
Premada Oorali: ನಟಿ ತಪಸ್ವಿನಿ ಸಕ್ಸಸ್ಗೆ ಹೆಮ್ಮೆಪಟ್ಟ ರಶ್ಮಿಕಾ ಮಂದಣ್ಣ! 'ನನ್ನ ದೇವತೆ ನೀವು' ಎಂದು ಸಂತಸ
ಬೆಂಗಳೂರು: ಕನ್ನಡದಲ್ಲಿ ಸಿನಿ ಜರ್ನಿ ಆರಂಭಿಸಿ ಬೇರೆ ಬೇರೆ ಭಾಷೆಗಳಲ್ಲಿ ನಟಿಸಿ ಅಲ್ಲಿಯೇ ನೆಲೆಗೊಂಡಿರುವ ನಟಿ ರಶ್ಮಿಕಾ ಮಂದಣ್ಣ (Rashmika Mandanna) ಅವರು ಇದೀಗ ಎರಡು ವಿಚಾರಗಳಿಗೆ ಸುದ್ದಿಯಲ್ಲಿದ್ದಾರೆ. ಕನ್ನಡ ಚಿತ್ರರಂಗದೊಂದಿಗೆ ಯಾವುದೇ ಸಂಬಂಧವೇ ಇಲ್ಲದಂತೆ ಇದ್ದುಬಿಟ್ಟಿದ್ದ ನಟಿ ಇದೀಗ ದಿಢೀರನೇ ಕನ್ನಡದ ನಟಿ, ಹೊಸ ಸಿನಿಮಾ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ತಮ್ಮ ಬೆಸ್ಟ್ ವಿಶ್ ತಿಳಿಸಿದ್ದಾರೆ.
ರಾಜ್ಯಾದ್ಯಂತ ಕನ್ನಡ ಸಿನಿಮಾ 'ಪ್ರೇಮದ ಊರಲಿ' (Premada Oorali) ಗುಂಗು ಶುರುವಾಗಿದೆ. ಬಿಕೋ ಎನ್ನುತ್ತಿದ್ದ ಥಿಯೇಟರ್ ಗಳು ಕುಟುಂಬ ಸಮೇತರಾಗಿ ಬರುತ್ತಿರುವ ಎಲ್ಲ ವಯೋಮಾನದ ಪ್ರೇಕ್ಷಕರಿಂದ ತುಂಬಿ ತುಳುಕುತ್ತಿವೆ. ಸಾಕಷ್ಟು ಪ್ರಚಾರ ಮಾಡದಿದ್ದರೂ ಸಿನಿಮಾದ ಕಥೆ, ನೋಡಿದ ಜನರೇ ಸ್ವತಃ ಪ್ರಚಾರ ಮಾಡುತ್ತಿದ್ದಾರೆ. ಕೇವಲ ಒಂದೆರಡು ಕೋಟಿಗಳಲ್ಲಿ ರೆಡಿಯಾದ 'ಪ್ರೇಮದ ಊರಲಿ' ಸಿನಿಮಾ ಇದೀಗ 50 ಕೋಟಿ ರೂ. ಸಂಗ್ರಹದತ್ತ ಹೆಜ್ಜೆ ಇಡುವ ಮೂಲಕ ಚಿತ್ರರಂಗಕ್ಕೆ ಜೀವಕಳೆ ತಂದುಕೊಟ್ಟಿದೆ. ಥಿಯೇಟರ್ ಗಳ ಸಂಖ್ಯೆಯು ಹೆಚ್ಚುತ್ತಿದೆ. ಕಥೆ ಚೆನ್ನಾಗಿದ್ದರೆ ಜನ ಸಿನಿಮಾ ಇಷ್ಟಪಡುತ್ತಾರೆ ಎಂಬುದನ್ನು ಮತ್ತೊಮ್ಮೆ ಸಾಬೀತು ಮಾಡಿದೆ. ಈ ಸಿನಿಮಾದಲ್ಲಿ ಕೂರ್ಗ್ ನಟಿ ತಪಸ್ವಿನಿ ಪೂಣಚ್ಚ (Thapaswini Poonacha) ಅವರೂ ನಟಿಸಿದ್ದಾರೆ. ಸಂದರ್ಶನದಲ್ಲಿ ರಶ್ಮಿಕಾ, ತಪಸ್ವಿನಿ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ್ದಾರೆ.
'ರಣಬಲಿ' ರಿಲೀಸ್ಗೆ ರೆಡಿ: ಕನ್ನಡದಲ್ಲಿ 'ವಿರೂಶ್' ಸಂದರ್ಶನ
ನಟಿ ರಶ್ಮಿಕಾ ಮಂದಣ್ಣ ಮತ್ತು ಪತಿ ವಿಜಯ್ ದೇವರಕೊಂಡ ನಟನೆಯ ಪ್ಯಾನ್ ಇಂಡಿಯಾ 'ರಣಬಲಿ' (Ranabali) ಸಿನಿಮಾವು ಇದೇ ಅ.16ರಂದು ಬಿಡುಗಡೆ ಆಗಲಿದೆ. ಅದಕ್ಕೂ ಮುನ್ನ ಪ್ರಚಾರ ಕಾರ್ಯದಲ್ಲಿ ವಿರೂಶ್ ದಂಪತಿ ಭಾಗಿಯಾಗಿದ್ದಾರೆ. ರಶ್ಮಿಕಾ ಕನ್ನಡ ಮರೆತರು ಎನ್ನುವಾಗಲೇ ಪತಿ ವಿಜಯ್ ಜೊತೆಗೆ ಆಂಕರ್ ಅನುಶ್ರೀ ಅವರಿಗೆ ಕನ್ನಡದಲ್ಲಿ ಸಂದರ್ಶನ ನೀಡಿದ್ದಾರೆ. ಈ ಮೂಲಕ ಸುದ್ದಿಯಾಗಿದ್ದಾರೆ.
ಸಂದರ್ಶನದಲ್ಲಿ ಅನುಶ್ರೀ ಅವರು, ಕೂರ್ಗ್ ನಟಿ ತಪಸ್ವಿನಿ ಅವರ 'ಪ್ರೇಮದ ಊರಲಿ' ಸಿನಿಮಾ ಸಖತ್ ಹಿಟ್ ಆಗಿದೆ, ಜನರನ್ನು ರಂಜಿಸುವಲ್ಲಿ ಯಶಸ್ವಿಯಾಗಿದೆ ಎಂದು ಗಮನಕ್ಕೆ ತರುತ್ತಾರೆ. ಕೂಡಲೇ ರಶ್ಮಿಕಾ ತಮ್ಮೂರಿನ ನಟಿಯ ಕುರಿತು ಮನ ಬಿಚ್ಚಿ ಮಾತನಾಡಿ ಶುಭ ಹಾರೈಸಿದ್ದಾರೆ. ಜೊತೆಗೆ ರಶ್ಮಿಕಾ ಪೋಸ್ಟ್ವೊಂದನ್ನು ಹಂಚಿಕೊಂಡು ಎರಡನೇ ಬಾರಿಗೆ ಸುದ್ದಿಯಾಗಿದ್ದಾರೆ.
'ಇದಿನ್ನು ಆರಂಭ ಮಾತ್ರ': ರಶ್ಮಿಕಾ ಪೋಸ್ಟ್ನಲ್ಲಿ ಏನಿದೆ?
ಇನ್ಸ್ಟಾಗ್ರಾಮ್ ಪೋಸ್ಟ್ನಲ್ಲಿ 'ಕೂರ್ಗ್ನಿಂದು ಬಂದು ಸಿನಿಮಾ ಮಾಡಿದ್ದೀರಿ. ಸಿನಿಮಾ ಸಕ್ಸಸ್ ಕಾಣುತ್ತಿರುವುದು ಖಷಿಯ ಸಂಗತಿ. ಹೆಮ್ಮೆ ಅನ್ನಿಸುತ್ತದೆ. ನಿಮಗೆ ಮಾತ್ರವೇ ನನ್ನ ಪ್ರೀತಿಯ ಅಪ್ಪುಗೆ ಬ್ಯೂಟಿಫುಲ್ ಗರ್ಲ್. ಇದಿನ್ನು ಆರಂಭ ಮಾತ್ರ, ಮುಂದೆ ನಿಮ್ಮ ಎಲ್ಲ ಕನಸುಗಳು ನನಸಾಗಲಿದೆ ಎಂದು ಹಾರೈಸುತ್ತೇನೆ' ಎಂದು ಪೋಸ್ಟ್ನಲ್ಲಿ ರಶ್ಮಿಕಾ ತಿಳಿಸಿದ್ದಾರೆ. ಸಂದರ್ಶನದಲ್ಲಿ ಈ ವಿಷಯ ನೆನಪಿಸಿದ್ದಕ್ಕೆ ಅನುಶ್ರೀ ಅವರಿಗೂ ಥ್ಯಾಂಕ್ಯೂ ಎಂದು ತಿಳಿಸಿದ್ದಾರೆ.
ರಶ್ಮಿಕಾರನ್ನು ದೇವತೆ ಎಂದ ತಪಸ್ವಿನಿ, ಪೋಸ್ಟ್
ಪ್ಯಾನ್ ಇಂಡಿಯಾ ಕೂರ್ಗ್ ನಟಿಯ ವಿಶ್ ಗೆ ನಟಿ ತಪಸ್ವಿನಿ ಪೂಣಚ್ಚ ಅವರು ಪ್ರತಿಕ್ರಿಯಿಸಿ ರಿಪೋಸ್ಟ್ ಮಾಡಿದ್ದಾರೆ. 'ನನ್ನ ದೇವತೆಯಾದ ನೀವು ನಿಮ್ಮಿಂದ ಈ ಮಾತುಗಳನ್ನು ಕೇಳಿ ತುಂಬಾ ಸಂತಸವಾಗಿದೆ. ಈ ದಿನ ಸಾರ್ಥಕವಾಯ್ತು. ಈ ಖುಷಿಗೆ ಕಾರಣವಾದ ಅನುಶ್ರೀ ಅವರಿಗೆ ಧನ್ಯವಾದ' ಎಂದು ಹೇಳಿದ್ದಾರೆ. ಈ ಮೂಲಕ ಎರಡನೇ ವಿಚಾರಕ್ಕೆ ರಶ್ಮಿಕಾ ಸುದ್ದಿಯಾಗಿದ್ದಾರೆ. ಇನ್ನು ಈ ನಟಿಯರಿಬ್ಬರ ಪೋಸ್ಟ್ ಅನ್ನು ರಿಪೋಸ್ಟ್ ಮಾಡಿರುವ ಅನುಶ್ರೀ ಅವರು ವಿಶ್ ಮಾಡಿದ್ದಾರೆ, ಹರ್ಷ ವ್ಯಕ್ತಪಡಿಸಿದ್ದಾರೆ.
'ರಣಬಲಿ' ಕನ್ನಡ ನೆನಪು ಮಾಡಿಕೊಂಡ್ರಾ ರಶ್ಮಿಕಾ?
ಕನ್ನಡ ಮರೆತರಾ ಎಂಬಂತಿದ್ದ ರಶ್ಮಿಕಾ ಈಗೇಕೆ ಕನ್ನಡ ನಟಿ, ಸಿನಿಮಾಗಳ ಕುರಿತು ಶುಭ ಹಾರೈಸುತ್ತಿದ್ದಾರೆ ಎಂದು ಕೆಲವರು ತಲೆಗೆ ಹುಳ ಬಿಟ್ಟುಕೊಂಡಿದ್ದಾರೆ. ಮತ್ತೊಂದೆಡೆ ಅವರ ರಣಬಲಿ ಸಿನಿಮಾ 5 ಭಾಷೆಗಳ ಪೈಕಿ ಕನ್ನಡದಲ್ಲೂ ಬಿಡುಗಡೆ ಆಗಲಿದೆ. ಹೀಗಾಗಿ ಪ್ರಚಾರಕ್ಕಾಗಿ ರಶ್ಮಿಕಾಗೆ ಈಗ ಕನ್ನಡ ಯೂಟ್ಯೂಬ್ ಚಾನಲ್, ಸಿನಿಮಾಗಳು, ನಟಿಯರ ಮೇಲೆ ಒಲವು ಹೆಚ್ಚಾಗಿದೆ. ಇದೆಲ್ಲ ಸಿನಿಮಾ ಪ್ರಚಾರಕ್ಕಾಗಿ ಅಂತಲೂ ಕೆಲವರು ಮಾತನಾಡಿಕೊಳ್ಳುತ್ತಿದ್ದಾರೆ.
ಸಿಂಪಲ್ ಸುನಿ ಹೊಸ ಚಿತ್ರಕ್ಕೆ 'ಚಮಕ್' ನಾಯಕಿ ವಿಶ್
ನಿರ್ದೇಶಕ ಸಿಂಪಲ್ ಸುನಿ ಅವರ ತೆರೆಕಂಡ ಸಿನಿಮಾ 'ಮೋಡ ಕವಿದ ವಾತಾವರಣ' ಬಿಡುಗಡೆ ವೇಳೆ (ಏಪ್ರಿಲ್ ನಲ್ಲಿ) ರಶ್ಮಿಕಾ ಅವರು ಸುನಿ ಅವರ ಪೋಸ್ಟ್ ರಿಪೋಸ್ಟ್ ಮಾಡಿರುವ ವಿಶ್ ಮಾಡಿದ್ದಾರೆ. ಇದೇ ಸಿಂಪಲ್ ಸುನಿ ಅವರ 'ಚಮಕ್' ಚಿತ್ರದಲ್ಲಿ ರಶ್ಮಿಕಾ ನಟಿಸಿದ್ದರು. ಕನ್ನಡದಲ್ಲಿ 'ಕಿರಿಕ್ ಪಾರ್ಟಿ, ಅಂಜನಿಪುತ್ರ, ಯಜಮಾನ, ಪೊಗರು' ಸಿನಿಮಾಗಳಲ್ಲಿ ನಟಿ ರಶ್ಮಿಕಾ ನಟಿಸಿದ್ದಾರೆ.