
ಕೊಪ್ಪಳ | ಶಾಸಕ ಹಿಟ್ನಾಳ ಭೇಟಿ ನೀಡಿದಾಗ ಗಲಾಟೆ; ದೂರು, ಪ್ರತಿದೂರು
ಕೊಪ್ಪಳ: ತಾಲ್ಲೂಕಿನ ಹ್ಯಾಟಿ ಮುಂಡರಗಿ ಗ್ರಾಮಕ್ಕೆ ಕ್ಷೇತ್ರದ ಶಾಸಕ ರಾಘವೇಂದ್ರ ಹಿಟ್ನಾಳ ಬುಧವಾರ ಭೇಟಿ ನೀಡಿದ ವೇಳೆ ಮತ್ತು ನಂತರ ಗ್ರಾಮಸ್ಥರ ನಡುವೆ ಕಿತ್ತಾಟ ನಡೆದಿದ್ದು 12 ಜನರ ವಿರುದ್ಧ ಇಲ್ಲಿನ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುರುವಾರ ಪ್ರಕರಣ ದಾಖಲಾಗಿದೆ. ತಡರಾತ್ರಿ ಪ್ರತಿದೂರು ಕೂಡ ದಾಖಲಾಗಿದೆ.
‘ಶಾಸಕರು ಬಂದು ಹೋದ ಬಳಿಕ ನನ್ನ ಮಕ್ಕಳಾದ ಗೋಣಿ ಬಸವರಾಜ ಹಾಗೂ ಹನುಮೇಶ್ ಸಮಾಜದ ಮುಖಂಡರ ಜೊತೆ ಮಾತನಾಡುತ್ತಿದ್ದಾಗ ಮುಖ್ಯ ಆರೋಪಿ ಹನುಮೇಶ ಮುತುಗಾರ ಸೇರಿದಂತೆ 12 ಜನ ಶಾಸಕ ಏನೂ ಕೆಲಸ ಮಾಡಿಲ್ಲ. ರಸ್ತೆಗಳು ಹಾಳಾಗಿವೆ ಎಂದು ಜೋರು ಧ್ವನಿಯಲ್ಲಿ ಮಾತನಾಡಿದ್ದಾರೆ. ಆಗ ಗೋಣಿ ಬಸವರಾಜ ಹಾಗೂ ಇತರರು ನಿಮ್ಮ ಸಮಸ್ಯೆಯಿದ್ದರೆ ಶಾಸಕರ ಬಳಿ ತೆರಳಿ ಪರಿಹರಿಸಿಕೊಳ್ಳುವಂತೆ ಹೇಳಿದ್ದರೂ ಕೇಳದೆ ಆರೋಪಿಗಳು ಹಲ್ಲೆ ಮಾಡಿ ಜಾತಿನಿಂದನೆ ಮಾಡಿದ್ದಾರೆ’ ಎಂದು ಬಸವರಾಜ ಜಾಡರ್ ದೂರಿನಲ್ಲಿ ತಿಳಿಸಿದ್ದಾರೆ.
ಇದರಿಂದ ಆಕ್ರೋಶಗೊಂಡ ಬಿಜೆಪಿ ಮುಖಂಡ ಡಾ.ಬಸವರಾಜ ಕ್ಯಾವಟರ್, ಎಸ್‌ಸಿ ಮೋರ್ಚಾ ಜಿಲ್ಲಾಧ್ಯಕ್ಷ ಗಣೇಶ ಹೊರತಟ್ನಾಳ ಗ್ರಾಮಸ್ಥರ ಜೊತೆಗೂಡಿ ಗ್ರಾಮೀಣ ಪೊಲೀಸ್ ಠಾಣೆ ಮುಂದೆ ಪ್ರತಿಭಟಿಸಿ, ಶಾಸಕರ ಕುಮ್ಮಕ್ಕಿನಿಂದ ಅಮಾಯಕರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಅಭಿವೃದ್ಧಿ ಕೆಲಸ ಕೇಳಿದರೂ ಪ್ರಕರಣ ದಾಖಲಿಸುವುದು ಯಾಕೆ’ ಎಂದು ಪ್ರಶ್ನಿಸಿದರು. ‘ಕಾನೂನು ಪ್ರಕಾರವೇ ಕ್ರಮ ಕೈಗೊಳ್ಳಲಾಗುತ್ತಿದೆ. ಯಾರ ಒತ್ತಾಯಕ್ಕೂ ಮಣಿದಿಲ್ಲ’ ಎಂದು ಪೊಲೀಸರು ಸಮಜಾಯಿಷಿ ನೀಡಿದರು.
ಜೆಡಿಎಸ್ ರಾಜ್ಯ ಕೋರ್ ಕಮಿಟಿ ಸದಸ್ಯ ಹಾಗೂ ಪಕ್ಷದ ಪ್ರಮುಖರು ಗ್ರಾಮೀಣ ಪೊಲೀಸ್ ಠಾಣೆಗೆ ತೆರಳಿ ಗ್ರಾಮಸ್ಥರಿಗೆ ಸಾಂತ್ವನ ಹೇಳಿದರು.
ಘಟನೆ ರಾಜಕೀಯ ಸ್ವರೂಪ ಪಡೆದುಕೊಂಡಿದ್ದು ಗುರುವಾರ ತಡರಾತ್ರಿ ಪ್ರತಿದೂರು ದಾಖಲಾಗಿದೆ.
ಹ್ಯಾಟಿ ಮುಂಡರಗಿ ಗ್ರಾಮದ ಉಮಾ ಶಿವಪ್ಪನವರ ದೂರು ನೀಡಿದ್ದು ‘ಶಾಸಕ ಹಿಟ್ನಾಳ ನಮ್ಮೂರಿಗೆ ಭೇಟಿ ನೀಡಿದಾಗ ನನ್ನ ಪತಿ ಯಮನೂರಪ್ಪ ಹಾಗೂ ಗ್ರಾಮದ ನಿವಾಸಿಗಳು ಮನವಿ ಪತ್ರ ಸಲ್ಲಿಸುವಾಗ ಮಹೇಶ ಗಣಪ, ಬಸವರಾಜ ಮಂಗಳಾಪುರ, ಗೋಣಿಬಸವರಾಜ, ಹನುಮೇಶ ಮಂಗಳಾಪುರ, ಹನುಮಂತ ರಾಟಿಮನಿ, ಯಮನೂರಪ್ಪ ಮಾಲಿಪಾಟೀಲ, ಹನುಮಂತಪ್ಪ ಕಟ್ಟಿಮನಿ, ವಿನಾಯಕ ತಳವಾರ, ಶಿವಪ್ಪ ಬುರುಡಿ ಇವರೆಲ್ಲರೂ ಸೇರಿ ನಮ್ಮೆಲ್ಲರ ಮೇಲೆ ಹಲ್ಲೆ ಮಾಡಿ ಆವಾಚ್ಯ ಶಬ್ದಗಳಿಂದ ಬೈಯ್ದು ಜಾತಿನಿಂದನೆ ಮಾಡಿದ್ದಾರೆ’ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.
ನಿಮ್ಮ ಸಮಸ್ಯೆಗಳನ್ನು ಮಾತನಾಡಿ ಪರಿಹರಿಸೋಣ ಎಂದು ಹೇಳಿದರೂ ಕೇಳದೆ ಎತ್ತಿನಬಂಡಿ ಅಡ್ಡ ಇಟ್ಟು ಕೆಲ ಬಿಜೆಪಿಯವರು ಗಲಾಟೆ ಮಾಡಿದ್ದಾರೆ. ಸಮಸ್ಯೆಗಳನ್ನು ಕೇಳಲು ರೀತಿ ನೀತಿ ಇರುತ್ತದೆಯಲ್ಲವೇ?. ಕಾಂಗ್ರೆಸ್‌ನವರ ಮೇಲೆ ಹಲ್ಲೆಯಾಗಿದೆ, ಅಧಿಕಾರಿಗಳ ಮೇಲೂ ಅಲ್ಲಿನ ಕೆಲವರು ಕೈಎತ್ತಿದ್ದಾರೆ. ಇದು ರಾಜಕೀಯ ಪ್ರೇರಿತ ಕೃತ್ಯ
ರಾಘವೇಂದ್ರ ಹಿಟ್ನಾಳ, ಶಾಸಕ