
ರೈತರಿಗೇಕೆ ಎಲ್ಲಿಲ್ಲದ ಕಾನೂನು?: ಬಗರ್ ಹುಕುಂ ಹೋರಾಟಗಾರರ ಆಕ್ರೋಶ
ಹಿರಿಯೂರು: ‘ನಾಲ್ಕೈದು ದಶಕಗಳಿಂದ ಬಗರ್ ಹುಕುಂ ಸಾಗುವಳಿ ಮಾಡುತ್ತಿರುವ ರೈತರಿಗೆ ಸರ್ಕಾರ ಭೂಮಿ ಮಂಜೂರು ಮಾಡದಿರುವುದು ಬೇಸರದ ಸಂಗತಿ’ ಎಂದು ಬಗರ್ ಹುಕುಂ ಸಾಗುವಳಿ ಹೋರಾಟಗಾರರು ಆರೋಪಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಬುಧವಾರ ಭೂಮಿ ಮತ್ತು ವಸತಿ ವಂಚಿತ ಬಗರ್ ಹುಕುಂ ಸಾಗುವಳಿದಾರರ ಹೋರಾಟ ಸಮಿತಿ ಮುಖಂಡರು ಸಭೆ ನಡೆಸಿ, ಆಕ್ರೋಶ ಹೊರಹಾಕಿದರು.
‘ತಾಲ್ಲೂಕಿನಲ್ಲಿ ಭೂ–ರಹಿತರು ಪ್ರತಿಭಟನೆ ನಡೆಸುತ್ತಿದ್ದರೂ ಸರ್ಕಾರ ಗಮನ ಹರಿಸುತ್ತಿಲ್ಲ. ಬಗರ್ ಹುಕುಂ ಸಮಿತಿಗಳು ಕಾಲಮಿತಿಯೊಳಗೆ ಸಭೆಗಳನ್ನು ನಡೆಸುತ್ತಿಲ್ಲ’ ಎಂದು ರೈತ ಸಂಘದ ರಾಜ್ಯ ಘಟಕದ ಉಪಾಧ್ಯಕ್ಷ ಕೆ. ಸಿ. ಹೊರಕೇರಪ್ಪ ಆರೋಪಿಸಿದರು.
‘ರಾಜ್ಯದಲ್ಲಿ ಅಧಿಕಾರಕ್ಕೆ ಬರುವ ಸರ್ಕಾರಗಳು ಸಾವಿರಾರು ಎಕರೆ ಭೂಮಿಯನ್ನು ಕಾರ್ಪೊರೇಟ್ ಕಂಪನಿಗಳಿಗೆ ನೀಡುತ್ತಿವೆ. ಆದರೆ ಬಗರ್ ಹುಕುಂ ಭೂಮಿಯನ್ನು ಸಾಗುವಳಿ ಮೂಲಕ ಅನ್ನ ಬೆಳೆಯುತ್ತಿರುವ ರೈತರಿಗೆ ನೀಡಲು ಎಲ್ಲಿಲ್ಲದ ಕಾನೂನು ಮುಂದೆ ತರುತ್ತಾರೆ. ಕಾರ್ಪೊರೇಟ್ ಕಂಪನಿಗಳಿಗೆ ಇಲ್ಲದ ಕಾನೂನು ಬಡರೈತರಿಗೆ ಏಕೆ?’ ಎಂದು ಕಿಡಿಕಾರಿದರು.
‘ನೂರಾರು ವರ್ಷಗಳ ಹಿಂದೆ ಸರ್ಕಾರ ಮತ್ತು ದಾನಿಗಳಿಂದ ಪಡೆದ ಭೂಮಿಯಲ್ಲಿ ಸರ್ಕಾರಿ ಶಾಲೆಗಳು ನಡೆಯುತ್ತಿವೆ. ಆದರೆ, ನೂರಾರು ಕೋಟಿ ಬೆಲೆ ಬಾಳುವ ಶಾಲೆಯ ಜಾಗಗಳನ್ನು ಸರ್ಕಾರ ಕಾರ್ಪೊರೇಟ್ ಅಥವಾ ಖಾಸಗಿ ಕಂಪನಿಗಳಿಗೆ ನೀಡುವ ಸಂಚು ನಡೆಸುತ್ತಿದೆ. ಸರ್ಕಾರ ತನ್ನ ನಿರ್ಧಾರದಿಂದ ಹಿಂದೆ ಸರಿಯದಿದ್ದಲ್ಲಿ ಹೋರಾಟ ನಡೆಸಬೇಕಾಗುತ್ತದೆ’ ಎಂದು ಹೋರಾಟ ಸಮಿತಿ ರಾಜ್ಯ ಘಟಕದ ಸಂಚಾಲಕ ಕುಮಾರ್ ಸಮತಳ ಎಚ್ಚರಿಸಿದರು.
ಸಮಿತಿಯ ಜಿಲ್ಲಾ ಘಟಕದ ಅಧ್ಯಕ್ಷ ಸತ್ಯಪ್ಪ ಮಲ್ಲಾಪುರ, ಹನುಮಂತಪ್ಪ ಗೋನೂರು, ಅಂಜಿನಪ್ಪ ಭೀಮಸಮುದ್ರ, ನಾಗೇನಹಳ್ಳಿ ಚಂದ್ರಪ್ಪ, ನಾಗೇಂದ್ರಪ್ಪ, ದಲಿತ ಮುಖಂಡರಾದ ಕೆ.ಪಿ. ಶ್ರೀನಿವಾಸ್, ಖಂಡೇನಹಳ್ಳಿ ತಿಮ್ಮರಾಜು ಇದ್ದರು.