ಮಾದಕ ವಸ್ತು ಮಾರಾಟಕ್ಕೆ ಕಡಿವಾಣ ಹಾಕಿ: ಡಿ. ದೇವರಾಜ್

ಮಾದಕ ವಸ್ತು ಮಾರಾಟಕ್ಕೆ ಕಡಿವಾಣ ಹಾಕಿ: ಡಿ. ದೇವರಾಜ್

ಮಾದಕ ವಸ್ತು ಮಾರಾಟಕ್ಕೆ ಕಡಿವಾಣ ಹಾಕಿ: ಡಿ. ದೇವರಾಜ್

ಹಿರಿಯೂರು: ‘ಅಬಕಾರಿ ಸಿಬ್ಬಂದಿ ಮಾದಕ ವಸ್ತುಗಳ ಮಾರಾಟಕ್ಕೆ ಕಡಿವಾಣ ಹಾಕುವ ಮೂಲಕ ಸಾಮಾಜಿಕ ಸ್ವಾಸ್ಥ್ಯ ಕಾಪಾಡಬೇಕು’ ಎಂದು ಪೊಲೀಸ್ ಉಪ ಮಹಾನಿರೀಕ್ಷಕ (ತರಬೇತಿ) ಡಿ. ದೇವರಾಜ್ ಸೂಚಿಸಿದರು.

ತಾಲ್ಲೂಕಿನ ಐಮಂಗಲ ಗ್ರಾಮದ ಪೊಲೀಸ್ ತರಬೇತಿ ಶಾಲೆಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಅಬಕಾರಿ ಪೊಲೀಸ್ ಕಾನ್‌ಸ್ಟೆಬಲ್‌ಗಳ ನಿರ್ಗಮನ ಪಥ ಸಂಚಲನ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಸರ್ಕಾರದ ಯಾವುದೇ ಇಲಾಖೆಗೆ ಸೇರಿದ ವೃತ್ತಿ ಇರಬಹುದು. ಯಾರೂ ಕೂಡ ಕೀಳರಿಮೆಯೊಂದಿಗೆ ಕರ್ತವ್ಯ ನಿರ್ವಹಿಸಬಾರದು. ಕೆಲಸದಲ್ಲಿ ಬದ್ಧತೆ ಇದ್ದರೆ ಆತ್ಮವಿಶ್ವಾಸ ಹೆಚ್ಚುತ್ತದೆ. ಬೇರೆಯವರ ಹೊಗಳಿಕೆ– ತೆಗಳಿಕೆಯ ಬಗ್ಗೆ ಗಮನಕೊಡದೆ ವೃತ್ತಿಗೆ ನಿಷ್ಠೆ ತೋರಿಸಿ ಕೆಲಸ ಮಾಡಿ’ ಎಂದು ಅವರು ತಿಳಿಸಿದರು.

‘ಯುವಜನರ ಸ್ವಾಸ್ಥ್ಯವನ್ನು ಹಾಳು ಮಾಡುತ್ತಿರುವ, ಅಪರಾಧ ಕೃತ್ಯಗಳ ಹೆಚ್ಚಳಕ್ಕೆ ಕಾರಣವಾಗಿರುವ ಮಾದಕ ವಸ್ತುಗಳ ಮಾರಾಟ ಜಾಲವನ್ನು ಮೂಲೋತ್ಪಾಟನೆ ಮಾಡಬೇಕು. ಮಾದಕ ವ್ಯಸನಗಳಿಗೆ ಒಳಗಾದವರನ್ನು ವ್ಯಸನ ಮುಕ್ತಿಗೊಳಿಸಲು ಪ್ರಯತ್ನ ನಡೆಸುವ ಮೂಲಕ ಸಮಾಜದ ಋಣ ತೀರಿಸಬೇಕು. ಮಾನವೀಯ ಮೌಲ್ಯಗಳೇ ಬದುಕಿನ ಶ್ರೇಷ್ಠ ಅಂಶಗಳು ಎಂಬುದನ್ನು ಮರೆಯಬಾರದು. ಅನವಶ್ಯಕವಾಗಿ ಬೇರೆಯವರ ಮೇಲೆ ಸೇಡು ತೀರಿಸಿಕೊಳ್ಳುವ ಆಲೋಚನೆ ಮಾಡಬೇಡಿ’ ಎಂದು ದೇವರಾಜ್ ಕಿವಿಮಾತು ಹೇಳಿದರು.

‘ಅಬಕಾರಿ ಇಲಾಖೆ ರಾಜ್ಯದ ಪ್ರಮುಖ ಇಲಾಖೆಗಳಲ್ಲಿ ಒಂದಾಗಿದ್ದು, ಸಿಬ್ಬಂದಿಗೆ ತರಬೇತಿ ನೀಡಲು ಸೌಕರ್ಯಗಳಿರಲಿಲ್ಲ. ಆದ್ದರಿಂದ ಪೊಲೀಸ್ ಇಲಾಖೆಯಲ್ಲಿನ ಪರಿಣಿತರಿಂದ ನಮ್ಮ ಇಲಾಖೆ ಸಿಬ್ಬಂದಿಗೆ ಉತ್ತಮ ತರಬೇತಿ ಕೊಡಿಸಲಾಗಿದೆ. 2019ರಲ್ಲಿ ಆಯ್ಕೆಯಾದ ಹಾಗೂ ಅದಕ್ಕಿಂತ ಹಿಂದೆ ಸೇವೆಗೆ ಸೇರಿದ ಪೊಲೀಸ್ ಕಾನ್‌ಸ್ಟೆಬ ಲ್‌ಗಳಿಗೆ ತರಬೇತಿ ನೀಡಲಾಗಿದೆ’ ಎಂದು ಅಬಕಾರಿ ಇಲಾಖೆ ಹೆಚ್ಚುವರಿ ಆಯುಕ್ತ ಸುರೇಶ್ ಕುಮಾರ್ ತಿಳಿಸಿದರು.

ಪೊಲೀಸ್ ತರಬೇತಿ ಶಾಲೆಯ ಪ್ರಾಂಶುಪಾಲ ಹಾಗೂ ಎಸ್ಪಿ ಪಿ. ಪಾಪಣ್ಣ ಮಾತನಾಡಿದರು.

ಪ್ರಥಮ ಕಮಾಂಡೆಂಟ್ ಆಗಿ ಖಾನಾಪುರ ಪೊಲೀಸ್ ತರಬೇತಿ ಶಾಲೆಯ ಡಿವೈಎಸ್ಪಿ ಎನ್. ನಿಂಗಪ್ಪ, ದ್ವಿತೀಯ ಕಮಾಂಡೆಂಟ್ ಆಗಿ ಆರ್‌ಪಿಐ ಎಸ್.ಬಿ. ವಿರೂಪಾಕ್ಷ ಪಥ ಸಂಚಲನದ ನೇತೃತ್ವ ವಹಿಸಿದ್ದರು.

ಚಿತ್ರದುರ್ಗ ಎಎಸ್‌ಪಿ ಡಾ.ಶಿವಕುಮಾರ್ ಆರ್. ದಂಡಿನ, ವಿಜಯನಗರ ಜಿಲ್ಲೆ ಅಬಕಾರಿ ಡಿಸಿ ಡಾ.ಮಾದೇಶ್, ಅಬಕಾರಿ ಇಲಾಖೆಯ ಜಂಟಿ ನಿರ್ದೇಶಕಿ ಡಾ.ಆಶಾಲತಾ, ಡಿವೈಎಸ್ಪಿ ಸುರೇಂದ್ರಾಚಾರ್, ಹಿರಿಯೂರು ಉಪ ವಿಭಾಗದ ಡಿವೈಎಸ್ಪಿ ಗೋಪಾಲಕೃಷ್ಣ, ಅಬಕಾರಿ ಹಾಗೂ ಪೊಲೀಸ್ ತರಬೇತಿ ಶಾಲೆಯ ಸಿಬ್ಬಂದಿ ಹಾಜರಿದ್ದರು.

74 ಸ್ನಾತಕೋತ್ತರ ಪದವೀಧರರು

ಅಬಕಾರಿ ಪೊಲೀಸ್ ಕಾನ್‌ಸ್ಟೆಬಲ್ ತರಬೇತಿ ಪಡೆದವರಲ್ಲಿ 74 ಜನ ಸ್ನಾತಕೋತ್ತರ ಪದವೀಧರರು, 6 ಜನ ಎಂಜಿನಿಯರಿಂಗ್, 209 ಜನ ಪದವಿ, ಇಬ್ಬರು ಡಿಪ್ಲೊಮಾ, 27 ಪಿಯು ಹಾಗೂ ಎಸ್‌ಎಸ್‌ಎಲ್‌ಸಿ ಉತ್ತೀರ್ಣರಾದ 7 ಜನರಿದ್ದಾರೆ.

ನಿರ್ಗಮನ ಪಥ ಸಂಚಲನಕ್ಕೆಂದೇ ಅಲಂಕರಿಸಿದ ಮೈದಾನದಲ್ಲಿ ಖಾನಾಪುರ ಪೊಲೀಸ್ ತರಬೇತಿ ಶಾಲೆಯ ಡಿವೈಎಸ್ಪಿ ಎನ್. ನಿಂಗಪ್ಪ ಅವರ ಬೆಂಗಾವಲಿನಲ್ಲಿ ಪೊಲೀಸ್ ಉಪ ಮಹಾನಿರೀಕ್ಷಕ ಡಿ. ದೇವರಾಜ್, ಸುರೇಶ್‌ಕುಮಾರ್, ಡಾ. ಮಾದೇಶ್ ತೆರೆದ ಜೀಪಿನಲ್ಲಿ ಸಾಗಿ ಪ್ರಶಿಕ್ಷಣಾರ್ಥಿಗಳಿಂದ ಗೌರವ ವಂದನೆ ಸ್ವೀಕರಿಸಿದರು.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ