
GBA: ಕಸ ವಿಲೇವಾರಿ ಸಮಸ್ಯೆಗೆ ಫೋನ್-ಇನ್ ಕಾರ್ಯಕ್ರಮ, ವೈದ್ಯಕೀಯ ಕಸ ಸುರಿದವರಿಗೆ ₹15000 ದಂಡ!
ಬೆಂಗಳೂರು: ಜಿಬಿಎ ವ್ಯಾಪ್ತಿಯಲ್ಲಿನ ಪಾಲಿಕೆಗಳಿಂದ ಘನತ್ಯಾಜ್ಯ ನಿರ್ವಹಣೆ, ವಿಲೇವಾರಿ ಸಂಬಂಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದೆ. ಬೆಂಗಳೂರು ಉತ್ತರ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಪ್ರತಿ ಮಂಗಳವಾರ ಘನತ್ಯಾಜ್ಯ ಸಂಬಂಧಿ ನೇರ ಫೋನ್ ಇನ್ ಕಾರ್ಯಕ್ರಮ ನಡೆಯಲಿದ್ದು, ಇಂದು ಅನೇಕ ಅಹವಾಲುಗಳನ್ನು ಅಧಿಕಾರಿಗಳು ಕೇಳಿದ್ದಾರೆ. ದಕ್ಷಿಣ ನಗರ ಪಾಲಿಕೆ ವ್ಯಾಪ್ತಿಯಲ್ಲಿ ವೈದ್ಯಕೀಯ ತ್ಯಾಜ್ಯ ಸುರಿದ ಹಿನ್ನೆಲೆ ಭಾರೀ ದಂಡ ವಿಧಿಸಲಾಗಿದೆ. ತ್ಯಾಜ್ಯ ಸುರಿಯುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮಕ್ಕೆ ಅಧಿಕಾರಿಗಳಿಗೆ ಸೂಚನೆ ಕೊಡಲಾಗಿದೆ.
ಬೆಂಗಳೂರು ದಕ್ಷಿಣ ನಗರ ಪಾಲಿಕೆ ವ್ಯಾಪ್ತಿಯ ಬಿಟಿಎಂ ಲೇಔಟ್ ವಿಭಾಗದ ಈಜೀಪುರ ವ್ಯಾಪ್ತಿಯ ಶ್ರೀನಿವಾಗಿಲು ಹಾಗೂ ಮಂಗಮ್ಮನಪಾಳ್ಯ ಮುಖ್ಯರಸ್ತೆಯಲ್ಲಿ ಕಸ ವಿಲೇವಾರಿ ಕುರಿತಂತೆ ಪಾಲಿಕೆಯ ಕಿರಿಯ ಆರೋಗ್ಯ ಪರಿವೀಕ್ಷಕರ ತಂಡವು ಬೆಳಗ್ಗೆ ಪರಿಶೀಲನೆ ನಡೆಸಿತು.
ಪರಿಶೀಲನೆಯ ವೇಳೆ ರಸ್ತೆಬದಿಯ ಸಾರ್ವಜನಿಕ ಸ್ಥಳದಲ್ಲಿ ಔಷಧಿಗಳ ಪೊಟ್ಟಣಗಳು, ವೈದ್ಯಕೀಯ ತ್ಯಾಜ್ಯ ಹಾಗೂ ಮಿಶ್ರ ಕಸವನ್ನು ಅಕ್ರಮವಾಗಿ ಎಸೆದಿರುವುದು ಕಂಡು ಬಂದಿದೆ. ಸ್ಥಳದಲ್ಲಿದ್ದ ಪ್ರಿಸ್ಕ್ರಿಪ್ಷನ್ ಚೀಟಿಗಳು ಹಾಗೂ ದಾಖಲೆಗಳನ್ನು ಪರಿಶೀಲಿಸಿದಾಗ, ಈ ತ್ಯಾಜ್ಯವು ಮಂಗಮ್ಮನಪಾಳ್ಯ ಮುಖ್ಯರಸ್ತೆಯ 'ಅಲ್-ಶಿಫಾ ಪಾಲಿಕ್ಲಿನಿಕ್'ಗೆ (Al-Shifa Polyclinic) ಸೇರಿದ್ದು ಎಂಬುದು ದೃಢಪಟ್ಟಿದೆ.
ನಿಯಮ ಉಲ್ಲಂಘನೆ: 15,000 ರೂ. ದಂಡ
ಘನತ್ಯಾಜ್ಯ ನಿರ್ವಹಣಾ ನಿಯಮಗಳನ್ನು ಉಲ್ಲಂಘಿಸಿ ಸಾರ್ವಜನಿಕ ಸ್ಥಳದಲ್ಲಿ ಅನಧಿಕೃತವಾಗಿ ತ್ಯಾಜ್ಯ ವಿಲೇವಾರಿ ಮಾಡಿದ್ದಕ್ಕಾಗಿ ಹಾಗೂ ಬೃಹತ್ ತ್ಯಾಜ್ಯ ಉತ್ಪಾದಕರ ನಿಯಮ ಪಾಲಿಸದ ಹಿನ್ನೆಲೆಯಲ್ಲಿ ಅಲ್-ಶಿಫಾ ಪಾಲಿಕ್ಲಿನಿಕ್ಗೆ ಸ್ಥಳದಲ್ಲೇ 15,000 ರೂ. ದಂಡ ವಿಧಿಸಿ ವಸೂಲಿ ಮಾಡಲಾಗಿದೆ.
ವೈಜ್ಞಾನಿಕ ತ್ಯಾಜ್ಯ ವಿಲೇವಾರಿಗೆ ಅಧಿಕಾರಿಗಳ ಕಟ್ಟುನಿಟ್ಟಿನ ಸೂಚನೆ
ದಂಡ ವಸೂಲಿ ಮಾಡಿದ ಅಧಿಕಾರಿಗಳು, ಕ್ಲಿನಿಕ್ನ ವೈದ್ಯರು ಹಾಗೂ ಸಿಬ್ಬಂದಿಗೆ ತ್ಯಾಜ್ಯ ನಿರ್ವಹಣೆ ಕುರಿತು ಅರಿವು ಮೂಡಿಸಿದರು. ಸಾರ್ವಜನಿಕರ ಆರೋಗ್ಯಕ್ಕೆ ಹಾನಿಯುಂಟುಮಾಡುವ ರೀತಿಯಲ್ಲಿ ರಸ್ತೆಬದಿಗಳಲ್ಲಿ ವೈದ್ಯಕೀಯ ಹಾಗೂ ಘನತ್ಯಾಜ್ಯವನ್ನು ಎಸೆಯಬಾರದು, ಕಡ್ಡಾಯವಾಗಿ ನಿಯಮಾನುಸಾರ ಅಧಿಕೃತ ಏಜೆನ್ಸಿಗಳ ಮೂಲಕವೇ ವೈಜ್ಞಾನಿಕವಾಗಿ ವಿಲೇವಾರಿ ಮಾಡಬೇಕು ಎಂದರು.
ನಿಯಮ ಉಲ್ಲಂಘಿಸುವ ಕ್ಲಿನಿಕ್ ಹಾಗೂ ವಾಣಿಜ್ಯ ಸಂಸ್ಥೆಗಳ ವಿರುದ್ಧ ಕಠಿಣ ಕ್ರಮದ ಎಚ್ಚರಿಕೆ
ಆಸ್ಪತ್ರೆಗಳು, ಕ್ಲಿನಿಕ್ಗಳು, ಲ್ಯಾಬ್ಗಳು ಸೇರಿದಂತೆ ಎಲ್ಲಾ ವಾಣಿಜ್ಯ ಸಂಸ್ಥೆಗಳು ಕಡ್ಡಾಯವಾಗಿ ಘನತ್ಯಾಜ್ಯ ಹಾಗೂ ಜೈವಿಕ ವೈದ್ಯಕೀಯ ತ್ಯಾಜ್ಯ ನಿಯಮಗಳನ್ನು ಪಾಲಿಸಬೇಕು. ನಿಯಮಗಳನ್ನು ಗಾಳಿಗೆ ತೂರಿ ರಸ್ತೆಬದಿ ಕಸ ಎಸೆಯುವವರ ವಿರುದ್ಧ ನಿರಂತರ ತಪಾಸಣೆ ನಡೆಸಿ ಮುಲಾಜಿಲ್ಲದೆ ಭಾರೀ ದಂಡ ಹಾಗೂ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ದಕ್ಷಿಣ ನಗರ ಪಾಲಿಕೆ ಆಯುಕ್ತ ಕೆ. ಎನ್. ರಮೇಶ್ ಸೂಚಿಸಿದರು.
ಪ್ರತಿ ಮಂಗಳವಾರ ಫೋನ್-ಇನ್ ಕಾರ್ಯಕ್ರಮ
ಬೆಂಗಳೂರು ಉತ್ತರ ನಗರ ಪಾಲಿಕೆ ಆಯುಕ್ತ ಪೊಮ್ಮಲ ಸುನೀಲ್ ಕುಮಾರ್ ಅವರ ಮಾರ್ಗದರ್ಶನದಲ್ಲಿ ಘನತ್ಯಾಜ್ಯ ನಿರ್ವಹಣೆಗೆ ಸಂಬಂಧಿಸಿದ ಸಾರ್ವಜನಿಕರ ಸಮಸ್ಯೆಗಳನ್ನು ನೇರವಾಗಿ ಆಲಿಸಿ, ಪರಿಹಾರಕ್ಕೆ ಕ್ರಮ ಕೈಗೊಳ್ಳುವ ಉದ್ದೇಶದಿಂದ ಫೋನ್-ಇನ್ ಕಾರ್ಯಕ್ರಮ ಇಂದು ನಡೆಯಿತು. ಒಟ್ಟು 23 ಅಹವಾಲುಗಳು ಸ್ವೀಕರಿಸಲಾಗಿದೆ ಎಂದು ಆಯುಕ್ತರು ತಿಳಿಸಿದರು.
ಪಾಲಿಕೆ ವ್ಯಾಪ್ತಿಯ ವಿವಿಧ ವಾರ್ಡ್ಗಳಿಂದ ಸಾರ್ವಜನಿಕರು ಕಸ ಸಂಗ್ರಹಣೆ ವಾಹನಗಳು ಸಮಯಕ್ಕೆ ಸರಿಯಾಗಿ ಮನೆಗಳಿಗೆ ಆಗಮಿಸದಿರುವುದು, ರಸ್ತೆ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಕಸ ಸುರಿಯುವುದು ಮತ್ತು ಖಾಲಿ ನಿವೇಶನಗಳಲ್ಲಿ ಕಸ ವಿಲೇವಾರಿ ಮಾಡುವುದಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಹೇಳಿಕೊಳ್ಳಲಾಗಿದೆ.
ಅಹವಾಲುಗಳ ಪರಿಹಾರಕ್ಕೆ ಕ್ರಮ
ಸ್ವೀಕರಿಸಲಾದ ಅಹವಾಲುಗಳನ್ನು 'ಸಹಾಯ 2.0' ವ್ಯವಸ್ಥೆಯಲ್ಲಿ ದಾಖಲಿಸಿ, ಎಲ್ಲಾ ಅಹವಾಲುಗಳನ್ನು ಸಂಬಂಧಪಟ್ಟ ಜವಾಬ್ದಾರಿಯುತ ಅಧಿಕಾರಿಗಳಿಗೆ ವಹಿಸಿ, ಅವುಗಳ ವಿಲೇವಾರಿ ಪ್ರಗತಿ ಬಗ್ಗೆ ನಿರಂತರವಾಗಿ ಮೇಲ್ವಿಚಾರಣೆ ಮಾಡಲಾಗುತ್ತಿದೆ. ಇದರಿಂದ ಅಹವಾಲುಗಳಿಗೆ ಕಾಲಮಿತಿಯೊಳಗೆ ಸೂಕ್ತ ಪರಿಹಾರ ಒದಗಿಸಲಾಗುವುದು.
ಪಾಲಿಕೆಯ ವ್ಯಾಪ್ತಿಯಲ್ಲಿ ಮೈಕ್ರೋ ಪ್ಲಾನಿಂಗ್
ಬೆಂಗಳೂರು ಉತ್ತರ ನಗರ ಪಾಲಿಕೆ ವ್ಯಾಪ್ತಿಯ ಏಳು ವಿಭಾಗಗಳಲ್ಲಿ ಘನತ್ಯಾಜ್ಯ ನಿರ್ವಹಣೆಯನ್ನು ವ್ಯವಸ್ಥಿತಗೊಳಿಸುವ ಉದ್ದೇಶದಿಂದ ಬ್ಲಾಕ್ವಾರು ಮೈಕ್ರೋ ಪ್ಲಾನಿಂಗ್ ಅನುಷ್ಠಾನಗೊಳಿಸಲಾಗುತ್ತಿದೆ. ಇದರಡಿ ಮನೆ-ಮನೆಗೆ ತ್ಯಾಜ್ಯ ಸಂಗ್ರಹಣೆ, ಆಟೋ ಟಿಪ್ಪರ್ಗಳ ಮಾರ್ಗ ನಿಗದಿ, ಪೌರಕಾರ್ಮಿಕರ ಬೀದಿ ಮ್ಯಾಪಿಂಗ್ ಹಾಗೂ ಬಲ್ಕ್ ವೇಸ್ಟ್ ಜನರೇಟರ್ಗಳ ನಿರ್ವಹಣೆಗೆ ಆದ್ಯತೆ ನೀಡಲಾಗಿದೆ. ಮೈಕ್ರೋ ಪ್ಲಾನಿಂಗ್ನ ಪರಿಣಾಮಕಾರಿ ಅನುಷ್ಠಾನವಾಗುತ್ತಿದೆ.
ಪ್ರತಿ ಮಂಗಳವಾರ ಫೋನ್ ಇನ್ ಕಾರ್ಯಕ್ರಮ
ಪ್ರತಿ ಮಂಗಳವಾರ ಬೆಳಿಗ್ಗೆ 7.30ರಿಂದ 9.30ರವರೆಗೆ ಘನತ್ಯಾಜ್ಯ ನಿರ್ವಹಣೆಗೆ ಸಂಬಂಧಿಸಿದಂತೆ ಪ್ರತ್ಯೇಕ ಫೋನ್-ಇನ್ ಕಾರ್ಯಕ್ರಮ ನಿಯಮಿತವಾಗಿ ನಡೆಸಲಾಗುವುದು. ಕಸ ಸಂಗ್ರಹಣೆ ವಾಹನಗಳ ಸಮಯ, ವಾಹನಗಳು ಆಗಮಿಸದಿರುವುದು, ಪೌರಕಾರ್ಮಿಕರ ಸೇವೆ ಹಾಗೂ ಕಸ ವಿಲೇವಾರಿಗೆ ಸಂಬಂಧಿಸಿದ ಸಮಸ್ಯೆಗಳನ್ನು ನಾಗರಿಕರು ಈ ಕಾರ್ಯಕ್ರಮದ ಮೂಲಕ ಪಾಲಿಕೆಯ ಗಮನಕ್ಕೆ ತರಬಹುದು. ಸಾರ್ವಜನಿಕರು ಈ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳುವಂತೆ ಪಾಲಿಕೆ ಮನವಿ ಮಾಡಿದೆ.