆ ಅಧಿಕಾರಿಗಳು ನಮ್ಮ ಒತ್ತಾಯಗಳಿಗೆ ಸ್ಪಂದಿಸುತ್ತಿಲ್ಲ. ಅವರು ನಮ್ಮ ಮನೆಗಳನ್ನು ಒಡೆದು ಹಾಕುವುದಕ್ಕೆ ನಾವು ಬಿಡುವುದಿಲ್ಲ. ಮೊದಲು ನಮಗೆ ಪರ್ಯಾಯ ವ್ಯವಸ್ಥೆ ಮಾಡಿಕೊಡಿ’ ಎಂದು ಆಗ್ರಹಿಸಿದರು.
ವಿಚಾರಣೆಗೆ ಹಾಜರಾಗದ ನಿವಾಸಿಗಳು: ಮೈಸೂರು ರೈಲ್ವೆ ವಲಯದ ಎಸ್ಟೇಟ್ ಅಧಿಕಾರಿ ಕಚೇರಿಯಲ್ಲಿ ಈಚೆಗೆ ವಿಚಾರಣೆ ಪ್ರಕ್ರಿಯೆ ನಡೆದಿದ್ದು ನಿವಾಸಿ ಗಳು ವಿಚಾರಣೆಗೆ ಹಾಜರಾಗಿಲ್ಲ. ಜಾಗದ ಸಂಬಂಧ ಹಕ್ಕು ಸ್ಥಾಪಿಸುವ ಯಾವುದೇ ದಾಖಲೆಗಳನ್ನು ಒದಗಿಸಿಲ್ಲ. ಹೀಗಾಗಿ ರೈಲ್ವೆ ಜಾಗದಲ್ಲಿ ಅನಧಿಕೃತವಾಗಿ ನೆಲೆ ಸಿರುವ ನಿವಾಸಿಗಳ ತೆರವು ಅನಿವಾರ್ಯ ವಾಗಿದೆ. ಸದ್ಯ ಅಂತಿಮ ಅವಕಾಶ ನೀಡಲಾಗಿದ್ದು ನ. 26ರೊಳಗೆ ದಾಖಲೆ ಒದಗಿಸಬೇಕು, ಇಲ್ಲವೆ ಜಾಗ ಖಾಲಿ ಮಾಡಬೇಕು ಎಂದು ರೈಲ್ವೆ ಅಧಿಕಾರಿ ಗಳು ನೋಟಿಸ್‌ನಲ್ಲಿ ತಿಳಿಸಿದ್ದಾರೆ.
ಶುಕ್ರವಾರ ನಿವಾಸಿಗಳಿಗೆ ನೋಟಿಸ್ ನೀಡಿದ ಅಧಿಕಾರಿಗಳು, ಸ್ಥಳೀಯ ಪೊಲೀಸರು ನೋಟಿಸ್‌ಗೆ ಅನುಗುಣವಾಗಿ ನಡೆದುಕೊಳ್ಳುವಂತೆ ಸೂಚಿಸಿದರು. ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ನಿವಾಸಿಗಳು ಸ್ಥಳೀಯ ಅಧಿಕಾರಿಗಳು, ಜನಪ್ರತಿನಿಧಿಗಳು ಬಂದು ನಮಗೆ ಪರ್ಯಾಯ ಜಾಗ ನೀಡಬೇಕು. ಅಲ್ಲಿಯವರೆಗೂ ಮನೆ ಬಿಟ್ಟು ಕದಲುವುದಿಲ್ಲ ಎಂದು ಹೇಳಿದರು. ಪರಿಸ್ಥಿತಿ ಮೀರಿದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದರು.
‘ಪರಿಹಾರ ವಿತರಣೆ ಅಸಾಧ್ಯ’
ಕೊಳೆಗೇರಿಯಲ್ಲಿ ನಾಲ್ಕೈದು ದಶಕಗಳಿಂದಲೂ ನಿವಾಸಿಗಳು ವಾಸಿಸುತ್ತಿರುವ ಕಾರಣ ಜಾಗ ತೆರವಿಗೂ ಮುನ್ನ ಪರಿಹಾರ ವಿತರಣೆ ಮಾಡಬೇಕು. ನಿವಾಸಿಗಳು ಮನೆ ಕಟ್ಟಿಕೊಳ್ಳಲು ಸಹಾಯ ಮಾಡಬೇಕು. ಮಾನವೀಯತೆ ಆಧಾರದ ಮೇಲೆ ಅವರಿಗೆ ಅನುಕೂಲ ಕಲ್ಪಿಸಬೇಕು ಎಂದು ಕೆಲವರು ಒತ್ತಾಯಿಸಿದರು.
‘ರೈಲ್ವೆ ಇಲಾಖೆ ಜಾಗದ ಮೇಲೆ ಸ್ಥಳೀಯ ನಿವಾಸಿಗಳು ಹಕ್ಕು ಸ್ಥಾಪಿಸಲು ಸಾಧ್ಯವಿಲ್ಲ. ಎಸ್ಟೇಟ್ ಅಧಿಕಾರಿಗಳು ಈಗಾಗಲೇ ಅಂತಿಮ ಗಡುವು ನೀಡಿದ್ದಾರೆ. ದಾಖಲೆಗಳಿದ್ದರೆ ನೀಡಲಿ, ಇಲ್ಲದಿದ್ದರೆ ಜಾಗ ತೆರವು ಮಾಡಲಿ. ಅವಧಿ ಮೀರಿದ ನಂತರ ಸ್ಥಳೀಯ ಪೊಲೀಸರ ನೆರವು ಪಡೆದು ಮನೆಗಳನ್ನು ತೆರವು ಮಾಡಿ ಜಾಗವನ್ನು ವಶಕ್ಕೆ ಪಡೆಯಲಾಗುವುದು. ಈ ವಿಷಯವನ್ನು ನೋಟಿಸ್‌ನಲ್ಲೇ ತಿಳಿಸಲಾಗಿದೆ’ ಎಂದು ಪೊಲೀಸರು ಹೇಳಿದರು.