ಓಬವ್ವ ಮಹಿಳೆಯರ ಸ್ವಾಭಿಮಾನದ ಸಂಕೇತ: ನವೀನ್‌ ಮಸ್ಕಲ್‌

ಓಬವ್ವ ಮಹಿಳೆಯರ ಸ್ವಾಭಿಮಾನದ ಸಂಕೇತ: ನವೀನ್‌ ಮಸ್ಕಲ್‌

ಓಬವ್ವ ಮಹಿಳೆಯರ ಸ್ವಾಭಿಮಾನದ ಸಂಕೇತ: ನವೀನ್‌ ಮಸ್ಕಲ್‌

ಚಿತ್ರದುರ್ಗ: ‘ಶತ್ರು ಸೈನಿಕರಿಂದ ಐತಿಹಾಸಿಕ ಕಲ್ಲಿನಕೋಟೆಯನ್ನು ಕಾಪಾಡಿದ ಒನಕೆ ಓಬವ್ವ ಮಹಿಳೆಯರ ಆತ್ಮಗೌರವ, ಸ್ವಾಭಿಮಾನದ ಸಂಕೇತವಾಗಿ ನಿಂತಿದ್ದಾರೆ. ಎಂಥದ್ದೇ ಸಂಕಷ್ಟ ಬಂದರೂ ಅದನ್ನು ದಿಟ್ಟತನದಿಂದ ಎದುರಿಸಬೇಕು ಎಂಬುದನ್ನು ಸಾರಿ ಹೇಳಿದ್ದಾರೆ’ ಎಂದು ಚಿಂತಕ ನವೀನ್‌ ಮಸ್ಕಲ್‌ ಹೇಳಿದರು.

ನಗರದ ತರಾಸು ರಂಗಮಂದಿರದಲ್ಲಿ ಬುಧವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ವತಿಯಿಂದ ನಡೆದ ‘ವೀರ ವನಿತೆ ಒನಕೆ ಓಬವ್ವ ಜಯಂತ್ಯುತ್ಸವ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

‘ಒನಕೆ ಓಬವ್ವ ಯಾವುದೇ ಒಂದು ಸಮುದಾಯಕ್ಕೆ ಸೇರಿದವರಲ್ಲ. ಅವರು ತೋರಿದ ಧೈರ್ಯ, ಸಾಹಸ ಗುಣಗಳು ಇಡೀ ವಿಶ್ವಕ್ಕೆ ಮಾದರಿ. ಅವರು ಜಾತ್ಯತೀತರಾಗಿದ್ದು, ಪ್ರತಿ ಮಹಿಳೆಗೂ ಪ್ರೇರಕ ಶಕ್ತಿಯಾಗಿದ್ದಾರೆ. ಸ್ವಾಮಿನಿಷ್ಠೆಗೆ ಹೆಸರುವಾಸಿಯಾಗಿದ್ದ ಓಬವ್ವ ತಮ್ಮ ಪ್ರಾಣದ ಹಂಗು ತೊರೆದು ಶತ್ರು ಸೈನಿಕರಿಗೆ ಒನಕೆ ರುಚಿ ತೋರಿಸಿದರು’ ಎಂದು ಬಣ್ಣಿಸಿದರು.

ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಂ.ಕೆ.ತಾಜ್‍ಪೀರ್, ‘ಚಿತ್ರದುರ್ಗದ ಇತಿಹಾಸ ಮತ್ತು ಕಲ್ಲಿನ ಕೋಟೆಯ ಪ್ರಸ್ತಾಪ ಬಂದಾಗ ನಮಗೆ ಮದಕರಿ ನಾಯಕರು ಹಾಗೂ ಒನಕೆ ಓಬವ್ವ ನೆನಪಾಗುತ್ತಾರೆ. ಹೈದರಾಲಿಯ ಸೈನಿಕರು ಕಳ್ಳಬಾಗಿಲ ಮೂಲಕ ಕೋಟೆಗೆ ನುಗ್ಗಲು ಯತ್ನಿಸಿದಾಗ, ಓಬವ್ವ ಪ್ರದರ್ಶಿಸಿದ ಅಪ್ರತಿಮ ಧೈರ್ಯ ಪ್ರತಿಯೊಬ್ಬರಿಗೂ ಹೆಮ್ಮೆಯ ವಿಷಯವಾಗಿದೆ’ ಎಂದು ಕೊಂಡಾಡಿದರು.

ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ಜಿಲ್ಲಾ ಘಟಕದ ಅಧ್ಯಕ್ಷ ಶಿವಣ್ಣ, ‘ಓಬವ್ವ ಅವರ ಧೈರ್ಯ, ಸಮಯಪ್ರಜ್ಞೆ ಮತ್ತು ತ್ಯಾಗ ನಾಡಿನ ಪ್ರತಿ ಮಹಿಳೆಗೂ ಪ್ರೇರಣೆ. ಊಟಕ್ಕೆ ಕುಳಿತ್ತಿದ್ದ ಗಂಡನಿಗೆ ತೊಂದರೆಯಾಗಬಾರದು ಎಂಬ ಕಾಳಜಿಯಿಂದ, ಕೋಟೆಯ ಕಿಂಡಿಯ ಮೂಲಕ ನುಗ್ಗುತ್ತಿದ್ದ ಹೈದರಾಲಿ ಸೈನಿಕರನ್ನು ತಾನೇ ಧೈರ್ಯದಿಂದ ಹೊಡೆದುರುಳಿಸಿದ ಓಬವ್ವಳ ಸಾಹಸ ಇತಿಹಾಸದ ಪುಟಗಳಲ್ಲಿ ಅಜರಾಮರವಾಗಿದೆ’ ಎಂದು ಹೇಳಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ‘ಓಬವ್ವ ಅವರು ನೆಲಮೂಲ ಸಂಸ್ಕೃತಿಯ ಸಾಮಾನ್ಯ ಮಹಿಳೆಯಾಗಿದ್ದರೂ ತಮ್ಮಲ್ಲಿದ್ದ ಸಾಹಸ ಮನೋಭಾವದಿಂದ ಇತಿಹಾಸದ ಪುಟಗಳಲ್ಲಿ ಅಮರರಾಗಿದ್ದಾರೆ’ ಎಂದರು.

‘ಪ್ರತಿಯೊಬ್ಬರೂ ಕಣ್ಣಿಗೆ ಕಾಣುವ ಕ್ಷಣಿಕ ಮನರಂಜನೆ ಹಾಗೂ ಮಾಯಾಲೋಕದ ಹಿಂದೆ ಬೀಳುತ್ತಿದ್ದಾರೆ. ತಾಯಂದಿರು ಜೀಜಾಬಾಯಿಯಂತೆ ತಮ್ಮ ಮಕ್ಕಳಿಗೆ ಮಹಾ ಪುರುಷರ ಹಾಗೂ ವೀರ ವನಿತೆಯರ ಇತಿಹಾಸ ತಿಳಿಸಿಕೊಟ್ಟು, ಅವರನ್ನು ನಾಡಿನ ಸತ್ಪ್ರಜೆಗಳನ್ನಾಗಿ ರೂಪಿಸಬೇಕು’ ಎಂದರು.

ನಗರಸಭೆ ಮಾಜಿ ಅಧ್ಯಕ್ಷ ಎಚ್.ಸಿ.ನಿರಂಜನಮೂರ್ತಿ, ‘ನಾಡಿಗೆ ಆಪತ್ತು ಬಂದಾಗ, ಯಾವುದೇ ಶಸ್ತ್ರಾಭ್ಯಾಸವಿಲ್ಲದಿದ್ದರೂ ಕೇವಲ ಒನಕೆ ಹಿಡಿದು ವೈರಿಗಳನ್ನು ಸಂಹರಿಸಿ ಕೋಟೆ ರಕ್ಷಿಸಿದ ಮಹಾಮಾತೆ ಓಬವ್ವ’ ಎಂದು ಬಣ್ಣಿಸಿದರು.

ಜಯಂತ್ಯುತ್ಸವದ ಅಂಗವಾಗಿ ಐತಿಹಾಸಿಕ ಕೋಟೆಯ ಮುಂಭಾಗದಿಂದ ಆನೆಬಾಗಿಲು, ಗಾಂಧಿವೃತ್ತ, ಓಬವ್ವ ವೃತ್ತ, ಮದಕರಿ ವೃತ್ತದ ಮುಖಾಂತರ ತರಾಸು ರಂಗಮಂದಿರದವರೆಗೆ ಜಾನಪದ ಕಲಾ ತಂಡಗಳೊಂದಿಗೆ ಮೆರವಣಿಗೆ ನಡೆಯಿತು.

ಛಲವಾದಿ ಮಹಾಸಂಸ್ಥಾನ ಗುರುಪೀಠ ಟ್ರಸ್ಟ್‌ನ ಬಸವ ನಾಗೀದೇವ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಉಪವಿಭಾಗಾಧಿಕಾರಿ ಕೆ.ಜೆ. ಕಾಂತರಾಜ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶಿವಕುಮಾರ್, ತಹಶೀಲ್ದಾರ್ ಬೀಬೀ ಫಾತಿಮಾ, ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಂ.ಆರ್. ಮಂಜುನಾಥ್, ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಚಿದಾನಂದಸ್ವಾಮಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಬಿ.ಎಂ. ಗುರುನಾಥ, ಮುಖಂಡರಾದ ಎಸ್.ವಿ. ಗುರುಮೂರ್ತಿ, ವಿ. ಸೋಮಶೇಖರ್, ಎಚ್. ಶೇಷಪ್ಪ, ಎನ್.ಬಿ. ಭಾರ್ಗವಿ ದ್ರಾವಿಡ್, ಎಸ್.ಎನ್. ರವಿಕುಮಾರ್ ಇದ್ದರು.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ