ಚಿಕ್ಕಬಳ್ಳಾಪುರ | ಅರಣ್ಯ ಭೂಮಿ ಮೇಲೆ ಬಿಲ್ಡರ್‌ಗಳ ಕಣ್ಣು, ಒತ್ತುವರಿ ಹೆಚ್ಚಳ

ಚಿಕ್ಕಬಳ್ಳಾಪುರ | ಅರಣ್ಯ ಭೂಮಿ ಮೇಲೆ ಬಿಲ್ಡರ್‌ಗಳ ಕಣ್ಣು, ಒತ್ತುವರಿ ಹೆಚ್ಚಳ

ಚಿಕ್ಕಬಳ್ಳಾಪುರ | ಅರಣ್ಯ ಭೂಮಿ ಮೇಲೆ ಬಿಲ್ಡರ್‌ಗಳ ಕಣ್ಣು, ಒತ್ತುವರಿ ಹೆಚ್ಚಳ

ಚಿಕ್ಕಬಳ್ಳಾಪುರ: ಬೆಂಗಳೂರು ಮತ್ತು ದೇವನಹಳ್ಳಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಮೀಪವಿರುವ ಜಿಲ್ಲೆಗಳಲ್ಲಿ ಚಿಕ್ಕಬಳ್ಳಾಪುರವೂ ಒಂದು. ಕೃಷಿ ಪ್ರಧಾನ ಜಿಲ್ಲೆಯಲ್ಲಿ ಭೂಮಿಯ ಬೆಲೆಯೂ ಕೋಟಿಗಳ ಲೆಕ್ಕದಲ್ಲಿದೆ. ಜಮೀನುಗಳ ದರವು ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇದೆ.

ರಿಯಲ್ ಎಸ್ಟೇಟ್ ಪರಿಭಾಷೆಯಲ್ಲಿ ಚಿಕ್ಕಬಳ್ಳಾಪುರವನ್ನು ‘ಉತ್ತರ ಬೆಂಗಳೂರು’ ಎಂದೇ ಪರಿಗಣಿಸಲಾಗುತ್ತದೆ. ಹೀಗೆ ಬೆಂಗಳೂರಿಗೆ ಸಮೀಪವಿರುವ ಜಿಲ್ಲೆಯಲ್ಲಿ ಭೂಮಿ ದರ ಹೆಚ್ಚಳವಾಗುತ್ತಿರುವುದು ಭೂಗಳ್ಳರು ದೊಡ್ಡ ಸಂಖ್ಯೆಯಲ್ಲಿ ಇತ್ತ ದೃಷ್ಟಿ ನೆಡಲು ಕಾರಣವಾಗಿದೆ.

ವಿಶೇಷವಾಗಿ ಅರಣ್ಯ ಭೂಮಿಯ ಒತ್ತುವರಿ ಮತ್ತು ಆ ಒತ್ತುವರಿ ಜಾಗಕ್ಕೆ ದಾಖಲೆಗಳ ಸೃಷ್ಟಿಯ ಪ್ರಯತ್ನಗಳು ಎಗ್ಗಿಲ್ಲದೆ ನಡೆಯುತ್ತಿವೆ. ‘ಈ ಜಾಗ ಅರಣ್ಯ ಇಲಾಖೆ ವ್ಯಾಪ್ತಿಯಲ್ಲಿ ಇದೆಯೇ ಅಥವಾ ಖಾಸಗಿಯವರಿಗೆ ಸೇರಿದೆಯೇ’ ಎಂದು ವಿಚಾರಿಸಲು ಬಿಲ್ಡರ್‌ಗಳು, ಉದ್ಯಮಿಗಳು ಅರಣ್ಯ ಇಲಾಖೆಯ ಕಚೇರಿಗಳನ್ನು ಎಡತಾಕುತ್ತಿದ್ದಾರೆ.

ಅರಣ್ಯ ಇಲಾಖೆಯ ಅಂಕಿ ಸಂಖ್ಯೆಗಳ ಪ್ರಕಾರ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 3,186.96 ಎಕರೆ ಅರಣ್ಯ ಭೂಮಿ ಒತ್ತುವರಿ ಆಗಿದೆ.

ಒತ್ತುವರಿಗೆ ಸಂಬಂಧಿಸಿದಂತೆ 813 ಪ್ರಕರಣಗಳಿವೆ. ಜಮೀನಿನ ವಿಚಾರವಾಗಿ ಕೆಲವರು ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ಹೀಗೆ ಅರಣ್ಯ ಭೂಮಿ ಒತ್ತುವರಿ ವಿಚಾರಗಳು ವಿವಿಧ ಹಂತಗಳಲ್ಲಿದೆ.

ಕೆಲವರು ಹಲವು ದಶಕಗಳಿಂದ ಅರಣ್ಯ ಭೂಮಿಯಲ್ಲಿ ಉಳುಮೆ ಮಾಡುತ್ತಿದ್ದಾರೆ. ಕೆಲವರು ಈಗ ಅರಣ್ಯ ಜಾಗಗಳನ್ನು ಕಬಳಿಸಲು ಮುಂದಾಗಿದ್ದಾರೆ. ವಿಶೇಷವಾಗಿ ಬೆಂಗಳೂರಿನ ಬಿಲ್ಡರ್‌ಗಳು ಜಿಲ್ಲೆಯಲ್ಲಿ ಭೂಗಳ್ಳತನಕ್ಕೆ ತೀವ್ರವಾಗಿಯೇ ದೃಷ್ಟಿ ನೆಟ್ಟಿದ್ದಾರೆ.

ಜಿಲ್ಲೆಯು ಪ್ರಮುಖವಾಗಿ ಬೆಟ್ಟಗುಡ್ಡಗಳ ಪ್ರದೇಶವನ್ನು ಹೊಂದಿದೆ. ವಿಶೇಷವಾಗಿ ಪ್ರಮುಖ ಚಾರಣ ಪಥಗಳಾದ ನಂದಿಗಿರಿಧಾಮ, ಸ್ಕಂದಗಿರಿ ಸುತ್ತಮುತ್ತ ದೊಡ್ಡಮಟ್ಟದ ‘ಹೋಂ ಸ್ಟೇಗಳು’, ರೆಸಾರ್ಟ್‌ಗಳು, ವಿಲ್ಲಾಗಳು, ಲೇಔಟ್‌ಗಳು ತಲೆ ಎತ್ತುತ್ತಲೇ ಇವೆ. ಅರಣ್ಯದ ಬುಡದವರೆಗೂ ಈ ರೆಸಾರ್ಟ್‌ಗಳು ಲಗ್ಗೆ ಇಟ್ಟಿವೆ.

ಜಿಲ್ಲೆಯಲ್ಲಿ ರೈತರು ಅರಣ್ಯ ಭೂಮಿಯಲ್ಲಿ ಉಳುಮೆ ಮಾಡುತ್ತಿರುವುದು ಒಂದೆಡೆಯಾದರೆ, ರೈತರು ಮತ್ತು ಅರಣ್ಯ ಇಲಾಖೆ ನಡುವೆ ವಿವಾದಕ್ಕೆ ಒಳಗಾಗಿರುವ ಜಮೀನುಗಳ ಖರೀದಿಗೂ ಬಿಲ್ಡರ್‌ಗಳು ಮುಂದಾಗುತ್ತಿದ್ದಾರೆ. ಬಹಳ ವರ್ಷಗಳಿಂದ ರೈತರು ಉಳುಮೆ ಮಾಡುತ್ತಿರುವ ಮತ್ತು ಈಗ ಅರಣ್ಯ ಇಲಾಖೆಯ ಜೊತೆ ವಿವಾದಕ್ಕೆ ಒಳಗಾಗುತ್ತಿರುವ ಜಮೀನುಗಳ ಖರೀದಿಗೆ ‘ಮುಂಗಡ’ ಹಣ ನೀಡುತ್ತಿದ್ದಾರೆ. ಹೀಗೆ ವಿವಾದಕ್ಕೆ ಒಳಗಾಗಿರುವ ಜಮೀನುಗಳ ದರ ಕಡಿಮೆ ಇರುವುದು ಸಹ ಈ ಭೂಮಿಗಳತ್ತ ದೃಷ್ಟಿ ಹರಿಸಲು ಪ್ರಮುಖ ಕಾರಣ.

ರೈತರಿಂದ ಇಂತಿಷ್ಟು ಹಣಕ್ಕೆ ಜಮೀನು ಖರೀದಿಸುವ ಮಾತುಕತೆ ನಡೆಸುತ್ತಿರುವ ಭೂಗಳ್ಳರು ಆ ಜಮೀನುಗಳಿಗೆ ನಕಲಿ ದಾಖಲೆಗಳನ್ನು ಸೃಷ್ಟಿಸುತ್ತಿದ್ದಾರೆ ಎನ್ನುವ ಆರೋಪಗಳಿವೆ. ಅರಣ್ಯ ಇಲಾಖೆಯ ಜೊತೆ ಜಟಾಪಟಿ ನಡೆಸುವುದಕ್ಕಿಂತ ಜಮೀನು ಮಾರಾಟವೂ ಬಡ ರೈತರಿಗೆ ‘ಸುಲಭ’ ಎನಿಸಿದೆ. ಇಂತಹ ಪ್ರಕರಣಗಳು ಜಿಲ್ಲೆಯಲ್ಲಿ ನಡೆಯುತ್ತಿರುವುದನ್ನು ಜಿಲ್ಲಾ ಅರಣ್ಯ ಇಲಾಖೆಯೂ ದೃಢಪಡಿಸುತ್ತದೆ.

ಜಿಲ್ಲೆಯ ಚಿಂತಾಮಣಿ ತಾಲ್ಲೂಕಿನಲ್ಲಿ ಅರಣ್ಯ ಒತ್ತುವರಿಗೆ ಸಂಬಂಧಿಸಿದಂತೆ 222 ಪ್ರಕರಣಗಳಿವೆ. ಈ ತಾಲ್ಲೂಕಿನಲ್ಲಿ 1,020.37 ಹೆಕ್ಟೇರ್ ಅರಣ್ಯ ಭೂಮಿ ಒತ್ತುವರಿಯಾಗಿದೆ ಎಂದು ಅರಣ್ಯ ಇಲಾಖೆ ಗುರುತಿಸಿದೆ. ಇದು ಜಿಲ್ಲೆಯಲ್ಲಿ ಗರಿಷ್ಠ ಪ್ರಮಾಣದಲ್ಲಿ ಅರಣ್ಯ ಒತ್ತುವರಿಯಾಗಿರುವ ತಾಲ್ಲೂಕು ಎನಿಸಿದೆ.

‘ಖರೀದಿಗೂ ಮುನ್ನ ಇಲಾಖೆ ಸಂಪರ್ಕಿಸಿ’

ದಟ್ಟವಾಗಿ ಸ್ವಾಭಾವಿಕವಾಗಿ ಗಿಡ, ಮರಗಳು ಬೆಳೆದಿದ್ದರೆ ಅಥವಾ ಅರಣ್ಯದ ಅಂಚಿನಲ್ಲಿ ಜಮೀನುಗಳು ಇದ್ದರೆ ಇದು ಅರಣ್ಯ ಇಲಾಖೆಗೆ ಸೇರಿದೆಯೇ ಇಲ್ಲವೆ ಎನ್ನುವುದನ್ನು ಖರೀದಿದಾರರು ಖಚಿತಪಡಿಸಿಕೊಂಡ ನಂತರವೇ ಖರೀದಿಸಿ. ಖರೀದಿದಾರರಿಗೆ ಇದು ಅರಣ್ಯ ಭೂಮಿ ಎನ್ನುವ ಭಾವನೆ ಬಂದರೆ ಇಲಾಖೆಯ ಕಚೇರಿಗೆ ಭೇಟಿ ನೀಡಿ ಅನುಮಾನಗಳನ್ನು ಪರಿಹರಿಸಿಕೊಳ್ಳಬಹುದು ಎಂದು ಜಿಲ್ಲಾ ಅರಣ್ಯ ಉಪಸಂರಕ್ಷಣಾಧಿಕಾರಿ ಗಿರೀಶ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಅರಣ್ಯ ಭೂಮಿಗೆ ನಕಲಿ ದಾಖಲೆ ಸೃಷ್ಟಿಸುವ ಪ್ರಕರಣಗಳು ಜಿಲ್ಲೆಯಲ್ಲಿ ನಡೆದಿವೆ. ಈ ಪ್ರಕರಣಗಳು ನ್ಯಾಯಾಲಯದಲ್ಲಿವೆ. ಒಬ್ಬ ಬಿಲ್ಡರ್ ಜಮೀನು ಖರೀದಿಸಲು ಮುಂಗಡ ಹಣ ನೀಡಿದ್ದಾರೆ. ಆದರೆ ಆ ಜಮೀನು ಅರಣ್ಯ ಇಲಾಖೆಗೆ ಸೇರಿದೆ. ಮುಂಗಡ ಹಣ ನೀಡಿದ ನಂತರ ಅರಣ್ಯ ಇಲಾಖೆಯ ಕಚೇರಿಗೆ ಬಂದು ಆ ಜಮೀನಿನ ಬಗ್ಗೆ ವಿಚಾರಿಸಿದರು’ ಎಂದರು.

ಕೆಲವರು ನಂದಿಗಿರಿಧಾಮದ ಭಾಗದಲ್ಲಿ ಅರಣ್ಯ ಪ್ರವೇಶಿಸಿ ಅಲ್ಲಿ ತೊಟ್ಟಿಗಳ ನಿರ್ಮಾಣ ಸೇರಿದಂತೆ ವಿವಿಧ ಕಾಮಗಾರಿಗಳನ್ನು ನಡೆಸಿದ್ದರು. ಅರಣ್ಯ ಅತಿಕ್ರಮ ಪ್ರವೇಶಿಸಿದ ಕಾರಣ ಅಂತಹವರ ಮೇಲೆ ಪ್ರಕರಣ ದಾಖಲಿಸಿದ್ದೇವೆ. ಜಿಲ್ಲೆಯಲ್ಲಿ ಭೂಮಿಯ ದರ ಹೆಚ್ಚಿದೆ. ನಕಲಿ ದಾಖಲೆ ಸೃಷ್ಟಿಸಿ ಅರಣ್ಯ ಭೂಮಿ ಕಬಳಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದು ಹೇಳಿದರು.

ರೈತರು– ಇಲಾಖೆ ನಡುವೆ ಜಟಾಪಟಿ

ಜಿಲ್ಲೆಯ ಕೆಲವು ಭಾಗಗಳಲ್ಲಿ ಅರಣ್ಯ ಜಮೀನಿನ ವಿಚಾರವಾಗಿ ರೈತರು ಮತ್ತು ಅರಣ್ಯ ಇಲಾಖೆಯ ನಡುವೆ ತೀವ್ರ ಜಟಾಪಟಿಗಳು ನಡೆಯುತ್ತಿವೆ.

ಹಲವು ವರ್ಷಗಳಿಂದ ಜಮೀನುಗಳಲ್ಲಿ ಕೃಷಿ ಮಾಡುತ್ತಿರುವ ರೈತರಿಗೆ ಅರಣ್ಯ ಇಲಾಖೆ ಅಧಿಕಾರಿಗಳು ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ರೈತ ಸಂಘದ ಸದಸ್ಯರು ಆಗಾಗ್ಗೆ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟಿಸಿದ್ದಾರೆ. ಬಹಳಷ್ಟು ಕಡೆಗಳಲ್ಲಿ ರೈತರು ಬಗರ್‌ಹುಕುಂ ಯೋಜನೆಯಡಿ ಜಮೀನಿಗೆ ಅರ್ಜಿ ಸಹ ಸಲ್ಲಿಸಿದ್ದಾರೆ.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ