
ಸಮಾಜಮುಖಿ ಕಾಯಕದಿಂದ ಸ್ವಾಮೀಜಿ ಪ್ರಸಿದ್ಧಿ: ಮಾಜಿ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ
ಚಿತ್ರದುರ್ಗ: ‘ಸಣ್ಣ ಕುಟೀರವಾಗಿದ್ದ ಸದ್ಗುರು ಕಬೀರಾನಂದಾಶ್ರಮ ಇಂದು ಸಾಕಷ್ಟು ಅಭಿವೃದ್ಧಿ ಕಂಡಿದೆ. ಶ್ರೀಗಳ ನೇತೃತ್ವದಲ್ಲಿ ವಿವಿಧ ಧಾರ್ಮಿಕ, ಸಾಮಾಜಿಕ ಚಟುವಟಿಕೆಗಳು ನಡೆಯು ತ್ತಿವೆ. ಸಮಾಜಮುಖಿ ಚಟುವಟಿಕೆಗಳಿಂದ ಶ್ರೀಗಳು ಜನಮಾನಸದಲ್ಲಿ ನೆಲೆಸಿದ್ದಾರೆ’ ಎಂದು ಮಾಜಿ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಹೇಳಿದರು.
ನಗರದ ಸದ್ಗುರು ಕಬೀರಾನಂದಾಶ್ರಮದ ಆವರಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಪೀಠಾಧಿಪತಿ ಶಿವಲಿಂಗಾನಂದ ಶ್ರೀಗಳವರ ವರ್ಧಂತ್ಯುತ್ಸವದಲ್ಲಿ ಅವರು ಮಾತನಾಡಿದರು.
‘30-40 ವರ್ಷಗಳ ಹಿಂದೆ ಆದಿಚುಂಚನಗಿರಿ ಮಠದಲ್ಲಿ ವಿದ್ಯಾರ್ಥಿಯಾಗಿದ್ದ ಸಂದರ್ಭದಲ್ಲಿ ಮಂಜೂರು ಹನುಮಂತಪ್ಪನವರ ಮೂಲಕ ಚಿತ್ರದುರ್ಗಕ್ಕೆ ಒಬ್ಬ ಸಿದ್ಧಾರೂಢ ಪರಂ ಪರೆಯ ಸ್ವಾಮೀಜಿ ನೀಡುವಂತೆ ಕೇಳಿಕೊಳ್ಳಲಾಗಿತ್ತು. ಆ ಸಂದರ್ಭದಲ್ಲಿ ವಿದ್ಯಾರ್ಥಿಯಾಗಿದ್ದ ಕಬೀರಾನಂದ ಸ್ವಾಮೀಜಿಯವರನ್ನು ಮಠದ ಮುಖ್ಯಸ್ಥರನ್ನಾಗಿ ನೇಮಿಸಲಾಯಿತು. ಸ್ವಾಮೀಜಿ ಬಡ ಮಕ್ಕಳು, ನಿರ್ಗತಿಕರು ಹಾಗೂ ಸಮಾಜದ ಹಿತಕ್ಕಾಗಿ ಶ್ರಮಿಸಿದ್ದಾರೆ’ ಎಂದರು.
‘ಬರಗಾಲದಲ್ಲಿ ದನ–ಕರುಗಳು ಮೇವಿಲ್ಲದೇ ಪರಿತಪಿಸುವಾಗ ಅವರು ಮೇವು ಒದಗಿಸಿದ್ದಾರೆ. ಡಿಪ್ಲೊಮಾ, ಬಿ.ಇ, ಹಾಗೂ ನರ್ಸಿಂಗ್ ಕಾಲೇಜು ಗಳನ್ನು ಆರಂಭಿಸಿ, ಈ ಭಾಗದ ಬಡವರ ಮಕ್ಕಳಿಗೆ ಅನುಕೂಲ ಕಲ್ಪಿಸಿದ್ದಾರೆ. ವಯಸ್ಸಾದವರಿಗೆ ಆಶ್ರಯಕ್ಕಾಗಿ ವೃದ್ಧಾಶ್ರಮವನ್ನು ನಡೆಸುತ್ತಿರುವ ಇತಿಹಾಸವೂ ಈ ಮಠಕ್ಕಿದೆ’ ಎಂದು ಹೇಳಿದರು.
ಮಾದಾರ ಚನ್ನಯ್ಯ ಗುರುಪೀಠದ ಮಾದಾರ ಚನ್ನಯ್ಯ ಸ್ವಾಮೀಜಿ ಮಾತನಾಡಿ, ‘ಕಬೀರಾನಂದಾಶ್ರಮವನ್ನು ಜಾತ್ಯತೀತ ಹಾಗೂ ಶ್ರದ್ಧಾ-ಭಕ್ತಿಯ ಧಾರ್ಮಿಕ ಕೇಂದ್ರವಾಗಿ ಬೆಳೆಸುವ ನಿಟ್ಟಿನಲ್ಲಿ ಪೂಜ್ಯರು ನಿರಂತರವಾಗಿ ಶ್ರಮಿಸುತ್ತಿದ್ದಾರೆ. ಕೆಲವೇ ವರ್ಷಗಳ ಆಡಳಿತಾವಧಿಯಲ್ಲಿ ಆಶ್ರಮವು ಮುಗಿಲೆತ್ತರಕ್ಕೆ ಬೆಳೆದು ನಿಂತಿರುವುದು ಅವರ ಪರಿಶ್ರಮದ ಫಲವಾಗಿದೆ. ಈ ಆಶ್ರಮವು ಗೋಶಾಲೆಗೆ ಸೀಮಿತವಾಗಿರದೆ, ಅನ್ನ, ಆಹಾರ ಹಾಗೂ ವಿದ್ಯಾ ದಾಸೋಹದಂತಹ ಎಲ್ಲಾ ಕ್ಷೇತ್ರಗಳಲ್ಲೂ ಮುಂಚೂಣಿಯಲ್ಲಿದೆ’ ಎಂದರು.
ಹೊಸದುರ್ಗದ ಭಗೀರಥ ಪೀಠದ ಪುರುಷೋತ್ತಮಾನಂದ ಶ್ರೀಗಳು, ‘ಶಿವಲಿಂಗಾನಂದ ಶ್ರೀಗಳು ಎಂದಿಗೂ ತಮ್ಮ ಜನ್ಮದಿನವನ್ನು ವೈಯಕ್ತಿಕವಾಗಿ ಆಚರಿಸಿಕೊಳ್ಳದೆ, ಶಿಕ್ಷಣ, ಧರ್ಮ ಹಾಗೂ ಸಮಾಜ ಕಲ್ಯಾಣದ ಪವಿತ್ರ ಕಾರ್ಯಗಳ ಮೂಲಕ ನಾಡಿಗೆ ದೊಡ್ಡ ಕೊಡುಗೆಯನ್ನು ನೀಡುತ್ತಾ ಬಂದಿದ್ದಾರೆ’ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಶಿವಲಿಂಗಾನಂದ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು. ಮಾಜಿ ಶಾಸಕ ಎಸ್.ಕೆ.ಬಸವರಾಜನ್, ಕೆ.ಡಿ.ಪಿ. ಸದಸ್ಯ ಕೆ.ಸಿ.ನಾಗರಾಜ್, ಇಂಡಿಯಾನ ಸಂಸ್ಥೆಯ ರೂಪೇಶ್, ಸಂಶೋಧಕ ಬಿ.ರಾಜಶೇಖರಪ್ಪ, ಸಿದ್ದವ್ವನಹಳ್ಳಿ ಪರಮೇಶ್ವರ್, ವಿಜಯಕುಮಾರ್ ಇದ್ದರು.